ಧರ್ಮಸ್ಥಳ ಪ್ರಕರಣ: ಅನಾಮಿಕನ ಹಿಂದಿರುವ ಗ್ಯಾಂಗ್‌ ಯಾವುದು?; ಎನ್‌ಐಎ ತನಿಖೆ ನಡೆಯಲಿ - ಅಶೋಕ್‌ ಆಗ್ರಹ
x

ಧರ್ಮಸ್ಥಳ ಪ್ರಕರಣ: ಅನಾಮಿಕನ ಹಿಂದಿರುವ ಗ್ಯಾಂಗ್‌ ಯಾವುದು?; ಎನ್‌ಐಎ ತನಿಖೆ ನಡೆಯಲಿ - ಅಶೋಕ್‌ ಆಗ್ರಹ

ಅನಾಮಿಕನ ಹಿಂದಿರುವ ಗ್ಯಾಂಗ್‌ ಯಾವುದು, ಸಿಎಂ ಕಚೇರಿಯಲ್ಲಿ ಇರುವ ಗ್ಯಾಂಗ್‌ ಯಾವುದು ಎಂಬುದು ಬಹಿರಂಗವಾಗಬೇಕು. ಎಸ್‌ಐಟಿಯವರು ಬೆಟ್ಟ ಅಗೆದು, ಇಲಿ ಹಿಡಿಯವ ಕೆಲಸ ಮಾಡುತ್ತಿದೆ. ಮಾಸ್ಕ್‌ ಮ್ಯಾನ್‌ ಯಾರು ಎಂಬುದನ್ನು ಜನರಿಗೆ ತಿಳಿಸಬೇಕು ಅಶೋಕ್‌ ಆಗ್ರಹಿಸಿದರು.


ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ನಡೆದ ಗಂಭೀರ ಚರ್ಚೆಯಲ್ಲಿ ರಾಜ್ಯ ಸರ್ಕಾರದ ನಡೆಗೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು. ಧರ್ಮಸ್ಥಳ ಕುರಿತಂತೆ ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಈ ಬಗ್ಗೆ ಸಿಬಿಐ ಅಥವಾ ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಆಗ್ರಹಿಸಿದರು.

ಧರ್ಮಸ್ಥಳ ಪ್ರಕರಣ ಕುರಿತಂತೆ ಮಾತನಾಡಿದ ಅವರು, ಸರ್ಕಾರವೇ ವ್ಯವಸ್ಥಿತವಾಗಿ ಸಂಚು ನಡೆಸುತ್ತಿದೆ. ದಿಢೀರನೇ ಮಾಸ್ಕ್‌ ಮ್ಯಾನ್‌ ಕರೆತರಲಾಯಿತು. ಕೇರಳದ ಸರ್ಕಾರವೇ ಮಧ್ಯಪ್ರವೇಶಿಸಿದೆ. ಅಸಹಜ ಸಾವುಗಳ ಕುರಿತು ಎಸ್‌ಐಟಿ ರಚಿಸುವಂತೆ ಕೋರ್ಟ್‌ ಹೇಳಿತೇ, ಪ್ರಣಬ್‌ ಮೊಹಂತಿ ಎಸ್‌ಐಟಿ ಮುಖ್ಯಸ್ಥರನ್ನಾಗಿ ಮಾಡಲು ಹೇಳಿದವರು ಯಾರು ಎಂದು ಪ್ರಶ್ನಿಸಿದರು.

ಅನಾಮಿಕನ ಹಿಂದಿರುವ ಗ್ಯಾಂಗ್‌ ಯಾವುದು, ಸಿಎಂ ಕಚೇರಿಯಲ್ಲಿ ಇರುವ ಗ್ಯಾಂಗ್‌ ಯಾವುದು ಎಂಬುದು ಬಹಿರಂಗವಾಗಬೇಕು. ಎಸ್‌ಐಟಿಯವರು ಬೆಟ್ಟ ಅಗೆದು, ಇಲಿ ಹಿಡಿಯವ ಕೆಲಸ ಮಾಡುತ್ತಿದೆ. ಮಾಸ್ಕ್‌ ಮ್ಯಾನ್‌ ಯಾರು ಎಂಬುದನ್ನು ಜನರಿಗೆ ತಿಳಿಸಬೇಕು. ಅವರ ಹೆಸರು ಏನು ಎಂಬುದು ಗೃಹ ಸಚಿವರಿಗೂ ತಿಳಿದಿಲ್ಲ. ಜನರು ಆತನನ್ನು ಚನ್ನಯ್ಯ ಎಂದು ಹೇಳುತ್ತಿದ್ದಾರೆ. ಪೊಲೀಸರು ಆತನಿಗೆ ನಿತ್ಯ ಬಿರಿಯಾನಿ ನೀಡಿ ಕರೆತರುತ್ತಿದ್ದಾರೆ. ಸ್ಪೈಡರ್‌ ಮ್ಯಾನ್‌ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಅನಾಮಿಕ ಹೇಳಿದಂತೆ ಪೊಲೀಸರು ಗುಂಡಿ ಅಗೆಯುತ್ತಿದ್ದಾರೆ, ಅದರಿಂದ ಏನು ಪ್ರಯೋಜನ ಆಗಲಿಲ್ಲ. ಡ್ರೋಣ್‌ ತರಿಸಲು ಶೋಧ ನಡೆಸುತ್ತಿದ್ದಾರೆ, 20 ಅಡಿ ಆಳ ತೋಡಿದರೂ ಒಂದೇ ಒಂದು ಮೃತದೇಹ ಸಿಕ್ಕಿಲ್ಲ, ಯಾರಾದರೂ 20 ಅಡಿ ಆಳದಲ್ಲಿ ಶವ ಹೂಳಲು ಸಾಧ್ಯವೇ, ಪೊಲೀಸರಿಗೆ ಕನಿಷ್ಠ ಜ್ಞಾನ ಬೇಡವೇ ಎಂದು ಅಶೋಕ್‌ ಕಿಡಿಕಾರಿದರು.

