7th Pay Commission | ವೇತನ ಪರಿಷ್ಕರಣೆ; ಲಕ್ಷಾಂತರ ಗುತ್ತಿಗೆ ನೌಕರರಿಗೆ ತಾರತಮ್ಯ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿಧಾನ ಮಂಡಲ, ಸಂಸತ್ ಸದಸ್ಯರ ಕಚೇರಿಯ ಆಪ್ತ ಸಿಬ್ಬಂದಿ, ಸಚಿವರು, ಸಚಿವ ಸ್ಥಾನಮಾನ ಪ್ರಾಧಿಕಾರಗಳ ಆಪ್ತ ಶಾಖೆಯ ಗುತ್ತಿಗೆ ಸಿಬ್ಬಂದಿಗೆ ವೇತನ ಪರಿಷ್ಕರಿಸಲಾಗಿದೆ
ರಾಜ್ಯ ಸರ್ಕಾರ ವಿಧಾನಸಭೆ ಹಾಗೂ ವಿಕಾಸಸೌಧದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಎಂ ಸಚಿವಾಲಯ ಸೇರಿದಂತೆ ಸೀಮಿತ ನೌಕರರಿಗೆ 7ನೇ ವೇತನ ಆಯೋಗದಡಿ ವೇತನ ಪರಿಷ್ಕರಿಸುವ ಮೂಲಕ ಗುತ್ತಿಗೆ ನೌಕರರಲ್ಲೇ ತಾರತಮ್ಯ ನೀತಿ ಅನುಸರಿಸಿದೆ.
ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒಳಗೊಂಡು ಪ್ರತಿ ಇಲಾಖೆಯಲ್ಲೂ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ದುಡಿಯುತ್ತಿದ್ದಾರೆ. ವೇತನ ಪರಿಷ್ಕರಣೆ ಮಾಡುವಂತೆ ಸಾಕಷ್ಟು ಒತ್ತಡ ಹೇರಿದ್ದರೂ ಸರ್ಕಾರ ಕೆಲವೇ ಮಂದಿಗೆ ವೇತನ ಪರಿಷ್ಕರಿಸಿರುವುದು ಉಳಿದ ಇಲಾಖೆಗಳ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಖ್ಯೆ ಬರೋಬ್ಬರಿ 1.50ಲಕ್ಷ ಇದೆ. ಆರೋಗ್ಯ ಇಲಾಖೆ ಒಂದರಲ್ಲೇ 28 ಸಾವಿರ ಗುತ್ತಿಗೆ ನೌಕರರು ಹಾಗೂ 3 ಸಾವಿರ ಹೊರಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಲ ವೇತನ ಹೆಚ್ಚಳ, ಸೇವೆ ಕಾಯಮಾತಿಗೆ ಒತ್ತಾಯಿಸಿ ಸಾಕಷ್ಟು ಪ್ರತಿಭಟನೆ ನಡೆಸಿದ್ದರೂ ಸರ್ಕಾರದ ಸ್ಪಂದನೆ ಮಾತ್ರ ಶೂನ್ಯವಾಗಿದೆ.
ಇಲಾಖೆಗಳಲ್ಲಿ ಕೆಲಸದ ಹೊರೆ ತಗ್ಗಿಸಲು ಗುತ್ತಿಗೆ ಹಾಗೂ ಹೊರಗುತ್ತಿಗೆ ನೇಮಕಕ್ಕೆ ಕೆ.ಸುಧಾಕರ್ ರಾವ್ ನೇತೃತ್ವದ ವೇತನ ಆಯೋಗ ಶಿಫಾರಸು ಮಾಡಿತ್ತು. ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವಾಲಯ, ಸಚಿವರು ಆಪ್ತ ಸಿಬ್ಬಂದಿ, ರಾಜ್ಯಸಭೆ-ಲೋಕಸಭೆ ಸದಸ್ಯರ ಆಪ್ತ ಸಿಬ್ಬಂದಿ ಸೇರಿ ಬೆರಳೆಣಿಕೆ ನೌಕರರಿಗೆ ಮಾತ್ರ ವೇತನ ಆಯೋಗದಡಿ ವೇತನ ಪರಿಷ್ಕರಿಸಿದೆ. ಉಳಿದ ಇಲಾಖೆಗಳಲ್ಲಿರುವ ಗುತ್ತಿಗೆ ಸಿಬ್ಬಂದಿಗೆ ಯಾಕೆ ವೇತನ ಆಯೋಗಕ್ಕೆ ಸೇರಿಸಿಲ್ಲ. ಸರ್ಕಾರದ ಈ ಧೋರಣೆ ʼಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆʼ ಎಂಬಂತಿದೆ ಎಂದು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘಟನೆಗಳು ಬೇಸರ ವ್ಯಕ್ತಪಡಿಸಿವೆ.
ಯಾವ ಸಿಬ್ಬಂದಿಗೆ ವೇತನ ಹೆಚ್ಚಳ?
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ವಿಧಾನಸಭೆ, ವಿಧಾನಪರಿಷತ್, ಲೋಕಸಭೆ, ರಾಜ್ಯಸಭೆ ಸದಸ್ಯರ ಕಚೇರಿಯ ಆಪ್ತ ಸಿಬ್ಬಂದಿ, ಸಂಪುಟ ದರ್ಜೆ ಸಚಿವರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಸಚಿವ ಸ್ಥಾನಮಾನ ಪಡೆದ ಪ್ರಾಧಿಕಾರಗಳ ಆಪ್ತ ಶಾಖೆಯ ಗುತ್ತಿಗೆ ಸಿಬ್ಬಂದಿಗೆ ವೇತನ ಪರಿಷ್ಕರಿಸಲಾಗಿದೆ.
ಜೊತೆಗೆ ರಾಜ್ಯಪಾಲರ ಸಚಿವಾಲಯ, ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ, ಕರ್ನಾಟಕ ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಸಿಬ್ಬಂದಿಗೆ 7 ನೇ ವೇತನ ಆಯೋಗದನ್ವಯ ವೇತನ ಪರಿಷ್ಕರಣೆ ಮಾಡಲಾಗಿದೆ. ಈ ಮೇಲಿನ ಎಲ್ಲ ಆಯೋಗ, ಕಚೇರಿಗಳ ಸಿಬ್ಬಂದಿ ವೇತನ ಪರಿಷ್ಕರಣೆಗೆ ಸೂಕ್ತ ಶಿಫಾರಸು ಮಾಡುವಂತೆ 2023 ಮಾರ್ಚ್ ತಿಂಗಳಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಜಯಶ್ರೀ ಅವರು 7ನೇ ವೇತನ ಆಯೋಗದ ಅಧ್ಯಕ್ಷರಿಗೆ ಸೂಚಿಸಿದ್ದರು.
ಅಂತೆಯೇ ಕೆ.ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗವು ಗುತ್ತಿಗೆ ಸಿಬ್ಬಂದಿಗೆ ಪರಿಷ್ಕೃತ ಸಂಚಿತ ವೇತನ ನೀಡುವಂತೆ ಶಿಫಾರಸು ಮಾಡಿತ್ತು. ಪರಿಷ್ಕೃತ ವೇತನ 2024 ನ.1ರಿಂದ ಜಾರಿಗೆ ಬಂದಿದೆ. ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪರಿಷ್ಕರಣೆ ಅನ್ವಯಿಸದು ಎಂದು ಹೇಳಿತ್ತು.
ವೇತನ ಎಷ್ಟು ಹೆಚ್ಚಲಿದೆ?
7 ನೇ ರಾಜ್ಯ ವೇತನ ಆಯೋಗದ ಪ್ರಕಾರ ಸರ್ಕಾರಿ ನೌಕರರ ವೇತನ, ಭತ್ಯೆ ಹಾಗೂ ಪಿಂಚಣಿಯನ್ನು ಪರಿಷ್ಕರಿಸಲಾಗಿದೆ. ಅದರಂತೆ ನೌಕರರ ಮೂಲ ವೇತನಕ್ಕೆ ಶೇ 31 ರಷ್ಟು ತುಟ್ಟಿಭತ್ಯೆ ಮತ್ತು ಶೇ 27.50 ರಷ್ಟು ಫಿಟ್‌ಮೆಂಟ್ ಸೇರಿಸಿ ವೇತನ ಹಾಗೂ ಪಿಂಚಣಿ ಪರಿಷ್ಕರಿಸಲಾಗಿದೆ. ಜೊತೆಗೆ ಮನೆ ಬಾಡಿಗೆ ಭತ್ಯೆಯನ್ನೂ ಶೇ.32ರಷ್ಟು ಹೆಚ್ಚಿಸಲಾಗಿದೆ.
ನೌಕರರ ಕನಿಷ್ಠ ಮೂಲ ವೇತನ 17 ಸಾವಿರದಿಂದ ಹಿಡಿದು ಗರಿಷ್ಠ 27 ಸಾವಿರದವರೆಗೆ ಏರಿಸಲಾಗಿದೆ. ನೌಕರರ ಕನಿಷ್ಠ ಪಿಂಚಣಿಯನ್ನು 8,500 ದಿಂದ ಹಿಡಿದು ಗರಿಷ್ಠ 13,500 ಕ್ಕೆ ಹೆಚ್ಚಿಸಲಾಗಿದೆ.
ಇನ್ನು ಶೇ 27.5 ರಷ್ಟು ವೇತನ ಹೆಚ್ಚಳದಿಂದಾಗಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಅಧಿಕಾರಿಗಳ ವೇತನ 69,250 ರೂ. ಸಹಾಯಕರ ಹುದ್ದೆ, ಶೀಘ್ರ ಲಿಪಿಕಾರರಿಗೆ 49,050 ರೂ. ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರರು ಹಾಗೂ ವಾಹನ ಚಾಲಕರಿಗೆ 34,100 ರೂ. ಹಾಗೂ ಡಿ ದರ್ಜೆ ನೌಕರರಿಗೆ 27 ಸಾವಿರ ರೂ.ವರೆಗೆ ಏರಿಕೆಯಾಗಿದೆ.
