
ಧಾರವಾಡದ ಗಾಂಧಿ ಚೌಕದ ನಿವಾಸಿಯಾದ 19 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಧಾರವಾಡ| ಪ್ಯಾರಾಮೆಡಿಕಲ್ ಯುವತಿಯ ನಿಗೂಢ ಸಾವು: ಕೊಲೆ ಶಂಕೆ
ಯುವತಿಯ ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳಿದ್ದು, ಆಕೆಯನ್ನು ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಎಸೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಲ್ಯಾಬ್‌ಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದ ಯುವತಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಧಾರವಾಡದ ಹೊರವಲಯದಲ್ಲಿ ನಡೆದಿದೆ.
ಧಾರವಾಡದ ಗಾಂಧಿ ಚೌಕ ನಿವಾಸಿಯಾದ 19 ವರ್ಷದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಪ್ಯಾರಾಮೆಡಿಕಲ್ ವ್ಯಾಸಂಗ ಮುಗಿಸಿದ್ದ ಈಕೆ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ ಲ್ಯಾಬ್‌ಗೆ ಹೋಗಿ ಬರುವುದಾಗಿ ಪೋಷಕರಿಗೆ ತಿಳಿಸಿ ಮನೆಯಿಂದ ಹೊರಬಂದಿದ್ದ ಯುವತಿ, ತಡರಾತ್ರಿಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಮೊಬೈಲ್ ಲೊಕೇಶನ್ ಆಧಾರದ ಮೇಲೆ ಮಧ್ಯರಾತ್ರಿಯವರೆಗೆ ಹುಡುಕಾಟ ನಡೆಸಿದ್ದರು. ಆದರೆ ಕತ್ತಲೆಯ ಕಾರಣ ಹುಡುಕಾಟ ಸ್ಥಗಿತಗೊಳಿಸಿ, ಬುಧವಾರ ಮುಂಜಾನೆ ಮತ್ತೆ ಕಾರ್ಯಾಚರಣೆ ಮುಂದುವರಿಸಿದಾಗ ನಗರದ ಹೊರವಲಯದಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.
ಯುವತಿಯ ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿದ್ದು, ಯಾರೋ ದುಷ್ಕರ್ಮಿಗಳು ಆಕೆಯನ್ನು ಕೊಲೆ ಮಾಡಿ ಶವವನ್ನು ಇಲ್ಲಿ ತಂದು ಬಿಸಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಸೋಕೋ (SOCO) ತಂಡ ಕೂಡ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದೇ ಮಾದರಿಯ ಮತ್ತೊಂದು ಘಟನೆ ಇತ್ತೀಚೆಗೆ ಬೆಂಗಳೂರಿನ ನೆಲಮಂಗಲ ಬಳಿ ವರದಿಯಾಗಿತ್ತು. ಆಂಧ್ರಪ್ರದೇಶ ಮೂಲದ 21 ವರ್ಷದ ಬಿಬಿಎಂ ವಿದ್ಯಾರ್ಥಿನಿ ದೇವಿಶ್ರೀ ಎಂಬಾಕೆ ಪಿಜಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆ ಪ್ರಕರಣದಲ್ಲಿ ಯುವತಿಯ ಜೊತೆಗಿದ್ದ ಸ್ನೇಹಿತ ನಾಪತ್ತೆಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

