Ground Report | ಧರ್ಮಸ್ಥಳ ಪ್ರಕರಣಕ್ಕೆ ತಿರುವು, ಹೇಳಿಕೆ ಬದಲಿಸಿದ್ರಾ ಭೀಮ, 13ನೇ ಸ್ಥಳದ ಉತ್ಖನನಕ್ಕೆ ತಾತ್ಕಾಲಿಕ ಬ್ರೇಕ್?
x

ಕಳೇಬರಕ್ಕೆ ಹುಡುಕಾಡಲು ಗುರುತಿಸಲಾದ ೧೩ನೇ ಸ್ಥಳ

Ground Report | ಧರ್ಮಸ್ಥಳ ಪ್ರಕರಣಕ್ಕೆ ತಿರುವು, ಹೇಳಿಕೆ ಬದಲಿಸಿದ್ರಾ ಭೀಮ, 13ನೇ ಸ್ಥಳದ ಉತ್ಖನನಕ್ಕೆ ತಾತ್ಕಾಲಿಕ ಬ್ರೇಕ್?


ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಧರ್ಮಸ್ಥಳದ ಪ್ರಕರಣವು, ಗುರುವಾರ ನಡೆದ ನಾಟಕೀಯ ಬೆಳವಣಿಗೆಗಳೊಂದಿಗೆ ಹೊಸ ತಿರುವು ಪಡೆದುಕೊಂಡಿದೆ. ಬಹುಚರ್ಚಿತ 13ನೇ ಸ್ಥಳದ ಉತ್ಖನನ ಕಾರ್ಯವನ್ನು ದಿಢೀರನೆ ಸ್ಥಗಿತಗೊಳಿಸಿರುವ ವಿಶೇಷ ತನಿಖಾ ತಂಡ (SIT), ತನ್ನ ತನಿಖೆಯ ದಿಕ್ಕನ್ನೇ ಬದಲಿಸಿದಂತೆ ಕಾಣುತ್ತಿದೆ. ಪ್ರಕರಣದ ಪ್ರಮುಖ ಮಾಹಿತಿದಾರ 'ಭೀಮ' ತನ್ನ ಹೇಳಿಕೆಯನ್ನು ಬದಲಿಸಿರುವುದು, 10ಕ್ಕೂ ಹೆಚ್ಚು ವ್ಯಕ್ತಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವುದು ಮತ್ತು ಯೂಟ್ಯೂಬರ್‌ಗಳ ಮೇಲಿನ ಹಲ್ಲೆ ಪ್ರಕರಣವು ತನಿಖೆಯ ಕೇಂದ್ರಬಿಂದುವಾಗಿ ಮಾರ್ಪಟ್ಟಿರುವುದು, ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.

ಎಸ್ಐಟಿ ಕಾರ್ಯತಂತ್ರದಲ್ಲಿ ಬದಲಾವಣೆ?

ಗುರುವಾರ ನಡೆಯಬೇಕಿದ್ದ ಉತ್ಖನನ ಕಾರ್ಯವನ್ನು ಶುಕ್ರವಾರಕ್ಕೆ ಮುಂದೂಡಲಾಗಿದ್ದರೂ, ಅದು ನಡೆಯುವ ಸಾಧ್ಯತೆ ಕ್ಷೀಣಿಸಿದೆ. ಇದಕ್ಕೆ ಮುಖ್ಯ ಕಾರಣ, ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರು ಬೆಳ್ತಂಗಡಿ ಠಾಣೆಯಲ್ಲಿ 10ಕ್ಕೂ ಹೆಚ್ಚು ಆರೋಪಿತರು ಮತ್ತು ದೂರುದಾರರನ್ನು ಗಂಟೆಗಟ್ಟಲೆ ವಿಚಾರಣೆ ನಡೆಸಿರುವುದು. ಈ ವಿಚಾರಣೆಯ ನಂತರ, ಪ್ರಕರಣವು ಕೇವಲ ಒಂದು ನಿಗೂಢ ಸ್ಥಳಕ್ಕೆ ಸೀಮಿತವಾಗಿಲ್ಲ ಎಂಬ ಅನುಮಾನಕ್ಕೆ ಪುಷ್ಟಿ ಕೊಟ್ಟಿದೆ.

