
ಸಾಂದರ್ಭಿಕ ಚಿತ್ರ
ದೀಪಾವಳಿಯ ಹೋರಿ ಹಬ್ಬ: ಹಾವೇರಿ ಜಿಲ್ಲೆಯಲ್ಲಿ ಮೂವರು ಬಲಿ
ಹಾವೇರಿಯ ದಾನೇಶ್ವರಿನಗರದ ನಿವಾಸಿ, ಹೆಸ್ಕಾಂನ ನಿವೃತ್ತ ನೌಕರ ಚಂದ್ರಶೇಖರ ಕೋಡಿಹಳ್ಳಿ (70), ದೇವಿಹೊಸೂರಿನ ಘನಿಸಾಬ ಮಹಮ್ಮದ್ ಹುಸೇನ್ ಬಂಕಾಪುರ (75) ಹಾಗೂ ತಿಳವಳ್ಳಿಯ ಯುವಕ ಭರತ್ ರಾಮಪ್ಪ ಹಿಂಗಮೇರಿ (24) ಮೃತಪಟ್ಟ ದುರ್ದೈವಿಗಳು.
ದೀಪಾವಳಿ ಹಬ್ಬದ ಅಂಗವಾಗಿ ಹಾವೇರಿ ಜಿಲ್ಲೆಯಾದ್ಯಂತ ಆಯೋಜಿಸಲಾಗಿದ್ದ ಸಾಂಪ್ರದಾಯಿಕ 'ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ'ಯು ಮೂರು ಕುಟುಂಬಗಳಿಗೆ ಕರಾಳ ದಿನವಾಗಿ ಪರಿಣಮಿಸಿದೆ. ಹೋರಿ ಹಬ್ಬದ ಸಂಭ್ರಮದ ನಡುವೆ ನಡೆದ ಪ್ರತ್ಯೇಕ ದುರ್ಘಟನೆಗಳಲ್ಲಿ, ಹೋರಿಗಳು ತಿವಿದ ಪರಿಣಾಮ ಇಬ್ಬರು ಹಿರಿಯ ನಾಗರಿಕರು ಮತ್ತು ಯುವಕನೊಬ್ಬ ಸೇರಿದಂತೆ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.
ಬುಧವಾರ (ಅ.22) ಜಿಲ್ಲೆಯ ಹಲವೆಡೆ ಹೋರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದರೆ, ಹಾವೇರಿ ನಗರ, ಹಾವೇರಿ ತಾಲ್ಲೂಕಿನ ದೇವಿಹೊಸೂರು ಮತ್ತು ಹಾನಗಲ್ ತಾಲ್ಲೂಕಿನ ತಿಳವಳ್ಳಿಯಲ್ಲಿ ನಡೆದ ಸ್ಪರ್ಧೆ ಹಾಗೂ ಮೆರವಣಿಗೆಗಳು ದುರಂತವಾಗಿ ಮಾರ್ಪಟ್ಟವು. ಹಾವೇರಿಯ ದಾನೇಶ್ವರಿನಗರದ ನಿವಾಸಿ, ಹೆಸ್ಕಾಂನ ನಿವೃತ್ತ ನೌಕರ ಚಂದ್ರಶೇಖರ ಕೋಡಿಹಳ್ಳಿ (70), ದೇವಿಹೊಸೂರಿನ ಘನಿಸಾಬ ಮಹಮ್ಮದ್ ಹುಸೇನ್ ಬಂಕಾಪುರ (75) ಹಾಗೂ ತಿಳವಳ್ಳಿಯ ಯುವಕ ಭರತ್ ರಾಮಪ್ಪ ಹಿಂಗಮೇರಿ (24) ಮೃತಪಟ್ಟ ದುರ್ದೈವಿಗಳು.
ಬೀದಿಯಲ್ಲಿ ನಡೆದು ಹೋಗುತ್ತಿದ್ದವರ ಮೇಲೆ ಎರಗಿದ ಹೋರಿ
ಹಾವೇರಿ ನಗರದ ವೀರಭದ್ರೇಶ್ವರ ದೇವಸ್ಥಾನದ ಬಳಿ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತಿತ್ತು. ಈ ವೇಳೆ, ಸ್ಪರ್ಧೆಯಿಂದ ತಪ್ಪಿಸಿಕೊಂಡು ಓಡಿದ ಹೋರಿಯೊಂದು, ಹಳೇ ಪಿ.ಬಿ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಚಂದ್ರಶೇಖರ್ ಕೋಡಿಹಳ್ಳಿ ಅವರಿಗೆ ರಭಸದಿಂದ ಗುದ್ದಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮನೆ ಮುಂದೆ ಕುಳಿತಿದ್ದವರ ಪ್ರಾಣ ತೆಗೆದ ಎತ್ತು
ದೇವಿಹೊಸೂರು ಗ್ರಾಮದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಎತ್ತುಗಳ ಮೆರವಣಿಗೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ಮೆರವಣಿಗೆಯಲ್ಲಿದ್ದ ಎತ್ತೊಂದು ಬೆದರಿ, ಹೊಂಡದ ಓಣಿಯಲ್ಲಿರುವ ತಮ್ಮ ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ಘನಿಸಾಬ ಅವರ ಮೇಲೆ ದಾಳಿ ಮಾಡಿದೆ. ಎತ್ತಿನ ಕೊಂಬು ಅವರ ಕುತ್ತಿಗೆ ಮತ್ತು ಎದೆಗೆ ತೀವ್ರವಾಗಿ ತಿವಿದ ಪರಿಣಾಮ, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣ ಹೋಗಿದೆ.
ಸ್ಪರ್ಧೆ ನೋಡಲು ಹೋಗಿದ್ದ ಯುವಕ ಬಲಿ
ಮತ್ತೊಂದು ದುರಂತದಲ್ಲಿ, ತಿಳವಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡಲು ಹೋಗಿದ್ದ ಭರತ್ ರಾಮಪ್ಪ ಹಿಂಗಮೇರಿ ಅವರ ಎದೆಗೆ ಹೋರಿಯೊಂದು ಬಲವಾಗಿ ಗುದ್ದಿದೆ. ರಭಸಕ್ಕೆ ನೆಲಕ್ಕೆ ಬಿದ್ದ ಭರತ್ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು. ತಕ್ಷಣವೇ ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.