ವಿಬಿ ಜಿ ರಾಮ್ ಜಿ ಕಾಯ್ದೆಗೆ ವಿರೋಧ : 2 ದಿನಗಳ ವಿಶೇಷ ಅಧಿವೇಶನ, ಜ.26ರಿಂದ ಪಾದಯಾತ್ರೆ: ಡಿಕೆಶಿ
x

'ವಿಬಿ ಜಿ ರಾಮ್ ಜಿ' ಕಾಯ್ದೆಗೆ ವಿರೋಧ : 2 ದಿನಗಳ ವಿಶೇಷ ಅಧಿವೇಶನ, ಜ.26ರಿಂದ ಪಾದಯಾತ್ರೆ: ಡಿಕೆಶಿ

ಕೇಂದ್ರದ ವಿರುದ್ಧ ಹೋರಾಟ ತೀವ್ರಗೊಳಿಸುವ ಭಾಗವಾಗಿ ಜನವರಿ 26 ರಿಂದ ಫೆಬ್ರವರಿ 2ರವರೆಗೆ ರಾಜ್ಯಾದ್ಯಂತ ತಾಲ್ಲೂಕು ಮಟ್ಟದಲ್ಲಿ 5 ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.


Click the Play button to hear this message in audio format

.

ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯನ್ನು ರದ್ದುಗೊಳಿಸಿ, ಅದರ ಬದಲಿಗೆ ಜಾರಿಗೆ ತಂದಿರುವ 'ವಿಬಿ ಜಿ ರಾಮ್ ಜಿ' ಕಾಯ್ದೆಯನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ಬೃಹತ್ ಹೋರಾಟಕ್ಕೆ ಕರೆ ನೀಡಿದೆ. ಈ ಕಾಯ್ದೆಯಿಂದ ರಾಜ್ಯ ಹಾಗೂ ಗ್ರಾಮೀಣ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ಚರ್ಚಿಸಲು ಎರಡು ದಿನಗಳ 'ವಿಶೇಷ ಅಧಿವೇಶನ' ಕರೆಯಲು ತೀರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ಪ್ರಮುಖ ನಾಯಕರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಹೊಸ ಕಾಯ್ದೆಯ ವಿರುದ್ಧದ ಹೋರಾಟದ ರೂಪುರೇಷೆಗಳನ್ನು ಹಂಚಿಕೊಂಡರು. ಅಧಿವೇಶನದ ದಿನಾಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

ಮನರೇಗಾ ಮರುಸ್ಥಾಪನೆಗೆ ಪಟ್ಟು

"ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ರದ್ದುಪಡಿಸಿ, ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೊಳಿಸಿರುವುದು ದೇಶಕ್ಕೆ ಮತ್ತು ಗ್ರಾಮೀಣ ಬದುಕಿಗೆ ಮಾರಕವಾಗಿದೆ. ಈ ಹೊಸ ಕಾಯ್ದೆಯನ್ನು ತಕ್ಷಣವೇ ಹಿಂಪಡೆದು, ಹಳೆಯ ಮನರೇಗಾ ಯೋಜನೆಯನ್ನೇ ಮರುಸ್ಥಾಪಿಸಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲದು," ಎಂದು ಡಿಸಿಎಂ ಸ್ಪಷ್ಟಪಡಿಸಿದರು. ಈ ಬಗ್ಗೆ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಜ.26 ರಿಂದ ಬೃಹತ್ ಪಾದಯಾತ್ರೆ

ಹೋರಾಟವನ್ನು ತೀವ್ರಗೊಳಿಸುವ ಭಾಗವಾಗಿ ಜನವರಿ 26 ರಿಂದ ಫೆಬ್ರವರಿ 2ರವರೆಗೆ ರಾಜ್ಯಾದ್ಯಂತ ತಾಲ್ಲೂಕು ಮಟ್ಟದಲ್ಲಿ 5 ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಉದ್ಯೋಗ ಚೀಟಿ (Job Card) ಹೊಂದಿರುವ ಕಾರ್ಮಿಕರ ಜೊತೆಗೂಡಿ ನಡೆಯಲಿರುವ ಈ ಪಾದಯಾತ್ರೆಯಲ್ಲಿ ರಾಷ್ಟ್ರೀಯ ನಾಯಕರೂ ಭಾಗವಹಿಸಲಿದ್ದಾರೆ. ಅಲ್ಲದೆ, ಗ್ರಾಮ ಪಂಚಾಯತಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲೂ ಪ್ರತಿಭಟನೆಗಳನ್ನು ಆಯೋಜಿಸಲಾಗುವುದು ಎಂದು ಶಿವಕುಮಾರ್ ಮಾಹಿತಿ ನೀಡಿದರು.

