ದೀಪಾವಳಿ ಸಂದೇಶ: ಆಪರೇಷನ್ ಸಿಂಧೂರ, ನಕ್ಸಲ್ ನಿರ್ಮೂಲನೆ ಮತ್ತು ಜಿಎಸ್​ಟಿ ಸುಧಾರಣೆಗಳನ್ನು ಪ್ರಸ್ತಾಪಿಸಿದ ಮೋದಿ
x

ಪ್ರಧಾನಿ ನರೇಂದ್ರ ಮೋದಿ

ದೀಪಾವಳಿ ಸಂದೇಶ: "ಆಪರೇಷನ್ ಸಿಂಧೂರ," ನಕ್ಸಲ್ ನಿರ್ಮೂಲನೆ ಮತ್ತು ಜಿಎಸ್​ಟಿ ಸುಧಾರಣೆಗಳನ್ನು ಪ್ರಸ್ತಾಪಿಸಿದ ಮೋದಿ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ನಂತರ ಇದು ಎರಡನೇ ದೀಪಾವಳಿಯಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಪತ್ರ ಆರಂಭಿಸಿದ್ದಾರೆ.


Click the Play button to hear this message in audio format

ದೀಪಾವಳಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶದ ಜನತೆಗೆ ಸಂದೇಶವೊಂದನ್ನು ರವಾನಿಸಿದ್ದು. ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತವು ಸ್ಥಿರತೆಯ ಸಂಕೇತವಾಗಿ ಹೊರಹೊಮ್ಮಿದೆ ಎಂದು ಪ್ರತಿಪಾದಿಸಿದ್ದಾರೆ. "ಆಪರೇಷನ್ ಸಿಂಧೂರ"ದ ಯಶಸ್ಸು, ನಕ್ಸಲಿಸಂ ವಿರುದ್ಧದ ಹೋರಾಟ ಮತ್ತು ಜಿಎಸ್‌ಟಿ ಸುಧಾರಣೆಗಳಂತಹ ಪ್ರಮುಖ ಸಾಧನೆಗಳನ್ನು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆಯೋಧ್ಯೆ ರಾಮಮಂದಿರ ಮತ್ತು ಆಪರೇಷನ್ ಸಿಂಧೂರ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ನಂತರ ಇದು ಎರಡನೇ ದೀಪಾವಳಿಯಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಪತ್ರ ಆರಂಭಿಸಿದ್ದಾರೆ. "ಶ್ರೀರಾಮನು ನಮಗೆ ಧರ್ಮವನ್ನು ಎತ್ತಿಹಿಡಿಯಲು ಕಲಿಸುತ್ತಾನೆ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಧೈರ್ಯವನ್ನು ನೀಡುತ್ತಾನೆ. ಇದಕ್ಕೆ ಇತ್ತೀಚೆಗೆ ನಡೆದ 'ಆಪರೇಷನ್ ಸಿಂಧೂರ' ಒಂದು ಜೀವಂತ ಉದಾಹರಣೆ. ಈ ಕಾರ್ಯಾಚರಣೆಯ ಮೂಲಕ ಭಾರತವು ಕೇವಲ ಧರ್ಮವನ್ನು ಎತ್ತಿ ಹಿಡಿಯಲಿಲ್ಲ, ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಂಡಿತು" ಎಂದು ಅವರು ಹೇಳಿದ್ದಾರೆ.

ನಕ್ಸಲಿಸಂ ನಿರ್ಮೂಲನೆ ಮತ್ತು ವಿಶೇಷ ದೀಪಾವಳಿ

ಈ ಬಾರಿಯ ದೀಪಾವಳಿ ಅತ್ಯಂತ ವಿಶೇಷವಾದುದು, ಏಕೆಂದರೆ ದೇಶದ ಹಲವು ಜಿಲ್ಲೆಗಳಲ್ಲಿ, ವಿಶೇಷವಾಗಿ ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆದ ದುರ್ಗಮ ಪ್ರದೇಶಗಳಲ್ಲಿ ಇದೇ ಮೊದಲ ಬಾರಿಗೆ ದೀಪಗಳನ್ನು ಬೆಳಗಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಹಿಂಸೆಯ ಮಾರ್ಗವನ್ನು ತೊರೆದು ಅನೇಕರು ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರುತ್ತಿರುವುದು ಮತ್ತು ಸಂವಿಧಾನದ ಮೇಲೆ ನಂಬಿಕೆ ವ್ಯಕ್ತಪಡಿಸುತ್ತಿರುವುದು ರಾಷ್ಟ್ರದ ಪ್ರಮುಖ ಸಾಧನೆಯಾಗಿದೆ ಎಂದು ಅವರು ಹೇಳಿದ್ದಾರೆ.

ಜಿಎಸ್‌ಟಿ ಬಚತ್ ಉತ್ಸವ' ಮತ್ತು ಆರ್ಥಿಕ ಸುಧಾರಣೆ

ತಮ್ಮ ಸರ್ಕಾರದ ಐತಿಹಾಸಿಕ ಸಾಧನೆಗಳಲ್ಲಿ ಜಿಎಸ್‌ಟಿ ದರ ಕಡಿತದ ನಿರ್ಧಾರವನ್ನು ಉಲ್ಲೇಖಿಸಿದ ಪ್ರಧಾನಿ, 'ಜಿಎಸ್‌ಟಿ ಬಚತ್ ಉತ್ಸವ' (ಉಳಿತಾಯ ಉತ್ಸವ) ದ ಸಂದರ್ಭದಲ್ಲಿ ನಾಗರಿಕರು ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡುತ್ತಿದ್ದಾರೆ ಎಂದು ಗಮನಸೆಳೆದಿದ್ದಾರೆ.

ಸ್ವದೇಶಿ, ಆರೋಗ್ಯ ಮತ್ತು 'ಏಕ್ ಭಾರತ್, ಶ್ರೇಷ್ಠ ಭಾರತ್'

ಸ್ವದೇಶಿ ಉತ್ಪನ್ನಗಳನ್ನು ಅಳವಡಿಸಿಕೊಳ್ಳುವಂತೆ, 'ಏಕ್ ಭಾರತ್, ಶ್ರೇಷ್ಠ ಭಾರತ್' (ಒಂದು ಭಾರತ, ಶ್ರೇಷ್ಠ ಭಾರತ) ಆಶಯವನ್ನು ಉತ್ತೇಜಿಸುವಂತೆ, ಎಲ್ಲಾ ಭಾಷೆಗಳಿಗೆ ಗೌರವ ನೀಡುವಂತೆ, ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಮತ್ತು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮೋದಿ ಜನರನ್ನು ಒತ್ತಾಯಿಸಿದ್ದಾರೆ. "ಈ ಎಲ್ಲಾ ಪ್ರಯತ್ನಗಳು ನಮ್ಮನ್ನು ಶೀಘ್ರವಾಗಿ 'ವಿಕಸಿತ ಭಾರತ'ದತ್ತ ಕೊಂಡೊಯ್ಯುತ್ತವೆ," ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

Read More
Next Story