
ಡಿಸಿಎಂ ಡಿ.ಕೆ. ಶಿವಕುಮಾರ್
ಕ್ರಿಸ್‌ಮಸ್, ಹೊಸ ವರ್ಷದ ರಾತ್ರಿ ಸಂಚು; ವಿಧ್ವಂಸಕವೋ, ರಾಜಕೀಯವೋ?
ಆರ್‌ಸಿಬಿ ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಸಂಭವಿಸಿದ್ದ ಕಾಲ್ತುಳಿತದಿಂದ ಟೀಕೆಗೆ ಗುರಿಯಾಗಿದ್ದ ಪೊಲೀಸ್ ಇಲಾಖೆ ಈ ಬಾರಿ ಹೊಸ ವರ್ಷಾಚರಣೆಯಲ್ಲಿ ಯಾವುದೇ ಅವಗಢ ನಡೆಯದಂತೆ ನೋಡಿಕೊಂಡಿತ್ತು.
ರಾಜ್ಯದಲ್ಲಿ ಕ್ರಿಸ್‌ಮಸ್ (ಡಿ.25) ಹಾಗೂ ಹೊಸ ವರ್ಷದ ಹಿಂದಿನ ದಿನ (ಡಿ.31) ಸಾಕಷ್ಟು ಸಂಚುಗಳು ನಡೆದಿದ್ದವು ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ತೀವ್ರ ಆತಂಕ ಸೃಷ್ಟಿಸಿದೆ.
ಹೊಸ ವರ್ಷದ ಹಿಂದಿನ ರಾತ್ರಿಯೇ ಸಂಚುಗಳು ನಡೆದಿದ್ದವು. ಆದರೆ, ಗೃಹ ಇಲಾಖೆ ಸಮರ್ಥವಾಗಿ ಕಾರ್ಯ ನಿರ್ವಹಿಸಿ ಸಂಚುಗಳನ್ನು ವಿಫಲಗೊಳಿಸಿದೆ. ಮಧ್ಯರಾತ್ರಿವರೆಗೆ ನಡೆದ ಸಂಭ್ರಮಾಚರಣೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಪೊಲೀಸರು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದಾರೆಂದು ಶಹಬ್ಬಾಶ್ ಗಿರಿ ಕೊಡುವ ಜತೆಗೆ ಸಂಚಿನ ದಾಳ ಉರುಳಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಈ ಸ್ಫೋಟಕ ಹೇಳಿಕೆಯು ಹೊಸ ವರ್ಷದಂದು ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆದಿತ್ತೇ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಡಿಕೆಶಿ ಅವರು ಸಂಚಿನ ವಿಷಯ ಪ್ರಸ್ತಾಪಿಸಿದರು. ಆದರೆ, ಅದು ವಿಧ್ವಂಸಕ ಕೃತ್ಯವೋ ಅಥವಾ ರಾಜಕೀಯ ಸಂಚೇ ಎಂಬುದನ್ನು ಬಹಿರಂಗಪಡಿಸಿಲ್ಲ. ಡಿ. 25 ಹಾಗೂ ಡಿ.31 ರಂದು ಸಂಚು ನಡೆದಿತ್ತು ಎಂದಿರುವ ಕಾರಣ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದ್ದು ಎಂದು ವಿಶ್ಲೇಷಿಸಲಾಗಿದೆ.
ಹದ್ದಿನ ಕಣ್ಣಿರಿಸಿದ್ದ ಖಾಕಿ ಪಡೆ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿರಿಸಿತ್ತು. ಪ್ರಮುಖವಾಗಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಜನದಟ್ಟಣೆಯ ಪ್ರದೇಶಗಳಲ್ಲಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ, ವಾಚ್ ಟವರ್, ಏಕಮುಖ ಮಾರ್ಗದ ಸಂಚಾರ ವ್ಯವಸ್ಥೆ ಮಾಡಿತ್ತು. ಅಲ್ಲದೇ ವಾಹನ ಹಾಗೂ ಜನ ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ಪೊಲೀಸ್ ಸಿಬ್ಬಂದಿ ಅಚ್ಚುಕಟ್ಟಾಗಿ ನಿಭಾಯಿಸಿದ್ದರು.