ಅನ್ಯ ಇಲಾಖೆಗೆ ಗುತ್ತಿಗೆ ಸಿಬ್ಬಂದಿಗಿಲ್ಲ ಹೆಚ್ಚಳ
2023 ರಲ್ಲಿ ಆರೋಗ್ಯ ಇಲಾಖೆಯಲ್ಲಿ ಎನ್‌ಎಚ್‌ಎಂ ಅಡಿ ದುಡಿಯುತ್ತಿರುವ ಗುತ್ತಿಗೆ ನೌಕರರಿಗೆ ಮಾತ್ರ ಶೇ 15 ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು. ಮೂಲ ವೇತನ 20 ಸಾವಿರ ಒಳಗಿರುವ ನೌಕರರಿಗೆ ಮಾತ್ರ ವೇತನ ಹೆಚ್ಚಳದ ಲಾಭ ದೊರೆತಿತ್ತು. ಮೂಲ ವೇತನ 20 ಸಾವಿರ ಮೇಲಿರುವ ನೌಕರರಿಗೆ ಯಾವುದೇ ವೇತನ ಹೆಚ್ಚಳ ಆಗಿರಲಿಲ್ಲ. ಇದರಿಂದ 15-20 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವವರು ಅತ್ಯಲ್ಪ ವೇತನದಲ್ಲೇ ನಿವೃತ್ತಿಯಾಗಬೇಕಾದ ಪರಿಸ್ಥಿತಿ ತಲೆ ದೋರಿದೆ.
5 ವರ್ಷಕ್ಕಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಎನ್ಎಚ್ಎಂ ವೈದ್ಯಾಧಿಕಾರಿಗಳಾದ ಎಂಬಿಬಿಎಸ್, ಆಯುಷ್, ಆರ್‌ಬಿಎಸ್‌ಕೆ, ದಂತವೈದ್ಯ ಸರ್ಜನ್‌ಗಳಿಗೆ ನೀಡಿರುವ ಶೇ.15 ರಷ್ಟು ವೇತನವನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೂ ನೀಡಬೇಕು ಎಂದು ಒತ್ತಾಯಿಸಿದ್ದೆವು. ಆದರೆ, ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿಲ್ಲ. 202 ರಿಂದ ಬರೀ ಭರವಸೆ ನೀಡುತ್ತಿದೆ. ಸರ್ಕಾರ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವೇತನ ಹೆಚ್ಚಳ ಮಾಡದಿದ್ದರೆ ಮತ್ತೆ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಎನ್‌ಎಚ್‌ಎಂ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಉಪ್ಪಾರ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
17 ಸಾವಿರ ಕೋಟಿ ಹೊರೆ
ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಅನ್ವಯ ವೇತನ ಪರಿಷ್ಕರಣೆಯಿಂದ ಬೊಕ್ಕಸಕ್ಕೆ 17,440.15 ಕೋಟಿ ಹೊರೆಯಾಗಲಿದೆ. ನೌಕರರ ವೇತನಕ್ಕಾಗಿ 80,434 ಕೋಟಿ, ಪಿಂಚಣಿಗಾಗಿ 32,355 ಕೋಟಿ ಹಾಗೂ ಇತರೆ ಭತ್ಯೆಗಳಿಗಾಗಿ ಒಟ್ಟು 17,440 ಕೋಟಿ ಖರ್ಚಾಗಲಿದೆ.
ಮುಂದಿನ ಹಂತದಲ್ಲಿ ವೇತನ ಹೆಚ್ಚಳ ಸಾಧ್ಯತೆ
7ನೇ ವೇತನ ಆಯೋಗದ ವರದಿಯಂತೆ ಸಿಎಂ ಸಚಿವಾಲಯ ಸೇರಿದಂತೆ ಸೀಮಿತ ಇಲಾಖೆಗಳ ಗುತ್ತಿಗೆ ಸಿಬ್ಬಂದಿಯ ವೇತನ ಪರಿಷ್ಕರಿಸಲಾಗಿದೆ. ಮುಂದಿನ ಹಂತದಲ್ಲಿ ವಿಶ್ವವಿದ್ಯಾಲಯಗಳು, ಸ್ವಾಯತ್ತ ಸಂಸ್ಥೆಗಳ ಗುತ್ತಿಗೆ ಸಿಬ್ಬಂದಿ ವೇತನಕ್ಕೆ ಹೆಚ್ಚಿಸುವುದಾಗಿ ಸರ್ಕಾರ ಹೇಳಿದೆ. ಇನ್ನು ಬೇರೆ ಇಲಾಖೆಗಳಲ್ಲಿರುವ ಗುತ್ತಿಗೆ ಸಿಬ್ಬಂದಿಯ ವೇತನ ಹೆಚ್ಚಳ ಕುರಿತಂತೆ ಆಯಾ ಇಲಾಖೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವೇತನ ಹೆಚ್ಚಿಸುವಂತೆ ಸರ್ಕಾರಿ ನೌಕರರ ಸಂಘದಿಂದ ಬೇಡಿಕೆ ಸಲ್ಲಿಸಲು ಬರುವುದಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.