ಒಕ್ಕೂಟ ವ್ಯವಸ್ಥೆಗೆ ಧಕ್ಕೆ: 6000 ಕೋಟಿ ನಷ್ಟ

ಹೊಸ ಕಾಯ್ದೆಯ ಲೋಪಗಳನ್ನು ಎತ್ತಿ ಹಿಡಿದ ಡಿಕೆಶಿ, "ಇದುವರೆಗೂ ಮನರೇಗಾ ಅಡಿಯಲ್ಲಿ ಶೇ.90ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು. ಆದರೆ, ಈಗ ಅದನ್ನು ಶೇ.60ಕ್ಕೆ ಇಳಿಸಿದ್ದು, ಬಾಕಿ ಶೇ.40ರಷ್ಟು ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕಿದೆ. ಇದು ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾಗಿದ್ದು, ರಾಜ್ಯಗಳ ಜೊತೆ ಯಾವುದೇ ಚರ್ಚೆ ನಡೆಸದೆ ರಾತ್ರೋರಾತ್ರಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಮನರೇಗಾ ಯೋಜನೆಯ ಸ್ವರೂಪ ಬದಲಾವಣೆಯಿಂದಾಗಿ ರಾಜ್ಯಕ್ಕೆ ಬರಬೇಕಿದ್ದ ಸುಮಾರು 6,000 ಕೋಟಿ ರೂ. ಮೊತ್ತದ ಕಾಮಗಾರಿಗಳು ಕೈತಪ್ಪಿ ಹೋಗಿವೆ. ಹಿಂದೆ ಗ್ರಾಮ ಪಂಚಾಯತಿಗಳೇ ಯಾವ ಕಾಮಗಾರಿ ಮಾಡಬೇಕೆಂದು ನಿರ್ಧರಿಸುತ್ತಿದ್ದವು. ಆದರೆ ಈಗ ದೆಹಲಿಯಿಂದ ನಿರ್ದೇಶನ ನೀಡಿದ ಕಾಮಗಾರಿಗಳನ್ನಷ್ಟೇ ಮಾಡಬೇಕಾದ ಸ್ಥಿತಿ ಬಂದಿದೆ. ಇದು ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳು ನೀಡಿರುವ ಅಧಿಕಾರ ವಿಕೇಂದ್ರೀಕರಣದ ಹಕ್ಕನ್ನು ಕಸಿದುಕೊಂಡಂತಾಗಿದೆ," ಎಂದು ಅವರು ವಿವರಿಸಿದರು.

ಮುಂದಿನ ದಿನಗಳಲ್ಲಿ ಪರಾಜಿತ ಅಭ್ಯರ್ಥಿಗಳು, ಬ್ಲಾಕ್ ಮತ್ತು ಬೂತ್ ಮಟ್ಟದ ಅಧ್ಯಕ್ಷರ ಸಭೆ ಕರೆದು ಹೋರಾಟಕ್ಕೆ ಮತ್ತಷ್ಟು ವೇಗ ನೀಡಲಾಗುವುದು. ಜೊತೆಗೆ ಸಚಿವರು ಜಿಲ್ಲಾ ಕೇಂದ್ರಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದರು.

ಬಳ್ಳಾರಿ ವರದಿ ಸ್ವೀಕಾರ

ಬಳ್ಳಾರಿ ಗಲಭೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ಘಟನೆಯ ಬಗ್ಗೆ ನೇಮಿಸಲಾಗಿದ್ದ ಸಮಿತಿಯು ವರದಿ ನೀಡಿದೆ. ವರದಿಯನ್ನು ಪರಿಶೀಲಿಸಿದ ಬಳಿಕವಷ್ಟೇ ಪ್ರತಿಕ್ರಿಯೆ ನೀಡುತ್ತೇನೆ," ಎಂದು ಹೇಳಿದರು.

Read More
Next Story