ಜಾತಿ-ಧರ್ಮದ ಹೆಸರಲ್ಲಿ ವಿಭಜಿಸಿ ಆಳೋದಷ್ಟೆ ಬಿಜೆಪಿ ರಾಜಕಾರಣ: ಸಿದ್ದರಾಮಯ್ಯ ಆಕ್ರೋಶ
x

ಜಾತಿ-ಧರ್ಮದ ಹೆಸರಲ್ಲಿ ವಿಭಜಿಸಿ ಆಳೋದಷ್ಟೆ ಬಿಜೆಪಿ ರಾಜಕಾರಣ: ಸಿದ್ದರಾಮಯ್ಯ ಆಕ್ರೋಶ

ನಾನು ನೆನ್ನೆ ಮೊನ್ನೆ ಮಂತ್ರಿಯಾದವನಲ್ಲ. 40 ವರ್ಷದಿಂದ ಮಂತ್ರಿಯಾಗಿದ್ದೀನಿ, ಸುಳ್ಳು ಕೇಸಲ್ಲಿ ನನ್ನನ್ನು, ನನ್ನ ಧರ್ಮಪತ್ನಿಯನ್ನು ಎಳೀತೀರಾ?, ರಾಜ್ಯದ ಜನರೇನು ಮೂರ್ಖರಾ ಎಂದು ಸಿಎಂ ಆಕ್ರೋಶ ವ್ತ್ಯಕ್ತಪಡಿಸಿದರು.


ಇಡಿ(ED), ಸಿಬಿಐ (CBI), ಆದಾಯ ತೆರಿಗೆ( IT) ಹಾಗೂ ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಂಡು ಆಟ ಆಡುತ್ತಿದ್ದೀರಾ ಎಂದು ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ನೇತೃತ್ವದ ಮೈತ್ರಿ ಕೂಟವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮೈಸೂರಿನ ಟಿ.ನರಸೀಪುರದಲ್ಲಿ ಬುಧವಾರ 470ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಆಯ್ತು. ಈಗ ನನ್ನ ಮತ್ತು ನನ್ನ ಪತ್ನಿಯನ್ನು ಟಾರ್ಗೆಟ್ ಮಾಡಿದ್ದಾರೆ ಕಿಡಿಕಾರಿದರು.

ನಾನು ನೆನ್ನೆ ಮೊನ್ನೆ ಮಂತ್ರಿಯಾದವನಲ್ಲ. 40 ವರ್ಷದಿಂದ ಮಂತ್ರಿಯಾಗಿದ್ದೀನಿ, ಸುಳ್ಳು ಕೇಸಲ್ಲಿ ನನ್ನನ್ನು, ನನ್ನ ಧರ್ಮಪತ್ನಿಯನ್ನು ಎಳೀತೀರಾ?, ರಾಜ್ಯದ ಜನರೇನು ಮೂರ್ಖರಾ ಎಂದು ಆಕ್ರೋಶ ವ್ತ್ಯಕ್ತಪಡಿಸಿದರು.

ರಾಜ್ಯದ ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನಾನು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಷಡ್ಯಂತ್ರಗಳಿಗೆ ಜಗ್ಗಲ್ಲ, ಬಗ್ಗಲ್ಲ. ನೀವೂ ಕೂಡ ಸುಖಾ ಸುಮ್ಮನೆ ತಂಟೆಗೆ ಬಂದರೆ ಸುಮ್ಮನಿರಲ್ಲ ಎನ್ನುವ ಎಚ್ಚರಿಕೆ ಕೊಡಬೇಕಿದೆ ಎಂದು ಜನರಿಗೆ ಕರೆ ನೀಡಿದರು.

