Fight for power | Discuss with Sonia, Rahul and soon open up for chaos: Kharge
x

ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ(ಎಐ ಆಧಾರಿತ ಚಿತ್ರ)

ಗದ್ದುಗೆ ಗುದ್ದಾಟ| ಡಿ.1ರೊಳಗೆ ನಾಯಕತ್ವ ಬಿಕ್ಕಟ್ಟು ಇತ್ಯರ್ಥ ಭರವಸೆ ; ಸಿದ್ದರಾಮಯ್ಯ- ಡಿಕೆಶಿ ತಂತ್ರ ಫಲಿಸಲಿದೆಯೇ?

ರಾಜ್ಯದಲ್ಲಿ ಕಾಂಗ್ರೆಸ್ ರಚನೆ ಸಂದರ್ಭದಲ್ಲಿ ನಡೆದಿತ್ತು ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಹೈಕಮಾಂಡ್‌ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.


Click the Play button to hear this message in audio format

ಕರ್ನಾಟಕದಲ್ಲಿ ಉದ್ಭವಿಸಿರುವ ನಾಯಕತ್ವ ಬದಲಾವಣೆ ಬಿಕ್ಕಟ್ಟನ್ನು ನಾನು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಒಟ್ಟಾಗಿ ಚರ್ಚಿಸಿ ಬಗೆಹರಿಸುತ್ತೇವೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಹಿನ್ನೆಲೆಯಲ್ಲಿ ಗದ್ದುಗೆ ಗುದ್ದಾಟ ರೋಚಕ ಘಟ್ಟಕ್ಕೆ ಬಂದು ನಿಂತಿದೆ.

ಬುಧವಾರ ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯಿಸಿ, ನಾಯಕತ್ವ ಬಿಕ್ಕಟ್ಟು ಶಮನಗೊಳಿಸುವ ಜವಾಬ್ದಾರಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ನನ್ನ ಮೇಲಿದೆ. ಡಿ.1 ರಂದು ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗುವ ಮೊದಲು ಅಂತಿಮ ನಿರ್ಧಾರ ಪ್ರಕಟಿಸಲಿದ್ದೇವೆ ಎಂದು ಹೇಳಿದ್ದಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಬಣದಲ್ಲಿ ಕುತೂಹಲ ಗರಿಗೆದರಿದೆ.

ಇಕ್ಕಟ್ಟಿನಲ್ಲಿ ಸಿಲುಕಿದ ಹೈಕಮಾಂಡ್

ರಾಜ್ಯದಲ್ಲಿ ಸರ್ಕಾರ ರಚನೆ ಸಂದರ್ಭದಲ್ಲಿ ನಡೆದಿತ್ತು ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಎಐಸಿಸಿ‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈಚೆಗೆ ಬೆಂಗಳೂರಿನಿಂದ ದೆಹಲಿಗೆ ವಾಪಸಾಗುವಾಗ ವಿಮಾನ ನಿಲ್ದಾಣದವರೆಗೆ ಜತೆಯಲ್ಲೇ ಕಾರಿನಲ್ಲಿ ಪ್ರಯಾಣಿಸಿ ಮಾತುಕತೆ ನಡೆಸಿದ್ದರು. ಮತ್ತೊಂದೆಡೆ ತಮ್ಮ ಆಪ್ತರ ಮೂಲಕ ಸೋನಿಯಾ ಗಾಂಧಿ ಅವರಿಗೂ ನಾಯಕತ್ವ ಬದಲಾವಣೆ ವಿಷಯ ತಲುಪಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಒತ್ತಡ ಹೇರಿದ್ದರು. ಈ ನಡುವೆ, ಬುಧವಾರ ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ನಿಂತಿರುವ ಒಕ್ಕಲಿಗ ಸಂಸ್ಥಾನ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಅವರು ಡಿಕೆಶಿಗೆ ಸಿಎಂ ಪಟ್ಟ ಕಟ್ಟುವಂತೆ ಹೈಕಮಾಂಡ್ ನಾಯಕರನ್ನು ಒತ್ತಾಯಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಇಕ್ಕಟ್ಟಿಗೆ ಸಿಲುಕಿರುವ ಹೈಕಮಾಂಡ್‌ ಡಿ.1 ರೊಳಗೆ ಅಂತಿಮ ನಿರ್ಧಾರ ಪ್ರಕಟಿಸಲೇ ಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ.

ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಸಂಘರ್ಷ ಹೆಚ್ಚುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ರಾಜ್ಯ ಬಿಜೆಪಿ ನಾಯಕರು ಕೂಡ ಡಿಕೆಶಿ ನಮಗೆ ಬೆಂಬಲ‌ ನೀಡಿದರೆ ಸರ್ಕಾರ ರಚಿಸುತ್ತೇವೆ ಎಂದಿರುವುದು ಹೈಕಮಾಂಡ್‌ ನಾಯಕರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತ ಕಳೆದುಕೊಂಡಿದೆ. ಅದರಲ್ಲಿ ಕರ್ನಾಟಕವೂ ಒಂದು. ಒಂದು ವೇಳೆ ಬಿಕ್ಕಟ್ಟು ಬಗೆಹರಿಸದಿದ್ದರೆ ಪಕ್ಷಕ್ಕೆ ಹಾನಿಯಾಗಲಿದೆ. ಹೇಗಾದರೂ ಮಾಡಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಮನವೊಲಿಸಿ ಸಮಸ್ಯೆ ಇತ್ಯರ್ಥಪಡಿಸಲೇಬೇಕಾದ ಸಂಕಷ್ಟದಲ್ಲಿ ಹೈಕಮಾಂಡ್‌ ಸಿಲುಕಿದೆ.

ಇದೇ ವೇಳೆ ಸಿದ್ದರಾಮಯ್ಯ ಅವರಿಂದ ಪದವಿ ಕಿತ್ತುಕೊಂಡರೆ ಆಗುವ ಅನಾಹುತಗಳ ಬಗ್ಗೆಯೂ ಹೈಕಮಾಂಡ್ ತಲೆ ಕೆಡಿಸಿಕೊಂಡಿದೆ. ನ.28 ಅಥವಾ 29 ರಂದು ಇಬ್ಬರು ನಾಯಕರನ್ನು ದೆಹಲಿಗೆ ಕರೆಸಿ ಸಂಧಾನ ನಡೆಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಆರು‌ ಜನರೇ ಸಾಕ್ಷಿ!

2023 ಮೇ 18 ರಂದು ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ನಡೆದಿತ್ತು. ಆ ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಇದ್ದರು. ಡಿ.ಕೆ. ಶಿವಕುಮಾರ್ ಅವರು ಆರಂಭದಲ್ಲಿ ಸರ್ಕಾರದ ಮೊದಲ 2.5 ವರ್ಷಗಳ ಅವಧಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ, ಸಿದ್ದರಾಮಯ್ಯ ಅವರ ಹಿರಿತನ ಪ್ರಸ್ತಾಪಿಸಿ‌ ಮೊದಲ 2.5 ವರ್ಷಕ್ಕೆ ಸಿದ್ದರಾಮಯ್ಯ ಅವರನ್ನೇ ಸಿಎಂ ಆಗಿ ನೇಮಕ ಮಾಡಲಾಯಿತು. ರಾಜಿ ಸಂಧಾನದಲ್ಲಿ ಮೊದಲ 2.5 ವರ್ಷಕ್ಕೆ ಸಿದ್ದರಾಮಯ್ಯ, ಉಳಿದ 2.5 ವರ್ಷಕ್ಕೆ ಡಿ.ಕೆ.ಶಿವಕುಮಾರ್ ಅವರಿಗೆ ನೀಡಲು ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ.

