ಗೌಡರ ಭದ್ರಕೋಟೆಯಲ್ಲಿ ಕಮಲ ಅರಳಿಸಿದ್ದ ಪ್ರೀತಂ ಗೌಡ ಈಗ ಅಶ್ಲೀಲ ವಿಡಿಯೋ ಹಂಚಿಕೆ ಆರೋಪಿ: ಬಿಜೆಪಿಗೆ ಮುಜುಗರ
x

ಗೌಡರ ಭದ್ರಕೋಟೆಯಲ್ಲಿ ಕಮಲ ಅರಳಿಸಿದ್ದ ಪ್ರೀತಂ ಗೌಡ ಈಗ ಅಶ್ಲೀಲ ವಿಡಿಯೋ ಹಂಚಿಕೆ ಆರೋಪಿ: ಬಿಜೆಪಿಗೆ ಮುಜುಗರ


ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ಗಳು ಕ್ಷೇತ್ರದ ಬೀದಿ-ಬೀದಿಗಳಲ್ಲಿ ಹರಡಿದ್ದವು. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದವರು ಯಾರು ಎನ್ನುವ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿತ್ತು. ಇದೀಗ ರೇವಣ್ಣ ಕುಟುಂಬದ ರಾಜಕೀಯ ವಿರೋಧಿ ಎನಿಸಿಕೊಂಡಿರುವ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಬಂಧನ ಭೀತಿ ಎದುರಿಸುವಂತಾಗಿದೆ.

ಪ್ರಜ್ವಲ್‌ ಪ್ರಕರಣದಲ್ಲಿ ಅಶ್ಲೀಲ ವೀಡಿಯೋ ಪೆನ್‌ಡ್ರೈವ್‌ ಹಂಚಿಕೆ ಮಾಡಿದ ಮುಖಂಡರಾದ ದೇವರಾಜೇಗೌಡ ಬಳಿಕ ಪ್ರೀತಂ ಹೆಸರುಕೇಳಿ ಬಂದಿರುವುದು ರಾಜ್ಯ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಪೆನ್‌ಡ್ರೈವ್‌ ಹಂಚಿಕೆಯಲ್ಲಿ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಕೈವಾಡ ಇದೆ ಎಂದು ಎನ್‌ಡಿಎ ಮಿತ್ರಪಕ್ಷಗಳಾದ ಜೆಡಿಎಸ್‌ (ಎಚ್‌.ಡಿ. ಕುಮಾರಸ್ವಾಮಿ) ಮತ್ತು ಬಿಜೆಪಿ ಆರೋಪ ಮಾಡುತ್ತಿದ್ದರೂ, ಎಸ್‌ಐಟಿ ತನಿಖೆಯಲ್ಲಿ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಹೆಸರು ಕೇಳಿಬಂದಿರುವುದರಿಂದ ಬಿಜೆಪಿಗೆ ತೀವ್ರ ಮುಜುಗರ ಉಂಟಾಗಿದೆ ಎನ್ನಲಾಗಿದೆ.

ಪ್ರಜ್ವಲ್‌ ರೇವಣ್ಣ ಪ್ರಕರಣ ಹೊರಬಿದ್ದ ಬಳಿಕ ಆರೋಪಿಯ ಬಂಧನವಾಗಬೇಕು ಎಂದು ಜನಾಭಿಪ್ರಾಯ ಕೇಳಿಬಂದಿತ್ತು., ಆದರೆ ಪ್ರಜ್ವಲ್‌ ಚಿಕ್ಕಪ್ಪ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಮಾತ್ರ ಈ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದವರ ಪತ್ತೆಯಾಗಬೇಕು, ತನಿಖೆಯಾಗಬೇಕು ಎಂದು ಆಗ್ರಹ ಮಾಡುತ್ತಿದ್ದರು. ಈ ಪ್ರಕರಣದ ಹಿಂದೆ ಮಹಾನ್ ನಾಯಕನ ಕೈವಾಡ ಇದೆ ಎಂದು ಹೇಳಿ ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದರು. ಈ ಪ್ರಕರಣವನ್ನು ಕಾಂಗ್ರಸ್‌ ನಾಯಕರತ್ತ ತಿರುಗಿಸುವ ಪ್ರಯತ್ನಗಳು ನಡೆದವು.

