
ಡಿಕೆಶಿ ಕ್ಷಮೆ ರಾಜಕೀಯ ಕಳಂಕ ತರುವಂತಿದೆ- ಸಿ.ಟಿ. ರವಿ ಕಿಡಿ
ದೇಶದ್ರೋಹಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ಕರುಣೆ ತೋರಿಸುತ್ತದೆ. ಆದರೆ, ರಾಷ್ಟ್ರಭಕ್ತರಿಗೆ ಅವಮಾನಿಸುತ್ತಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.
"ನಮಸ್ತೇ ಸದಾ ವತ್ಸಲೇ" ಗೀತೆ ಕುರಿತು ಕ್ಷಮೆ ಕೇಳಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ಒತ್ತಡಕ್ಕೆ ಮಣಿದು ಕ್ಷಮೆ ಕೋರಿರುವುದು ರಾಜಕೀಯ ಕಳಂಕವಾಗಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಟೀಕಿಸಿದ್ದಾರೆ.
"ನಮಸ್ತೇ ಸದಾ ವತ್ಸಲೇ" ಎಂದರೆ ಕ್ಷಮೆ ಕೇಳಬೇಕು. "ಪಾಕಿಸ್ತಾನ್ ಜಿಂದಾಬಾದ್" ಎಂದರೆ ಪ್ರಶ್ನೆ ಮಾಡಬಾರದು ಎಂಬುದು ಕಾಂಗ್ರೆಸ್ ಮನೋಭಾವ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ದೇಶದ್ರೋಹಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ಕರುಣೆ ತೋರಿಸುತ್ತದೆ. ಆದರೆ, ರಾಷ್ಟ್ರಭಕ್ತರಿಗೆ ಅವಮಾನಿಸುತ್ತಿದೆ. ಹಿಂದೂತ್ವದ ಮುಖವಾಡ ತೊಟ್ಟು ಶಿವಭಕ್ತನೆಂದು ಹೇಳುತ್ತಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದೀಗ ಹೈಕಮಾಂಡ್ ಒತ್ತಡಕ್ಕೆ ಮಣಿದು ಕ್ಷಮೆ ಕೇಳಿರುವುದು ಅವರ ಸ್ವಾಭಿಮಾನಕ್ಕೆ ಬಿದ್ದ ಹೊಡೆತವಾಗಿದೆ ಎಂದು ಟೀಕಿಸಿದ್ದಾರೆ.
"ಭರತಭೂಮಿಯನ್ನು ಪ್ರಾರ್ಥಿಸುವ ಸ್ವಾತಂತ್ರ್ಯವೇ ಕಾಂಗ್ರೆಸ್ ನಾಯಕರಿಗಿಲ್ಲ. ವಾಕ್ ಸ್ವಾತಂತ್ರ್ಯವೂ ಇಲ್ಲದ ಪಕ್ಷದಲ್ಲಿ ಇನ್ಯಾವ ಸ್ವಾತಂತ್ರ್ಯ ಉಳಿದಿದೆ?, ಹೀಗೆ ಮುಂದುವರಿದರೆ ನಾಳೆ ರಾಷ್ಟ್ರಗೀತೆ ಹೇಳುವುದೂ ಅಪರಾಧ ಎಂಬ ಸ್ಥಿತಿ ಕಾಂಗ್ರೆಸ್‌ನಲ್ಲಿ ಬರಬಹುದು" ಎಂದು ಆಕ್ರೋಶ ಹೊರಹಾಕಿದ್ದಾರೆ.
"ನಮಸ್ತೇ ಸದಾ ವತ್ಸಲೇ" ಎಂಬ ಗೀತೆ ಹಾಡಿದ್ದ ಡಿ.ಕೆ. ಶಿವಕುಮಾರ್ ವಿರುದ್ಧ ಸ್ವಪಕ್ಷಿಯರಲ್ಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಡಿಸಿಎಂ ನಡೆಗೆ ಕಾಂಗ್ರೆಸ್ ನಾಯಕರು ವರಿಷ್ಠರಿಗೆ ದೂರು ಸಹ ನೀಡಿದ್ದರು. ಶ್ಲೋಕ ಪಠಣ ತೀವ್ರ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಕ್ಷಮೆಯಾಚಿಸಿದ್ದರು.
ಡಿ.ಕೆ. ಶಿವಕುಮಾರ್ ಕ್ಷಮೆ ಕೇಳಿದ್ದಕ್ಕೆ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.