ಪ್ರಜ್ವಲ್‌ಗೆ ರಾಜತಾಂತ್ರಿಕ ಪಾಸ್‌ಪೋರ್ಟ್ ನೀಡಿದ್ದು ಕೇಂದ್ರ ಸರ್ಕಾರ: ಗೃಹ ಸಚಿವ ಪರಮೇಶ್ವರ್
ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕೇಂದ್ರ ಸರ್ಕಾರ ರಾಜತಾಂತ್ರಿಕ (ಡಿಪ್ಲೊಮ್ಯಾಟಿಕ್ ) ಪಾಸ್‌ಪೋರ್ಟ್ ಕೊಟ್ಟಿದ್ದಾರೆ. ಹಾಗಾಗಿ ಅವರು ರಾತ್ರೋರಾತ್ರಿ ದೇಶ ಬಿಟ್ಟು ಹೋಗಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯ ವೇಳೆ ಮಾತನಾಡಿದ ಅವರು, ʻʻಪ್ರಜ್ವಲ್ ಅವರು ಹೊರ ದೇಶಕ್ಕೆ ಹೋದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಸಂತ್ರಸ್ತ ಮಹಿಳೆಯರು ದೂರು ಕೊಡುವುದು ಗಮನಕ್ಕೆ ಬರುತ್ತಿದ್ದಂತೆ ದೇಶ ಬಿಟ್ಟು ಹೋಗಿದ್ದಾರೆ. ವಿದೇಶಕ್ಕೆ ಹೋಗಿರುವ ಟಿಕೆಟ್‌ಗಳು ನಮಗೆ ಲಭ್ಯವಾಗಿವೆ. ಕೇಂದ್ರ ಸರ್ಕಾರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಕೊಟ್ಟಿದ್ದರಿಂದಾಗಿ ಅವರು ರಾತ್ರೋರಾತ್ರಿ ದೇಶ ಬಿಟ್ಟು ಹೋಗಿದ್ದಾರೆʼʼ ಎಂದರು.
ʻʻವಿಮಾನ ನಿಲ್ದಾಣಗಳಲ್ಲಿ ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿದವರಿಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳುವುದಿಲ್ಲ. ಪಾಸ್‌ಪೋರ್ಟ್ ನೋಡಿದ ತಕ್ಷಣ ಅವರಿಗೆ ಒಳಗೆ ಹೋಗಲು ಬಿಡುತ್ತಾರೆ. ಜೆನ್ಯುನ್ ವೀಸಾ ಹೊಂದಿದ್ದರಿಂದ 32ರಿಂದ 40 ದೇಶಗಳಲ್ಲಿ ಸುಲಭವಾಗಿ ಹೋಗಬಹುದು. ಹೀಗಾಗಿ, ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸಿ, ಅಲ್ಲದೆ ಅಂತಾರಾಷ್ಟ್ರೀಯ ಏಜೆನ್ಸಿ ಮೂಲಕ ಪ್ರಜ್ವಲ್ ರೇವಣ್ಣ ಕರೆತರಲು ಸಹಕರಿಸಿ ಎಂದು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆʼʼ ಎಂದು ತಿಳಿಸಿದರು.