ಜೆಡಿಎಸ್‌ ಕೋಟೆಯಲ್ಲಿ ಕಮಲ ಅರಳಿಸಿದ್ದ ಪ್ರೀತಂ ಗೌಡ

ಹಾಸನ ಜೆಡಿಎಸ್ ಭದ್ರಕೋಟೆ, ಆದರೆ ಅಲ್ಲಿ ನಿಧಾನವಾಗಿ ಬಿಜೆಪಿ ತಮ್ಮ ಬಲವನ್ನು ವೃದ್ದಿಸಲು ವೇದಿಕೆ ಕಲ್ಪಿಸಿದ್ದೇ ಪ್ರೀತಂ ಗೌಡ ಎನ್ನುವ ಯುವನಾಯಕ. ಹಾಸನದಲ್ಲಿ ಎಚ್‌ಡಿ ರೇವಣ್ಣ ಕೋಟೆಯಲ್ಲಿ ಪ್ರೀತಂಗೌಡ ಬಿಜೆಪಿಯ ಬಾವುಟವನ್ನು ಹಾರಿಸುವಲ್ಲಿ ಯಶಸ್ವಿಯಾಗಿದ್ದರು.

ಉದ್ಯಮಿಯಾಗಿರುವ ಪ್ರೀತಂ ಗೌಡ 2018ರಲ್ಲಿ ಹಾಸನ ಕ್ಷೇತ್ರದಿಂದ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು. ಜೆಡಿಎಸ್ ಅಭ್ಯರ್ಥಿ ಎಚ್‌ಎಸ್ ಪ್ರಕಾಶ್ ವಿರುದ್ಧ 13000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ 2023 ರ ಚುನಾವಣೆಯಲ್ಲಿ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ವಿರುದ್ಧ ಸ್ಪರ್ಧಿಸಿ ಸೋಲನ್ನು ಅನುಭವಿಸಿದರು.

ಪ್ರೀತಂ ಗೌಡ ಅವರು ತಮ್ಮ ರಾಜಕೀಯ ಜೀವನದಲ್ಲಿ ಮಾಜಿ ಸಚಿವ ಎಚ್‌ಡಿ ರೇವಣ್ಣ ವಿರುದ್ಧವೇ ಹೋರಾಟ ನಡೆಸಿಕೊಂಡು ಬಂದವರು. ಸರ್ಕಾರಿ ಸಭೆಗಳಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಪ್ರೀತಂ ಗೌಡ ನಡುವಿನ ಮಾತಿನ ಚಕಮಕಿಗಳು ವೈರಲ್ ಆಗಿದ್ದರು. ಆನಂತರದ ದಿನಗಳಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ಧವೂ ಪ್ರೀತಂ ಗೌಡ ಅದೇ ಸಿಟ್ಟು, ದ್ವೇಷ ಮುಂದುವರೆಸಿದ್ದರು. ಮಾಧ್ಯಮಗಳ ಮುಂದೆ ಇಬ್ಬರೂ ನಾಯಕರು ಟೀಕೆ ಮಾಡುವುದು, ಟಾಂಗ್‌ ಕೊಡೋದು ಎಲ್ಲವೂ ನಡೆಯುತ್ತಿತ್ತು.

