Dharmasthala case | Prejudicial decision before the investigation begins is not right: Khader
x

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್‌

ಧರ್ಮಸ್ಥಳ ಪ್ರಕರಣ: ಕ್ಷೇತ್ರದ ಪಾವಿತ್ರ್ಯ ಮುಖ್ಯ; ಮೌನ ಮುರಿದ ಸ್ಪೀಕರ್ ಯುಟಿ ಖಾದರ್

ದಸರಾ ಉದ್ಘಾಟನೆ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, "ಆಡಳಿತ ಮತ್ತು ಪ್ರತಿಪಕ್ಷಗಳು ಅದನ್ನು ನೋಡಿಕೊಳ್ಳುತ್ತವೆ ಎಂದು ಹೇಳಿದರು.


ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭೆ ಅಧಿವೇಶನವು ಅತ್ಯಂತ ಫಲಪ್ರದವಾಗಿದ್ದು, ಸುಮಾರು 72 ಗಂಟೆಗಳ ಕಾಲ ಕಲಾಪ ನಡೆದಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ತಡರಾತ್ರಿಯವರೆಗೂ ಚರ್ಚೆಗಳು ನಡೆದಿದ್ದು, ಶಾಸಕರ ಸಕ್ರಿಯ ಭಾಗವಹಿಸುವಿಕೆಯಿಂದ ಅಧಿವೇಶನ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ ಅವರು ಧರ್ಮಸ್ಥಳ ಪ್ರಕರಣದ ಕುರಿತೂ ಮಾತನಾಡಿದ್ದು, ವರದಿ ಬಂದ ಮೇಲೆ ನೋಡೋಣ ಎಂದು ಹೇಳಿದ್ದಾರೆ. ಕ್ಷೇತ್ರದ ಪಾವಿತ್ರ್ಯಕ್ಕೆ ಮನ್ನಣೆ ನೀಡಲೇಬೇಕು ಎಂದು ಹೇಳಿರುವ ಅವರು ವರದಿ ಬರುವ ವರೆಗೆ ಆರೋಪ- ಪ್ರತ್ಯಾರೋಪ ಬೇಡ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಈ ಅಧಿವೇಶನದಲ್ಲಿ ಒಟ್ಟು 39 ವಿಧೇಯಕಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗಿದ್ದು, ಅವುಗಳಲ್ಲಿ 37 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಇನ್ನುಳಿದ ಎರಡು ವಿಧೇಯಕಗಳಾದ ಜನಸಂದಣಿ ಮತ್ತು ನೋಂದಣಿ ನಿಯಂತ್ರಣಕ್ಕೆ ಸಂಬಂಧಿಸಿದ ಬಿಲ್‌ಗಳನ್ನು ಹೆಚ್ಚಿನ ಚರ್ಚೆಗಾಗಿ ಜಂಟಿ ಸದನ ಸಮಿತಿಗೆ ವಹಿಸಲಾಗಿದೆ" ಎಂದು ಮಾಹಿತಿ ನೀಡಿದರು.

"ಹಿಂದೆ ಶಾಸಕರು ಕಲಾಪದಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿರಲಿಲ್ಲ ಎಂಬ 'ಕಪ್ಪು ಚುಕ್ಕೆ' ಇತ್ತು, ಆದರೆ ಈ ಬಾರಿ ಆ ಮಾತು ಸುಳ್ಳಾಗಿದೆ. ಶೇ. 85ರಷ್ಟು ಶಾಸಕರ ಹಾಜರಾತಿ ಇದ್ದು, ಎಲ್ಲರೂ ಉತ್ತಮ ಸಹಕಾರ ನೀಡಿದ್ದಾರೆ. ಅಮಾನತುಗೊಂಡಿದ್ದ 18 ಶಾಸಕರನ್ನು ವಾಪಸ್ ಪಡೆದಿದ್ದೇವೆ ಮತ್ತು ಸ್ಥಾಯಿ ಸಮಿತಿಗಳಿಗೆ ಸದಸ್ಯರ ನೇಮಕ ಪ್ರಕ್ರಿಯೆಯೂ ಪೂರ್ಣಗೊಂಡಿದೆ" ಎಂದು ಖಾದರ್ ತಿಳಿಸಿದರು.