ಕೇವಲ ಮಾಹಿತಿದಾರನ ಹೇಳಿಕೆಯನ್ನೇ ಅವಲಂಬಿಸದೆ, ವೈಜ್ಞಾನಿಕ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಲು ಎಸ್‌ಐಟಿ ಮುಂದಾಗಿದೆ. ಶುಕ್ರವಾರ ನಡೆಯಲಿರುವ ತನಿಖೆಗೆ ಖುದ್ದು ಪ್ರಣಬ್ ಮೊಹಾಂತಿ ಅವರು ವೈಜ್ಞಾನಿಕ ಮತ್ತು ಫೋರೆನ್ಸಿಕ್ ತಜ್ಞರನ್ನು ಕರೆಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದ್ದು, ಇದು ತನಿಖೆಯ ಕಾರ್ಯತಂತ್ರದಲ್ಲಿನ ದೊಡ್ಡ ಬದಲಾವಣೆಯ ಮುನ್ಸೂಚನೆಯಾಗಿದೆ.

ಧರ್ಮಸ್ಥಳದಲ್ಲಿನ ನೇತ್ರಾವತಿ ನದಿಯ ಸ್ನಾನಘಟ್ಟದ ಪ್ರದೇಶ.

ಮಾಹಿತಿದಾರ 'ಭೀಮ'ನ ವಿಶ್ವಾಸಾರ್ಹತೆ ಕುರಿತು ಅನುಮಾನ

ತನಿಖೆಯ ಕೇಂದ್ರಬಿಂದುವಾಗಿದ್ದ ಅನಾಮಿಕ ಮಾಹಿತಿದಾರ 'ಭೀಮ', ವಿಚಾರಣೆಯ ಸಂದರ್ಭದಲ್ಲಿ ತನ್ನ ಸಾಕ್ಷ್ಯದ ಶೈಲಿಯನ್ನೇ ಬದಲಿಸಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಈ ಬೆಳವಣಿಗೆಯು ಆತನ ವಿಶ್ವಾಸಾರ್ಹತೆಯ ಬಗ್ಗೆ ಮೊದಲೇ ಎದ್ದಿದ್ದ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಇದರಿಂದಾಗಿ, ಎಸ್ಐಟಿ ಅಧಿಕಾರಿಗಳು ಸದ್ಯಕ್ಕೆ 13ನೇ ಸ್ಥಳದ ಉತ್ಖನನ ಕೈಬಿಟ್ಟು, ಪರ್ಯಾಯ ತನಿಖಾ ಕ್ರಮಗಳತ್ತ ಗಮನ ಹರಿಸಿದ್ದಾರೆಯೇ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಯೂಟ್ಯೂಬರ್‌ಗಳ ಮೇಲಿನ ಹಲ್ಲೆ, ತನಿಖೆ

