ʻಲೋಕʼ ಚುನಾವಣಾ ಸೋಲಿನ ನಂತರ ಒಕ್ಕಲಿಗ ನಾಯಕತ್ವಕ್ಕಾಗಿ ಶಿವಕುಮಾರ್‌ “ಮರಳಿ ಯತ್ನವ ಮಾಡು”
x

ʻಲೋಕʼ ಚುನಾವಣಾ ಸೋಲಿನ ನಂತರ ಒಕ್ಕಲಿಗ ನಾಯಕತ್ವಕ್ಕಾಗಿ ಶಿವಕುಮಾರ್‌ “ಮರಳಿ ಯತ್ನವ ಮಾಡು”


ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಕ್ಷೇತ್ರಗಳಲ್ಲಿ ಪರಾಭವ ಅನುಭವಿಸಿದ ನಂತರ ಹತಾಶರಾಗಿರುವ ಉಪಮುಖ್ಯಮಂತ್ರಿ ಮತ್ತು ಕರ್ನಾಟಕ ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಡಿ. ಕೆ. ಶಿವಕುಮಾರ್‌ ಅವರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಮತ್ತು ಒಕ್ಕಲಿಗರ ʼನಾಯಕʼ ಸ್ಥಾನಕ್ಕಾಗಿ ಇನ್ನಿಲ್ಲದ ಪ್ರಯತ್ನ ಮುಂದುವರಿಸುತ್ತಿದ್ದಾರೆ ಆದರೆ ಅವರ ಈ ಹಾದಿಯಲ್ಲಿ ರಸ್ತೆ ಉಬ್ಬುಗಳೇ ಹೆಚ್ಚೆಂಬಂತೆ ಕಾಣುತ್ತಿದೆ

ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಪ್ರಾಬಲ್ಯವಿರುವ ಹಳೇ ಮೈಸೂರು ಪ್ರಾಂತದಿಂದ ಹೆಚ್ಚು ಸ್ಥಾನಗಳನ್ನು ಗಳಿಸಿ, ಆ ಮೂಲಕ ಕಾಂಗ್ರೆಸ್‌ ಹೈಕಮಾಂಡ್‌ ಮೇಲೆ ಒತ್ತಡ ತಂದು ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕನಸು ನನಸಾಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿಯೇ ತಮ್ಮ ಸೋದರ ಡಿ. ಕೆ. ಸುರೇಶ ಅವರ ಸೋಲಿನಿಂದ ಕಂಗೆಟ್ಟಿರುವ ಶಿವಕುಮಾರ್‌ ಅವರು ಹೇಗಾದರೂ ಮತ್ತೆ ಕಳೆದುಕೊಂಡ ವರ್ಚಸ್ಸನ್ನು ಪುನಃ ಗಳಿಸಲು ಸರ್ವ ಪ್ರಯತ್ನ ಮಾಡುತ್ತಿರುವುದು ಇತ್ತೀಚಿನ ಅವರ ನಡವಳಿಕೆಯಿಂದ ಸ್ಪಷ್ಟವಾಗುತ್ತಿದೆ.

“ಶಿವಕುಮಾರ್‌ ಅವರ ಈ ಆತುರದ ನಡವಳಿಕೆಯಿಂದಲೇ, ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಿರುವುದು ಹೈಕಮಾಂಡ್‌ ಗಮನಕ್ಕೂ ಬಂದಿದ್ದು, ಕೇಂದ್ರದ ನಾಯಕರಲ್ಲಿ ಅಸಮಾಧಾನವಿದೆ” ಎಂದು ಕೇಂದ್ರ ನಾಯಕರಿಗೆ ಹತ್ತಿರವಿರುವ ಹಿರಿಯ ಕಾಂಗ್ರೆಸ್‌ ನಾಯಕರೊಬ್ಬರು ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡುತ್ತಾ ಒಪ್ಪಿಕೊಂಡಿರುವುದು, ಶಿವಕುಮಾರ್‌ ಅವರ ಮುಂದಿನ ರಾಜಕೀಯ ಭವಿಷ್ಯ ಭವ್ಯವಾಗೇನೂ ಇಲ್ಲ ಎಂಬುದರ ಸ್ಪಷ್ಟ ಸೂಚನೆಯಂತಿದೆ.

