ಪ್ರದೀಪ್ ಈಶ್ವರ್  ಹುಚ್ಚ ಅಂದುಕೊಂಡಿದ್ದರಂತೆ ಡಿ.ಕೆ. ಶಿವಕುಮಾರ್‌!
x

ಪ್ರದೀಪ್ ಈಶ್ವರ್ ಹುಚ್ಚ ಅಂದುಕೊಂಡಿದ್ದರಂತೆ ಡಿ.ಕೆ. ಶಿವಕುಮಾರ್‌!

ಪ್ರದೀಪ್‌ ಈಶ್ವರ್‌ ಅವರ ಪರಿಶ್ರಮ ನೀಟ್ ಅಕಾಡೆಮಿಯಿಂದ ಯಶಸ್ವಿಯಾದ NEET ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, "ಪ್ರದೀಪ್‌ ಹೊಸ ಇತಿಹಾಸ ಸೃಷ್ಟಿ ಮಾಡಿ ಶಾಸಕನಾಗಿದ್ದಾರೆ. ವಿಧಾನಸಭೆಯಲ್ಲೂ ತಮ್ಮ ಆಚಾರ, ವಿಚಾರ ಪ್ರತಿಪಾದನೆ ಮಾಡುತ್ತಿದ್ದಾರೆ," ಎಂದು ಶ್ಲಾಘಿಸಿದರು.


ಒಬ್ಬರು ಪ್ರದೀಪ್ ಈಶ್ವರ್ ಅವರನ್ನು ನನ್ನ ಬಳಿ ಕರೆದುಕೊಂಡು ಬಂದಾಗ, ಯಾರೋ ಹುಚ್ಚನನ್ನು ಕರೆದುಕೊಂಡು ಬಂದಿದ್ದೀರಿ ಎಂದಿದ್ದೆ. ಆಗ ಅವರು ಇಲ್ಲ ಈತ ಉಪಯೋಗಕ್ಕೆ ಬರುತ್ತಾರೆ, ಒಂದು ಅವಕಾಶ ನೀಡಿ ಎಂದರು. ಅವರು ಈಗ ರಾಜ್ಯದಲ್ಲೇ ಹೊಸ ಇತಿಹಾಸ ಸೃಷ್ಟಿ ಮಾಡಿ ಶಾಸಕನಾಗಿದ್ದಾರೆ. ವಿಧಾನಸಭೆಯಲ್ಲೂ ತಮ್ಮ ಆಚಾರ, ವಿಚಾರ ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಅವರನ್ನು ಶ್ಲಾಘಿಸಿದ್ದಾರೆ.

ಪ್ರದೀಪ್‌ ಈಶ್ವರ್‌ ಅವರ ಪರಿಶ್ರಮ ನೀಟ್ ಅಕಾಡಮಿಯಿಂದ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ ಒಬ್ಬ ವ್ಯಕ್ತಿ ಹಿಂದೆ ಎಷ್ಟು ಜನ ಇರುತ್ತಾರೆ ಎಂಬುದಕ್ಕಿಂತ ಒಬ್ಬ ವ್ಯಕ್ತಿ ಎಷ್ಟು ಜನ ನಾಯಕರನ್ನು ತಯಾರು ಮಾಡುತ್ತಾರೆ ಎಂಬುದು ಮುಖ್ಯ. ನಾಯಕರು ಎಂದರೆ ರಾಜಕಾರಣಿ ಮಾತ್ರವಲ್ಲ. ಎಲ್ಲಾ ವರ್ಗಗಳಲ್ಲಿ ನಾಯಕತ್ವ ಗುಣ ಇರುವವರು. ಇಲ್ಲಿ ಅನೇಕ ವಿದ್ಯಾರ್ಥಿಗಳಿದ್ದೀರಿ. ಕೂಲಿ ಮಾಡುವವರು, ಚಾಲಕರ ಮಕ್ಕಳಿಗೂ ಇಂದು ನಾವು ಸನ್ಮಾನ ಮಾಡಿದ್ದೇವೆ. ಆ ಪೋಷಕರಿಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ ಎಂದರು.