ನಾಯಕತ್ವ ಬಿಕ್ಕಟ್ಟು ತಲೆದೋರುವ ಸಾಧ್ಯತೆ ಹಿನ್ನಲೆಯಲ್ಲಿ ಅಧಿಕಾರ ಹಂಚಿಕೆ ಒಪ್ಪಂದವನ್ನು ಗೌಪ್ಯವಾಗಿ ಇಡಲಾಯಿತು ಎಂಬ‌ ವಿಚಾರ ಡಿ.ಕೆ.ಶಿವಕುಮಾರ್ ಆಪ್ತ ವಲಯದಲ್ಲಿ ಹರಿದಾಡುತ್ತಿದೆ. ಮಾತಿಗೆ ಬದ್ಧನಿರುತ್ತೇನೆ ಎಂದಿದ್ದ ಸಿಎಂ ಅಧಿಕಾರ ಹಂಚಿಕೆ ಒಪ್ಪಂದದ ವೇಳೆ ಡಿ.ಕೆ. ಸಹೋದರರು ಪಟ್ಟು ಸಡಿಲಿಸದಿದ್ದಾಗ ಸಿದ್ದರಾಮಯ್ಯ ಅವರು, "ಸುರೇಶ್, ನಾನು ಸಿದ್ದರಾಮಯ್ಯ. ನಾನು ನೀಡಿದ ಮಾತಿಗೆ ಬದ್ಧನಾಗಿರುತ್ತೇನೆ. 2.5 ವರ್ಷಗಳನ್ನು ಪೂರೈಸುವ ಒಂದು ವಾರದ ಮೊದಲು, ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡುತ್ತೇನೆ" ಎಂದು ಭರವಸೆ ನೀಡಿದ್ದರು ಎಂಬುದನ್ನು ಅಂದಿನ ಸಭೆಯಲ್ಲಿದ್ದವರೇ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಈಗ ಸಿದ್ದರಾಮಯ್ಯ ಅವರು ದೀರ್ಘಾವಧಿ ಅಧಿಕಾರ ಗಮನದಲ್ಲಿಟ್ಟುಕೊಂಡು ಸಿಎಂ ಸ್ಥಾನದಲ್ಲಿ ಮುಂದುವರಿಸಲು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಬೆಂಗಳೂರಿನಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಕುರಿತು ಪ್ರತಿಕ್ರಿಯಿಸಿ, ಅದು ನಾಲ್ಕು ಗೋಡೆಗಳು, ಐದಾರು ಜನರ ಮಧ್ಯೆ ನಡೆದ ಮಾತುಕತೆ, ಅದನ್ನು ಬಹಿರಂಗಪಡಿಸಲ್ಲ ಎಂಉ ಹೇಳುತ್ತಲೇ ತಮ್ಮ ಬಣದವರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿರುವುದು ಗದ್ದುಗೆ ಗುದ್ದಾಟವನ್ನು ರೋಚಕ ಹಂತಕ್ಕೆ ತಂದು ನಿಲ್ಲಿಸಿದ್ದಾರೆ.

ಒಂದು ವೇಳ ಅಧಿಕಾರ ಹಂಚಿಕೆ ಒಪ್ಪಂದ ನಡೆದಿದ್ದರೆ ಅದನ್ನು ಪಾಲಿಸಬೇಕಾದ ಅನಿವಾರ್ಯತೆ ಕಾಂಗ್ರೆಸ್ ಮುಂದಿದೆ. ಇಲ್ಲವಾದಲ್ಲಿ ಈಗಾಗಲೇ ಹಲವು ರಾಜ್ಯಗಳಲ್ಲಿ ಆಂತರಿಕ ಬಿಕ್ಕಟ್ಟಿನಿಂದ ಅಧಿಕಾರ ಕಳೆದುಕೊಂಡಿದೆ. ಕರ್ನಾಟಕದಲ್ಲೂ ಬಣ ಸೃಷ್ಟಿಯಾದರೆ ಭವಿಷ್ಯದಲ್ಲಿ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

Read More
Next Story