ಪಂಚಮಸಾಲಿ ಹೋರಾಟ | ತಾಕತ್ತಿದ್ದರೆ ಪ್ರತಿಭಟನೆಯಲ್ಲಿ ಭಾಗಿಯಾದ ಕಾಂಗ್ರೆಸ್ ಶಾಸಕರನ್ನು ವಜಾ ಮಾಡಿ: ಜಯ ಮೃತ್ಯುಂಜಯ ಶ್ರೀ ಸವಾಲು
ಪಂಚಮಸಾಲಿಗಳ ಮೀಸಲಾತಿ ಹೋರಾಟ ಸಂವಿಧಾನಬಾಹಿರ ಎನ್ನುವುದಾದರೆ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸರ್ಕಾರದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ, ರಾಜು ಕಾಗೆ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಎಂದು ಜಯಮೃತ್ಯುಂಜಯ ಸ್ವಾಮೀಜಿ ಸಿಎಂಗೆ ಸವಾಲು ಹಾಕಿದ್ದಾರೆ.
2ಎ ಮೀಸಲಾತಿ ಹೋರಾಟದ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಪಂಚಮಸಾಲಿ ಸಮುದಾಯದ ನಡುವೆ ವಾಕ್ಸಮರ ಮುಂದುವರಿದಿದೆ. ಪಂಚಮಸಾಲಿ ಹೋರಾಟ ಸಂವಿಧಾನ ಬಾಹಿರ ಎಂಬ ಸಿಎಂ ಹೇಳಿಕೆಗೆ ಕೂಡಲಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಮಸಾಲಿಗಳ ಮೀಸಲಾತಿ ಹೋರಾಟ ಸಂವಿಧಾನಬಾಹಿರ ಎನ್ನುವುದಾದರೆ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸರ್ಕಾರದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ, ರಾಜು ಕಾಗೆ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಎಂದು ಸಿಎಂಗೆ ಸವಾಲು ಹಾಕಿದ್ದಾರೆ.
'2 ಎ ಮೀಸಲಾತಿಗಾಗಿ ಒತ್ತಾಯಿಸಿ ಪಂಚಮಸಾಲಿ ಸಮುದಾಯ ನಾಲ್ಕು ವರ್ಷಗಳಿಂದ ಶಾಂತಿಯುತ ಹೋರಾಟ ನಡೆಸುತ್ತಿದೆ. ಆದರೆ, ಬೆಳಗಾವಿಯಲ್ಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿಸುವ ಮೂಲಕ ಸರ್ಕಾರವೇ ಧಂಗೆಯೇಳಲು ಪ್ರಚೋದಿಸಿದೆ. ಪಂಚಮಸಾಲಿ ಸಮುದಾಯದ ಬಗ್ಗೆ ಕಳಕಳಿ ಇಲ್ಲವಾದರೆ ಮೀಸಲಾತಿ ಕೊಡಲ್ಲ ಎಂದು ನೇರವಾಗಿ ಹೇಳಿ, ಅದನ್ನು ಬಿಟ್ಟು ಹೋರಾಟವನ್ನು ಸಂವಿಧಾನ ಬಾಹಿರ ಎಂದು ಹೇಳಿರುವುದು ಒಪ್ಪುವ ಹೇಳಿಕೆಯಲ್ಲ. ಕೂಡಲೇ ಹೇಳಿಕೆ ಹಿಂಪಡೆಯಬೇಕುʼ ಎಂದು ಆಗ್ರಹಿಸಿದ್ದಾರೆ.