ಈ ನಡುವೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಕಾರಣಕ್ಕೆ ಪ್ರೀತಂ ಗೌಡ ಅವರು ತಮ್ಮ ಬದ್ಧ ರಾಜಕೀಯ ವೈರಿಗಳ ಜೊತೆ ಸಂಬಂಧ ಬೆಸೆಯುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆದರೆ, ಅವರು ಕೊನೆಯ ಹಂತದವರೆಗೂ ಯಾವುದೇ ಕಾರಣಕ್ಕೂ ಎನ್‌ಡಿಎ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ ಪರವಾಗಿ ಪ್ರಚಾರ ಮಾಡಲೇ ಇಲ್ಲ. ಬಿಜೆಪಿ ನಾಯಕ ಎನ್ನುವ ಕಾರಣಕ್ಕೆ ಮೋದಿ ಅವರನ್ನು ಪ್ರಧಾನಿಯಾಗಿಸಲು ಎನ್‌ಡಿಎ ಅಭ್ಯರ್ಥಿಗೆ ಮತ ನೀಡಿ ಎಂದು ಜನರಲ್ಲಿ ಮನವಿ ಮಾಡಿದ್ದರು.

ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ ಹೊರಬಿದ್ದಾಗ ಬಹುತೇಕರು ಕಾಂಗ್ರೆಸ್‌ನವರು ಇದರ ಹಿಂದೆ ಇದ್ದಾರೆ ಎಂದು ಆರೋಪ ಮಾಡಿದ್ದರೆ, ಇನ್ನೂ ಕೆಲಸವರು ರೇವಣ್ಣ ಕುಟುಂಬದ ಬದ್ಧ ವಿರೋಧಿಯಾಗಿರುವ ಪ್ರೀತಂ ಗೌಡ ಅವರು ಪೆನ್‌ಡ್ರೈವ್‌ ಹಂಚಿಕೆ ಮಾಡಿರಬಹುದು ಎನ್ನುವ ಅನುಮಾನವನ್ನೂ ವ್ಯಕ್ತಪಡಿಸಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ಪ್ರೀಡಂಗೌಡ ಸಹಚರರಾದ ಚೇತನ್ ಸೇರಿ ಇಬ್ಬರನ್ನು ಎಸ್ ಐಟಿ ಬಂಧಿಸಿತ್ತು. ಇದೀಗ ಮಾಜಿ ಶಾಸಕ ಪ್ರೀತಂ ಗೌಡ ಸೇರಿದಂತೆ ಹಾಸನದ ಬಿಜೆಪಿ ಮುಖಂಡ ಶರತ್ ಅಲಿಯಾಸ್ ಕ್ವಾಲಿಟಿ ಬಾರ್‌ಶರತ್ ಮತ್ತು ಕಿರಣ್ ವಿರುದ್ಧ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ದ ಠಾಣೆಯಲ್ಲಿ ಹೊಸ ಎಫ್‌ಐಆರ್ ದಾಖಲಾಗಿದೆ. ದೂರುದಾರ ಮಹಿಳೆಯ ಅಶ್ಲೀಲವಿಡಿಯೋವನ್ನು ಪ್ರಜ್ವಲ್ ಚಿತ್ರೀಕರಿಸಿದ ಆರೋಪವಿದ್ದರೆ, ಆ ವಿಡಿಯೋಗಳು ತುಂಬಿದ್ದ ವೆನ್‌ಡ್ರೈವ್ ಅನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಿದ ಆಪಾದನೆ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಕೇಳಿ ಬಂದಿದೆ.

