BJP Infighting | ಕೋರ್‌ ಕಮಿಟಿ ಸಭೆಯಲ್ಲೇ ಬಿಜೆಪಿ ಅಸಮಾಧಾನ ಸ್ಫೋಟ: ಪಕ್ಷ ತೊರೆಯುವೆ ಎಂದ ಶ್ರೀರಾಮುಲು!
x
ಬೆಂಗಳೂರಿನಲ್ಲಿ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯಿತು

BJP Infighting | ಕೋರ್‌ ಕಮಿಟಿ ಸಭೆಯಲ್ಲೇ ಬಿಜೆಪಿ ಅಸಮಾಧಾನ ಸ್ಫೋಟ: ಪಕ್ಷ ತೊರೆಯುವೆ ಎಂದ ಶ್ರೀರಾಮುಲು!

ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ದಾಸ್ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷ ತೊರೆಯುವ ಬೆದರಿಕೆ ಹಾಕಿದ್ದಾರೆ.


ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಡುವೆ ಬಣ ರಾಜಕೀಯ ತಾರಕಕ್ಕೇರಿರುವ ಬೆನ್ನಲ್ಲೇ ಬಿಜೆಪಿ ನಾಯಕರಿಗೆ ಮಾಜಿ ಸಚಿವ ಶ್ರೀರಾಮುಲು ಶಾಕ್‌ ನೀಡಿದ್ದಾರೆ. ಬಿಜೆಪಿ ಅಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ವಿರುದ್ಧವೇ ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದ್ದು, ಕೋರ್‌ ಕಮಿಟಿ ಸಭೆಯಲ್ಲೇ ಪಕ್ಷ ತೊರೆಯುವ ಬೆದರಿಕೆ ಹಾಕಿದ್ದಾರೆ.

ರಾಮುಲು ಆಕ್ರೋಶಕ್ಕೆ ಕಾರಣವೇನು?

ಬೆಂಗಳೂರಿನಲ್ಲಿ ಮಂಗಳವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಕುರಿತು ಚರ್ಚೆ ನಡೆಯಿತು. ಈ ವೇಳೆ ಉಸ್ತುವಾರಿ ರಾಧಾಮೋಹನ ದಾಸ್ ಅಗರ್‌ವಾಲ್‌ ಅವರು ʼಶ್ರೀರಾಮುಲು ಚುನಾವಣೆಯಲ್ಲಿ ಸರಿಯಾಗಿ ಕೆಲಸ ಮಾಡಿಲ್ಲʼ ಎನ್ನುವ ರೀತಿಯಲ್ಲಿ ಬೇಸರ ವ್ಯಕ್ತಪಡಿಸಿದರು. ಇದರಿಂದ ಅಸಮಾಧಾನಗೊಂಡ ಶ್ರೀರಾಮುಲು ಉಸ್ತುವಾರಿಯ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼಉಪಚುನಾವಣೆ ಸೋಲಿನ ಕುರಿತು ಪರಾಮರ್ಶೆಗೆ ಮಾಜಿ ಸಿಎಂ ಸದಾನಂದ ಗೌಡ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಆ ಸಮಿತಿ ವರದಿಯನ್ನೇ ಕೊಟ್ಟಿಲ್ಲ. ಹೀಗಿರುವಾಗ ನಾನು ಕೆಲಸ ಮಾಡಿಲ್ಲ ಎಂದು ಹೇಗೆ ಹೇಳುತ್ತೀರಿʼ ಎಂದು ಸಭೆಯಲ್ಲೇ ಪ್ರಶ್ನಿಸಿದ್ದಾರೆ.

ಬೇಡವೆಂದರೆ ಪಕ್ಷ ತೊರೆಯುವೆ

ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್‌ ಆರೋಪ ಕುರಿತು ಸಭೆಯಲ್ಲೇ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೂ ಪ್ರಶ್ನಿಸಿದ ಶ್ರೀರಾಮುಲು, ರಾಧಾ ಮೋಹನದಾಸ್‌ ಅವರು ಉತ್ತರ ಪ್ರದೇಶದವರು. ಇಲ್ಲಿನ ಪರಿಸ್ಥಿತಿ ಅವರಿಗೆ ತಿಳಿದಿಲ್ಲ. ಅಧ್ಯಕ್ಷರಾಗಿ ನೀವಾದರೂ ಹೇಳಿ ರಕ್ಷಣೆಗೆ ಬರಬೇಕಲ್ಲವೇ?" ಎಂದು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

"ಪಕ್ಷಕ್ಕೆ ನನ್ನ ಅಗತ್ಯ ಇಲ್ಲ ಎನ್ನುವುದಾದರೆ ಹೇಳಿಬಿಡಿ, ನಾನು ಪಕ್ಷ ತೊರೆಯುತ್ತೇನೆ. ಪಕ್ಷ ಬಿಡುವ ಮುನ್ನ ಇಲ್ಲಿ ನಡೆಯುತ್ತಿರುವ ಸಂಗತಿಗಳನ್ನು ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರಿಗೂ ಹೇಳುತ್ತೇನೆ. ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ.