ಪ್ರಕರಣಕ್ಕೆ ಮತ್ತೊಂದು ಗಂಭೀರ ತಿರುವು ನೀಡಿರುವುದು, ತನಿಖೆಯ ಕುರಿತು ವರದಿ ಮಾಡುತ್ತಿದ್ದ ಕೆಲವು ಯೂಟ್ಯೂಬರ್‌ಗಳ ಮೇಲಿನ ಸಂಘಟಿತ ಹಲ್ಲೆ. ಇದೊಂದು ವ್ಯವಸ್ಥಿತ ಕೃತ್ಯ ಎಂದು ಪರಿಗಣಿಸಿರುವ ಪೊಲೀಸರು, ಬೆಳ್ತಂಗಡಿ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಹಲವು ಗಂಭೀರ ಸೆಕ್ಷನ್‌ಗಳಾದ ಕೊಲೆ ಯತ್ನ (307), ಹಲ್ಲೆ (324, 352), ಮತ್ತು ಕ್ರಿಮಿನಲ್ ಪಿತೂರಿ (115) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, "ಯಾರ ಮೇಲೂ ದ್ವೇಷವಿಲ್ಲ, ಆದರೆ ಹಲ್ಲೆ ನಡೆಸಿರುವುದು ತಪ್ಪು. ನಾನು ಯಾವುದೇ ಕ್ರಿಮಿನಲ್ ಚಟುವಟಿಕೆಯನ್ನು ಬೆಂಬಲಿಸುವುದಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಕನ್ಯಾಡಿ ನಿವಾಸಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, “13ನೇ ಸ್ಥಳವನ್ನು ಅಗೆಯುವುದು ಎರಡು-ಮೂರು ದಿನಗಳ ಕೆಲಸ. ಅಲ್ಲಿ ಸಾಕಷ್ಟು ಮಣ್ಣು ತುಂಬಿದೆ. ತನಿಖಾ ತಂಡವು 'ಭೀಮ' ಎಂದು ಕರೆಯುತ್ತಿರುವ ವ್ಯಕ್ತಿಯ ನಿಜವಾದ ಹೆಸರು ನನಗೆ ತಿಳಿದಿದೆ,” ಎಂದು ಹೇಳುವ ಮೂಲಕ ಮಾಹಿತಿದಾರನ ಗುರುತು ಮತ್ತು ಹಿನ್ನೆಲೆ ಬಹಿರಂಗಪಡಿಸಿದ್ದಾರೆ.

ದಶಕಗಳ ಹಿಂದಿನ ಕೊಲೆಯ ಸ್ಮರಣೆ

ಇದೇ ಪರಿಸರದಲ್ಲಿ ದಶಕಗಳ ಹಿಂದೆ ಸ್ನಾನಘಟ್ಟದಲ್ಲಿ ಟವೆಲ್ ಮಾರಾಟ ಮಾರುತ್ತಿದ್ದ ವ್ಯಕ್ತಿಯೊಬ್ಬರು, ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಆತಂಕದಿಂದಲೇ ಮಾತನಾಡಿದ್ದಾರೆ. "ಹಿಂದಿನ ಕಾಲದಲ್ಲಿ ಹುಡುಗಿಯರು ಒಬ್ಬಂಟಿಯಾಗಿ ಓಡಾಡುತ್ತಿರಲಿಲ್ಲ. 1976ರಲ್ಲಿ ನಡೆದ ಒಂದು ಕೊಲೆಯ ನಂತರ, ಹುಡುಗಿಯರು ಶಾಲೆಗೆ ಹೋಗುವುದೇ ಕಷ್ಟವಾಗಿತ್ತು. ಆ ಕೊಲೆಯ ಬಗ್ಗೆ ನಾನು ಈಗ ಮಾತನಾಡಿದರೆ, ನಾನೇ ಕಷ್ಟಕ್ಕೆ ಸಿಲುಕಬೇಕಾಗುತ್ತದೆ. ದಯವಿಟ್ಟು ನನ್ನ ಹೇಳಿಕೆಯನ್ನು ಪ್ರಚಾರ ಮಾಡಬೇಡಿ,” ಎಂದು ಅವರು ಮಾಧ್ಯಮಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

ಕಳೇಬರ ಸಿಗಬಹುದು ಎಂಬ ಚರ್ಚೆಗಳನ್ನು ಉಜಿರೆಯ ವ್ಯಕ್ತಿಯೊಬ್ಬರು ಸಾರಾಸಗಾಟು ನಿರಾಕರಿಸುತ್ತಾರೆ. “ಇದೆಲ್ಲ ಹಳೆಯ ಕಥೆ. ಇಷ್ಟು ವರ್ಷಗಳಲ್ಲಿ ಎಲುಬು-ಮೂಳೆಗಳನ್ನು ನರಿ, ತೋಳ, ಕಾಡುಹಂದಿಗಳು ತಿಂದು ಮುಗಿಸಿರುತ್ತವೆ. ಈಗ ಉತ್ಖನನ ನಡೆಸುವುದು ಸರ್ಕಾರದ ಹಣವನ್ನು ಮಣ್ಣು ಪಾಲು ಮಾಡಿದಂತೆ,” ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read More
Next Story