
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಚಿವರ ಪಾತ್ರವನ್ನು ತಿರಸ್ಕರಿಸಿದ ಡಿ ಕೆ ಶಿವಕುಮಾರ್
ಈ ಪ್ರಕರಣದ ಬಗ್ಗೆ ಕೇಂದ್ರ ಸಂಸ್ಥೆಗಳು ತನಿಖೆ ನಡೆಸುತ್ತಿರುವುದರಿಂದ ರಾಜ್ಯ ಸರ್ಕಾರಕ್ಕೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ.
ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಚಿವರಿಗೆ ಸಂಬಂಧವಿದೆ ಎಂಬ ವರದಿಯನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಿರಾಕರಿಸಿದ್ದು, ಇದೊಂದು ʻರಾಜಕೀಯ ಗಾಸಿಪ್ʼ ಎಂದು ಅವರು ಕರೆದಿದ್ದಾರೆ.
ಈ ಬಗ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಕೇಂದ್ರ ಸಂಸ್ಥೆಗಳು ತನಿಖೆ ನಡೆಸುತ್ತಿರುವುದರಿಂದ ರಾಜ್ಯ ಸರ್ಕಾರಕ್ಕೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ಯಾವುದೇ ಸಚಿವರು ಭಾಗಿಯಾಗಿಲ್ಲ, ನಮಗೆ ಏನೂ ತಿಳಿದಿಲ್ಲ. ಇದೆಲ್ಲವೂ ರಾಜಕೀಯ ಗಾಸಿಪ್. ತನಿಖಾ ಅಧಿಕಾರಿಗಳು ಕಾನೂನು ಪ್ರಕಾರ ತನಿಖೆ ನಡೆಸುತ್ತಾರೆ ಎಂದು ಅವರು ತಿಳಿಸಿದರು.
ಮಾರ್ಚ್ 3, 2025 ರಂದು ರನ್ಯಾ ರಾವ್ ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬಂದ ತಕ್ಷಣ ಆಕೆಯನ್ನು ತಡೆದ ಡಿಆರ್‌ಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ವೇಳೆ ರನ್ಯಾ ಅವರ ಬಳಿ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ವಿದೇಶಿ ಮೂಲದ ಚಿನ್ನದ ಗಟ್ಟಿಗಳು ಪತ್ತೆಯಾಗಿತ್ತು. ಈ ಚಿನ್ನದ ಬಿಸ್ಕೆತ್‌ಗಳನ್ನು 1962 ರ ಕಸ್ಟಮ್ಸ್ ಕಾಯ್ದೆಯ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಅವರ ನಿವಾಸದಲ್ಲಿ ನಡೆಸಿದ ಮುಂದಿನ ಶೋಧದಲ್ಲಿ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ರೂ. ಮೌಲ್ಯದ ಭಾರತೀಯ ಕರೆನ್ಸಿ ಪತ್ತೆಯಾಗಿದ್ದು, ಪ್ರಕರಣದಲ್ಲಿ ಒಟ್ಟು ವಶಪಡಿಸಿಕೊಳ್ಳಲಾದ ಮೊತ್ತ 17.29 ಕೋಟಿ ರೂ.ಗಳಿಗೆ ತಲುಪಿತ್ತು. ಈ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ.