ʼಡಿವೈನ್ ಲವ್ʼ ಹೆಸರಿನಲ್ಲಿ ರೇಪ್ | ಯೋಗ ಗುರು ಪ್ರದೀಪ್ ಉಲ್ಲಾಳ್ ಬಂಧನ
ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಪಂಜಾಬ್ ಮೂಲದ ಯುವತಿಯನ್ನು ಆಶ್ರಮಕ್ಕೆ ಕರೆಸಿಕೊಂಡು ಪದೇಪದೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಯೋಗ ಗುರು ಪ್ರದೀಪ್ ಉಲ್ಲಾಳ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪೂರ್ವಜನ್ಮದ ಪ್ರೇಮ ಎಂದು ʼಡಿವೈನ್ ಲವ್ʼ ಹೆಸರಿನಲ್ಲಿ ಪಂಜಾಬ್ ಮೂಲದ ಯುವತಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಚಿಕ್ಕಮಗಳೂರಿನ ಕೇವಲ ಯೋಗ ಫೌಂಡೇಷನ್‌ನ ಯೋಗ ಗುರು ಪ್ರದೀಪ್ ಉಲ್ಲಾಳ್ ಅವರನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಕೇವಲ ಫೌಂಡೇಷನ್ ಹೆಸರಿನಲ್ಲಿ ಐಷಾರಾಮಿ ಯೋಗ ಕೇಂದ್ರ ನಡೆಸುತ್ತಿರುವ ಪ್ರದೀಪ್ ಉಲ್ಲಾಳ್(55) ಎಂಬಾತನೇ ಅತ್ಯಾಚಾರ ಆರೋಪದಡಿ ಬಂಧಿತ ಆರೋಪಿ.
“ಆರೋಪಿಯು 2020ರಿಂದ ತನ್ನ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದು, ತನ್ನೊಂದಿಗೆ ಆತನಿಗೆ ಜನ್ಮಾಂತರದ ಪ್ರೇಮ ಇದೆ ಎಂದು ನಂಬಿಸಿ ಡಿವೈನ್ ಲವ್, ಕುಂಡಲಿ ಬ್ಲಾಕ್, ಎನರ್ಜಿ ವರ್ಕ್ ಎಂದು ಹುಸಿ ಆಧ್ಯಾತ್ಮಿಕ ಮಾತುಗಳನ್ನು ಆಡಿ ಮರುಳುಗೊಳಿಸಿ ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ. 2020ರಲ್ಲಿ ಆನ್‌ಲೈನ್ ಯೋಗ ತರಗತಿಗೆ ಸೇರಿದ ಬಳಿಕ ನೇರವಾಗಿ ಬಂದು ಭೇಟಿಯಾಗುವಂತೆ ಕೋರಿದ್ದ ಆತ, ತಾನು ನೇರವಾಗಿ ಮಲ್ಲೇನಹಳ್ಳಿಯ ಯೋಗ ಕೇಂದ್ರಕ್ಕೆ ಬಂದ ಬಳಿಕ ಈ ʼಜನ್ಮಾಂತರದ ಲವ್ʼ ವಿಷಯ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದ. ಆ ಬಳಿಕ 2022ರಲ್ಲೂ ಅದೇ ರೀತಿ ಮತ್ತೆ ನಾನು ಯೋಗ ಕೇಂದ್ರಕ್ಕೆ ಬಂದಾಗಲೂ ಹಾಗೇ ಮಾಡಿದ್ದ. ಆದರೆ, ಆತ ನನಗೆ ಹೇಳಿದಂತೆ ತನ್ನ ಯೋಗ ಕೇಂದ್ರಕ್ಕೆ ಬರುವ ಹೆಣ್ಣುಮಕ್ಕಳಿಗೆ ಹೇಳಿ ಅವರೊಂದಿಗೆ ಹೀಗೆ ದೈಹಿಕ ಸಂಪರ್ಕ ಹೊಂದಿರುವುದು ಗೊತ್ತಾದ ಬಳಿಕ ದೂರು ನೀಡಲು ನಿರ್ಧರಿಸಿದೆʼ ಎಂದು ನೊಂದ ಯುವತಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಪಂಜಾಬ್ ಮೂಲದ ಯುವತಿಯನ್ನು ಆಶ್ರಮಕ್ಕೆ ಕರೆಸಿಕೊಂಡು ಪದೇಪದೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಯೋಗ ಗುರು ಪ್ರದೀಪ್ ಉಲ್ಲಾಳ್ ನನ್ನು ಪೊಲೀಸರು ಬಂಧಿಸಿದ್ದಾರೆ.