ನಾನು ಇಂದು ಉಪಮುಖ್ಯಮಂತ್ರಿಯಾಗಿರಬಹು ದು. ಆದರೆ ಒಂದು ಕಾಲದಲ್ಲಿ ನಾನು ಪದವೀಧರ ಆಗಲಿಲ್ಲ ಎಂಬ ಕೊರಗು ಇತ್ತು. ನಾನು ಮಂತ್ರಿಯಾದ ನಂತರ 48ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು ಪದವೀಧರನಾದೆ. ವಿಧಾನಸೌಧದ ಮುಂದೆ ಸಚಿವ ಸಂಪುಟ ಸಭೆಯಲ್ಲಿ ಮಂತ್ರಿಯಾಗಿದ್ದಕ್ಕಿಂತ ಮೈಸೂರಿನಲ್ಲಿ ಪದವೀಧರನಾಗಿ ಪ್ರಮಾಣಪತ್ರ ಪಡೆದಾಗ ಹೆಚ್ಚು ಸಂತೋಷವಾಯಿತು. ಪ್ರಪಂಚವನ್ನು ಬದಲಿಸಲು ಶಿಕ್ಷಣ ಅತಿ ಶಕ್ತಿಶಾಲಿ ಅಸ್ತ್ರ. ಅದೇ ರೀತಿ ಈ ಮಕ್ಕಳು. ಈ ಸಂಸ್ಥೆಯವರು ಇಲ್ಲಿನ ಮಕ್ಕಳನ್ನು ಯಾವ ರೀತಿ ತಯಾರು ಮಾಡಿದ್ದಾರೆ ಎಂದರೆ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ 250 ಸೀಟುಗಳಿದ್ದರೆ ಅದರಲ್ಲಿ 150ರಿಂದ 180 ಮಕ್ಕಳು ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರೇ ಆಗಿದ್ದಾರೆ. ಇದಕ್ಕಿಂತ ದೊಡ್ಡ ಸಾಧನೆ ಬದಲಾವಣೆ ಯಾರೂ ಮಾಡಲು ಸಾಧ್ಯವಿಲ್ಲ

ಪ್ರದೀಪ್ ಈಶ್ವರ್ ಅವರು ಈ ಸಂಸ್ಥೆಗಾಗಿ ಸ್ವಂತ ಕಟ್ಟಡ ಬೇಕು ಎಂದು ಮನವಿ ಮಾಡಿದ್ದಾರೆ. ನೀವೆಲ್ಲ ಸೇರಿ ನನಗೆ ಅಧಿಕಾರ ಕೊಟ್ಟಿದ್ದು ನನ್ನ ಅವಧಿಯಲ್ಲಿ ಜಾಗ ಮಂಜೂರು ಮಾಡುವುದಾಗಿ ಭರವಸೆ ನೀಡುತ್ತೇನೆ.

ನೋಬಲ್ ಪ್ರಶಸ್ತಿ ವಿಜೇತರಾದ ಬಾಂಗ್ಲಾದೇಶದ ಕರಾವಳಿ ಭಾಗದ ಮೊಹಮದ್ ಯೂನಿಸ್ ಅವರು ಒಂದು ಮಾತು ಹೇಳಿದ್ದಾರೆ. “ನೀವು ಒಬ್ಬ ವ್ಯಕ್ತಿಗೆ ಮೀನನ್ನು ತಿನ್ನಿಸಿದರೆ ಅದು ಆತನ ಒಂದು ದಿನದ ಊಟ. ಆದರೆ ಅದೇ ವ್ಯಕ್ತಿಗೆ ನೀವು ಮೀನುಗಾರಿಕೆ ಮಾಡುವುದನ್ನು ಕಲಿಸಿದರೆ ಅವನಿಗೆ ಜೀವನಪೂರ್ತಿ ನೆರವಾಗುತ್ತದೆ” ಎಂದರು.

ಅದೇ ರೀತಿ ನನ್ನ ಸ್ನೇಹಿತ ಪ್ರದೀಪ್ ಈಶ್ವರ್ ನಿಮ್ಮೆಲ್ಲರಿಗೂ ಶಿಕ್ಷಣ ನೀಡುತ್ತಿದ್ದಾರೆ. ನಿಂಬೆಗಿಂತ ಶ್ರೇಷ್ಠವಾದ ಹುಳಿ ಇಲ್ಲ, ದುಂಬಿ ಮೈಯಲ್ಲಿರುವ ಕಪ್ಪು ಬಣ್ಣಕ್ಕಿಂತ ಶ್ರೇಷ್ಠ ಕಪ್ಪು ಇಲ್ಲ, ಶಿವನಿಗಿಂತ ಅಧಿಕ ದೇವರಿಲ್ಲ, ನಂಬಿಕೆಗಿಂತ ದೊಡ್ಡ ಗುಣವಿಲ್ಲ. ನೀವೆಲ್ಲರೂ ಪ್ರದೀಪ್ ಈಶ್ವರ್ ಅವರ ಮೇಲೆ ನಂಬಿಕೆ ಇಟ್ಟು ನಿಮ್ಮ ಮಕ್ಕಳನ್ನು ಅವರ ಸಂಸ್ಥೆಗೆ ಸೇರಿಸಿದ್ದೀರಿ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಚಿವರಾದ ಡಾ. ಎಂ ಸಿ ಸುಧಾಕರ್, ಮಧು ಬಂಗಾರಪ್ಪ, ಪರಿಶ್ರಮ ನೀಟ್ ಅಕಾಡೆಮಿ ಮುಖ್ಯಸ್ಥರು ಹಾಗೂ ಶಾಸಕ ಪ್ರದೀಪ್ ಈಶ್ವರ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಲಕ್ಷ್ಮಣ್ ಮತ್ತಿತರರು ಭಾಗವಹಿಸಿದ್ದರು.

Read More
Next Story