ಚನ್ನಪಟ್ಟಣ ಉಪಚುನಾವಣೆ: ಡಿ.ಕೆ. ಶಿವಕುಮಾರ್‌  ಯು-ಟರ್ನ್?‌
x
ವಿಧಾನಸೌಧದ ಆವರಣದಲ್ಲಿ ಶುಕ್ರವಾರ (June 21) ನಡೆದ ಅಂತರಾಷ್ಟ್ರೀಯ ಯೋಗದಿನ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭಾಗವಹಿಸಿದ್ದರು.

ಚನ್ನಪಟ್ಟಣ ಉಪಚುನಾವಣೆ: ಡಿ.ಕೆ. ಶಿವಕುಮಾರ್‌ ಯು-ಟರ್ನ್?‌

ಚನ್ನಪಟ್ಟಣದಲ್ಲಿ ಉಪಚುನಾವಣೆ ನಡೆದರೆ ಕನಕಪುರದಲ್ಲಿ ಯಾಕೆ ಉಪಚುನಾವಣೆ ನಡೆಯುತ್ತದೆ. ನಾನು ಕನಕಪುರದ ಶಾಸಕ. ಪಕ್ಷದ ಅಧ್ಯಕ್ಷನಾಗಿ ನನ್ನ ಮೇಲೆ ಜವಾಬ್ದಾರಿ ಇದೆ. ಇದೂ ನನ್ನದೇ ಕ್ಷೇತ್ರ, ನನ್ನದೇ ನಾಯಕತ್ವ. ಸಿದ್ದರಾಮಯ್ಯ ಹಾಗೂ ನಾನು ಸೇರಿ ಚುನಾವಣೆ ನಡೆಸುತ್ತೇವೆ," ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.


ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಂದ ತೆರವಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತಾವು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಈಗ ಮತ್ತೆ ಯು-ಟರ್ನ್‌ ತೆಗೆದುಕೊಂಡಿದ್ದು, ಅವರ ನಡೆ ನಿಗೂಢವಾಗಿದೆ. ತಾವು ಪ್ರತಿನಿಧಿಸುವ ಕನಕಪುರ ಕ್ಷೇತ್ರದಲ್ಲಿ ಉಪಚುನಾವಣೆ ಯಾಕೆ ನಡೆಯುತ್ತದೆ ಎಂದು ಡಿಕೆಶಿ ಪ್ರಶ್ನಿಸಿ ತಾವು ಕನಕಪುರದ ಶಾಸಕ ಎಂದು ಒತ್ತಿ ಹೇಳಿದ್ದಾರೆ. ಆ ಮೂಲಕ ತಮ್ಮ ಪ್ರತಿನಿಧಿ (ಸೋದರ)ಯನ್ನು ಗೆಲ್ಲಿಸುವ ಮೂಲಕ ತಮ್ಮನ್ನು ಗೆಲ್ಲಿಸಬೇಕೆಂದು ಅವರು ಸೂಚ್ಯವಾಗಿ ಹೇಳಿದ್ದಾರೆ ಎನ್ನಲಾಗಿದೆ.