ʼದ ಫೆಡರಲ್ ಕರ್ನಾಟಕʼ ಪ್ರಕರಣದ ಕುರಿತು ಮಾಹಿತಿ ನೀಡಿದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ(ಸಿಪಿಐ) ಸಚಿನ್ ಅವರು, "ಯೋಗದ ಹೆಸರಲ್ಲಿ ತನ್ನೊಂದಿಗೆ ಸಲುಗೆ ಬೆಳೆಸಿ ಮಸಾಜ್ ನೆಪದಲ್ಲಿ ಪ್ರದೀಪ್ ಉಲ್ಲಾಳ್ ಅತ್ಯಾಚಾರ ಎಸಗಿದ್ದಾನೆ ಎಂದು ಪಂಜಾಬ್ ಮೂಲದ ಕ್ಯಾಲಿಫೋರ್ನಿಯಾ ನಿವಾಸಿ ಯುವತಿಯೊಬ್ಬರು ನೀಡಿದ ದೂರಿನ ಮೇರೆಗೆ ಆಗಸ್ಟ್ 31ರಂದು ಎಫ್‌ಐಆರ್ ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಆರೋಪಿ ಪ್ರದೀಪ್ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಮೊಬೈಲ್ ಮತ್ತಿತರ ಸಾಧನಗಳನ್ನು ವಶಕ್ಕೆ ಪಡೆದು, ಸ್ಥಳ ಮಹಜರು ನಡೆಸಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಆರೋಪಿ ಚಿಕ್ಕಮಗಳೂರು ಮಾತ್ರವಲ್ಲದೆ, ಬಾಲಿ, ಶ್ರೀಲಂಕಾ, ಅಮೆರಿಕ ಮುಂತಾದ ಕಡೆಯೂ ಯೋಗ ಶಿಬಿರಗಳನ್ನು ನಿರಂತರವಾಗಿ ನಡೆಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ" ಎಂದು ವಿವರಿಸಿದರು.
ಅಲ್ಲದೆ, "ಆರೋಪಿ ವಿವಿಧ ಯೋಗ ಮತ್ತು ಧ್ಯಾನ ಶಿಬಿರಗಳನ್ನು ನಡೆಸುತ್ತಿದ್ದ, ಬೆಂಗಳೂರು ಮೂಲದ ಆತ ಕೊಂಕಣಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಯೋಗ ಕಲಿಕೆಗೆ ಬಂದ ಇತರೆ ಮಹಿಳೆಯರ ಮೇಲೆಯೂ ಇದೇ ರೀತಿಯ ವರ್ತನೆ ನಡೆದಿದೆಯೇ? ಎಂಬುದೂ ಸೇರಿದಂತೆ ಎಲ್ಲಾ ಆಯಾಮದಿಂದ ತನಿಖೆ ನಡೆಸುತ್ತಿದ್ದೇವೆ" ಎಂದೂ ಅವರು ಹೇಳಿದರು.
ಏನಿದು ಡಿವೈನ್ ಲವ್ ಅತ್ಯಾಚಾರ?
