ದೀಪಾವಳಿ| ಪಟಾಕಿ ಸಿಡಿತದಿಂದ ಗಾಯ; ಮಿಂಟೋ ಆಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಯುವಕರಿಗೆ ಚಿಕಿತ್ಸೆ
x

ದೀಪಾವಳಿ| ಪಟಾಕಿ ಸಿಡಿತದಿಂದ ಗಾಯ; ಮಿಂಟೋ ಆಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಯುವಕರಿಗೆ ಚಿಕಿತ್ಸೆ

ಮಿಂಟೋ ಆಸ್ಪತ್ರೆಗೆ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿ ಮಾಡಿಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ.


Click the Play button to hear this message in audio format

ನಾಡಿನಾದ್ಯಂತ ಬೆಳಕಿನ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ಹಲವೆಡೆ ಪಟಾಕಿಗಳ ಸದ್ದು ಮೇಲೆ ಎಲ್ಲೆ ಮೀರಿದೆ. ಆದರೆ, ಹಲವರ ಬದುಕಲ್ಲಿ ಈ ಬೆಳಕಿನ ಹಬ್ಬವು ಕತ್ತಲೆ ಕವಿಯುವಂತೆ ಮಾಡಿದೆ. ಪಟಾಕಿ ಸಿಡಿತದ ವೇಳೆ ಗಾಯಗೊಂಡ ಹಲವರು ಬೆಂಗಳೂರಿನ ಮಿಂಟೋ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟಾಕಿ ಸಿಡಿಸುವ ವೇಳೆ ಸಂಭವಿಸಿದ ಅನಾಹುತವು ಹಲವರ ದೃಷ್ಟಿಯನ್ನೇ ಕಿತ್ತುಕೊಂಡಿದೆ.

ದುಃಸ್ವಪ್ನವಾದ ದೀಪಾವಳಿ

ಬಿಹಾರದ ಮೂಲದ 20ರ ಹರೆಯದ ಕನ್ನಯ್ಯ ಕುಮಾರ್, ದೀಪಾವಳಿ ಸಂಭ್ರಮದಲ್ಲಿ ಒಂದು ಕಣ್ಣು ಕಳೆದುಕೊಂಡಿದ್ದಾನೆ. ಹೋಟೆಲ್‌ನಲ್ಲಿ ದುಡಿಯುವ ಆತ, ಪಟಾಕಿ ಸಿಡಿಸಲು ಹೋಗಿ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದಾನೆ. ಕೈಯಲ್ಲಿ ಹಿಡಿದಿದ್ದ ಸುರ್‌ ಸುರ್‌ ಬತ್ತಿ ಆಕಸ್ಮಿಕವಾಗಿ ಸಿಡಿದು ಕಣ್ಣಿನ ಭಾಗದಲ್ಲಿ ಗಾಯವಾಗಿದೆ. ಎರಡು ದಿನಗಳಿಂದ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ʻದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಕನ್ನಯ್ಯ ಕುಮಾರ್‌ ಸೋದರ ಮಾವ ಧರ್ಮೇಂದರ್, "ನನ್ನ ಅಕ್ಕನ ಮಗನ ಕಣ್ಣಿಗೆ ಪಟಾಕಿ ಸಿಡಿತದಿಂದ ಗಾಯವಾಗಿದೆ. ಆತನಿಗೆ ಇಂದಿರಾನಗರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಮಿಂಟೋ ಆಸ್ಪತ್ರೆಗೆ ದಾಖಲಿಸಿದ್ದೇವೆ. ಈಗ ಸುಧಾರಿಸಿಕೊಳ್ಳುತ್ತಿದ್ದಾನೆ. ಹೊಟೇಲ್‌ನಲ್ಲಿ ಕೆಲಸ ಮಾಡುವ ಕನ್ನಯ್ಯ ಕುಮಾರ್‌ ಮನೆಯ ಜವಾಬ್ದಾರಿ ಕೂಡ ಹೊತ್ತಿದ್ದಾನೆ" ಎಂದು ನೋವಿನಿಂದ ಹೇಳಿಕೊಂಡರು.