ವಿಧಾನಸೌಧದ ಆವರಣದಲ್ಲಿ ಶುಕ್ರವಾರ ನಡೆದ ಅಂತರಾಷ್ಟ್ರೀಯ ಯೋಗದಿನ ಕಾರ್ಯಕ್ರಮದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿ, “ಚನ್ನಪಟ್ಟಣದಲ್ಲಿ ಉಪಚುನಾವಣೆ ನಡೆದರೆ ಕನಕಪುರದಲ್ಲಿ ಯಾಕೆ ಉಪಚುನಾವಣೆ ನಡೆಯುತ್ತದೆ. ನಾನು ಕನಕಪುರದ ಶಾಸಕ. ಪಕ್ಷದ ಅಧ್ಯಕ್ಷನಾಗಿ ನನ್ನ ಮೇಲೆ ಜವಾಬ್ದಾರಿ ಇದೆ. ಇದೂ ನನ್ನದೇ ಕ್ಷೇತ್ರ, ನನ್ನದೇ ನಾಯಕತ್ವ. ಸಿದ್ದರಾಮಯ್ಯ ಹಾಗೂ ನಾನು ಸೇರಿ ಚುನಾವಣೆ ನಡೆಸುತ್ತೇವೆ," ಎಂದು ಹೇಳಿದ್ದಾರೆ. ಸ್ವಪ್ರತಿಷ್ಠೆಗಾಗಿ ಉಪಚುನಾವಣೆ ನಡೆಸಿ ದೇಶದ ಸಂಪತ್ತು ಹಾಳು ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ಸುರೇಶ್ ಕುಮಾರ್ ಅವರ ಹೇಳಿಕೆ ಬಗ್ಗೆ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದರು.

ಇತ್ತೀಚೆಗಷ್ಟೇ (ಜೂನ್‌ 19 ) ರಂದು ತಾವು "ಉಪಚುನಾವಣೆಯಲ್ಲಿ ಚನ್ನಪಟ್ಟಣದ ಜನ ನನ್ನ ಮೇಲೆ ಒಲವು ತೋರಿದರೆ, ಪಕ್ಷ ತೀರ್ಮಾನಿಸಿದರೆ ನಾನು ಸ್ಪರ್ಧೆ ಮಾಡದೇ ಬೇರೆ ವಿಧಿ ಇಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರು. ಅದೇ ಅರ್ಥ ಬರುವ ರೀತಿಯಲ್ಲಿ ಚನ್ನಪಟ್ಟಣ ಪ್ರವಾಸ ಸಂದರ್ಭದಲ್ಲಿ ಭಾಷಣವನ್ನೂ ಮಾಡಿದ್ದರು.

ಆದರೆ, ಶುಕ್ರವಾರ ಅವರ ವ್ಯತಿರಿಕ್ತ ಹೇಳಿಕೆ ಅವರ ನಡೆಯನ್ನು ಇನ್ನೂ ನಿಗೂಢವಾಗಿಸಿದೆ. ದೇವೇಗೌಡರ ಕುಟುಂಬದ ವಿರುದ್ಧ ಜಿದ್ದಾಜಿದ್ದಿಗೆ ಡಿ.ಕೆ. ಶಿವಕುಮಾರ್‌ ಅವರು ಮತ್ತೆ ಮುಂದಾಗಿದ್ದು, ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ದೇವಗೌಡರ ಅಳಿಯ ಡಾ. ಸಿ.ಎನ್‌. ಮಂಜುನಾಥ್‌ ವಿರುದ್ಧ ಸೋತ ತಮ್ಮ ಸೋದರ ಡಿ.ಕೆ. ಸುರೇಶ್‌ ಅವರನ್ನು ನಿಲ್ಲಿಸಿ ರಾಜಕೀಯ ಮರುಜನ್ಮ ನೀಡಲು ಡಿಕೆಶಿ ಯತ್ನಿಸಬಹುದು ಎಂದು ಅಂದಾಜಿಸಲಾಗಿತ್ತು. ಆ ಕ್ಷೇತ್ರದಿಂದ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರ ಹೆಸರು ಕೇಳಿಬರುತ್ತಿದ್ದು, ಈಗಾಗಲೇ ಎರಡು ಬಾರಿ (ಒಮ್ಮೆ ಮಂಡ್ಯ ಲೋಕಸಭೆ, ಇನ್ನೊಮ್ಮೆ ರಾಮನಗರ ವಿಧಾನಸಭೆ ಕ್ಷೇತ್ರ) ಸೋಲು ಕಂಡಿದ್ದು, ಮೂರನೇ ಸೋಲು ಅನುಭವಿಸುವಂತೆ ಮಾಡಲು ಡಿಕೆಶಿ ಪಣತೊಟ್ಟಿದ್ದಾರೆ. ಜತೆಗೆ ಸೋದರ ಡಿ.ಕೆ. ಸುರೇಶ್‌ ಸೋಲಿಗೂ ಪ್ರತೀಕಾರ ಮಾಡಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

