Auto Fare Hike | ಆಟೊ ಪ್ರಯಾಣ ದರ ಏರಿಕೆ ಪ್ರಸ್ತಾಪಕ್ಕೆ ಜಿಲ್ಲಾಡಳಿತ ಬ್ರೇಕ್‌; ದರ ಏರಿಕೆಗೆ ಚಾಲಕರ ಪಟ್ಟು
x

Auto Fare Hike | ಆಟೊ ಪ್ರಯಾಣ ದರ ಏರಿಕೆ ಪ್ರಸ್ತಾಪಕ್ಕೆ ಜಿಲ್ಲಾಡಳಿತ ಬ್ರೇಕ್‌; ದರ ಏರಿಕೆಗೆ ಚಾಲಕರ ಪಟ್ಟು

ಈಗಾಗಲೇ ಬೆಂಗಳೂರಿನಲ್ಲಿ ಮೆಟ್ರೋ , ಬಸ್ ಪ್ರಯಾಣ ದರ ಏರಿಕೆಯಿಂದ ಕಂಗಾಲಾಗಿದ್ದ ಸಾರ್ವಜನಿಕರಿಗೆ ಆಟೊ ಪ್ರಯಾಣ ದರ ಏರಿಕೆ ಪ್ರಸ್ತಾಪ ಮತ್ತೊಂದು ಸಂಕಷ್ಟ ತಂದೊಡ್ಡಿತ್ತು.


ಬೆಂಗಳೂರಿನಲ್ಲಿ ಆಟೊ ಪ್ರಯಾಣ ದರ ಏರಿಕೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಏ.1 ರಿಂದ ಆಟೋ ಪ್ರಯಾಣ ದರ ಏರಿಕೆಯಾಗಲಿದೆ ಎಂಬ ವದಂತಿಗೆ ಸ್ಪಷ್ಟನೆ ನೀಡಿರುವ ಬೆಂಗಳೂರು ನಗರ ಜಿಲ್ಲಾಡಳಿತ, ದರ ಏರಿಕೆ ಪ್ರಸ್ತಾಪ ಸದ್ಯಕ್ಕಿಲ್ಲ ಎಂದು ಹೇಳಿದೆ. ಇದರಿಂದ ಆಟೊ ಚಾಲಕರಿಗೆ ನಿರಾಶೆ ಎದುರಾಗಿದೆ.

2021ರ ನಂತರ ಬೆಂಗಳೂರಿನಲ್ಲಿ ಆಟೊ ಪ್ರಯಾಣ ದರ ಏರಿಸಿಲ್ಲ. ಹಾಗಾಗಿ ದರ ಪ್ರಯಾಣ ದರ ಏರಿಕೆ ಮಾಡುವಂತೆ ಆಟೊ ಚಾಲಕರ ಸಂಘಟನೆಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದವು.

ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ಜಿಲ್ಲಾಡಳಿತ, ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಆಟೋ ಚಾಲಕರ ಒಕ್ಕೂಟ ಸಭೆಯನ್ನು ದರ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದ ನಗರ ಜಿಲ್ಲಾಧಿಕಾರಿ ದಯಾನಂದ್ ಅವರು ನಡೆಸಿದ್ದರು. ಸಭೆಯ ಬಳಿಕ ಏ.1 ರಿಂದ ಆಟೊ ಪ್ರಯಾಣ ದರ ಏರಿಕೆ ಮಾಡುವ ಕುರಿತು ವದಂತಿ ಹಬ್ಬಿತ್ತು.

ಈಗಾಗಲೇ ಮೆಟ್ರೋ , ಬಸ್ ಪ್ರಯಾಣ ದರ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಆಟೊ ಪ್ರಯಾಣ ದರ ಏರಿಕೆ ಪ್ರಸ್ತಾಪ ಕೂಡ ಸಂಕಷ್ಟ ತಂದೊಡ್ಡಿತ್ತು.

ಪ್ರಯಾಣ ದರ ಏರಿಕೆ ಕುರಿತ ವದಂತಿಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ದಯಾನಂದ್ ಅವರು, ಆಟೊ ಪ್ರಯಾಣ ದರ ಏರಿಕೆ ಕುರಿತು ಸಾರಿಗೆ ಇಲಾಖೆಯೊಂದಿಗೆ ಸಭೆ ಮಾಡಿ, ವರದಿ ಸಿದ್ಧಪಡಿಸಲಾಗುತ್ತಿದೆ. ಆ ಬಳಿಕ ಮತ್ತೊಮ್ಮೆ ಆಟೋ ಚಾಲಕರ ಸಂಘಟನೆಗಳೊಂದಿಗೆ ಸಭೆ ನಡೆಸಿ ಪ್ರಯಾಣ ದರ ಏರಿಕೆ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯಕ್ಕಂತೂ ಆಟೊ ಪ್ರಯಾಣ ದರ ಏರಿಕೆ ಇಲ್ಲ ಎಂದು ತಿಳಿಸಿದ್ದಾರೆ.

ಆಟೊ ಚಾಲಕರ ಆಕ್ರೋಶ

ಆಟೊ ಪ್ರಯಾಣ ದರ ಏರಿಕೆಗೆ ಸಮ್ಮತಿ ನೀಡದ ಜಿಲ್ಲಾಡಳಿತದ ವಿರುದ್ಧ ಆಟೊ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2011 ಹಾಗೂ 2021ರಲ್ಲಿ ಮಾತ್ರ ಆಟೋ ಪ್ರಯಾಣ ದರ ಪರಿಷ್ಕರಣೆಯಾಗಿದೆ. ಈಗ ಅನಿಲ, ಆಟೋ ಬಿಡಿ ಭಾಗಗಳ ದರಗಳು ಏರಿಕೆಯಾಗಿವೆ. ನಿರ್ವಹಣಾ ವೆಚ್ಚವೂ ಅಧಿಕವಾಗಿದೆ. ಹಾಗಾಗಿ ಕೂಡಲೇ ಆಟೋ ಪ್ರಯಾಣ ದರ ಏರಿಕೆಗೆ ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

2021 ನವೆಂಬರ್ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣದ ಮೂಲ ದರವನ್ನು 30 ರೂ. (ಮೊದಲ 1.9 ಕಿ.ಮೀ) ನಿಗದಿ ಮಾಡಲಾಗಿತ್ತು. ಅದಾದ ಬಳಿಕ ಮೂಲ ದರ ಹೆಚ್ಚಳ ಮಾಡಿಲ್ಲ. ಈಗ ಮೂಲ ದರವನ್ನು 40 ರೂ.ಗಳಿಗೆ ಹೆಚ್ಚಿಸಿ ನಂತರದ ಪ್ರತಿ ಕಿ.ಮೀ. ಗೆ ರೂ. 15 ನಿಗದಿ ಮಾಡಬೇಕು ಎಂದು ಆಟೋ ಚಾಲಕರ ಸಂಘಟನೆಗಳು ಬೇಡಿಕೆ ಇಟ್ಟಿದ್ದವು.

Read More
Next Story