ಇದೀಗ ಪ್ರೀತಂಗೌಡ ಹಾಗೂ ಅವರ ಸಹಚರರಿಗೆ ಬಂಧನ ಭೀತಿ ಎದುರಾಗಿದ್ದು, ಮೂವರ ಪತ್ತೆಗೆ ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಪೆನ್‌ ಡ್ರೈವ್ ಹಂಚಿಕೆ ಸಂಬಂಧ ಹಾಸನ ನಗರದಲ್ಲಿ ಶರತ್ ಹಾಗೂ ಕಿರಣ್ ಮನೆಗಳ ಮೇಲೆ ಕೆಲ ದಿನಗಳ ಹಿಂದೆಯೇ ಎಸ್‌ಐಟಿ ದಾಳಿ ನಡೆಸಿ ಕೆಲ ದಾಖಲೆಗಳನ್ನು ಜಪ್ತಿ ಮಾಡಿತ್ತು. ಅಲ್ಲದೆ ಪ್ರೀತಂಗೌಡರ ಮತ್ತಿಬ್ಬರು ಸಹಚರರು ಪೆನ್‌ಡೈವ್ ಹಂಚಿಕೆಯಲ್ಲಿ ಬಳಸಿದ್ದರು ಎನ್ನಲಾದ ಕಂಪ್ಯೂಟರ್, ಹಾಡ್ ಡಿಸ್ಕ್ ಅನ್ನು ನದಿಗೆ ಎಸೆಯುವಾಗ ಎಸ್ ಐಟಿಗೆ ಬಲೆಗೆ ಬಿದ್ದಿದ್ದರು. ಆ ವೇಳೆ ಆ ಇಬ್ಬರಿಂದ ಅಶ್ಲೀಲ ವಿಡಿಯೋಗಳು ತುಂಬಿದ್ದ ಪೆನ್ ಡ್ರೈವ್ ಸಹ ಜಪ್ತಿಯಾಗಿತ್ತು. ಸಂತ್ರಸ್ತೆಯೊಬ್ಬರು ಈ ವಿಚಾರದಲ್ಲಿ ದೂರು ನೀಡಿರುವ ಹಿನ್ನೆಲೆಯಲ್ಲಿ ಪ್ರೀತಂಗೌಡ ಅವರಿಗೆ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಮುಖಂಡ ದೇವರಾಜೇಗೌಡ

ಬಿಜೆಪಿ ಮುಖಂಡ ಹಾಗೂ ವಕೀಲರಾಗಿರುವ ದೇವರಾಜೇಗೌಡ ಅವರು ಡಿ.ಕೆ. ಶಿವಕುಮಾರ್‌ ವಿರುದ್ಧ ʼಪೆನ್‌ಡೈವ್‌ ಹಂಚಿಕೆʼ ಆರೋಪವನ್ನು ಮಾಡಿದ್ದರು. "ಪ್ರಜ್ವಲ್ ರೇವಣ್ಣನ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿಸಿದ್ದು ಮಾಜಿ ಎಚ್.ಡಿ. ಕುಮಾರಸ್ವಾಮಿ ಎಂದು ಹೇಳು ನಿನ್ನನ್ನು ನಾನು ರಕ್ಷಣೆ ಮಾಡುತ್ತೇನೆ ಎಂದು ಎಲ್.ಆರ್. ಶಿವರಾಮೇಗೌಡ ಅವರ ಮೂಲಕ ಡಿ.ಕೆ. ಶಿವಕುಮಾರ್ ನನಗೆ ಹೇಳಿಸಿದ್ದರು. ಅದಕ್ಕಾಗಿ 100 ಕೋಟಿ ರೂ. ಆಮಿಷ ಒಡ್ಡಿದ್ದರು" ಎಂದು ಹೇಳಿಕೆ ನೀಡಿದ್ದರು. ಈ ಪೆನ್‌ಡ್ರೈವ್ ಹಂಚಿಕೆಯಲ್ಲಿ ಉಪಮುಖ್ಯಮಂತ್ರಿ ಅವರೇ ಮುಖ್ಯ ಸೂತ್ರಧಾರ ಎಂದು ಹೇಳಿದ್ದರು.

