ಕುಷ್ಟರೋಗಿಗಳು, ವಿಕಲಚೇತನರಿಗೂ ದೇಗುಲ ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶ; ಸಂಪುಟ ಅಸ್ತು
x

ಕುಷ್ಟರೋಗಿಗಳು, ವಿಕಲಚೇತನರಿಗೂ ದೇಗುಲ ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶ; ಸಂಪುಟ ಅಸ್ತು

ಗೋಹತ್ಯೆ ಪ್ರತಿಬಂಧಕ ಕಾಯ್ದೆಗೆ ಸಡಿಲಿಕೆ; ವಾಹನ ಮಾಲೀಕರಿಗೆ ಪರಿಹಾರ ಬಾಂಡ್‌ ಮೂಲಕ ಹೊಸ ದಾರಿ, ಸಾಮಾಜಿಕ ಬಹಿಷ್ಕಾರಕ್ಕೆ ಜೈಲು, ದಂಡ; ‘ದ್ವೇಷ ಭಾಷಣ’ಕ್ಕೆ ಪ್ರತ್ಯೇಕ ಕಾನೂನು ರಚಿಸಲು ಸಂಪುಟ ನಿರ್ಧರಿಸಿದೆ.


Click the Play button to hear this message in audio format

ಬೆಳಗಾವಿ ಅಧಿವೇಶನಕ್ಕೆ ಪೂರ್ವಭಾವಿಯಾಗಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರವು ಒಟ್ಟು 8 ಮಸೂದೆಗಳಿಗೆ ಒಪ್ಪಿಗೆ ಸೂಚಿಸಿದೆ. ಇದರಲ್ಲಿ ಪ್ರಮುಖವಾಗಿ ಸಮಾಜದ ಸ್ವಾಸ್ಥ್ಯ ಕೆಡಿಸುವ 'ದ್ವೇಷ ಭಾಷಣ' ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾದ 'ಸಾಮಾಜಿಕ ಬಹಿಷ್ಕಾರ'ದ ವಿರುದ್ಧ ಪ್ರತ್ಯೇಕ ಹಾಗೂ ಕಠಿಣ ಕಾಯ್ದೆಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಇದರೊಂದಿಗೆ ಗೋಹತ್ಯೆ ನಿಷೇಧ ಕಾಯ್ದೆಯ ಕೆಲವು ನಿಯಮಗಳನ್ನು ಸಡಿಲಗೊಳಿಸುವ ತಿದ್ದುಪಡಿಗೂ ಅಸ್ತು ಎನ್ನಲಾಗಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ್‌, ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ನಿಯಂತ್ರಣ ವಿಧೇಯಕ - 2025ದ ಬಗ್ಗೆ ಕಳೆದ ಜೂನ್ ತಿಂಗಳಲ್ಲೇ ಚರ್ಚೆಗೆ ಬಂದಿದ್ದರೂ, ಕೆಲವು ಗೊಂದಲಗಳಿಂದಾಗಿ ತಡೆಹಿಡಿಯಲಾಗಿತ್ತು. ಈಗ ವಿಧೇಯಕಕ್ಕೆ ಸ್ಪಷ್ಟ ರೂಪ ಸಿಕ್ಕಿದೆ. ಕೋಮು ಗಲಭೆಗಳನ್ನು ನಿಯಂತ್ರಿಸುವಲ್ಲಿ ಇದು ಸರ್ಕಾರದ ಪ್ರಬಲ ಅಸ್ತ್ರವಾಗಲಿದೆ. ಈ ವಿಧೇಯಕದಲ್ಲಿ ಧರ್ಮ, ಜಾತಿ, ಜನಾಂಗ, ಭಾಷೆ, ಲಿಂಗ, ಜನ್ಮಸ್ಥಳ ಅಥವಾ ಲೈಂಗಿಕ ದೃಷ್ಟಿಕೋನಗಳ ಆಧಾರದ ಮೇಲೆ ದ್ವೇಷ ಹರಡುವವರಿಗೆ ಅಥವಾ ಹಿಂಸೆಗೆ ಪ್ರಚೋದನೆ ನೀಡುವವರಿಗೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.