ಭದ್ರ ಕೋಟೆಯಲ್ಲಿ ಗೆಲವು-ಸೋಲು

ಒಕ್ಕಲಿಗ ಪ್ರಾಬಲ್ಯದ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ-ಜೆಡಿಎಸ್‌ನ, ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಈಗ ಕೇಂದ್ರದ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಒಕ್ಕಲಿಗ ಸಮುದಾಯದ ಮೇಲಿನ ಹಿಡಿತವನ್ನು ಕಡಿತಗೊಳಿಸಬೇಕೆಂದು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದ ಶಿವಕುಮಾರ್‌ ಅವರು, ಕೊನೆಗೂ ಗೆಲ್ಲಲು ಸಾಧ್ಯವಾಗಿದ್ದು, ಒಕ್ಕಲಿಗ ಸಮುದಾಯದ ʼಉಕ್ಕಿನ ಕೋಟೆʼ ಎಂದೇ ಭಾವಿಸಲಾಗಿದ್ದ ಹಾಸನ ಕ್ಷೇತ್ರದಲ್ಲಿ ಮಾತ್ರ.

“ನಾನು ಮಾಡಿದ ತಪ್ಪುಗಳಿಂದಲೇ ನನ್ನ ತಮ್ಮ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋತಿದ್ದು “ ಎಂದು ಬಹಿರಂಗವಾಗಿ ಒಪ್ಪಿಕೊಂಡಿರುವ ಶಿವಕುಮಾರ್‌, “ಸಂತೆಯಲ್ಲಿ ಕಳೆದುಹೋದ ಮಾನ”ವನ್ನು ಸಂತೆಯಲ್ಲಿಯೇ ಗಳಿಸಲು ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವು ನೀಡಿ, ಮತ್ತೆ ಅದೇಕೋ ಹಿಂದೆ ಸರಿದರೂ, ತಮ್ಮನ ಸೋಲಿನ ಸೇಡು ತೀರಿಸಿಕೊಳ್ಳುವುದೇ ಅಲ್ಲದೇ, ಒಕ್ಕಲಿಗ ಸಮುದಾಯದ ಮೇಲೆ ತಮ್ಮ ಹಿಡಿತ ಇನ್ನೂ ಭದ್ರವಾಗಿದೆ ಎಂಬುದನ್ನು ಸಾಬೀತು ಪಡಿಸಲು ವಿವಿಧ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಮರುತಂತ್ರ ಹೆಣೆಯಲು ಸಜ್ಜಾಗುತ್ತಿದ್ದಾರೆ.

ಒಕ್ಕಲಿಗ ನಾಯಕರ ಸಭೆ

ಈ ದೃಷ್ಟಿಯಿಂದಲೇ ಶಿವಕುಮಾರ್‌ ಅವರು ಜೂನ್‌ 11 ರಂದು ಒಕ್ಕಲಿಗ ಶಾಸಕರ ಹಾಗೂ ಪಕ್ಷದ ಒಕ್ಕಲಿಗ ನಾಯಕರ ಸಭೆಯೊಂದನ್ನು ಕರೆದು ಚರ್ಚಿಸಿದ್ದು ಗುಟ್ಟಾಗೇನೂ ಉಳಿದಿಲ್ಲ. “ನಾವು ಸಭೆ ಮಾಡಿದ್ದು ನಿಜ. ಆದರೆ, ಅದು ಒಕ್ಕಲಿಗ ಸಮುದಾಯ ಕಾಂಗ್ರೆಸ್‌ಗೆ ಒಲಿಯದಿರಲು ಕಾರಣವನ್ನು ನಾವು ಚರ್ಚಿಸಿದೆವು. ಹೌದು, ನಾವು ಒಕ್ಕಲಿಗರ ಪ್ರೀತಿಯನ್ನು ಇಡಿಯಾಗಿ ಗಳಿಸಲು ಸಾಧ್ಯವಾಗಿಲ್ಲ ಎಂಬುದು ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗಿದೆ. ಆದರೆ ಇದು ತಾತ್ಕಾಲಿಕ ಸೋಲು. ಮತ್ತೆ ಇನ್ನು ಮುಂದೆ ಒಕ್ಕಲಿಗ ಸಮುದಾಯದ ಒಲವನ್ನು ಗಳಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ. ಮುಂದಿನ ಆರೇ ತಿಂಗಳಲ್ಲಿ, ಒಕ್ಕಲಿಗರು ಕಾಂಗ್ರೆಸ್‌ ನತ್ತ ವಾಲುವಂತೆ ಮಾಡುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಮುಂದಿನ 2028 ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರಲು ಎಲ್ಲ ಪ್ರಯತ್ನಗಳನ್ನು ಕಾಂಗ್ರೆಸ್‌ ಪಕ್ಷದ ಪರವಾಗಿ ಮಾಡುತ್ತೇವೆ ”, ಎಂದಿರುವ ಶಿವಕುಮಾರ್‌, ಹಳೇ ಮೈಸೂರು ಪ್ರಾಂತದಲ್ಲಿ, ಕಾಂಗ್ರೆಸ್‌ನ್ನು ಮತ್ತೆ ಕಟ್ಟು ಛಲ ತೊಟ್ಟಿದ್ದಾರೆ.