ಎಲ್ಲ ಪ್ರತಿನಿಧಿಗಳಿಗೂ ಮಾತನಾಡಲು ಅವಕಾಶ

ನಿಯಮ 69ರ ಅಡಿ ಮೂರು ಪ್ರಮುಖ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಪ್ರತಿಯೊಬ್ಬ ಸದಸ್ಯರಿಗೂ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ. "ಯಾರಿಗೂ ಅವಕಾಶ ಸಿಗಲಿಲ್ಲ ಎಂಬ ಬೇಸರವಿಲ್ಲ, ಎಲ್ಲರಿಗೂ ಮಾತನಾಡಲು ಸಮಯ ನೀಡಿದ್ದೇವೆ. ಸದಸ್ಯರು ಕೇಳಿದ್ದ 2,306 ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಿದೆ ಮತ್ತು ಲಿಖಿತ ರೂಪದಲ್ಲಿ ಕೇಳಿದ್ದ ಪ್ರಶ್ನೆಗಳಿಗೂ ಉತ್ತರ ಒದಗಿಸಲಾಗಿದೆ" ಎಂದು ಅವರು ವಿವರಿಸಿದರು.

ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನ

ಬೆಂಗಳೂರಿನಲ್ಲಿ ಸೆಪ್ಟೆಂಬರ್ 11ರಂದು ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸ್ಪೀಕರ್ ಘೋಷಿಸಿದರು. "ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಈ ಕಾರ್ಯಕ್ರಮ ನಡೆಯಲಿದ್ದು, ಲೋಕಸಭೆ ಸ್ಪೀಕರ್ ಅವರು ಇದನ್ನು ಉದ್ಘಾಟಿಸಲಿದ್ದಾರೆ. ದೇಶದ ಎಲ್ಲಾ ರಾಜ್ಯಗಳ ಸ್ಪೀಕರ್‌ಗಳು ಮತ್ತು ಡೆಪ್ಯುಟಿ ಸ್ಪೀಕರ್‌ಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಪ್ರಜಾಪ್ರಭುತ್ವದ ಉಳಿವು ಮತ್ತು ಸವಾಲುಗಳ ಬಗ್ಗೆ ಚರ್ಚೆ ನಡೆಯಲಿದೆ, ಆದರೆ ಇದು ರಾಜಕೀಯ ಚರ್ಚೆಯಾಗಿರುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.

ಇ-ವಿಧಾನ ಮತ್ತು ನೇಮಕಾತಿ ವಿಳಂಬ

ಇ-ವಿಧಾನ ಅಳವಡಿಕೆ ಕುರಿತು ಮಾತನಾಡಿದ ಅವರು, "ಇದರಲ್ಲಿ ಕೆಲವು ತಾಂತ್ರಿಕ ಸವಾಲುಗಳಿದ್ದು, ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಲಾಗುತ್ತಿದೆ. ದೂರ ನಿಂತು ಟೀಕೆ ಮಾಡುವುದು ಸುಲಭ, ಆದರೆ ಆಟವಾಡುವವನಿಗೇ ಅದರ ಕಷ್ಟ ಗೊತ್ತು" ಎಂದು ಮಾರ್ಮಿಕವಾಗಿ ಉತ್ತರಿಸಿದರು. ವಿಧಾನಸಭೆಯ ಇಬ್ಬರು ಕಾರ್ಯದರ್ಶಿಗಳ ನೇಮಕಾತಿ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಸದನ ಮತ್ತು ಇತರೆ ವಿಷಯಗಳಿಂದಾಗಿ ಆಡಳಿತಾತ್ಮಕ ವಿಚಾರಗಳಿಗೆ ಸಮಯ ಸಿಕ್ಕಿಲ್ಲ. ಸದ್ಯಕ್ಕೆ ಆ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಶೀಘ್ರದಲ್ಲೇ ಗಮನ ಹರಿಸಲಾಗುವುದು" ಎಂದರು.

ಧರ್ಮಸ್ಥಳ ಪ್ರಕರಣ ಮತ್ತು ದಸರಾ ಉದ್ಘಾಟನೆ ವಿವಾದ

ಧರ್ಮಸ್ಥಳದ ಸೌಜನ್ಯಾ ಪ್ರಕರಣದ ಕುರಿತು ಮಾತನಾಡಿದ ಸ್ಪೀಕರ್, "ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬರುವವರೆಗೂ ಯಾರೂ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಬಾರದು. ಕ್ಷೇತ್ರದ ಪಾವಿತ್ರ್ಯತೆ ಮತ್ತು ಧಾರ್ಮಿಕ ಭಾವನೆಗಳು ಮುಖ್ಯ" ಎಂದು ಹೇಳಿದರು. ದಸರಾ ಉದ್ಘಾಟನೆ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, "ಆಡಳಿತ ಮತ್ತು ಪ್ರತಿಪಕ್ಷಗಳು ಅದನ್ನು ನೋಡಿಕೊಳ್ಳುತ್ತವೆ. ಸಂವಿಧಾನದ ಚೌಕಟ್ಟಿನಲ್ಲಿ ನಾನು ಹೆಚ್ಚು ಮಾತನಾಡುವುದು ಸರಿಯಲ್ಲ" ಎಂದು ನುಡಿದರು.

Read More
Next Story