ಡಿಜಿಟಲ್ ಮಾಧ್ಯಮಗಳ ಹೊಣೆಗಾರಿಕೆಯು ಅತ್ಯಂತ ಮಹತ್ವದ ಅಂಶವಾಗಿದೆ. ಕೇವಲ ಪೋಸ್ಟ್ ಹಾಕಿದ ವ್ಯಕ್ತಿಯಲ್ಲದೆ, ಅದಕ್ಕೆ ವೇದಿಕೆ ಕಲ್ಪಿಸುವ ಸಾಮಾಜಿಕ ಜಾಲತಾಣಗಳು, ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರನ್ನು ಕೂಡ ಹೊಣೆಗಾರರನ್ನಾಗಿ ಮಾಡಲಾಗಿದೆ. ಸುಳ್ಳು ಸುದ್ದಿ ಅಥವಾ ದ್ವೇಷದ ಪೋಸ್ಟ್‌ಗಳನ್ನು ನಿಯಂತ್ರಿಸದಿದ್ದರೆ ಕಂಪನಿಗಳೂ ಸಂಕಷ್ಟ ಎದುರಿಸಬೇಕಾಗುತ್ತದೆ. ಕೋಮು ಗಲಭೆಯ ಸಾಧ್ಯತೆಯಿರುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸಭೆ, ಮೆರವಣಿಗೆ, ಮತ್ತು ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಈ ನಿಷೇಧವನ್ನು ಆರಂಭದಲ್ಲಿ 30 ದಿನಗಳವರೆಗೆ ಮತ್ತು ಅಗತ್ಯವಿದ್ದರೆ 60 ದಿನಗಳವರೆಗೆ ವಿಸ್ತರಿಸಬಹುದಾಗಿದೆ.

ಕರ್ನಾಟಕ ಸಾಮಾಜಿಕ ಬಹಿಷ್ಕಾರ ನಿಷೇಧ ಮತ್ತು ಪರಿಹಾರ ಮಸೂದೆ - 2025

ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಜೀವಂತವಾಗಿರುವ ಅಮಾನವೀಯ ಪದ್ಧತಿಯಾದ 'ಸಾಮಾಜಿಕ ಬಹಿಷ್ಕಾರ'ಕ್ಕೆ ಅಂತ್ಯ ಹಾಡುವುದು ಈ ಮಸೂದೆಯ ಉದ್ದೇಶವಾಗಿದೆ. ಸಾಮಾಜಿಕ ಬಹಿಷ್ಕಾರ ಹಾಕುವವರಿಗೆ 1 ಲಕ್ಷ ರೂ. ದಂಡ ಮತ್ತು 3 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಕೇವಲ ಬಹಿಷ್ಕಾರ ಹಾಕಿದ ನಾಯಕರು ಮಾತ್ರವಲ್ಲ, ಆ ನಿರ್ಧಾರ ಕೈಗೊಳ್ಳಲು ಸಭೆ ನಡೆಸಿದವರು, ಅದಕ್ಕೆ ಮತ ಹಾಕಿದವರು ಮತ್ತು ಚರ್ಚೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರನ್ನೂ ಅಪರಾಧಿಗಳೆಂದು ಪರಿಗಣಿಸಲಾಗುತ್ತದೆ. ಊರಿನಿಂದ ಹೊರಹಾಕುವುದು, ದೇವಸ್ಥಾನ/ಸಮುದಾಯ ಭವನ ಪ್ರವೇಶ ತಡೆಯುವುದು, ಅಂತ್ಯಕ್ರಿಯೆ/ಮದುವೆಗೆ ಅಡ್ಡಿಪಡಿಸುವುದು, ಅಂಗಡಿಗಳಲ್ಲಿ ಸಾಮಗ್ರಿ ನೀಡದಿರುವುದು, ಮತ್ತು ಮಕ್ಕಳನ್ನು ಆಟವಾಡಲು ಬಿಡದಿರುವುದು ಮುಂತಾದ ಎಲ್ಲಾ ಬಗೆಯ ತಾರತಮ್ಯಗಳನ್ನು ಅಪರಾಧ ಎಂದು ಘೋಷಿಸಲಾಗಿದೆ.

ಗ್ರೂಪ್-ಎ ದರ್ಜೆಯ ಅಧಿಕಾರಿಗಳನ್ನು 'ಸಾಮಾಜಿಕ ಬಹಿಷ್ಕಾರ ತಡೆ ಅಧಿಕಾರಿ'ಗಳನ್ನಾಗಿ ನೇಮಿಸಲಾಗುತ್ತದೆ. ಸಂತ್ರಸ್ತರು ನೇರವಾಗಿ ನ್ಯಾಯಾಲಯ ಅಥವಾ ಪೊಲೀಸರಿಗೆ ದೂರು ನೀಡಬಹುದು. ಇದು ಕೇವಲ ಕಾನೂನಲ್ಲ, ಇದೊಂದು ಸಾಮಾಜಿಕ ಸುಧಾರಣಾ ಕ್ರಮವಾಗಿದೆ. ಮನುಷ್ಯನ ಘನತೆಗೆ ಧಕ್ಕೆ ತರುವಂತಹ ಆಚರಣೆಗಳನ್ನು ನಿರ್ನಾಮ ಮಾಡಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.

