
ಮೈತ್ರಿ ಸಂಕಷ್ಟ | ಬಿಜೆಪಿ ಪಾದಯಾತ್ರೆಗೆ ನಮ್ಮ ಬೆಂಬಲವಿಲ್ಲ ಎಂದ ಎಚ್‌ಡಿಕೆ
“ಪಾದಯಾತ್ರೆಯ ವಿಷಯದಲ್ಲಿ ಮಿತ್ರಪಕ್ಷ ಬಿಜೆಪಿ ತಮ್ಮೊಂದಿಗೆ ಚರ್ಚಿಸದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಹಾಗಾಗಿ ಅದಕ್ಕೆ ಜೆಡಿಎಸ್ ನೈತಿಕ ಬೆಂಬಲವನ್ನು ಕೂಡ ನೀಡುವುದಿಲ್ಲ” ಎಂದು ಎಚ್‌ಡಿಕೆ ಕಿಡಿಕಾರಿದ್ದಾರೆ.
“ಮುಡಾ ನಿವೇಶನ ಹಂಚಿಕೆ ಹಗರಣದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಜೆಡಿಎಸ್ ಬೆಂಬಲವಿಲ್ಲ” ಎಂದು ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನವದೆಹಲಿಯಲ್ಲಿ ಬುಧವಾರ ಮಾಧ್ಯಮಗಳಿಗೆ ಮಾತನಾಡಿರುವ ಅವರು, “ಪಾದಯಾತ್ರೆಯ ವಿಷಯದಲ್ಲಿ ಮಿತ್ರಪಕ್ಷ ಬಿಜೆಪಿ ತಮ್ಮೊಂದಿಗೆ ಚರ್ಚಿಸದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಹಾಗಾಗಿ ಅದಕ್ಕೆ ಜೆಡಿಎಸ್ ನೈತಿಕ ಬೆಂಬಲವನ್ನು ಕೂಡ ನೀಡುವುದಿಲ್ಲ” ಎಂದು ಕಿಡಿಕಾರಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ಸಹೋದರ ರೇವಣ್ಣ ಪುತ್ರ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣದ ವಿಷಯದಲ್ಲಿ ಬಿಜೆಪಿ ಮುಖಂಡರ ಪಾತ್ರವನ್ನು ಪ್ರಸ್ತಾಪಿಸಿದ ಅವರು, ಬಿಜೆಪಿ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಆಪ್ತ ಪ್ರೀತಂ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಪ್ರೀತಂ ಗೌಡ ಯಾರು? ಹಾಸನದ ಬೀದಿಬೀದಿಗಳಲ್ಲಿ ಪೆನ್ಡ್ರೈವ್ ಹಂಚಿದ ವ್ಯಕ್ತಿ ಅಲ್ಲವಾ ಆತ? ಆತನ ಜೊತೆಗೆ ನಾನು ವೇದಿಕೆ ಹಂಚಿಕೊಳ್ಳಬೇಕಾ? ನಮ್ಮ ಕುಟುಂಬಕ್ಕೆ ವಿಷ ಹಾಕಿದವರ ಜೊತೆ ಪಾದಯಾತ್ರೆಯಲ್ಲಿ ಹೆಜ್ಜೆಹಾಕಬೇಕಾ?” ಎಂದು ಪ್ರಶ್ನಿಸಿದರು.
“ಪಾದಯಾತ್ರೆ ವಿಷಯದಲ್ಲಿ ಬಿಜೆಪಿಯವರೇ ತೀರ್ಮಾನ ಕೈಗೊಂಡಿದ್ದಾರೆ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹಾಗಾಗಿ ನಾವು ಬೆಂಬಲ ನೀಡುತ್ತಿಲ್ಲ. ಬಿಜೆಪಿ ನಾಯಕರ ಈ ವರ್ತನೆಯಿಂದ ನನ್ನ ಮನಸ್ಸಿಗೂ ನೋವಾಗಿದೆ” ಎಂದ ಎಚ್ಡಿಕೆ, “ಕೇರಳದಲ್ಲಿ ನೂರಾರು ಜನರ ಜೀವಹಾನಿಯಾಗಿದೆ. ರಾಜ್ಯದಲ್ಲೂ ಎಲ್ಲೋ ಮತ್ತು ರೆಡ್ ಅಲರ್ಟ್ ಘೋಷಣೆಯಾಗಿದೆ. ಹಲವು ಪ್ರದೇಶಗಳು ಜಲಾವೃತವಾಗಿವೆ. ಜನ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಹೊತ್ತಿನಲ್ಲಿ ಪಾದಯಾತ್ರೆ ಸೂಕ್ತವಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರು ತೀರ್ಮಾನಿಸಿದ್ದಾರೆ” ಎಂದೂ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ಪಾದಯಾತ್ರೆ ಪಾಲಿಟಿಕ್ಸ್‌ಗೆ ಮಿತ್ರ ಪಕ್ಷ ಜೆಡಿಎಸ್ ಕಡೆಯಿಂದಲೇ ಕೆಂಪು ಬಾವುಟ ಪ್ರದರ್ಶನವಾಗಿದ್ದು, ಈ ನಡುವೆ ಬಿಜೆಪಿಯ ಮತ್ತೊಂದು ಬಣ ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಪರ್ಯಾಯ ಪಾದಯಾತ್ರೆ ಘೋಷಿಸಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಪ್ರತಿ ಪಕ್ಷ ನಾಯಕ ಆರ್ ಅಶೋಕ್ ಅವರ ಮೈಸೂರು ಬೆಂಗಳೂರು ಪಾದಯಾತ್ರೆಗೆ ಪಕ್ಷದ ಮಿತ್ರರು ಮತ್ತು ಸಹ ನಾಯಕರೇ ಮಗ್ಗುಲ ಮುಳ್ಳಾದಂತಾಗಿದೆ.
ಜೊತೆಗೆ, ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿ ಮೂರೇ ತಿಂಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಸೂಚನೆ ದೊರೆಯುತ್ತಿದೆ.