“ಕಾಂಗ್ರೆಸ್‌ ಪಕ್ಷವನ್ನು ತಳಮಟ್ಟದಿಂದ ಕಟ್ಟುವುದರ ಜೊತೆಗೆ ಪಕ್ಷದ ಮೇಲೆ ಹಿಡಿತ ಸಾಧಿಸಿ, ಆ ಮೂಲಕ ತಮ್ಮ ಮುಖ್ಯಮಂತ್ರಿಯ ಕನಸನ್ನು ನನಸು ಮಾಡಿಕೊಳ್ಳುವ ʻದೂರಾಲೋಚನೆʼಯಿಂದ ಅತಿ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದೇನೆಂದು ಭಾವಿಸುತ್ತಲೇ, ಇಟ್ಟ ಹೆಜ್ಜೆಗಳೆಲ್ಲ ತಪ್ಪುತಪ್ಪಾಗುವಂತೆ ವರ್ತಿಸುತ್ತಿದ್ದಾರೆ”, ಎಂದು ಕಾಂಗ್ರೆಸ್‌ನಲ್ಲಿರುವ ಅವರ ಬೆಂಬಲಿಗರೇ ಒಪ್ಪಿಕೊಳ್ಳುತ್ತಾರೆ. ಶಿವಕುಮಾರ್‌ ಅವರ ದೂರಾಲೋಚನೆಯ ಪ್ರಯತ್ನದ ಒಂದು ಭಾಗವೇ-ಅವರು ಚನ್ನಪಟ್ಟಣದಲ್ಲಿ ಚುನಾವಣೆಗೆ ಸ್ಪರ್ಧಿಸುವ ಯತ್ನವೆಂದರೆ ತಪ್ಪಾಗಲಾರದು.

ಚನ್ನಪಟ್ಟಣವೆಂಬ ʼತೂಗುಯ್ಯಾಲೆʼ

“ನಾನು ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸ್ಪರ್ಧಿಸದೇ ಬೇರೆ ದಾರಿಯೇ ಇಲ್ಲ” ಎಂದು ಚನ್ನಪಟ್ಟಣದ ಮತ್ತು ತಮ್ಮ ನಂಬಿಕೆಯ ದೇವಾಲಯಗಳ ʼಟೆಂಪಲ್‌ ರನ್‌ʼ ಮಾಡಿ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಸೂಚನೆ ನೀಡಿ, ತಮ್ಮ ವರ್ಚಸ್ಸನ್ನು ಒಮ್ಮೆ ಒರೆಗೆ ಹಚ್ಚಿದ ಶಿವಕುಮಾರ್‌ , ಒಮ್ಮೆ ಹಿಂದೆ ಸರಿದಂತೆ ವರ್ತಿಸಿ, ನಂತರ ಮತ್ತೆ ಮುಂದುವರಿದಂತೆ ತೋರಿಸಿ, ಗೊಂದಲದ ವಾತಾವರಣ ಸೃಷ್ಟಿಸಿ, ಚನ್ನಪಟ್ಟಣದ ಕೆರೆಯ ನೀರಿನ ಆಳವನ್ನು ಆಳೆಯುತ್ತಿದ್ದಾರೆ.