ಇನ್ನು ಬಿಹಾರ ಮೂಲದ ರಾಹುಲ್‌ ಕೂಡ ಪಟಾಕಿಯಿಂದ ಒಂದು ಕಣ್ಣು ಕಳೆದುಕೊಂಡಿದ್ದಾರೆ. ಕಲಾಸಿಪಾಳ್ಯದಲ್ಲಿ ಲೋಡಿಂಗ್‌ ಕೆಲಸ ಮಾಡುತ್ತಿದ್ದ ಈತನಿಗೆ ಪಟಾಕಿ ಸಿಡಿತದಿಂದ ಕಣ್ಣಿಗೆ ಪೆಟ್ಟು ಬಿದ್ದಿದೆ.

ನಡೆದು ಹೋಗುವಾಗ ಅನಾಹುತ

ಚಂದ್ರಾ ಎಂಬುವರ ಪುತ್ರ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಆಟಂ ಬಾಂಬ್ ಸಿಡಿದು ಕಣ್ಣಿಗೆ ಗಾಯವಾಗಿದೆ. ಈ ಬಗ್ಗೆ ಆತನ ತಾಯಿ ಚಂದ್ರ ಎಂಬುವರು ʻದ ಫಡರಲ್‌ ಕರ್ನಾಟಕʼ ಮಾತನಾಡಿ, "ನಮ್ಮ ಮಗನ ತಪ್ಪೇನಿಲ್ಲ. ಸುಮ್ಮನೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ. ಆಟಂ ಬಾಂಬ್‌ ಸಿಡಿದು ಗಾಯವಾಗಿದೆ. ವೈದ್ಯರು ಎರಡು ದಿನದ ನಂತರ ಶಸ್ತ್ರಚಿಕಿತ್ಸೆ ಮಾಡುತ್ತೇವೆ ಎಂದು ಹೇಳಿದ್ದಾರೆ" ಎಂದು ಅಳಲು ತೋಡಿಕೊಂಡರು.

ಆಂಧ್ರಪ್ರದೇಶದ ಹಿಂದೂಪುರ ಮೂಲದ ಪೂರ್ಣಚಂದ್ರ ಅವರ ಪುತ್ರ, 18 ವರ್ಷದ ವಂಶಿ ಸಹ ಇದೇ ರೀತಿಯ ಪಟಾಕಿ ಅನಾಹುತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಪಟಾಕಿ ಸಿಡಿಸುವ ವೇಳೆ ಕಿಡಿಯೊಂದು ಆತನ ಕಣ್ಣಿಗೆ ಬಿದ್ದಿದೆ. ನಾವು ಆಂಧ್ರಪ್ರದೇಶದ ಹಿಂದೂಪುರದವರು. ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಬೆಂಗಳೂರಿಗೆ ಕರೆದೊಯ್ಯಲು ಸಲಹೆ ನೀಡಿದರು. ನಾವು ರಾತ್ರಿಯೇ ಇಲ್ಲಿಗೆ ಬಂದೆವು. ಇಲ್ಲಿ ತುಂಬಾ ಚೆನ್ನಾಗಿ ಚಿಕಿತ್ಸೆ ನೀಡಿದ್ದಾರೆ. ಪಟಾಕಿ ಸಿಡಿಸುವಾಗ ಅದು ಹಿಮ್ಮುಖವಾಗಿ ಬಂದು ಕಣ್ಣಿಗೆ ತಾಗಿದೆ. ಈಗ ಸ್ಪಲ್ಪ ಪರವಾಗಿಲ್ಲ. ಸೋಮವಾರ ಏನು ಕಾಣುತ್ತಿರಲಿಲ್ಲ. ಈಗ ಅಲ್ಪ ಸ್ವಲ್ಪ ಕಾಣಿಸುತ್ತಿದೆ. ಇನ್ನು ಸಂಪೂರ್ಣ ಚೇತರಿಸಿಕೊಳ್ಳಲು ಕೆಲ ದಿನಗಳು ಬೇಕು ಎಂದು ವೈದ್ಯರು ಹೇಳಿದ್ದಾರೆ ಎಂದು ಆತನ ತಂದೆ ವಂಶಿ ತಂದೆ ಪೂರ್ಣಚಂದ್ರ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ವಿವರಿಸಿದರು.