ಸ್ವಾಭಿಮಾನಕ್ಕೆ ಧಕ್ಕೆಯಾದರೆ ಇರುವುದಿಲ್ಲ

"ಸ್ವಾಭಿಮಾನ, ಪ್ರಾಮಾಣಿಕತೆಯಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಅರೆಕ್ಷಣವೂ ಇರುವುದಿಲ್ಲ. ನನ್ನ ಸಮಾಜವನ್ನು ಅವಮಾನಿಸಿದರೆ ಪಕ್ಷ ಬಿಡಲು ಸಿದ್ಧನಿದ್ದೇನೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದ್ದು, "ಬಿಜೆಪಿ ಪಕ್ಷದ ಬೆಳವಣಿಗೆಗೆ ನಾನು ಸಲ್ಲಿಸಿರುವ ಸೇವೆ ಎಂತಹದ್ದು ಎಂದು ಎಲ್ಲರಿಗೂ ಗೊತ್ತಿದೆ. ನಿಮ್ಮ ತಂದೆ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೂ ದಕ್ಷತೆಯಿಂದ ಕೆಲಸ ಮಾಡಿದ್ದೇನೆ. ವೃಥಾ ಆರೋಪಗಳನ್ನು ಹೊರಿಸಿದರೆ ಸಹಿಸಿಕೊಂಡು ಇರುವುದಿಲ್ಲ" ಎಂದು ಹೇಳಿದ್ದಾರೆ.

ವರಿಷ್ಠರ ಬಳಿ ಅಳಲು ತೋಡಿಕೊಂಡ ಶ್ರೀರಾಮುಲು

ಕೋರ್ ಕಮಿಟಿ ಸಭೆಯ ಬೆಳವಣಿಗೆಗಳ ಕುರಿತು ಶ್ರೀರಾಮುಲು ಅವರು ಪಕ್ಷದ ದೆಹಲಿ ವರಿಷ್ಠರಿಗೂ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹಾಗೂ ಸಂಘ ಪರಿವಾರದ ಇಬ್ಬರು ಮುಖಂಡರಿಗೆ ಕರೆ ಮಾಡಿ ಕೋರ್ ಕಮಿಟಿ ಸಭೆಯಲ್ಲಿ ರಾಧಾ ಮೋಹನ ಸಿಂಗ್‌ ಅಗರ್‌ವಾಲ್ ಅವರ ಆರೋಪದ ಕುರಿತಂತೆ ವಿವರಿಸಿ ಅಳಲು ತೋಡಿಕೊಂಡಿದ್ದಾರೆ. ಪಕ್ಷದಲ್ಲಿರುವ ಕೆಲವರು ತಮ್ಮ ವಿರುದ್ಧ ರಾಧಾ ಮೋಹನ ದಾಸ್ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದೂ ದೂರಿದ್ದಾರೆ ಎನ್ನಲಾಗಿದೆ.

ಜನಾರ್ದನರೆಡ್ಡಿ ವಿರುದ್ಧ ಆಕ್ರೋಶ

ಹಿಂದೊಮ್ಮೆ ಆಪ್ತರಾಗಿದ್ದ ಶ್ರೀರಾಮುಲು ಹಾಗೂ ಶಾಸಕ ಜನಾರ್ದನರೆಡ್ಡಿ ನಡುವೆ ಈಗ ಬಿರುಕು ಮೂಡಿದೆ. ಸಂಡೂರು ಉಪ ಚುನಾವಣೆ ಉಸ್ತುವಾರಿಯನ್ನು ಜನಾರ್ದನ ರೆಡ್ಡಿ ಹೆಗಲಿಗೆ ಹಾಕಿದ ನಂತರ ಅದು ಇನ್ನಷ್ಟು ಹೆಚ್ಚಾಗಿತ್ತು.