ಮೇಲಾಟದ ಹಗಲುವೇಶ

ಶಿವಕುಮಾರ್‌ ಅವರ ಈ ʼಮೇಲಾಟʼದ ಹಗಲು ವೇಶವನ್ನು ಗಮನಿಸುತ್ತಲೇ, ತಮ್ಮ ಅಸ್ತಿತ್ವಕ್ಕೆ ಧಕ್ಕೆ ತರಲು ಶಿವಕುಮಾರ್‌ ನಡೆಸುತ್ತಿರುವ ಹುನ್ನಾರಗಳನ್ನು ನೋಡನೋಡುತ್ತಲೇ ಸದ್ದಿಲ್ಲದೇ, ಸಿದ್ದರಾಮಯ್ಯ ಪ್ರತಿದಾಳ ಉರುಳಿಸಿದ್ದಾರೆ. ಶಿವಕುಮಾರ್‌ ಜೊತೆಯಲ್ಲಿ ಮೂರು ಉಪಮುಖ್ಯಮಂತ್ರಿ ಸ್ಥಾನವನ್ನು ಸೃಷ್ಟಿಸುವ ಈ ತಂತ್ರದ ಮೂಲಕ ಶಿವಕುಮಾರ್‌ ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡುತ್ತಿದ್ದಾರೆ ಎಂಬುದು ಸಿದ್ದರಾಮಯ್ಯನವರ ಸಮೀಪವರ್ತಿಗಳ ತಿಳುವಳಿಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಗಳ ಸ್ಥಾನಕ್ಕೆ ʻನಾನೂʼ ಅರ್ಹ ಎಂದು ಸದ್ದಿಲ್ಲದೆ ಸುದ್ದಿಗೆ ಗುದ್ದು ನೀಡಿದಾಗಲೆಲ್ಲ. ಈ ಮೂರು ಉಪಮುಖ್ಯಮಂತ್ರಿಗಳ ಸ್ಥಾನದ ಪ್ರಶ್ನೆಯೂ ಮುನ್ನೆಲೆಗೆ ಬಂದು ಮತ್ತೆ ಹಿನ್ನೆಲೆಗೆ ಸರಿಯುತ್ತದೆ.

ವೀರಶೈವ-ಲಿಂಗಾಯತ, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೆಲವು ಸಚಿವರು ಪಟ್ಟು ಹಿಡಿದಿದ್ದಾರೆ. ಸದ್ಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಒಕ್ಕಲಿಗ ಸಮುದಾಯದ ಶಿವಕುಮಾರ್ ಮಾತ್ರ ಉಪಮುಖ್ಯಮಂತ್ರಿಯಾಗಿದ್ದಾರೆ. ಸಹಕಾರಿ ಸಚಿವ ಕೆ ಎನ್‌ ರಾಜಣ್ಣ ಅವರು ಪ್ರತಿಪಾದಿಸುತ್ತಿರುವ ಮೂರು ಉಪಮುಖ್ಯಮಂತ್ರಿ ಹುದ್ದೆಗಳಿಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಗೃಹ ಸಚಿವ ಜಿ ಪರಮೇಶ್ವರ್‌, ಸಮಾಜ ಕಲ್ಯಾಣ ಸಚಿವ ಎಚ್‌ ಸಿ ಮಹದೇವಪ್ಪ ಅವರೂ ಧ್ವನಿಗೂಡಿಸಿದ್ದಾರೆ.

