ಕಾಂಗ್ರೆಸ್‌ ಸರ್ಕಾರಕ್ಕೆ ವರ್ಷ | ಸಿಎಂ ಡಿಸಿಎಂ ನಡುವೆ ಮತ್ತೆ ಶುರುವಾಯ್ತೆ ಶೀತಲ ಸಮರ?
x

ಕಾಂಗ್ರೆಸ್‌ ಸರ್ಕಾರಕ್ಕೆ ವರ್ಷ | ಸಿಎಂ ಡಿಸಿಎಂ ನಡುವೆ ಮತ್ತೆ ಶುರುವಾಯ್ತೆ ಶೀತಲ ಸಮರ?


ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಧ್ಯೆ ಮತ್ತೆ ಶೀತಲ ಸಮರ ಆರಂಭವಾಗಿದೆಯೇ? ಶಿವಕುಮಾರ್‌ ಅವರು ಲೋಕಸಭಾ ಚುನಾವಣೆ ಬಳಿಕ ಮತ್ತೆ "ಮುಖ್ಯಮಂತ್ರಿ" ಹುದ್ದೆಗೇರಲು ಕಸರತ್ತು ನಡೆಸಲಿದ್ದಾರೆಯೆ?

2023ರ ವಿಧಾನಸಭೆ ಚುನಾವಣೆಯನ್ನು ಭರ್ಜರಿಯಾಗಿ ಗೆದ್ದು 2024ರ ಲೋಕ ಸಭೆಯನ್ನು ಸಮರ್ಥವಾಗಿಯೇ ಎದುರಿಸಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಅವರು ತಮ್ಮ ಸರ್ಕಾರ ಒಂದು ವರ್ಷ ಪೂರೈಸಿದ ಮರುದಿನವೇ ವರ್ತಿಸಿದ ರೀತಿ ರಾಜಕೀಯ ಪಡಸಾಲಯಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಚರ್ಚೆಗೆ ಕಾರಣವಾದ ಘಟನೆಗಳು ಮಂಗಳವಾರ (ಮೇ 21) ಅಂದರೆ ಸರ್ಕಾರ ಒಂದು ವರ್ಷ ಪೂರೈಸಿದ ಮರುದಿನವೇ ನಡೆದಿವೆ. ಆ ಘಟನೆಗಳು ಸಂಭವಿಸಿದ್ದು ಹೀಗೆ:

ಬೆಳಿಗ್ಗೆ ವಿಧಾನಸೌಧದಲ್ಲಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಪುಣ್ಯಸ್ಮರಣೆ ಅಂಗವಾಗಿ ಆಚರಿಸಲಾಗುವ ಭಯೋತ್ಪಾದನಾ ವಿರೋಧಿ ದಿನದ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮ ವಿಧಾನಸೌಧದ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ 11 ಗಂಟೆಗೆ ಆಯೋಜಿಸಲಾಗಿತ್ತು. ಸಿದ್ದರಾಮಯ್ಯ ಕ್ಲಪ್ತ ಸಮಯಕ್ಕೆ ಬಂದು ತಮಗೆ ಮೀಸಲಾದ ಆಸನದಲ್ಲಿ ಆಸೀನರಾಗಿದ್ದರು. ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದು, 11.20ಕ್ಕೆ ವಿಧಾನಸೌಧದಿಂದ ಹೊರಟು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನದ ಮೂಲಕ ತಮ್ಮ ಸ್ನೇಹಿತ, ಮಾಜಿ ಶಾಸಕ ದಿ. ವಸಂತ ಬಂಗೇರ ಅವರ ಉತ್ತರಕ್ರಿಯೆ ಕಾರ್ಯಕ್ರಮಕ್ಕೆ ತೆರಳಬೇಕಿತ್ತು.