ಯೋಗ, ಆನ್‌ಲೈನ್ ಯೋಗ, ಶಕ್ತಿ ಯೋಗ, ಹಿಮಾಲಯನ್ ಯೋಗ ಮುಂತಾದ ಹೆಸರುಗಳಲ್ಲಿ ಯೋಗ ಕಲಿಕೆಯ ಆಸಕ್ತ ಹೆಣ್ಣುಮಕ್ಕಳನ್ನು ನಂಬಿಸಿ, ಯೋಗ ಕಲಿಸುವ ನೆಪದಲ್ಲಿ ಅವರ ಮೈ-ಕೈ ಮುಟ್ಟಿ ಸಲುಗೆ ಬೆಳೆಸಿ ಅವರೊಂದಿಗೆ ದೈಹಿಕ ಸಂಪರ್ಕ ಹೊಂದುವುದು ಇತ್ತೀಚಿನ ದಿನಗಳಲ್ಲಿ ಯೋಗ ಮತ್ತು ಧ್ಯಾನದ ಹೆಸರಿನಲ್ಲಿ ನಡೆಯುತ್ತಿರುವ ಹೊಸ ವಂಚನೆಯ ಆಟ.
ಹಿಮಾಲಯನ್ ಯೋಗ ಪಟು ಎಂದು ತನ್ನ ಬಗ್ಗೆ ತಾನು ಪ್ರಚಾರ ಮಾಡಿಕೊಂಡಿರುವ ಪ್ರದೀಪ್ ಉಲ್ಲಾಳ್ ವಿರುದ್ಧವೂ ಈಗ ಅಂತಹದ್ದೇ ಆರೋಪ ಕೇಳಿಬಂದಿದೆ.
“ಆನ್‌ಲೈನ್ನಲ್ಲಿ ಯೋಗ ತರಬೇತಿ ಪಡೆಯುತ್ತಿದ್ದ ನನ್ನನ್ನು ಕ್ಯಾಲಿಫೋರ್ನಿಯಾದಿಂದ ಮಲ್ಲೇನಹಳ್ಳಿಗೆ ಕರೆಸಿಕೊಂಡು 2021 ಮತ್ತು 2022ರಲ್ಲಿ ಮೂರು ಬಾರಿ ಕೆಲವು ದಿನಗಳ ಕಾಲ ಯೋಗ ಕೇಂದ್ರದಲ್ಲೇ ಇರಿಸಿಕೊಂಡು ಪ್ರದೀಪ್ ಉಲ್ಲಾಳ್ ನಿರಂತರ ಅತ್ಯಾಚಾರ ನಡೆಸಿದ್ದಾನೆ” ಎಂದು ಯುವತಿ ಹೇಳಿದ್ದಾಳೆ.
“ಪಂಜಾಬ್ ಮೂಲದ ನನ್ನ ಕುಟುಂಬ 2010ರಿಂದ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದೆ. 2020ರಲ್ಲಿ ಸ್ನೇಹಿತೆಯೊಬ್ಬರ ಮೂಲಕ ಪ್ರದೀಪ್ ಉಲ್ಲಾಳ್ ಪರಿಚಯವಾದ. ಆ ಬಳಿಕ ಆತನೊಂದಿಗೆ ಆನ್‌ಲೈನ್ ಯೋಗ ಕಲಿಯುತ್ತಿದ್ದೆ. 2021ರ ನವೆಂಬರ್ 1ರಂದು ನೇರ ಯೋಗ ಕಲಿಕೆಯ ನೆಪದಲ್ಲಿ ನನ್ನನ್ನು ಮಲ್ಲೇನಹಳ್ಳಿಗೆ ಕರೆಸಿಕೊಂಡಿದ್ದ. ಆಗ 21 ದಿನ ಕಾಲ ಆತನೊಂದಿಗೆ ಯೋಗ ಕೇಂದ್ರದಲ್ಲಿದ್ದೆ” ಎಂದು ವೈದ್ಯೆಯಾಗಿರುವ ಯುವತಿ ನೀಡಿರುವ ದೂರಿನಲ್ಲಿ ಹೇಳಿದ್ದಾಳೆ.