ಗಾಯಾಳುಗಳಲ್ಲಿ ಬಹುತೇಕರು 16 ರಿಂದ 23 ವರ್ಷ ವಯಸ್ಸಿನ ಯುವಕರೇ ಆಗಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಇದುವರೆಗೆ ಮಿಂಟೋ ಆಸ್ಪತ್ರೆಯಲ್ಲಿ ಭಾನುವಾರ 2, ಸೋಮವಾರ 11, ಮಂಗಳವಾರ 14 ಪ್ರಕರಣಗಳು ಬಂದಿವೆ. ಅದರಲ್ಲಿ ಕಲವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಕೆಲವರು ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾ. ಶಿಲ್ಪಾ ʼದ ಫೆಡರಲ್‌ ಕರ್ನಾಟಕʼಕ್ಕೆ ವಿವರಿಸಿದರು.

ವೈದ್ಯರ ಸಲಹೆ

ಪಟಾಕಿಯ ರಾಸಾಯನಿಕ ಪ್ರತಿಕ್ರಿಯೆ ಹೆಚ್ಚಾಗಿದ್ದಲ್ಲಿ ಸಂಪೂರ್ಣ ದೃಷ್ಟಿ ಮರಳಿ ಪಡೆಯುವುದು ಕಷ್ಟಸಾಧ್ಯವಾಗಬಹುದು ಎಂದು ವೈದ್ಯರು ಆತಂಕ ವ್ಯಕ್ತಪಡಿಸುತ್ತಾರೆ. ಪಟಾಕಿ ಸಿಡಿಸುವಾಗ ಕಣ್ಣಿನ ರೆಪ್ಪೆ, ಕಾರ್ನಿಯಾ, ಐರಿಸ್, ಲೆನ್ಸ್ ಮತ್ತು ರೆಟಿನಾದಂತಹ ಸೂಕ್ಷ್ಮ ಭಾಗಗಳಿಗೆ ಹಾನಿಯಾಗುವ ಸಂಭವವಿದೆ. ಹಾಗಾಗಿ ಮಕ್ಕಳ ಕೈಯಿಂದ ಪಟಾಕಿ ಸಿಡಿಸುವಾಗ ಪೋಷಕರು ಜಾಗೃತೆ ವಹಿಸಬೇಕು ಎಂದು ಮಿಂಟೋ ಆಸ್ಪತ್ರೆಯ ವೈದ್ಯೆ ಡಾ. ಶಿಲ್ಪಾ ಎಚ್ಚರಿಕೆ ನೀಡಿದ್ದಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿ ದುರಂತಗಳ ಸಂಖ್ಯೆ ಇಳಿದಿರುವುದು ಸಮಾಧಾನಕರವಾದರೂ, ಮಿಂಟೋ ಮಾತ್ರವಲ್ಲದೆ ನಗರದ ಇತರೆ ಪ್ರತಿಷ್ಠಿತ ಆಸ್ಪತ್ರೆಗಳಲ್ಲೂ ಕಣ್ಣಿಗೆ ಹಾನಿಯಾಗಿ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರದಿಂದ ಇದುವರೆಗೆ ನಗರದಾದ್ಯಂತೆ 90ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಿಂಟೋ ಸೇರಿದಂತೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read More
Next Story