ಈಗ ಶಾಸಕ ಜನಾರ್ದನ ರೆಡ್ಡಿ ಅವರ ಮಾತು ಕೇಳಿ ರಾಧಾಮೋಹನ ದಾಸ್‌ ಅವರು ನನ್ನ ವಿರುದ್ಧ ವೃಥಾ ಆರೋಪ ಮಾಡಿದ್ದಾರೆ ಎಂದು ಶ್ರೀರಾಮುಲು ನೇರ ಆರೋಪ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋರ್‌ ಸಮಿತಿ ಸಭೆಯಲ್ಲಿ ವಾಲ್ಮೀಕಿ ಸಮುದಾಯದ ಬಗ್ಗೆ ಅಪಮಾನ ಮಾಡಲಾಗಿದೆ. ಪಕ್ಷ ಕಷ್ಟದಲ್ಲಿದ್ದಾಗ ನಾನು ದುಡಿದಿದ್ದೇನೆ. ಅದನ್ನು ಪರಿಗಣಿಸದೇ ಆಧಾರರಹಿತ ಆರೋಪ ಮಾಡಿದ್ದು ಸರಿಯಿಲ್ಲ ಎಂದು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಶ್ರೀರಾಮುಲು ಅವರನ್ನು ಸಮಾಧಾನಪಡಿಸಿದ ಸಂತೋಷ್‌ ಅವರು, ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಸೇವೆ ಹಾಗೂ ಸಾಮರ್ಥ್ಯದ ಬಗ್ಗೆ ಪಕ್ಷಕ್ಕೆ ಅರಿವಿದೆ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದ್ದೇವೆ. ರಾಜಕಾರಣದಲ್ಲಿ ಇದು ಸಾಮಾನ್ಯ. ಅದನ್ನು ಬದಿಗಿರಿಸಿ ಪಕ್ಷ ಸಂಘಟನೆಯತ್ತ ಗಮನ ಹರಿಸಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ರಾಧಾಮೋಹನ ದಾಸ್‌ ಆರೋಪ ಕುರಿತಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಶ್ರೀರಾಮುಲು, ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿರುವುದನ್ನು ಕ್ಷೇತ್ರದಲ್ಲಿ ಬಂದು ವಿಚಾರಿಸಿದರೆ ತಿಳಿಯುತ್ತದೆ. ಆದರೆ, ರಾಧಾಮೋಹನ ದಾಸ್ ಅವರು ಕೆಲಸವನ್ನೇ ಮಾಡಿಲ್ಲ ಎಂಬ ಅರ್ಥದಲ್ಲಿ ಮಾತನಾಡಿರುವುದು ನೋವು ತಂದಿದೆ. ಉತ್ತರಪ್ರದೇಶ ಮೂಲದ ರಾಜ್ಯ ಉಸ್ತುವಾರಿಯಾದ ರಾಧಾಮೋಹನ ದಾಸ್‌ ಅವರಿಗೆ ಇಲ್ಲಿನ ಕೆಲವು ವಿಚಾರಗಳು ಗೊತ್ತಿರುವುದಿಲ್ಲ. ನಾನು ಕೆಲಸ ಮಾಡಿಲ್ಲ ಎಂದು ಜನಾರ್ದನರೆಡ್ಡಿ ದೂರಿರುವುದು ಸ್ಪಷ್ಟವಾಗಿದೆ. ಇದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆ, ಬಿಜೆಪಿ ಬಣ ಬಡಿದಾಟಕ್ಕೆ ಕಡಿವಾಣ ಹಾಕಬಹುದು ಎಂಬ ನಿರೀಕ್ಷೆ ಹುಟ್ಟಿಸಿದ್ದ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲೇ, ಆ ಪಕ್ಷದ ಪ್ರಬಲ ವೋಟ್‌ ಬ್ಯಾಂಕ್‌ ಆದ ಪರಿಶಿಷ್ಟ ಪಂಗಡ ಸಮುದಾಯದ ಪ್ರಭಾವಿ ನಾಯಕರೊಬ್ಬರು ಸಿಡಿದೆದ್ದಿದ್ದಾರೆ. ಪಕ್ಷ ತೊರೆಯುವ ಮಾತನಾಡಿದ್ದು, ತಮ್ಮ ಸಮುದಾಯಕ್ಕೆ ಅವಮಾನವಾದರೆ ಸುಮ್ಮನಿರಲಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More
Next Story