
ದೀರ್ಘಾವಧಿ ಸಿಎಂ ದಾಖಲೆ ಬರೆದ ಸಿದ್ದರಾಮಯ್ಯ; ಡಿಕೆಶಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
ಸಿದ್ದರಾಮಯ್ಯ ಅವರಿಗೆ ಯಶಸ್ಸಾಗಲಿ, ಒಳ್ಳೆಯದಾಗಲಿ. ಅವರಿಗೆ ಹೆಚ್ಚು ಆರೋಗ್ಯ ಸಿಗಲಿ, ಜನರ ಸೇವೆ ಮಾಡುವ ಅವಕಾಶವನ್ನು ಭಗವಂತ ನೀಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯಭರಿತವಾಗಿ ಹೇಳಿದರು.
ದಿವಂಗತ ಮಾಜಿ ಸಿಎಂ ದೇವರಾಜ ಅರಸು ಅವರ ದೀರ್ಘಾವಧಿ ಸಿಎಂ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಿಗಟ್ಟಿದ ಬೆನ್ನಲ್ಲೇ ಸಿಎಂ ಸ್ಥಾನಕ್ಕಾಗಿ ಪ್ರಬಲ ಪೈಫೋಟಿ ನಡೆಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವ್ಯಂಗ್ಯಭರಿತವಾಗಿ ಅಭಿನಂದನೆ ಸಲ್ಲಿಸಿರುವುದು ನಾಯಕತ್ವದ ಗೊಂದಲವನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋಗಿದೆ.
"ದಾಖಲೆ ಸರಿಗಟ್ಟಿದ ಸಂಭ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ವರಿಷ್ಠರು ಅವಕಾಶ ಕೊಟ್ಟರೆ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುತ್ತೇನೆ" ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, "ಐ ವಿಶ್ ಹಿಮ್ ಆಲ್ ದ ಬೆಸ್ಟ್, ಗುಡ್ ಲಕ್" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಡಿಕೆಶಿಯವರ ಈ ಹೇಳಿಕೆ ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಮಂಗಳವಾರ(ಜ.6) ಬೆಂಗಳೂರು ವಿವಿಯ ಜ್ಞಾನಜ್ಯೋತಿ ಸಭಾಂಗಣದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪೂರ್ಣಾವಧಿ ಸಿಎಂ ವಿಷಯದಲ್ಲಿ ಯಾರಿಗೂ ಗೊಂದಲವಿಲ್ಲ. ನೀವು (ಮಾಧ್ಯಮಗಳು) ಗೊಂದಲ ಮಾಡಿಕೊಳ್ಳುತ್ತಿದ್ದೀರಿ. ಸಿದ್ದರಾಮಯ್ಯನವರಿಗೆ ಯಶಸ್ಸಾಗಲಿ, ಒಳ್ಳೆಯದಾಗಲಿ. ಅವರಿಗೆ ಹೆಚ್ಚು ಆರೋಗ್ಯ ಸಿಗಲಿ, ಜನರ ಸೇವೆ ಮಾಡುವ ಅವಕಾಶವನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿರುವುದು ಕುತೂಹಲ ಮೂಡಿದೆ.
ಡಿ.ಕೆ. ಶಿವಕುಮಾರ್ ಅವರ ಈ ಹೇಳಿಕೆ ವಿವಿಧ ಆಯಾಮಗಳಲ್ಲಿ ಚರ್ಚೆಗೆ ವೇದಿಕೆಯಾಗಿದೆ. ಅರಸು ಅವರ ದೀರ್ಘಾವಧಿ ಸಿಎಂ ದಾಖಲೆ ಸರಿಗಟ್ಟುವವರೆಗೂ ನಾಯಕತ್ವ ಬದಲಾವಣೆಯ ಪ್ರಸ್ತಾಪ ಮಾಡದಂತೆ ಹೈಕಮಾಂಡ್ ಕಟ್ಟು ನಿಟ್ಟಿನ ಸೂಚನೆ ನೀಡಿತ್ತು. ಈಗ ಸಿಎಂ ಸಿದ್ದರಾಮಯ್ಯ ಅವರು ಅರಸು ದಾಖಲೆ ಸರಿಗಟ್ಟಿದ ಹಿನ್ನೆಲೆಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ಮುನ್ನೆಲೆಗೆ ಬರುವ ಸಾಧ್ಯತೆ ಹೆಚ್ಚಾಗಿದೆ.