“ಹಿಂದಿನ ಜನ್ಮದಲ್ಲೇ ನಮ್ಮಿಬ್ಬರ ನಡುವೆ ಸಂಬಂಧ ಇತ್ತು. ಇದು ಜನ್ಮಾಂತರದ ನಂಟು ಎಂದು ಮೈ ಮುಟ್ಟುತ್ತಿದ್ದ ಪ್ರದೀಪ್, ಅನರ್ಜಿ ವರ್ಕ್, ಡಿವೈನ್ ಲವ್, ಕುಂಡಲಿ ಬ್ಲಾಕ್ ಎಂದು ಆಧ್ಯಾತ್ಮಿಕ ಮಾತನಾಡುತ್ತಾ ಸಲುಗೆ ಸಾಧಿಸಿ ಅತ್ಯಾಚಾರ ಮಾಡಿದ್ದ. ಬಳಿಕ ಕ್ಯಾಲಿಫೋರ್ನಿಯಾಕ್ಕೆ ವಾಪಸ್ ಹೋಗಿ 2022ರ ಫೆಬ್ರವರಿ 2ರಂದು ಮತ್ತೆ ಮಲ್ಲೇನಹಳ್ಳಿಗೆ ವಾಪಸ್ ಬಂದು 10 ದಿನ ಪ್ರದೀಪ್ ಜೊತೆಗಿದ್ದೆ. ಆಗಲೂ ಐದಾರು ಬಾರಿ ಅತ್ಯಾಚಾರ ನಡೆಸಿದ್ದ. ಅದೇ ವರ್ಷದ ಜುಲೈನಲ್ಲಿ ಮತ್ತೆ ಬಂದು 21 ದಿನ ಯೋಗ ಕೇಂದ್ರದಲ್ಲಿ ತಂಗಿದ್ದೆ. ಆಗಲೂ ಡಿವೈನ್ ಲವ್ ಹೆಸರಿನಲ್ಲಿ ಎರಡು- ಮೂರು ಬಾರಿ ಅತ್ಯಾಚಾರ ಎಸಗಿದ್ದ. ಆಗ ಗರ್ಭಿಣಿಯಾದೆ. ಆಗ ಕೇಳಿದ್ದಕ್ಕೆ ಇದೆಲ್ಲವೂ ಕೃಷ್ಣಲೀಲೆ, ಹೀಗಾಗಲು ಸಾಧ್ಯವಿಲ್ಲ ಎಂದು ಗರ್ಭಪಾತ ಮಾಡಿಸಿದ್ದʼ ಎಂದು ಯುವತಿ ದೂರಿದ್ದಾರೆ.
ಅಲ್ಲದೆ, “ಪ್ರದೀಪ್‌ಗೆ ಈವರೆಗೆ ಮ್ಯೂಸಿಕ್ ಸಿಸ್ಟಮ್, ಲ್ಯಾಪ್‌ಟಾಪ್, ಕಾಶ್ಮೀರಿ ಕಾರ್ಪೆಟ್ ಸೇರಿದಂತೆ ಸುಮಾರು 20 ಲಕ್ಷ ರೂ, ಮೌಲ್ಯದ ವಸ್ತುಗಳ ಉಡುಗೊರೆಯನ್ನೂ ನೀಡಿದ್ದೇನೆ. ಆತ ನನ್ನಂತೆಯೇ ಯೋಗ ಕಲಿಯಲು ಬರುವ ಬೇರೆ ಹೆಂಗಸರೊಂದಿಗೂ ಈ ʼಡಿವೈನ್ ಲವ್ ಆಟʼ ಆಡಿರುವುದು ಗೊತ್ತಾದ ಮೇಲೆ ಆತನಿಂದ ವಂಚನೆಗೊಳಗಾಗಿರುವುದು ಗೊತ್ತಾಯಿತು” ಎಂದು ದೂರಿನಲ್ಲಿ ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಯಾರು ಈ ʼಡಿವೈನ್ ಲವ್ʼ ಗುರು?