ಆನಂತರ ದೇವರಾಜೇಗೌಡ ಅವರ ವಿರುದ್ಧ ಅತ್ಯಾಚಾರ ಹಾಗೂ ಜಾತಿನಿಂದನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಹಾಸನ ಪೊಲೀಸರಿಂದ ಬಂಧಿತರಾದರು. ಈ ದೇವರಾಜೆಗೌಡ 2023ರ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರದಿಂದ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ಎಚ್‌.ಡಿ. ರೇವಣ್ಣ ವಿರುದ್ಧ ಸೋಲು ಕಂಡಿದ್ದರು. ಇವರೂ ಕೂಡ ರೇವಣ್ಣ ಕುಟುಂಬದ ಬದ್ಧ ವೈರಿ ಅಂತಲೇ ಹೇಳಲಾಗುತ್ತದೆ. ಈ ಹಿಂದೆಯೂ ಅವರು ಮಾಧ್ಯಮಗಳಲ್ಲಿ ರೇವಣ್ಣ ಕುಟುಂಬದಿಂದ ತಮಗೆ ಅನ್ಯಾಯ ಆಗಿದೆ ಎಂದು ಹೇಳಿಕೊಂಡಿದ್ದರು. ಈ ವರ್ಷದ ಜನವರಿಯಲ್ಲಿ, ರೇವಣ್ಣ ಅವರ ಪುತ್ರ ಮತ್ತು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ವೀಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಲೋಕಸಭೆ ಚುನಾವಣೆಗೆ ಮುನ್ನ ಏಪ್ರಿಲ್‌ನಲ್ಲಿ ವೀಡಿಯೋಗಳು ಲೀಕ್ ಆಗಿರುವುದರಿಂದ ದೇವರಾಜೇಗೌಡ ಮೇಲೂ ಅನುಮಾನಗಳು ಹುಟ್ಟಿಕೊಂಡಿವೆ.

ಮತ್ತೊಂದು ಕಡೆ ಕಾಂಗ್ರೆಸ್‌ನ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ಈ ಪೆನ್‌ಡ್ರೈವ್ ಪ್ರಕರಣದ ಹಿಂದೆ ಇರೋದು ಬೇರೆ ಯಾರೂ ಅಲ್ಲ, ಕುಮಾರಸ್ವಾಮಿ ಅವರೇ ಇದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದರು. "ರೇವಣ್ಣರ ಕುಟುಂಬ ಮುಗಿಸಬೇಕೆಂದು ನಿರಂತರವಾಗಿ ಕುಮಾರಸ್ವಾಮಿ ಪ್ರಯತ್ನ ಮಾಡ್ತಿದ್ದರು. ಕುಮಾರಸ್ವಾಮಿಗೆ ಒಂದು ವಿಚಾರ ಸಿಕ್ತು, ಸಿಕ್ಕಿದ ಕೂಡಲೇ ವಕೀಲ ದೇವರಾಜೇಗೌಡ ಮತ್ತು ಕುಮಾರಸ್ವಾಮಿ ಇಬ್ಬರು ಸೇರಿಕೊಂಡು ರೇವಣ್ಣ ಕುಟುಂಬ‌ ಮುಗಿಸುವ ಕೆಲಸ ಮಾಡ್ತಾ ಇದ್ದಾರೆ. ನಾವೆಲ್ಲಾ ಕುಮಾರಸ್ವಾಮಿ ಜೊತೆಯಲ್ಲಿ ಇದ್ದವರು ಅವರ ಕುಟುಂಬ ಕ್ಕೆ ರೇವಣ್ಣ ಕುಟುಂಬಕ್ಕೆ ಎಷ್ಟು ದ್ವೇಷ ಇದೆ ಅಂದ್ರೆ ಬದ್ದ ವೈರಿಗಳ ರೀತಿಯಲ್ಲಿ ದ್ವೇಷ ಮಾಡ್ತಾರೆ ಅದೆಲ್ಲಾ ನಾವು ನೋಡಿದ್ದೇವೆ," ಎಂದು ಹೇಳಿಕೆ ನೀಡಿದ್ದರು. ಇದು ಹೀಗೆ ಕಾಂಗ್ರೆಸ್‌- ಜೆಡಿಎಸ್‌ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಆದರೆ ಇದೀಗ ಹಾಸನ ಭಾಗದಲ್ಲಿ ಬಿಜೆಪಿಯ ಪ್ರಭಾವಿ ನಾಯಕರಾಗಿರುವ ಪ್ರೀತಂಗೌಡ ಈ ಪ್ರಕರಣದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.

Read More
Next Story