11 ಗಂಟೆಗೆ ಭಯೋತ್ಪಾದನಾ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೂ ಭಾಗವಹಿಸುವುದು ನಿಗದಿಯಾಗಿತ್ತು. ಆದರೆ ಅವರು ಆ ಕಾರ್ಯಕ್ರಮಕ್ಕೆ ಇನ್ನೂ ಆಗಮಿಸಿರಲಿಲ್ಲ. ಆ ವೇಳೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರು ಮುಖ್ಯಮಂತ್ರಿ ಬಳಿ "ಉಪ ಮುಖ್ಯಮಂತ್ರಿ ವಿಧಾನಸೌಧದ ಕೆಳಗಡೆ ಇದ್ದಾರೆ. ಸ್ವಾಗತ ಭಾಷಣ ಮುಗಿಯುವ ವೇಳೆ ಅವರೂ ಬಂದು ಸೇರಿಕೊಳ್ಳುತ್ತಾರೆ ಎಂದುʼ ವಿವರಿಸಿದರು.

ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿ ಬರುವ ಮುನ್ನ ಅವರಿಗಿಂತ ಸ್ಥಾನದಲ್ಲಿ ಕಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದು ವಾಡಿಕೆ. ಮಂಗಳೂರಿಗೆ ತೆರಳಲು ಸಾಕಷ್ಟು ಸಮಯ ಇಲ್ಲದೇ ಇದ್ದುದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ "ನೀವು ಕಾರ್ಯಕ್ರಮ ಶುರು ಮಾಡಿ. ನಾನು ಹೋಗಬೇಕಿದೆ," ಎಂದು ಸೂಚಿಸಿದರು. ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ವೆಂಕಟೇಶ್‌ ಅವರೂ, "ಡಿಕೆಶಿ ಕೆಳಗಡೆ ಇದ್ದಾರೆ, ಈಗ ಬರುತ್ತಾರೆ," ಎಂದು ಹೇಳಿದರು. ಆದರೆ ಸಿದ್ದರಾಮಯ್ಯ "ಅಯ್ಯೋ ಕತೆ ಆಯ್ತಲ್ರೀ. ಬಂದ್ರೆ ಬರ್ತಾರೆ, ಕಮ್‌ ಅಂಡ್‌ ಜಾಯ್ನ್‌" ಎಂದು ಕಾರ್ಯಕ್ರಮ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಭಯೋತ್ಪಾದನಾ ವಿರೋಧಿ ದಿನ ಪ್ರತಿಜ್ಞಾವಿಧಿಯನ್ನೂ ಬೋಧಿಸಿದರು. ಈ ನಡುವೆ ಹಿರಿಯ ಅಧಿಕಾರಿಗಳ ಅನುಪಸ್ಥಿತಿ ಬಗ್ಗೆಯೂ ಸಿಎಂ ಅಸಹನೆ ವ್ಯಕ್ತಪಡಿಸಿದ್ದರು.

ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್‌ ಅವರಿಗೆ ಕಾಯದೆ ಕಾರ್ಯಕ್ರಮ ಆರಂಭಿಸಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿ, ಅವರಿಬ್ಬರ ನಡುವಿನ ಶೀತಲ ಸಮರದ ಬಗ್ಗೆ ಮಾತುಗಳು ಆರಂಭವಾದವು. ಆದರೆ, ಮಂಗಳೂರಿಗೆ ತೆರಳುವ ಧಾವಂತದಲ್ಲಿ ಮುಖ್ಯಮಂತ್ರಿ ಇದ್ದರು ಎಂದು ಅವರ ಕಚೇರಿ ಅಧಿಕಾರಿಗಳು ಹೇಳಿದ್ದಾರೆ.

