ಬಿಡಬ್ಲ್ಯೂಎಸ್ಎಸ್ ಬಿಯ ಗಿನ್ನಿಸ್ ದಾಖಲೆ ಪ್ರಮಾಣಪತ್ರ ಸ್ವೀಕರಿಸಿದ ಡಿ.ಕೆ.ಶಿವಕುಮಾರ್
x

ಬಿಡಬ್ಲ್ಯೂಎಸ್ಎಸ್ ಬಿಯ ಗಿನ್ನಿಸ್ ದಾಖಲೆ ಪ್ರಮಾಣಪತ್ರ ಸ್ವೀಕರಿಸಿದ ಡಿ.ಕೆ.ಶಿವಕುಮಾರ್

ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆ ಮಾದರಿಯಲ್ಲಿ ದರ ಪರಿಷ್ಕರಣೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ.


ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ ಬಿ) ವತಿಯಿಂದ ಕಳೆದ ಮಾರ್ಚ್ 21 ರಿಂದ 28 ರವರೆಗೆ ನಡೆದ ಜಲ ಸಂರಕ್ಷಣೆ ಅಭಿಯಾನ ಸಪ್ತಾಹದಲ್ಲಿ 5,33,642 ಪ್ರತಿಜ್ಞೆ ಸ್ವೀಕರಿಸಿ, ಜಲ ಸಂರಕ್ಷಣೆಯಲ್ಲಿ ಗಿನ್ನಿಸ್ ವಿಶ್ವದಾಖಲೆ ಬರೆಯಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧಿಕೃತ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತೀರ್ಪುಗಾರ ಸ್ವಪನಿಲ್ ದಂಗರಿಕರ್ ಪ್ರಮಾಣ ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೀರನ್ನು ಉಳಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಬಿಡ್ಬ್ಲೂಎಸ್ಎಸ್ ಬಿ ವತಿಯಿಂದ ಒಂದು ವಾರಗಳ ಕಾಲ ಪ್ರತಿಜ್ಞಾ ಸ್ವೀಕಾರ ಅಭಿಯಾನ ನಡೆಸಲಾಯಿತು. ಈ ಅಭಿಯಾನದಲ್ಲಿ 5,33,642 ಮಂದಿ ಪ್ರತಿಜ್ಞೆ ಸ್ವೀಕರಿಸಿದ್ದರು. ಈ ಮೂಲಕ ಇದು ಗಿನ್ನಿಸ್ ದಾಖಲೆ ಬರೆದಿದೆ. ದೆಹಲಿ ಸೇರಿದಂತೆ ಬೇರೆ ನಗರಗಳಲ್ಲಿ ಕುಡಿಯುವ ನೀರಿನ ಸಂಪರ್ಕವೇ ಬೇರೆ, ದಿನಬಳಕೆ ಉದ್ದೇಶಕ್ಕೆ ಬಳಸುವ ನೀರಿನ ಸಂಪರ್ಕವೇ ಬೇರೆ ಇದೆ. ಆದರೆ ರಾಜ್ಯದಲ್ಲಿ ಕುಡಿಯಲು, ವಾಹನ ತೊಳೆಯಲು, ಗಿಡಗಳಿಗೆ ಹಾಕಲು ಎಲ್ಲದಕ್ಕೂ ಕುಡಿಯುವ ನೀರನ್ನೇ ಬಳಸಲಾಗುತ್ತಿದೆ ಎಂದು ಹೇಳಿದರು.

ಶೇ. ೩೫ ರಷ್ಟು ಜನ ಕುಡಿಯುವ ನೀರಿನ ಬಿಲ್ ಕಟ್ಟುತ್ತಿಲ್ಲ. ಆದರೂ ಮಂಡಳಿಯು ಕೆಲಸ ಮಾಡುತ್ತಿದೆ. ಬೆಂಗಳೂರಿನ 2 ಕೋಟಿ ನಾಗರಿಕರಿಗೆ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸುತ್ತಿದ್ದೇವೆ. ರಾಮ್ ಪ್ರಸಾತ್ ಮನೋಹರ್ ಅವರ ನೇತೃತ್ವದಲ್ಲಿ ಮಂಡಳಿಯು ಹೊಸ ಆವಿಷ್ಕಾರ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಮಾಹಿತಿ ನೀಡಿದರು.

ನೀರಿನ ದರ ಏರಿಕೆಗೆ ಅನುಮತಿ ನೀಡಿದ್ದು, ಟೀಕೆಗಳು ವ್ಯಕ್ತವಾಗುವುದು ಸಹಜ. ದರ ಪರಿಷ್ಕರಣೆಯಿಂದ ವಾರ್ಷಿಕವಾಗಿ 500 ಕೋಟಿ ರೂ.ನಷ್ಟು ಕಡಿಮೆ ಮಾಡುವ ಪ್ರಯತ್ನ ಮಾಡಲಾಗಿದೆ. ನಷ್ಟವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗದಿದ್ದರೂ ಅದನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆ ಮಾದರಿಯಲ್ಲಿ ದರ ಪರಿಷ್ಕರಣೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ಮಂಡಳಿ ಸಿಬ್ಬಂದಿ ಬಹಳ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದಾರೆ. ಕಾವೇರಿ 5ನೇ ಹಂತ ಕುಡಿಯುವ ನೀರಿನ ಯೋಜನೆ ಜಾರಿಗೆ ಸಾಕಷ್ಟು ಅಡಚಣೆಗಳು ಎದುರಾಗಿದ್ದವು. ಅದೆಲ್ಲವನ್ನು ನಿವಾರಿಸಿ ಜಾರಿ ಮಾಡಲಾಗಿದೆ. ಹೊಸ ಸಂಪರ್ಕ ನೀಡಲು ಇದ್ದ ಸಮಸ್ಯೆಗಳನ್ನು ನಿವಾರಣೆ ಮಾಡಲಾಗಿದೆ. ಸಂಚಾರಿ ಕಾವೇರಿ ಯೋಜನೆ ಮೂಲಕ ಜನರಿಗೆ ಕಡಿಮೆ ಬೆಲೆಗೆ ಪರಿಶುದ್ಧವಾದ ನೀರನ್ನು ನೀಡಲಾಗುತ್ತಿದೆ. ಇನ್ನು ಬೆಂಗಳೂರಿನಲ್ಲಿ ಒಳಚರಂಡಿ ವಿಚಾರವೂ ಒಂದು ಸವಾಲಾಗಿದೆ. ಕೊಳಚೆ ನೀರನ್ನು ಉತ್ತಮ ಕೆರೆಗಳಿಗೆ ಬಿಡಲಾಗುತ್ತಿದೆ. ಇದನ್ನು ಸಂಸ್ಕರಿಸಿ ಮರುಬಳಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.


Read More
Next Story