ಗೋ ಹತ್ಯೆ ಪ್ರತಿಬಂಧಕ ವಿಧೇಯಕಕ್ಕೆ ತಿದ್ದುಪಡಿ

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಅಡಿಯಲ್ಲಿ ಜಪ್ತಿಯಾದ ವಾಹನಗಳನ್ನು ಬಿಡಿಸಿಕೊಳ್ಳುವ ನಿಯಮಕ್ಕೆ ರಾಜ್ಯ ಸರ್ಕಾರ ಮಹತ್ವದ ತಿದ್ದುಪಡಿ ತಂದಿದೆ. ಇಲ್ಲಿಯವರೆಗೆ, ಅಕ್ರಮ ಜಾನುವಾರು ಸಾಗಣೆ ವೇಳೆ ಜಪ್ತಿ ಮಾಡಲಾದ ವಾಹನಗಳನ್ನು ಬಿಡಿಸಿಕೊಳ್ಳಲು, ವಾಹನದ ಮೌಲ್ಯದಷ್ಟೇ ಮೊತ್ತದ 'ಬ್ಯಾಂಕ್ ಗ್ಯಾರಂಟಿ' ನೀಡುವುದು ಕಡ್ಡಾಯವಾಗಿತ್ತು. ಆದರೆ, ವಾಹನವನ್ನೇ ನಂಬಿ ಜೀವನ ನಡೆಸುವ ಬಡ ಮಾಲೀಕರಿಗೆ 3 ರಿಂದ 5 ಲಕ್ಷ ರೂ.ಗಳಷ್ಟು ದುಬಾರಿ ಬ್ಯಾಂಕ್ ಗ್ಯಾರಂಟಿ ನೀಡುವುದು ಕಷ್ಟಸಾಧ್ಯವಾಗಿತ್ತು.

ಈ ಹಿನ್ನೆಲೆಯಲ್ಲಿ, ಹೈಕೋರ್ಟ್‌ನ 2022ರ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ನಿಯಮಗಳನ್ನು ಸಡಿಲಿಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಇನ್ನು ಮುಂದೆ ವಾಹನಗಳನ್ನು ಬಿಡಿಸಿಕೊಳ್ಳಲು ಕೇವಲ ಬ್ಯಾಂಕ್ ಗ್ಯಾರಂಟಿ ಕಡ್ಡಾಯವಲ್ಲ; ಅದರ ಬದಲಾಗಿ 'ನಷ್ಟ ಪರಿಹಾರ ಬಾಂಡ್' (Indemnity Bond) ನೀಡುವ ಮೂಲಕವೂ ವಾಹನವನ್ನು ಬಿಡಿಸಿಕೊಳ್ಳಬಹುದು. ಕಾಯ್ದೆಯಲ್ಲಿ 'ಬ್ಯಾಂಕ್ ಖಾತರಿ' ಎಂಬ ಪದ ಬರುವ ಕಡೆಗಳಲ್ಲೆಲ್ಲ 'ಅಥವಾ ನಷ್ಟ ಪರಿಹಾರ ಬಾಂಡ್' ಎಂದು ಸೇರ್ಪಡೆ ಮಾಡುವ ಮೂಲಕ ಈ ತಿದ್ದುಪಡಿ ತರಲಾಗಿದೆ.

ದೇಗುಲ ಆಡಳಿತ ಮಂಡಳಿ ನೇಮಕದಲ್ಲಿ ಕುಷ್ಟರೋಗಿಗಳು, ವಿಕಲಚೇತನರಿಗೂ ಅವಕಾಶ

ದೇವಸ್ಥಾನಗಳ ಆಡಳಿತ ಮಂಡಳಿಗಳಲ್ಲಿ ಸೇವೆ ಸಲ್ಲಿಸಲು ಇದ್ದ ಹಳೆಯ ಕಾಲದ ನಿರ್ಬಂಧಗಳನ್ನು ತೆಗೆದುಹಾಕುವ ಮೂಲಕ ಮಾನವೀಯ ಮೌಲ್ಯ ಎತ್ತಿಹಿಡಿಯಲು ರಾಜ್ಯ ಸರ್ಕಾರ ಮುಂದಾಗಿದೆ. ಕುಷ್ಠರೋಗಿಗಳು ಹಾಗೂ ವಿಕಲಚೇತನರಿಗೆ ದೇಗುಲ ವ್ಯವಸ್ಥಾಪನಾ ಸಮಿತಿಗಳಲ್ಲಿ ಸದಸ್ಯತ್ವ ನೀಡಲು ಅಡ್ಡಿಯಾಗಿದ್ದ ನಿಯಮಗಳಿಗೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ-2025’ರಲ್ಲಿ ಈ ಮಹತ್ವದ ಬದಲಾವಣೆ ಮಾಡಿದೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 25(4)(i) ಮತ್ತು (ii)ರಲ್ಲಿ, ಕುಷ್ಟರೋಗದಿಂದ ಬಳಲುತ್ತಿರುವವರು ಅಥವಾ ವಿಕಲಚೇತನರು ದೇವಾಲಯದ ಆಡಳಿತ ಮಂಡಳಿಯ ಸದಸ್ಯರಾಗಲು ಅನರ್ಹರು ಎಂಬ ನಿಯಮವಿತ್ತು. ಇದು ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ತಾರತಮ್ಯ ಎಂಬ ಟೀಕೆಗಳಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಕಾಯ್ದೆಯಲ್ಲಿರುವ "ಕಿವುಡ ಅಥವಾ ಮೂಕನಾಗಿದ್ದರೆ" ಮತ್ತು "ಅಥವಾ ಕುಷ್ಠ" ಎಂಬ ಪದಗಳನ್ನು ಕೈಬಿಡಲು ನಿರ್ಧರಿಸಿದೆ. ಇದರಿಂದ ದೈಹಿಕ ನ್ಯೂನತೆಗಳಿದ್ದರೂ ಧಾರ್ಮಿಕ ಸೇವೆಯಲ್ಲಿ ಪಾಲ್ಗೊಳ್ಳಲು ಸಮಾನ ಅವಕಾಶ ಸಿಗಲಿದೆ.

