ಸಿಎಂ ಸ್ಥಾನದ ಮೇಲೆ ಡಿಕೆಶಿ ಕಣ್ಣು| 15 ದಿನಗಳಲ್ಲಿ ಮೂರನೇ ಬಾರಿಗೆ ದೆಹಲಿಗೆ ಪಯಣ
x

ಡಿ.ಕೆ ಶಿವಕುಮಾರ್‌

ಸಿಎಂ ಸ್ಥಾನದ ಮೇಲೆ ಡಿಕೆಶಿ ಕಣ್ಣು| 15 ದಿನಗಳಲ್ಲಿ ಮೂರನೇ ಬಾರಿಗೆ ದೆಹಲಿಗೆ ಪಯಣ

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್‌ ಪ್ರಮುಖ ನಾಯಕರಾದ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲು ನಿರ್ಧರಿಸಿದ್ದಾರೆ.


Click the Play button to hear this message in audio format

ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಡರಾತ್ರಿ ದೆಹಲಿಗೆ ತೆರಳಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಹದಿನೈದು ದಿನಗಳಲ್ಲಿ ಮೂರು ಬಾರಿ ದೆಹಲಿ ಪ್ರವಾಸ ಕೈಗೊಂಡಿರುವ ಡಿ.ಕೆ.ಶಿ, ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಬೆಂಗಳೂರಿನಿಂದ ಹೊರಟು ಮಧ್ಯರಾತ್ರಿ ವೇಳೆಗೆ ದೆಹಲಿ ತಲುಪಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್‌ ಪ್ರಮುಖ ನಾಯಕರಾದ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲು ನಿರ್ಧರಿಸಿದ್ದಾರೆ. ಕಳೆದ ಮೂರು ಬಾರಿ ದೆಹಲಿಗೆ ಪ್ರಯಾಣಿಸಿದ್ದಾಗಲೂ ಅವರಿಗೆ ರಾಹುಲ್ ಗಾಂಧಿ ಅವರ ಭೇಟಿ ಸಾಧ್ಯವಾಗಿರಲಿಲ್ಲ.

ಹೈಕಮಾಂಡ್ ಮೇಲೆ ಒತ್ತಡ

ಬಿಹಾರ ಚುನಾವಣೆ ಪ್ರಚಾರವು ಮುಗಿದಿರುವ ಹಿನ್ನೆಲೆಯಲ್ಲಿ, ಡಿ.ಕೆ.ಶಿ ಅವರು ಇದೀಗ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿ ಅವರು, ಹೈಕಮಾಂಡ್ ನಾಯಕರು, ಅದರಲ್ಲೂ ಮುಖ್ಯವಾಗಿ ರಾಹುಲ್ ಗಾಂಧಿ ಅವರ ಮನವೊಲಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಆಗಾಗ ಕೇಳಿಬರುತ್ತಿರುವ ಅಧಿಕಾರ ಹಂಚಿಕೆ ಮತ್ತು ನಾಯಕತ್ವ ಬದಲಾವಣೆ ಊಹಾಪೋಹಗಳ ನಡುವೆ ಡಿ.ಕೆ.ಶಿ ಅವರ ಈ ದೆಹಲಿ ಭೇಟಿಯು ಮಹತ್ವ ಪಡೆದುಕೊಂಡಿದೆ.

ಸ್ಪಷ್ಟನೆ ನೀಡಿದ್ದ ಡಿಸಿಎಂ

ಮುಖ್ಯಮಂತ್ರಿ ಸ್ಥಾನದ ಕುರಿತ ಪ್ರಶ್ನೆಗಳಿಗೆ ಈ ಹಿಂದೆ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ನಾಯಕತ್ವ ಬದಲಾವಣೆ, ಅಧಿಕಾರ ಹಂಚಿಕೆ ಅಥವಾ ಸಚಿವ ಸಂಪುಟ ಪುನರ್ರಚನೆಯ ಬಗ್ಗೆ ಚರ್ಚೆ ನಡೆಸುವ ಉದ್ದೇಶ ನನಗಿಲ್ಲ ಎಂದಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ರೇಖೆಯನ್ನು ದಾಟಿ ಎಂದಿಗೂ ಹೋಗುವುದಿಲ್ಲ. ಯಾವುದೇ ನವೆಂಬರ್, ಡಿಸೆಂಬರ್ ಕ್ರಾಂತಿ ಇಲ್ಲ. ನಿಜವಾದ ಕ್ರಾಂತಿ ಆಗುವುದೇನಿದ್ದರೂ 2028ರಲ್ಲಿ, ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಮೂಲಕ ಎಂದು ಅವರು ಈ ಹಿಂದೆ ದೆಹಲಿಯಲ್ಲಿ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ್ದರು.

Read More
Next Story