ಇನ್ನೂ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ರಚಿಸಬೇಕು ಎನ್ನುವವರು ಹೈಕಮಾಂಡ್ ಬಳಿ ಮಾತನಾಡಲಿ. ಮಾಧ್ಯಮಗಳ ಮುಂದೆ ಚರ್ಚಿಸುವುದರಿಂದ ಯಾವುದೇ "ಪರಿಹಾರ" ಸಿಗುವುದಿಲ್ಲ ಎಂದು ಶಿವಕುಮಾರ್ ಅವರು ತಿರುಗೇಟು ನೀಡುತ್ತಿದ್ದಾರೆ. “ಮಾಧ್ಯಮಗಳ ಮುಂದೆ ಮಾತನಾಡುವವರು ಹೈಕಮಾಂಡ್ ಬಳಿ ಹೋಗಿ ಮಾತನಾಡಲಿ, ಏನು ಬೇಕಾದರೂ ಪರಿಹಾರ ಪಡೆದುಕೊಂಡು ಬರಲಿ. ಮಾಧ್ಯಮದ ಮುಂದೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಮಾಧ್ಯಮದವರು ಪರಿಹಾರ ಕೊಡುವುದಿಲ್ಲ. ಮಾಧ್ಯಮದವರು ಪ್ರಚಾರ ಕೊಡುತ್ತಾರೆ ಅಷ್ಟೇ. ಏನೇ ಇದ್ದರೂ ಹೈಕಮಾಂಡ್ ಮುಂದೆ ಹೋಗಿ ಮಾತನಾಡಿ ಪರಿಹಾರ ತೆಗೆದುಕೊಂಡು ಬರಲಿ" ಎಂದು ಶಿವಕುಮಾರ್‌ ಅವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದರೂ, ಶಿವಕುಮಾರ್‌ ಅವರ ಮಾತುಗಳಿಗೆ ಪಕ್ಷದಲ್ಲಾಗಲಿ, ಸರ್ಕಾರದಲ್ಲಾಗಲಿ ಬೆಂಬಲ ದೊರೆಯದಿರುವ ಬಗ್ಗೆ ಅವರ ಬೆಂಬಲಿಗರಿಗೆ ಸಾಕಷ್ಟು ನೋವಿದೆ ಎನ್ನುವುದು ಸತ್ಯದ ಸಂಗತಿ. “ಪಕ್ಷ ಸಂಕಷ್ಟದಲ್ಲಿದ್ದಾಗ ನಾಯಕತ್ವ ವಹಿಸಿದ ಶಿವಕುಮಾರ್‌ ಪಕ್ಷವನ್ನು ಸದೃಢಗೊಳಿಸಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಒಂಭತ್ತು ಸ್ಥಾನಗಳನ್ನು ಗೆಲ್ಲುವುದರಲ್ಲಿ ಅವರ ಪಾತ್ರವೂ ಇದೆ. ಆದರೆ ಅವರ ಸೇವೆಗೆ ತಕ್ಕ ಪ್ರತಿಫಲ ಸಿಕ್ಕುತ್ತಿಲ್ಲ” ಎಂದು ಅವರ ಬೆಂಬಲಿಗ ಬಸವರಾಜ ಶಿವಗಂಗಾ ವಿಷಾದಿಸುತ್ತಾರೆ.

ಕಾಂಗ್ರೆಸ್‌ ರಾಜ್ಯ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭಯ

ಇತ್ತೀಚೆಗೆ ಈಗಿರುವ ಒಂದು ಉಪಮುಖ್ಯಮಂತ್ರಿ ಸ್ಥಾನದೊಂದಿಗೆ ಮತ್ತೆ ಮೂರು ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆ ಮುನ್ನೆಲೆಗೆ ಬರುತ್ತಿದ್ದಂತೆ , ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಶಿವಕುಮಾರ್‌ ಅರ್ಧ ನಿದ್ರೆಯಿಂದ ಎದ್ದವರಂತೆ ತಾವು ಕಂಡಿದ್ದು ಕೇವಲ ಕನಸು ಎಂದು ಅರ್ಥ ಮಾಡಿಕೊಂಡು ಮತ್ತೆ ಮುಖ್ಯಮಂತ್ರಿಯ ವಿಷಯ ಚರ್ಚೆಯಾಗದಂತೆ ಎಚ್ಚರ ವಹಿಸುತ್ತಿದ್ದಾರೆ. ಏಕೆಂದರೆ, ಲೋಕಸಭೆ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಯಾವುದಾದರೂ ತಲೆದಂಡವಾಗಬೇಕಿದ್ದರೆ, ಅದು ಪಕ್ಷದ ನಾಯಕನದ್ದಾಗಿರುತ್ತದೆ. ಅವರ ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನವನ್ನೂ ಕಳೆದುಕೊಳ್ಳುವ ಭಯ ಅವರನ್ನು ಕಾಡುತ್ತದೆ.