ಆರ್‌ಸಿಬಿ ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಸಂಭವಿಸಿದ್ದ ಕಾಲ್ತುಳಿತದಿಂದ ಟೀಕೆಗೆ ಗುರಿಯಾಗಿದ್ದ ಪೊಲೀಸ್ ಇಲಾಖೆ ಈ ಬಾರಿ ಯಾವುದೇ ಅಚಾತುರ್ಯ ನಡೆಯದಂತೆ ನೋಡಿಕೊಂಡಿತು.
ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿತ್ತು. ಜನಸಂದಣಿ ಹೆಚ್ಚಳ ಸಾಧ್ಯತೆ ಮನಗಂಡು ಎಂ.ಜಿ. ಮೆಟ್ರೋ ನಿಲ್ದಾಣಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ಬೇರೆ ಕಡೆಗಳಿಗೆ ತೆರಳಬೇಕಾದವರು ಟ್ರಿನಿಟಿ ರಸ್ತೆಯ ಮಟ್ರೋ ನಿಲ್ದಾಣಕ್ಕೆ ಹೋಗಿ ಪ್ರಯಾಣಿಸಲು ಪೊಲೀಸರು ಸೂಚಿಸಿದ್ದರು. ಇದಲ್ಲದೇ ಅಂಬುಲೆನ್ಸ್ಗಳು, ವೈದ್ಯರು ಹಾಗೂ ನರ್ಸ್ಗಳು, ಅಗ್ನಿಶಾಮಕ ದಳವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು.
ರಾಜಕೀಯ ಆಯಾಮದಲ್ಲೂ ಚರ್ಚೆ
ಹೊಸ ವರ್ಷಾಚರಣೆ ಸಂಭ್ರಮವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಗೃಹ ಇಲಾಖೆಯ ಕಾರ್ಯವೈಖರಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ಪೊಲೀಸರ ಕಾರ್ಯ ಶ್ಲಾಘಿಸಿದ್ದರು. ಹೀಗಿರುವಾಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂಚಿನ ಪ್ರಸ್ತಾಪ ಮಾಡಿರುವುದು ನಾನಾ ಚರ್ಚೆಗಳಿಗೆ ಗ್ರಾಸವಾಗಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ ಡಿಕೆಶಿ ಅವರು ಸಂಚಿನ ಕುರಿತು ಹೇಳಿಕೆ ನೀಡಿರುವುದು ರಾಜಕೀಯವಾಗಿಯೂ ಚರ್ಚೆಗೆ ಗ್ರಾಸವಾಗಿದೆ.
ನನಗೂ ಸಿಎಂ ಆಗುವ ಆಸೆ ಇದೆ ಎಂದು ಪರಮೇಶ್ವರ್ ಅವರು ಗುರುವಾರ ಹೇಳಿದ್ದರು. ಈ ಮಧ್ಯೆ, ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪವಾದಗಲೆಲ್ಲಾ ದಲಿತ ಸಿಎಂ ಚರ್ಚೆ ಮುನ್ನೆಲೆಗೆ ತಂದು, ತಾವೂ ಕೂಡ ಸಿಎಂ ಆಕಾಂಕ್ಷಿ ಎಂದು ಪರಮೇಶ್ವರ್ ಹೇಳಿಕೊಂಡಿದ್ದರು. ಇದಲ್ಲದೇ ರಾಜ್ಯದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಏರಿಕೆಯಾಗಿದ್ದವು. ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಪ್ರತಿಪಕ್ಷಗಳು ಕೂಡ ಆಕ್ರೋಶ ವ್ಯಕ್ತಪಡಿಸಿದ್ದವು. ಹೀಗಿರುವಾಗ ಡಿ.ಕೆ.ಶಿವಕುಮಾರ್ ಹೊಸ ವರ್ಷದ ಮೊದಲ ದಿನವೇ ಸಂಚುಗಳು ನಡೆದಿದ್ದವು ಎಂದು ಹೇಳುವ ಮೂಲಕ ಗೃಹ ಸಚಿವರ ಅಸಮರ್ಥತೆಯನ್ನು ತೋರಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.