'ಪಂಚಮಸಾಲಿಗಳ ಹೋರಾಟ ಸಂವಿಧಾನ ವಿರೋಧಿ ಆಗಿದ್ದರೆ, ಪ್ರತಿಭಟನೆಗೆ ಅನುಮತಿ ಏಕೆ ನೀಡಿದ್ದೀರಿ' ಎಂದು ತಿರುಗೇಟು ನೀಡಿದ ಶ್ರೀಗಳು, ʼಒಂದೆಡೆ ಬಸವಣ್ಣನವರನ್ನು 'ಸಾಂಸ್ಕೃತಿಕ ನಾಯಕ' ಎಂದು ಘೋಷಿಸಿದ್ದೀರಿ. ಇನ್ನೊಂದೆಡೆ ಸಮಾಜವನ್ನು ನಿಂದಿಸಿ ಅಪಮಾನ ಮಾಡಿದ್ದೀರಿ. ಲಿಂಗಾಯತರ ಸ್ವಾಭಿಮಾನ ಕೆಣಕಿದ್ದೀರಿʼ ಎಂದು ವಾಗ್ದಾಳಿ ನಡೆಸಿದ್ದಾರೆ.
ʼಪಂಚಮಸಾಲಿ ಹೋರಾಟ ಸಂವಿಧಾನ ವಿರೋಧಿ ಎಂಬ ಹೇಳಿಕೆಯನ್ನು ಕೂಡಲೇ ಸದನದ ಕಡತದಿಂದ ತೆಗೆದು ಹಾಕಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದುʼ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಡಿ.16ರಿಂದ ಧರಣಿ ಸತ್ಯಾಗ್ರಹ
ಪಂಚಮಸಾಲಿ ಹೋರಾಟದ ಕುರಿತು ಮುಖ್ಯಮಂತ್ರಿ ಹೇಳಿಕೆ ಖಂಡಿಸಿ ಡಿ.16ರಿಂದ ಅಧಿವೇಶನ ಮುಗಿಯುವವರೆಗೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಘೋಷಿಸಿದ್ದಾರೆ. ಪ್ರತಿದಿನ ಒಂದೊಂದು ಜಿಲ್ಲೆಯ ಮುಖಂಡರು ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ' ಎಂದು ಅವರು ಹೇಳಿದ್ದಾರೆ.
ಇನ್ನು ಲಾಠಿ ಚಾರ್ಜ್ ಸಮರ್ಥಿಸಿಕೊಂಡ ಗೃಹ ಸಚಿವ ಜಿ.ಪರಮೇಶ್ವರ್ ವಿರುದ್ಧವೂ ಸ್ವಾಮೀಜಿ ವಾಗ್ದಾಳಿ ನಡೆಸಿದ್ದು, ʼನೀವು ಓದಿದ್ದು, ಬೆಳೆದಿದ್ದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಎಂಬುದನ್ನು ಮರೆತು ಮಾತನಾಡಿದ್ದೀರಿ, ಹೋರಾಟಗಾರರ ಮೇಲೆ ನಡೆಸಿದ ಹಲ್ಲೆಯನ್ನು ಸಮರ್ಥಿಸಿಕೊಂಡಿದ್ದು ಸರಿಯಲ್ಲ. ನಿಮ್ಮ ಹೇಳಿಕೆ ಸಿದ್ದಗಂಗಾ ಮಠಕ್ಕೆ ಮಾಡಿದ ಅಪಮಾನʼ ಎಂದು ತಿರುಗೇಟು ನೀಡಿದ್ದಾರೆ.
'ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಿಜೆಪಿಯವರಿಂದ ಸುಫಾರಿ ಪಡೆದಿದ್ದಾರೆʼ ಎಂಬ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಆರೋಪಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ, 'ನಾನು ಹೋರಾಟಕ್ಕಾಗಿ ಯಾರಿಂದಲೂ ಸುಫಾರಿ ಪಡೆದಿಲ್ಲ. ಅದರ ಅಗತ್ಯವೂ ನನಗಿಲ್ಲ. ಇವರಂತಹ ಹೋರಾಟಗಾರರೇ ಸುಫಾರಿ ಪಡೆದಿರಬಹುದುʼ ಎಂದು ತಿರುಗೇಟು ನೀಡಿದ್ದಾರೆ.