ಇದಕ್ಕೆ ತಕ್ಕಂತೆ ಮಂತ್ರಿಮಂಡಲದಲ್ಲಿ ಸಹಕಾರಿ ಸಚಿವರಾಗಿರುವ ಕೆ ಎನ್‌ ರಾಜಣ್ಣ ಲೋಕಸ ಸಭಾ ಚುನಾವಣೆಯ ನಂತರ ಪಕ್ಷದ ನಾಯಕತ್ವದ ಬದಲಾವಣೆಯ ಬಗ್ಗೆ ಸೂಚ್ಯವಾಗಿ ಆಗಾಗ ಮಾತನಾಡುವ ಮೂಲಕ ಶಿವಕುಮಾರ್‌ ಅವರ ನೆನಪನ್ನು ಹರಿತಗೊಳಿಸುತ್ತಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪಕ್ಷ (KPCC) ದ ಅಧ್ಯಕ್ಷ ಸ್ಥಾನದ ಪ್ರಶ್ನೆ ಮತ್ತೆ ಮತ್ತೆ ಕಾಡಲು ಶಿವಕುಮಾರ್‌ ಅವರೂ ಕಾರಣ ಎನ್ನದೆ ನಿರ್ವಾಹವಿಲ್ಲ. "ನಾನು ಇನ್ನೆಷ್ಟು ದಿನ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿರುತ್ತೇನೋ ಗೊತ್ತಿಲ್ಲ” ಎಂದು ಹೇಳಿರುವ ಶಿವಕುಮಾರ್‌ ಅವರು ತಾವೇ ತಮಗೆ ತಿಳಿಯದೆ ಕಾಂಗ್ರೆಸ್‌ ವಲಯದಲ್ಲಿ ಚರ್ಚೆಯೊಂದನ್ನು ಹುಟ್ಟುಹಾಕಿದ್ದಾರೆ. ಈ ನಡುವೆ ಬೆಂಗಳೂರ ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ತಮ್ಮ ಸಹೋದರ ಡಿ ಕೆ ಸುರೇಶ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟಲು ಶಿವಕುಮಾರ್‌ ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನುವ ಚರ್ಚೆಯೂ ನಡೆದಿದೆ.

ಸ್ವಾಮೀಜಿಗೂ ಮುಖ್ಯಮಂತ್ರಿ ಸ್ಥಾನದ ಚಿಂತೆ

ಇಷ್ಟೊಂದು ಗೊಂದಲದ ನಡುವೆ ಈಗ ಮತ್ತೊಂದು ತಪ್ಪು ಹೆಜ್ಜೆಯಿಟ್ಟಿರುವ ಶಿವಕುಮಾರ್‌ ಮತ್ತಷ್ಟು ಪೇಚಿನಲ್ಲಿ ಸಿಕ್ಕಿಕೊಂಡಿದ್ದಾರೆ. ಇಂದು ಗುರುವಾರ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಕಾರ್ಯಕ್ರಮದಲ್ಲಿ, “ಸಿದ್ದರಾಮಯ್ಯನವರು ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟು ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು” ಎಂದು ವಿಶ್ವ ಒಕ್ಕಲಿಗ ಮಹಾಸಂಸ್ಥಾನದ (ಮೈಸೂರು ರಸ್ತೆಯಲ್ಲಿರುವ ಮಠ) ಕೆ. ಚಂದ್ರಶೇಖರನಾಥ ಸ್ವಾಮೀಜಿ ಹೇಳಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಕ್ಕದಲ್ಲಿ ಉಪಮುಖ್ಯಮಂತ್ರಿ ಶಿವಕುಮಾರ್‌ ಕುಳಿತಿದ್ದರು. ಈ ಮಾತು ಕೇಳಿಸಿಕೊಂಡು ಮೌನವಾಗಿದ್ದರು. ಸಿದ್ದರಾಮಯ್ಯನವರಿಗೆ ಶ್ರೀಗಳ ಮಾತಿನಿಂದ ಅಸಮಾಧಾನವಾಗಿರುವುದು ಅವರ ʼದೇಹ ಭಾಷೆ” (Body Lnaguage) ಯಿಂದ ಗೊತ್ತಾಗುತ್ತಿತ್ತು.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿಯೊಬ್ಬರು ವೇದಿಕೆ ಮೇಲೆಯೇ ನೇರವಾಗಿ ಸಿಎಂ ಸಿದ್ದರಾಮಯ್ಯನವರಿಗೆ “ನಿಮ್ಮ ಸ್ನಾನವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡಿ ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಹಲವರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ಇನ್ನೂ ಆ ಭಾಗ್ಯ ಸಿಕ್ಕಿಲ್ಲ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಮನವಿ ಮಾಡಿದ್ದಾರೆ. ನಿಮಗೆ ಅನುಭವವಿದೆ, ಈಗ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಕೊಡಿ. ಸಿದ್ದರಾಮಯ್ಯ ಮನಸ್ಸು ಮಾಡಿದರೆ ಮಾತ್ರ ಇದು ಸಾಧ್ಯ. ಹಾಗಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಮನವಿ ಮಾಡಿದ್ದಾರೆ. ಇನ್ನೂ ವೇದಿಕೆ ಮೇಲೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರಿದ್ದಾಗಲೇ ವೇದಿಕೆ ಮೇಲೆಯೇ ಸ್ವಾಮೀಜಿಯೊಬ್ಬರ ಈ ಬೇಡಿಕೆ ಸರ್ಕಾರದಲ್ಲಿ ಸಂಚಲನ ಸೃಷ್ಟಿಯಾಗುವಂತೆ ಮಾಡಿದೆ.

