
ʻಡಿಕೆ ಶಿವಕುಮಾರ್ ಆಸ್ತಿಗಾಗಿ 9 ವರ್ಷದ ಹುಡುಗಿಯನ್ನು ಕೂಡಿಟ್ಟಿದ್ದರುʼ: ದೇವೇಗೌಡರ ಗಂಭೀರ ಆರೋಪ
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ನಾಯಕರು ಆರೋಪ ಪ್ರತ್ಯಾರೋಪಗಳನ್ನು ಸಹಜವಾಗಿ ಮಾಡುತ್ತಾರೆ. ಆದರೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. 9 ವರ್ಷದ ಹುಡುಗಿಯನ್ನು ಕೂಡಿಟ್ಟು ಆಸ್ತಿ ಬರೆಸಿದ್ರಲ್ಲಾ ಅದಕ್ಕಾಗಿ ಜನರು ನಿಮ್ಮನ್ನು ಬೆಂಬಲಿಸಬೇಕಾ? ಎಂದು ಪ್ರಶ್ನಿಸುವ ಮೂಲಕ ಡಿ ಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿ ವಾಗ್ದಾಳಿ ನಡೆಸಿದ್ದಾರೆ.
ಡಿ ಕೆ ಶಿವಕುಮಾರ್ ಅವರು ಪ್ರಚಾರದ ಸಂದರ್ರಭದಲ್ಲಿ ʻನನ್ನ ಕೈ ಬಲಪಡಿಸಿʼ ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ದೇವೇಗೌಡರು, ʻʻಅವರನ್ನ ಬಲಪಡಿಸಬೇಕೇ...ಏಕೆ...? 9 ವರ್ಷದ ಹುಡುಗಿಯನ್ನ ತೆಗೆದುಕೊಂಡು ಹೋಗಿ ಆಸ್ತಿ ಬರೆಸಿದ್ರಲ್ಲಾ ಅದಕ್ಕಾ?ʼʼ ಎಂದು ವಾಗ್ದಾಳಿ ನಡೆಸಿದ್ದಾರೆ. ʻʻಅಮೇರಿಕದಲ್ಲಿ ಹಣ ಸಂಪಾದನೆ ಮಾಡಿಕೊಂಡು ಸ್ವದೇಶಕ್ಕೆ ವಾಪಸ್ಸಾದ ವ್ಯಕ್ತಿಯೊಬ್ಬ ಬಿಡದಿ ಬಳಿ ಒಂದು ಐಟಿ ಕಂಪನಿ ಸ್ಥಾಪಿಸಲು ಜಮೀನು ಖರೀದಿಸುತ್ತಾರೆ. ಆದರೆ ಡಿ ಕೆ ಶಿವಕುಮಾರ್ ಸುಳ್ಳು ದಾಖಲಾತಿ ಪತ್ರಗಳನ್ನು ತಯಾರಿಸಿ ಆ ಜಮೀನನ್ನು ಕಬಳಿಸಲು ಪ್ರಯತ್ನಿಸುತ್ತಾರೆʼʼ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ʻʻಆ ವ್ಯಕ್ತಿ ಕೋರ್ಟ್ ಮೊರೆಹೊಕ್ಕಾಗ ಉಚ್ಚ ಮತ್ತು ಸರ್ವೋಚ್ಛ ನ್ಯಾಯಾಲಯ ಎರಡರಲ್ಲೂ ಶಿವಕುಮಾರ್ ಗೆ ಸೋಲಾಗುತ್ತದೆ. ನಂತರ ಅ ನಿರ್ದಿಷ್ಟ ಜಮೀನನ್ನು ಪಡೆಯಲೇ ಬೇಕೆಂದು ಹಠಕ್ಕೆ ಬೀಳುವ ಶಿವಕಮಾರ್ ಆ ವ್ಯಕ್ತಿಯ 9-ವರ್ಷದ ಮಗಳನ್ನು ಅಪಹರಿಸಿ ಯಾವುದೋ ಮನೆಯಲ್ಲಿ ಕೂಡಿಹಾಕುತ್ತಾರೆʼʼ ಎಂದು ದೇವೇಗೌಡರು ಹಿಂದಿನ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ.
ʻʻಮಗು ದೂರವಾದ ಕಾರಣ ಅನ್ನ ನೀರು ಬಿಟ್ಟಿದ್ದ ತಾಯಿ ತನ್ನ ಗಂಡನಿಗೆ ಜಮೀನಿನ ಸಹವಾಸವೇ ಬೇಡ, ಮಗುವನ್ನು ವಾಪಸ್ಸು ಕರೆದುಕೊಂಡು ಬರಲು ಹೇಳಿದಾಗ ಅ ವ್ಯಕ್ತಿ ಅಲ್ಲಿಗೆ ಹೋದಾಗಲೂ ಆತನಿಗೆ ಮತ್ತು ಮಗುವಿಗೆ ಮಾನಸಿಕ ಹಿಂಸೆ ನೀಡುತ್ತಾರೆ ಎಂದು ಹೇಳಲಾಗಿದೆ. ನಿನ್ನ ಮಗಳು ಬೇಕು ಅನ್ನೋದಾದರೆ ಸಹಿ ಮಾಡು ಎನ್ನುತ್ತಾರೆ. ಆ ತಾಯಿ ಎಲ್ಲಾ ಬರೆದುಕೊಡು ನನ್ನ ಮಗಳ ಕರೆದುಕೊಂಡು ಬಾರಪ್ಪಾ ಅಂತ ಗಂಡನ ಕಾಲು ಹಿಡಿಯುತ್ತಾಳೆ. ಅಲ್ಲಿಗೆ ಹೋದಾಗ, ಆ ಮಗುನ ದೂರ ಕೂರಿಸಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚುತ್ತಾರೆ. ಆ ಮಗು ಅಪ್ಪ ಅಂತ ಓಡಿ ಬರುತ್ತೆ, ಮತ್ತೆ ಒಳಗೆ ತೆಗೆದುಕೊಂಡು ಹೋಗ್ತಾರೆ. ನನ್ನ ಮುಂದೆ ದಾಖಲೆ ಇದೆ, ಇದನ್ನ ಎಲೆಕ್ಷನ್ ನಲ್ಲಿ ಬಳಸಿ ಅಂತಾ ಲಾಯರ್ ತಂದು ಕೊಟ್ರು. ಆ ಪುಣ್ಯಾತ್ಮ ನಾನು ಕರ್ನಾಟಕದಲ್ಲಿ ಯಾರಿಗೂ ಮತ ಹಾಕಲ್ಲ. ನಾನು ಓಟರ್ ಲೀಸ್ಟ್ ನಲ್ಲಿ ಇಲ್ಲ. ಈ ಕರ್ನಾಟಕ ಸಾಕು ಅಂತಾರೆ. ಅವರ ಹೆಸರು ನನಗೆ ಮರೆತೋಗಿದೆ, ಬಹಳ ವರ್ಷ ಆಯ್ತು, ಆಮೇಲೆ ಅವರು ಜೀವನಕ್ಕಾಗಿ ಬೇರೆಯವರ ಅಧೀನದಲ್ಲಿ ಕೆಲಸ ಮಾಡುತ್ತಾರೆʼʼ ಎಂದು ದೇವೇಗೌಡರು ಹೇಳಿದರು.