ಬಿಜೆಪಿ ಇವತ್ತಿನವರೆಗೂ ರಾಜ್ಯದಲ್ಲಿ ಸ್ವಂತ ಶಕ್ತಿಯಿಂದ ಒಂದು ಬಾರಿಯೂ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಮಾತ್ರ ಅಧಿಕಾರಕ್ಕೆ ಬಂದಿದೆ. ಈ ಬಾರಿ ಕಾಂಗ್ರೆಸ್ಸಿನ 50 ಮಂದಿ ಶಾಸಕರಿಗೆ ತಲಾ 50 ಕೋಟಿ ಆಫರ್ ನೀಡಿ ಖರೀದಿಸಲು ಯತ್ನಿಸಿದ್ದಾರೆ. ಎಲ್ಲಿಂದ ಬರುತ್ತೆ ಈ ಹಣ? ಯಡಿಯೂರಪ್ಪ, ಬೊಮ್ಮಾಯಿ, ಆರ್.ಅಶೋಕ್ ಪ್ರಿಂಟ್ ಹಾಕಿದ್ದಾ ಈ ಹಣ?, ರಾಜ್ಯವನ್ನು ಲೂಟಿ ಹೊಡೆದ ಹಣ ತಾನೇ. ಆದರೆ ನಮ್ಮ ಶಾಸಕರು ಇವರ ಆಮಿಷಕ್ಕೆ ಒಳಗಾಗಲಿಲ್ಲ ಎದು ಹೇಳಿದರು.

ಬಿಜೆಪಿಯವರು ಗ್ಯಾರಂಟಿ ಹಣ ಮುಟ್ಟುತ್ತಿಲ್ಲವೇ?

ರಾಜ್ಯದಲ್ಲಿ ನಮ್ಮ ಐದೂ ಗ್ಯಾರಂಟಿಗಳು ಯಶಸ್ವಿಯಾದ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಭಯಾನಕ ಸುಳ್ಳುಗಳನ್ನು ಹೊಸೆಯುತ್ತಿದ್ದಾರೆ. ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಹಸಿ ಸುಳ್ಳಿನ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿಗಳಿಗಾಗಿ 56 ಸಾವಿರ ಕೋಟಿ ರೂಪಾಯಿ ಕೊಟ್ಟರೆ, ಅಭಿವೃದ್ಧಿ ಕಾರ್ಯಗಳಿಗೆ 1 ಲಕ್ಷದ 20 ಸಾವಿರ ಕೋಟಿ ರೂಪಾಯಿ ನೀಡಿದೆ. ಇಂದು ನರಸೀಪುರದಲ್ಲಿ 470 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ದೊರೆತಿದೆ. ಬಿಜೆಪಿಯ ಸುಳ್ಳುಗಳಿಗೆ ಇವತ್ತಿನ ಅಭಿವೃದ್ಧಿ ಕಾರ್ಯಕ್ರಮ ಕನ್ನಡಿ ಹಿಡಿದಿದೆ ಎಂದರು.

ಬಿಜೆಪಿಯವರಿಗೆ ನಾನು ನೇರವಾಗಿ ಒಂದು ಪ್ರಶ್ನೆ ಕೇಳ್ತೀನಿ. ರಾಜ್ಯದಲ್ಲಿ ಬಿಜೆಪಿಯವರು ನಮ್ಮ ಗ್ಯಾರಂಟಿಗಳ ಫಲಾನುಭವಿಗಳಲ್ಲವಾ? ಬಿಜೆಪಿಯವರು ಉಚಿತವಾಗಿ ಬಸ್ಸಲ್ಲಿ ಓಡಾಡುತ್ತಿಲ್ಲವಾ? ಬಿಜೆಪಿಯವರು ಉಚಿತ ವಿದ್ಯುತ್ ಪಡೆಯುತ್ತಿಲ್ಲವಾ?, ಬಿಜೆಪಿಯವರು ಗೃಹಲಕ್ಷ್ಮಿ ಹಣ ಪಡೆಯುತ್ತಿಲ್ಲವಾ? ಎಂದು ಪ್ರಶ್ನಿಸಿದ ಅವರು, ಇಲ್ಲ ಎಂದು ಬಿಜೆಪಿಯವರು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ ಎಂದು ಸವಾಲೆಸೆದರು.

ರಾಜ್ಯ ಸರ್ಕಾರದ ಗ್ಯಾರಂಟಿ ಫಲಾನುಭವಿಗಳನ್ನು ಅವಮಾನಿಸಿ, ಅಪಪ್ರಚಾರ ಮಾಡುವುದನ್ನು ನಿಲ್ಲಿಸದಿದ್ದರೆ ಕೋಟಿ ಕೋಟಿ ಫಲಾನುಭವಿಗಳು ನಿಮಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

Read More
Next Story