ಹೈಕಮಾಂಡ್ ನದು ಅಂತಿಮ ತೀರ್ಮಾನ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ; “ನಮ್ಮದು ಹೈಕಮಾಂಡ್‌ ಪಕ್ಷ. ಈ ಬಗ್ಗೆ ಹೈಕಮಾಂಡ್‌ ತೀರ್ಮಾನಿಸುತ್ತದೆ. ಎಂದಿದ್ದಾರೆ. ಇದರ ಜೊಗತೆಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ, " ಸ್ವಾಮೀಜಿಗಳು ಯಾವ ಕಾರಣಕ್ಕಾಗಿ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಇದರಲ್ಲಿ ಸದುದ್ದೇಶ ಇದೆಯೋ, ದುರುದ್ದೇಶ ಇದೆಯೋ ಎನ್ನುವುದನ್ನು ನೋಡಬೇಕಿದೆ. ಯಾರಾದರೂ ತಮಗಿರುವ ಸ್ಥಾನವನ್ನು ಬಿಟ್ಟುಕೊಡಲು ಸಿದ್ದರಿರುತ್ತಾರಾ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಸ್ವಾಮೀಜಿ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಚಲುವರಾಯಸ್ವಾಮಿ; “ಮುಖ್ಯಮಂತ್ರಿ ಬದಲಾವಣೆಯ ವಿಚಾರ ಹೈಕಮಾಂಡ್, ಶಾಸಕರ ವೇದಿಕೆಯಲ್ಲಿ ತೀರ್ಮಾನವಾಗುತ್ತದೆ.” ಎಂದಿದ್ದಾರೆ. “ಅದೂ ಒಂದು ಕಾಲ ಬರುತ್ತದೆ. ಎರಡು ವರ್ಷಕ್ಕೋ, ಎರಡೂವರೆ ವರ್ಷಕ್ಕೋ ಅನ್ನೋದೆಲ್ಲ ಪಕ್ಷದ ವೇದಿಕೆಯಲ್ಲಿ ತೀರ್ಮಾನವಾಗುತ್ತದೆ. ಶಿವಕುಮಾರ್‌ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಪಕ್ಷದಲ್ಲಿ ಬದ್ಧತೆ ಇರುವ ನಾಯಕ ಅವರು. ಆದರೆ ಯಾವಾಗ? ಯಾರು? ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ ಎಂದಿದ್ದಾರೆ.

ಆದರೆ, ತುಂಬಿದ ಸಭೆಯಲ್ಲಿ ತಮ್ಮ ಪಕ್ಕದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೂರಿಸಿಕೊಂಡು ತಮ್ಮ ಸಮುದಾಯದ ಸ್ವಾಮೀಜಿ ಅವರಿಂದ ತಮಗೆ ಮುಖ್ಯಮಂತ್ರಿ ಬಿಟ್ಟುಕೊಡುವಂತೆ ಕೇಳಿಸಿದ್ದು ಶಿವಕುಮಾರ್‌ರಂಥ ನಾಯಕರಿಗೆ ಶೋಭಿಸುವುದೇ ಎಂಬ ಪ್ರಶ್ನೆ ಈಗ ಕಾಂಗ್ರೆಸ್‌ ವಲಯದಲ್ಲಿ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯನವರಿಗಷ್ಟೇ ಅಲ್ಲದೆ, ಸ್ವತಃ ಶಿವಕುಮಾರ್‌ ಅವರೇ ಮುಖ ಕಿವಿಚಿಕೊಂಡು ಓಡಾಡುವಂತಾಗಿದೆ. ತಮ್ಮ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಶಿವಕುಮಾರ್‌ ಇಟ್ಟಿರುವ ಮತ್ತೊಂದು ತಪ್ಪು ಹೆಜ್ಚೆ ಇದು ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

Read More
Next Story