Dharmasthala case | The complainants mask is exposed: B.Y. Vijayendra
x

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಧರ್ಮಸ್ಥಳ ಪ್ರಕರಣ| ದೂರುದಾರನ ಮುಖವಾಡ ಬಯಲು: ಬಿ.ವೈ. ವಿಜಯೇಂದ್ರ

ಹಿಂದೂ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರೆ 24 ಗಂಟೆಯಲ್ಲಿ ಪೊಲೀಸರು ಬಂಧನ ಮಾಡುತ್ತಾರೆ. ಧರ್ಮಸ್ಥಳದ ಬಗ್ಗೆ ನಿರಂತರ ಅಪಪ್ರಚಾರ ಮಾಡುತ್ತಿದ್ದರೂ ಯಾರ ಮೇಲೂ ಕ್ರಮ‌ ಕೈಗೊಂಡಿಲ್ಲ ಎಂದು ಬಿ.ವೈ. ವಿಜಯೇಂದ್ರ ಟೀಕಿಸಿದರು.


"ಧರ್ಮಸ್ಥಳ ಪ್ರಕರಣದಲ್ಲಿ ಅನಾಮಿಕ ದೂರುದಾರನ ಮುಖವಾಡ ಈಗ ಕಳಚಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖವಾಡ ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್​​ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ದುರಂತವು 'ಸರ್ಕಾರಿ ಪ್ರಾಯೋಜಿತ ಕೊಲೆ' ಎಂದು ಗಂಭೀರ ಆರೋಪ ಮಾಡಿದರು.

ಧರ್ಮಸ್ಥಳ ಪ್ರಕರಣ

ಧರ್ಮಸ್ಥಳ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದ್ದನ್ನು ನಾವು ಸ್ವಾಗತಿಸಿದ್ದೆವು. ಆದರೆ, ಅನಾಮಿಕ ದೂರುದಾರನು ಗುರುತಿಸಿದ್ದ 15 ಸ್ಥಳಗಳಲ್ಲಿ ತನಿಖೆ ನಡೆಸಿದಾಗ ಏನೂ ಪತ್ತೆಯಾಗಿಲ್ಲ. "ದೂರುದಾರನಿಗೆ ಯಾರೋ ಮುಖವಾಡ ಹಾಕಿದ್ದರು. ಈಗ ಆ ಮುಖವಾಡ ಕಳಚಿದೆ," ಎಂದು ವಿಜಯೇಂದ್ರ ಹೇಳಿದರು.

"ಹಿಂದೂ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ಪೋಸ್ಟ್ ಹಾಕಿದರೆ 24 ಗಂಟೆಯೊಳಗೆ ಪೊಲೀಸರು ಅವರನ್ನು ಬಂಧಿಸುತ್ತಾರೆ. ಆದರೆ, ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದ ಬಗ್ಗೆ ಕೆಲವರು ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದರೂ, ಅವರ ಮೇಲೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ," ಎಂದು ಅವರು ಟೀಕಿಸಿದರು.

ಕಾಲ್ತುಳಿತ ದುರಂತಕ್ಕೆ ಸಿಎಂ, ಡಿಸಿಎಂ ಅವರೇ ಅಪರಾಧಿಗಳು

ಆರ್​​ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. "ಈ ದುರಂತದ ಬಗ್ಗೆ ಮಾಹಿತಿ ನೀಡುವ ಬದಲು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೇಶ-ವಿದೇಶಗಳಲ್ಲಿ ನಡೆದ ಕಾಲ್ತುಳಿತಗಳ ಬಗ್ಗೆ ಮಾತನಾಡುತ್ತಾರೆ. ದುರಂತದಲ್ಲಿ ಸರ್ಕಾರದ ತಪ್ಪನ್ನು ಮುಚ್ಚಿಕೊಳ್ಳಲು ಅಮಾಯಕ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದಾರೆ," ಎಂದು ವಿಜಯೇಂದ್ರ ಆರೋಪಿಸಿದರು.

"ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳೇ ಇಂದಿಗೂ ಅಪರಾಧಿಗಳು. ದೇಶದ ಬೇರೆಡೆ ಕಾಲ್ತುಳಿತಗಳು ನಡೆದಿರಬಹುದು, ಆದರೆ ಬೆಂಗಳೂರಿನಲ್ಲಿ ನಡೆದ ದುರಂತದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಭಾಗಿಯಾಗಿದ್ದರು. ಒಂದೆಡೆ ಅಮಾಯಕರು ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಅವರು ಆರ್​​ಸಿಬಿ ಆಟಗಾರರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇದು ಸರ್ಕಾರವೇ ನಡೆಸಿದ ಪ್ರಾಯೋಜಿತ ಕೊಲೆಯಾಗಿದೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಚಾಮರಾಜನಗರ ದುರಂತದ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ನೌಕರಿ

ರಾಜ್ಯ ಸರ್ಕಾರದ ಭರವಸೆಗಳ ಹುಸಿತನದ ಬಗ್ಗೆ ಮಾತನಾಡಿದ ವಿಜಯೇಂದ್ರ, "ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ, ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಆ ಕುಟುಂಬಗಳಿಗೆ ನೌಕರಿ ಸಿಕ್ಕಿಲ್ಲ," ಎಂದು ಸರ್ಕಾರದ ವೈಫಲ್ಯವನ್ನು ಉಲ್ಲೇಖಿಸಿದರು.

Read More
Next Story