ಶಿವಕುಮಾರ್ ಅವರು ಚನ್ನಪಟ್ಟಣದಿಂದ ಸ್ಪರ್ಧಿಸಿ ಸೋತರೆ ಅವರ ರಾಜಕೀಯ ಜೀವನಕ್ಕೆ ಭಾರೀ ಹಿನ್ನಡೆಯಾಗಲಿದೆ ಎಂದು ರಾಜಕೀಯ ಗೆಳೆಯರು ಸಲಹೆ ನೀಡಿದ್ದಾರೆ. ಅವರು ಮುಖ್ಯಮಂತ್ರಿಯಾಗಲು ಮತ್ತು ಹಳೇಮೈಸೂರು ಭಾಗದ ಒಕ್ಕಲಿಗ ನಾಯಕನಾಗಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಸಂಭವನೀಯ ಸೋಲು ಅವರ ಕನಸುಗಳನ್ನು ನಾಶಮಾಡಬಹುದು ಎಂಬ ಹಿನ್ನೆಲೆಯಲ್ಲಿ ಶಿವಕುಮಾರ್‌ ಅವರು ಇಬ್ಬಗೆಯ ಮನಸ್ಸು ಹೊಂದಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ರಾಮನಗರದಲ್ಲಿ ದೇವೇಗೌಡರ ಪಾರಮ್ಯ ನಿಯಂತ್ರಿಸಲು ಡಿ.ಕೆ. ಶಿವಕುಮಾರ್‌ ಸ್ಪಷ್ಟತೆ ಹೊಂದಿದ್ದಾರೆ ಎನ್ನಲಾಗಿದೆ.

ಮಾಧ್ಯಮದ ಜತೆ ಮಾತನಾಡಿದ ಅವರು, ಚನ್ನಪಟ್ಟಣದಿಂದ ಸ್ಪರ್ಧೆ ಮಾಡಿದರೆ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ ಎಂಬ ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ರಾಜಕೀಯ ಅಂತ್ಯ ತೀರ್ಮಾನ ಮಾಡುವವರು ಜನರು. ಯೋಗೇಶ್ವರ್ ದೊಡ್ಡವರು. ಅವರ ಮಾತಿಗೆ ಪ್ರತಿಕ್ರಿಯೆ ನೀಡುವಷ್ಟು ಸಮಯ ನನ್ನ ಬಳಿ ಇಲ್ಲ. ನಾನೂ ರಾಮನಗರ ಜಿಲ್ಲೆಯವನು. "ನಿಮ್ಮ ಋಣ ತೀರಿಸಲು ಬದ್ಧನಿದ್ದೇನೆ, ಶಕ್ತಿ ಕೊಡಿ ಎಂದು ಆ ಕ್ಷೇತ್ರದ ಜನರ ಬಳಿ ಕೇಳಿಕೊಂಡಿದ್ದೇನೆ. ನನ್ನ ಮೇಲೆ ವಿಶ್ವಾಸವಿದ್ದರೆ ಬೆಂಬಲ ನೀಡುತ್ತಾರೆ” ಎಂದು ತಿಳಿಸಿದರು. ಆದರೆ ಅವರ ಪ್ರತಿನಿಧಿಯಾಗಿ ಸೋದರ ಡಿ.ಕೆ. ಸುರೇಶ್‌ ಅವರನ್ನು ಚುನಾವಣಾ ಕಣಕ್ಕೆ ತರುತ್ತಾರೆಯೇ ಎಂದು ಸೂಚ್ಯವಾಗಿ ಡಿಕೆಶಿ ಮಾತನಾಡಿದ್ದಾರೆ ಎನ್ನಲಾಗಿದೆ.

Read More
Next Story