ಡಿ.ಕೆ.ಶಿವಕುಮಾರ್ ಅವರ ವ್ಯಂಗ್ಯದ ದಾಟಿಯ ಹೇಳಿಕೆಯು ಇಂತಹ ಚರ್ಚೆಗಳಿಗೆ ಆಸ್ಪದ ನೀಡಿದೆ. ಅರಸು ದಾಖಲೆ ಮುರಿದ ಹಿನ್ನೆಲೆಯಲ್ಲಿ ಸಿಎಂ ಸ್ಥಾನ ಬದಲಾಯಿಸಿವಂತೆ ಡಿಕೆಶಿ ಅವರು ಹೈಕಮಾಂಡ್ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ.
ಎಚ್‌ಡಿಕೆ ಜೇಬಲ್ಲೇ ಐಟಿ ಇಲಾಖೆ ಇದೆಯಲ್ಲಾ?
ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವೇಲೆ ನಡೆದ ಅವಘಡದಲ್ಲಿ ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ನೀಡಿದ ಪರಿಹಾರ ಹಣ ಮೂಲ ಕಾಂಗ್ರೆಸ್ ಪಕ್ಷದ್ದೋ, ಸರ್ಕಾರದಿಂದಲೋ? ಎಂದು ಇತ್ತೀಚೆಗೆ ಕೆಂದ್ರ ಸಚಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಐಟಿ ಸೇರಿದಂತೆ ಇತರೇ ಎಲ್ಲಾ ಇಲಾಖೆಗಳು ಕೇಂದ್ರ ಸರ್ಕಾರದ ಹತ್ತಿರವೇ ಇದೆಯಲ್ಲವೇ? ಕುಮಾರಸ್ವಾಮಿ ಜೇಬಲ್ಲೇ ಇದ್ದಾವೆ. ಪರಿಹಾರ ಹಣದ ಬಗ್ಗೆ ಸಚಿವ ಜಮೀರ್ ಅವರ ಬಳಿ ಮಾತನಾಡುತ್ತೇನೆ” ಎಂದರು.
ಬಿಜೆಪಿಯಿಂದ ಗಲಭೆ ಯತ್ನ
ಬಳ್ಳಾರಿ ಸೇರಿದಂತೆ ರಾಜ್ಯದೆಲ್ಲೆಡೆ ಶಾಂತಿಯುತ ವಾತಾವರಣ ಉಳಿಯಬೇಕು. ಬಿಜೆಪಿಯವರು ಹತಾಶರಾಗಿ ಎಲ್ಲಾ ಕಡೆ ಗಲಭೆ ಉಂಟುಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕನ ಮಾಡುತ್ತೇನೆ. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ನಾವೆಲ್ಲರೂ ಪ್ರಾರ್ಥನೆ ಮಾಡುತ್ತೇವೆ. ದೀರ್ಘಕಾಲ ಆರೋಗ್ಯಯುತವಾಗಿರಲಿ. ಅವರ ಅಮೂಲ್ಯ ಸಲಹೆಗಳು ಈ ದೇಶ ಹಾಗೂ ಪಕ್ಷಕ್ಕೆ ಬೇಕಾಗಿದೆ. ಪಕ್ಷದ ಸಂಕಷ್ಟದ ಹೊತ್ತಿನಲ್ಲಿ ಅತ್ಯಮೂಲ್ಯ ಸಲಹೆ ನೀಡಿದ್ದಾರೆ " ಎಂದು ತಿಳಿಸಿದರು.