ಅನಾಮಿಕ ವ್ಯಕ್ತಿ ಸೆಕ್ಷನ್‌ 164 ಅಡಿ ನೀಡಿದ ಹೇಳಿಕೆಯಂತೆ ತನಿಖೆ ನಡೆಯುತ್ತಿದೆ. ಎಸ್‌ಐಟಿ ತನಿಖೆಯೂ ಮುಂದುವರಿಯಲಿ, ಆತ ಯಾರು, ಆತನಿಗೆ ಯಾರು ಬೆಂಬಲವಾಗಿ ನಿಂತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು. ಕಳೇಬರಗಳಿಗಾಗಿ ಗುಂಡಿಗಳನ್ನು ತೋಡಲಾಗಿದೆ, ಅದನ್ನೇ ಕೃಷಿ ಹೊಂಡಗಳನ್ನಾಗಿ ಮಾಡಿದರೆ ಪ್ರಾಣಿಗಳಿಗೆ ನೀರು ಕುಡಿಯಲು ಸಹಕಾರಿಯಾಗುತ್ತದೆ. ದಿನಪೂರ್ತಿ ಅಗೆದರೂ ಏನು ಪ್ರಯೋಜನ ಆಗಿಲ್ಲ. ಇದಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆ ಎಂದು ದೂರಿದರು.

ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎಂಬುದು ನಮ್ಮ ಅಭಿಲಾಷೆಯೂ ಕೂಡ. ನಾವು ಅವರ ಪರವಾಗಿದ್ದೇವೆ. ಆದರೆ, ತಿರುಪತಿ, ಶಬರಿಮಲೆ, ಶನಿಸಿಂಗಾಪುರದಂತೆ ಧರ್ಮಸ್ಥಳದ ಬಗ್ಗೆಯೂ ಅಪಪ್ರಚಾರ ಮಾಡಲಾಗುತ್ತಿದೆ. ಹಲವು ಧಾರ್ಮಿಕ ಸ್ಥಳಗಳಿಗೆ ಅದರದೇ ಆದ ಪಾವಿತ್ರ್ಯತೆ ಇದೆ. ಇದೀಗ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು ಪಿತೂರಿ ನಡೆಯುತ್ತಿದೆ. ಪಾವಿತ್ರ್ಯತೆ ಹಾಳು ಮಾಡುವ ಹುನ್ನಾರವಿದೆ ಎಂದು ಆರೋಪಿಸಿದರು.

ಸುಜಾತಾ ಭಟ್‌ ಎಂಬುವರು ಕೂಡ ದೂರು ಕೊಟ್ಟಿದ್ದಾರೆ. ಇದೀಗ ವಾಹಿನಿಯ ಸ್ಟಿಂಗ್‌ ಆಪರೇಷನ್‌ ಒಂದರಲ್ಲಿ ಅವರಿಗೆ ಮದುವೆಯೇ ಆಗಿಲ್ಲ ಎಂದು ಅವರ ಕುಟುಂಬದವರೇ ಹೇಳಿದ್ದಾರೆ. ಅನನ್ಯಾ ಭಟ್‌ ಮಗಳು ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದಾಳೆ ಎಂಬ ಸುದ್ದಿ ಇತ್ತು., ಆದರೆ, ಮಣಿಪಾಲ ವಿವಿಯಯಲ್ಲಿ ಅನನ್ಯಾ ಭಟ್‌ ಹೆಸರೇ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ, ಅನಾಮಿಕನನ್ನು ಮೊದಲು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಈಗಾಗಲೇ ಒಂದು ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ. ಶಸ್ತ್ರ ಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ. ಮುಸುಕುಧಾರಿಗೆ ಹೆಚ್ಚಿನ ಮಾನ್ಯತೆ ನೀಡಲಾಗಿದೆ. ಇದೆಲ್ಲಾ ಸರ್ಕಾರದ ಪ್ರಾಯೋಜಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Read More
Next Story