ಮುಜರಾಯಿ ಅಧಿಕಾರಿಗಳಿಗೆ ಆಡಳಿತ

ಇನ್ನು ಮುಂದೆ ಪ್ರಮುಖ ದೇವಾಲಯಗಳ ಅಭಿವೃದ್ಧಿ ಪ್ರಾಧಿಕಾರಗಳ ಕಾರ್ಯದರ್ಶಿ ಹುದ್ದೆಗೆ ಕೇವಲ ಧಾರ್ಮಿಕ ದತ್ತಿ ಇಲಾಖೆಯ (ಮುಜರಾಯಿ) ಅನುಭವಿ ಅಧಿಕಾರಿಗಳನ್ನೇ ನೇಮಿಸಲು ಸರ್ಕಾರ ನಿರ್ಧರಿಸಿದೆ. ಹಿಂದೆ ಮುಜರಾಯೇತರ ಇಲಾಖೆಗಳ ಅಧಿಕಾರಿಗಳನ್ನು ದೇವಸ್ಥಾನಗಳ ಆಡಳಿತಕ್ಕೆ ನಿಯೋಜಿಸಲಾಗುತ್ತಿತ್ತು. ಆದರೆ, ಅವರಿಗೆ ದೇವಸ್ಥಾನಗಳ ಆಗುಹೋಗುಗಳ ಬಗ್ಗೆ ಅರಿವಿಲ್ಲದ ಕಾರಣ ಸಮಗ್ರ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿತ್ತು. ಇದನ್ನು ಸರಿಪಡಿಸಲು, ಇಲಾಖೆಯ 'ಗ್ರೂಪ್-ಎ' ಹಿರಿಯ ಶ್ರೇಣಿಯ ಅಧಿಕಾರಿಗಳನ್ನೇ ನೇಮಕ ಮಾಡಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಈ ಸಂಬಂಧ 'ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ' ಹಾಗೂ 'ಶ್ರೀ ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ'ದ ಕಾಯ್ದೆಗಳಿಗೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ.

ಪ್ರದೇಶಾಭಿವೃದ್ಧಿ ಮಂಡಳಿಗೆ ಪರಿಷತ್ ಸದಸ್ಯರ ಸೇರ್ಪಡೆ

ಬಯಲುಸೀಮೆ ಮತ್ತು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗಳ ವ್ಯಾಪ್ತಿಯಲ್ಲಿ, ನಿರ್ದಿಷ್ಟ ಕ್ಷೇತ್ರ ಹೊಂದಿರದ ವಿಧಾನ ಪರಿಷತ್ ಸದಸ್ಯರಿಗೂ ಪ್ರಾತಿನಿಧ್ಯ ನೀಡಲು ನಿರ್ಧರಿಸಲಾಗಿದೆ. ವಿಧಾನ ಪರಿಷತ್ ಸದಸ್ಯರು ಯಾವ ಜಿಲ್ಲೆಯನ್ನು ತಮ್ಮ 'ನೋಡಲ್ ಜಿಲ್ಲೆ' ಎಂದು ಆರಿಸಿಕೊಂಡಿರುತ್ತಾರೋ, ಆ ಜಿಲ್ಲೆ ಬರುವ ಪ್ರದೇಶಾಭಿವೃದ್ಧಿ ಮಂಡಳಿಯ ಸದಸ್ಯರನ್ನಾಗಿ ಅವರನ್ನು ಪರಿಗಣಿಸಲು ವಿಧೇಯಕದಲ್ಲಿ ತಿದ್ದುಪಡಿ ತರಲಾಗುತ್ತಿದೆ.

Read More
Next Story