ಚರ್ಚೆ ಹುಟ್ಟುಹಾಕಿದ ಡಿಕೆಶಿ ಮಾತು

‌ಆದರೆ, ಕಾರ್ಯಕ್ರಮ ಆರಂಭವಾದ ಬಗ್ಗೆ ಮಾಹಿತಿ ದೊರೆತ ಡಿ.ಕೆ. ಶಿವಕುಮಾರ್‌ ಕಾರ್ಯಕ್ರಮಕ್ಕೆ ಗೈರಾದರು. ವಿಧಾನಸೌಧ ನೆಲಮಹಡಿಯಲ್ಲಿದ್ದ ಅವರು ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ರಾಜೀವ್‌ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಅಲ್ಲಿ, "ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಇನ್ನೆಷ್ಟು ದಿನ ನಾನು ಈ ಹುದ್ದೆಯಲ್ಲಿರುತ್ತೇನೋ ಗೊತ್ತಿಲ್ಲ, ಆದರೆ ಪಕ್ಷದ ಸಂಘಟನೆಗೆ ಸಂಬಂಧಪಟ್ಟಂತೆ ನಾನು ಭದ್ರ ಬುನಾದಿ ತಳಪಾಯ ಹಾಕಿಕೊಡುತ್ತೇನೆ ಎಂಬ ಹೇಳಿಕೆ ಹುಬ್ಬೇರುವಂತೆ ಮಾಡಿತ್ತು.

ಬಳಿಕ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಭವನದಲ್ಲಿ ರಕ್ತದಾನ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿ ಎಚ್‌.ಡಿ. ಕುಮಾರಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯಿಸುತ್ತಿದ್ದರು. ಆ ವೇಳೆ, "ಕುಮಾರಸ್ವಾಮಿ ಅವರು ಕಿಂಗ್ ಮೇಕರ್ ಆಗುತ್ತೇನೆ ಎಂದುಕೊಂಡಿದ್ದರು. ನನ್ನ ಅಧ್ಯಕ್ಷತೆಗೆ ಜನರು 136 ಸ್ಥಾನ, ಅವರಿಗೆ 19 ಸ್ಥಾನ ನೀಡಿದ್ದಾರೆ. ಈಗ ಅಧಿಕಾರ ಸಿಗದೆ ಕೈ, ಕೈ ಹೊಸಕಿಕೊಳ್ಳುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.

ಆದರೆ, ಅವರು ಹೇಳಿದ "ನನ್ನ ಅಧ್ಯಕ್ಷತೆಗೆ ಜನರು 136 ಸ್ಥಾನ, ಅವರಿಗೆ (ಜೆಡಿಎಸ್‌) 19 ಸ್ಥಾನ ನೀಡಿದ್ದಾರೆ." ಎನ್ನುವ ವಾಕ್ಯದಲ್ಲಿ ಗೂಡಾರ್ಥ ಇತ್ತು ಎಂದು ವ್ಯಾಖ್ಯಾನಿಸಲಾಗಿದೆ. "ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು ನಾನು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷನಾಗಿರುವ ವೇಳೆ ಬಂದ 136 ಸ್ಥಾನ ಬಂದಿರುವುದರಿಂದ" ಎಂಬ ಸಂದೇಶವನ್ನು ಅವರು ಸಾರಿದ್ದಾರೆ, ಆ ಮೂಲಕ ಬೆಳಗಿನ "ಮುಜುಗರʼಕ್ಕೆ ಸ್ಪಷ್ಟವಾಗಿ ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ ಎನ್ನಲಾಗಿದೆ.

ಸರ್ಕಾರ ರಚನೆ ವೇಳೆ ಮುಖ್ಯಮಂತ್ರಿ ಆಗಬೇಕೆಂದು ಡಿಕೆಶಿ ಬಹು ಪ್ರಯತ್ನ ಮಾಡಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತರಾಗಿದ್ದರು. ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ರಾಜಕೀಯ ಹೊಯ್ದಾಟಗಳಿದ್ದರೂ, ಕಳೆದ ವಿಧಾನಸಭೆ ಹಾಗೂ ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಇಬ್ಬರೂ ತಮ್ಮ ವೈಮನಸ್ಸನ್ನು ಎಲ್ಲಿಯೂ ಪ್ರದರ್ಶಿಸದೆ "ಒಗ್ಗಟ್ಟಿನ" ಸ್ಪಷ್ಟ ಸಂದೇಶ ಸಾರಿದ್ದರು.

Read More
Next Story