ಚಿಕ್ಕಮಗಳೂರು ಸಮೀಪದ ಮಲ್ಲೇನಹಳ್ಳಿಯಲ್ಲಿ ಕೇವಲ ಫೌಂಡೇಷನ್ ಎಂಬ ಐಷಾರಾಮಿ ಯೋಗ- ಆಧ್ಮಾತ್ಮ ಕೇಂದ್ರ ಮಾಡಿಕೊಂಡಿರುವ ಪ್ರದೀಪ್ ಉಲ್ಲಾಳ್ ತನ್ನನ್ನು ತಾನು ಹಿಮಾಲಯನ್ ಯೋಗಿ ಎಂದು ಕರೆದುಕೊಂಡಿದ್ದು, ತಾನು ಕುಂಡಲಿನಿ ಶಕ್ತಿಯನ್ನು ಪಡೆದಿದ್ದೇನೆ ಎಂದು ಹೇಳಿ ಹೊರ ರಾಜ್ಯಗಳು ಮತ್ತು ವಿದೇಶಗಳ ಯೋಗ ಆಸಕ್ತರನ್ನು ಸೆಳೆದು ತನ್ನ ಕೇಂದ್ರದಲ್ಲಿ ಯೋಗ ಶಿಬಿರ ನಡೆಸುತ್ತಿದ್ದ.
ಯೋಗ, ವೇದ, ಆಯುರ್ವೇದ, ತಂತ್ರ, ಕಲೆ, ಸಂಗೀತ, ನೃತ್ಯ, ಧ್ಯಾನ, ಹೀಲಿಂಗ್ ಮುಂತಾದ ಸೇವೆ ಒದಗಿಸುವುದಾಗಿ ʼಕೇವಲ ಫೌಂಡೇಷನ್ʼ ಬಗ್ಗೆ ಹೇಳಿಕೊಂಡಿರುವ ಪ್ರದೀಪ್, ಈವರೆಗೆ 120 ದೇಶಗಳ 10 ಸಾವಿರಕ್ಕೂ ಹೆಚ್ಚು ಆಸಕ್ತರಿಗೆ ಯೋಗದ ಮೂಲಕ ಗಾಮಾ ಅಲೆಗಳನ್ನು ಅವಾಹಿಸಿರುವುದಾಗಿ ಹೇಳಿದ್ದಾನೆ. ಪ್ರತಿ ವರ್ಷ ಕೈಲಾಸ ಮ್ಯೂಸಿಕ್ ಫೆಸ್ಟಿವಲ್ ನಡೆಸುವ ಈತ ದೇಶ- ವಿದೇಶದ ಪ್ರಖ್ಯಾತ ಸಂಗೀತಗಾರರನ್ನು ಕರೆಸಿ ಸಂಗೀತೋತ್ಸವ ನಡೆಸುತ್ತಿದ್ದ.
ಬಹುತೇಕ ವಿದೇಶಿ ಹೆಣ್ಣುಮಕ್ಕಳೇ ಆತನ ಹಿಮಾಲಯನ್ ಕ್ರಿಯಾ ಯೋಗದ ಶಿಷ್ಯರಲ್ಲಿ ಹೆಚ್ಚಿರುತ್ತಿದ್ದರು. ಅಮೆರಿಕಾ, ಫ್ರಾನ್ಸ್, ಮಾರಿಷಸ್, ಬಾಲಿ, ಜರ್ಮನಿ, ಇಂಗ್ಲೆಂಡ್ ಮತ್ತಿರರ ದೇಶಗಳ ಮಹಿಳೆಯರು ಹೆಚ್ಚಾಗಿ ಈತನ ಐಷಾರಾಮಿ ಯೋಗ ಕೇಂದ್ರದಲ್ಲಿ ತಿಂಗಳುಗಟ್ಟಲೆ ತಂಗಿ ಯೋಗ ಕಲಿಯುತ್ತಿದ್ದರು. ಪ್ರತಿ ವರ್ಷವೂ ನಿಯಮಿತವಾಗಿ 21 ದಿನ, 48 ದಿನ, ಹೀಗೆ ವಿವಿಧ ಅವಧಿಯ ಯೋಗ ಶಿಬಿರಗಳನ್ನು ನಡೆಸುತ್ತಿದ್ದಪ್ರದೀಪ್, ತನ್ನ ಅನುಯಾಯಿಗಳ ನಡುವೆ ʼಡಿವೈನ್ ಲವ್ ಯೋಗಿʼ ಎಂದೇ ಹೆಸರಾಗಿದ್ದ.