ಧರ್ಮಸ್ಥಳ ಪ್ರಕರಣ: ಎಸ್‌ಐಟಿ ರಚನೆ ಹಿಂದೆ ದೆಹಲಿ ನಾಯಕರ ಕೈವಾಡ: ತೇಜಸ್ವಿ ಸೂರ್ಯ ಪ್ರಶ್ನೆ
x

ಧರ್ಮಸ್ಥಳ ಪ್ರಕರಣ: ಎಸ್‌ಐಟಿ ರಚನೆ ಹಿಂದೆ 'ದೆಹಲಿ ನಾಯಕರ ಕೈವಾಡ': ತೇಜಸ್ವಿ ಸೂರ್ಯ ಪ್ರಶ್ನೆ

ಎಸ್‌ಐಟಿ ರಚನೆ ಬೇಡ ಎಂದು ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದರೂ, ಅದನ್ನು ಧಿಕ್ಕರಿಸಿ ಯಾರ ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೂರ್ಯ ಪ್ರಶ್ನಿಸಿದರು.


ಧರ್ಮಸ್ಥಳದ ಕುರಿತು ಕೇಳಿಬಂದಿರುವ ಆರೋಪಗಳ ತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ದೆಹಲಿಯ ನಾಯಕರೊಬ್ಬರ ಸೂಚನೆಯ ಮೇರೆಗೆ ರಚನೆಯಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದ್ದಾರೆ. ಈ 'ದೆಹಲಿ ನಾಯಕ' ಯಾರೆಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗಪಡಿಸಬೇಕು ಎಂದು ಅವರು ಸವಾಲು ಹಾಕಿದ್ದಾರೆ.

'ಧರ್ಮದ ಉಳಿವಿಗಾಗಿ ಧರ್ಮ ಯುದ್ಧ' ಅಭಿಯಾನದ ಭಾಗವಾಗಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹಮ್ಮಿಕೊಂಡಿದ್ದ ಯಾತ್ರೆಯಲ್ಲಿ ಮಾತನಾಡಿದ ಅವರು, ಈ ಪ್ರಕರಣವನ್ನು ತಕ್ಷಣವೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

'ಹಿರಿಯ ಪೊಲೀಸ್ ಅಧಿಕಾರಿಗಳ ಸಲಹೆ ಧಿಕ್ಕರಿಸಿ ತರಾತುರಿ ಕ್ರಮ'

ಎಸ್‌ಐಟಿ ರಚನೆ ಬೇಡ ಎಂದು ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದರೂ, ಅದನ್ನು ಧಿಕ್ಕರಿಸಿ ಯಾರ ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೂರ್ಯ ಪ್ರಶ್ನಿಸಿದರು. "ಇದು ಹಿಂದೂ ಧಾರ್ಮಿಕ ಕೇಂದ್ರದ ವಿಷಯವಾಗಿರದಿದ್ದರೆ ಇಷ್ಟೇ ವೇಗವಾಗಿ ಕ್ರಮ ಕೈಗೊಳ್ಳುತ್ತಿದ್ದಿರಾ?" ಎಂದು ಅವರು ಸರ್ಕಾರವನ್ನು ಟೀಕಿಸಿದರು.

'ಸನಾತನ ಧರ್ಮ ನಿರ್ಮೂಲನೆ ಅಜೆಂಡಾದ ಭಾಗ'

ಈ ಪ್ರಕರಣವು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ದೊಡ್ಡ ಷಡ್ಯಂತ್ರದ ಭಾಗವಾಗಿದೆ ಎಂದು ಸೂರ್ಯ ಆರೋಪಿಸಿದರು. "ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳ ಮುಂದುವರಿದ ಭಾಗದಂತೆ ಈ ಷಡ್ಯಂತ್ರ ರೂಪಿಸಲಾಗಿದೆ," ಎಂದು ಅವರು ವಿಶ್ಲೇಷಿಸಿದರು. ಯೂಟ್ಯೂಬ್‌ನಲ್ಲಿ ವಿಡಿಯೋ ಮಾಡಿದವರ ಪರವಾಗಿ ಲಕ್ಷಾಂತರ ರೂಪಾಯಿ ಶುಲ್ಕ ಪಡೆದು ವಕೀಲರು ವಾದಿಸುತ್ತಿದ್ದು, ಇದರ ಹಿಂದೆ ದೊಡ್ಡ ವ್ಯವಸ್ಥೆಯೇ ಇದೆ ಎಂದು ಅವರು ದೂರಿದರು. ಈ ಷಡ್ಯಂತ್ರದ ಮೂಲವನ್ನು ಪತ್ತೆಹಚ್ಚಲು ಪ್ರಕರಣವನ್ನು ಸಿಬಿಐಗೆ ವಹಿಸುವುದು ಅನಿವಾರ್ಯ ಎಂದು ಅವರು ಒತ್ತಿ ಹೇಳಿದರು.

ಯಾತ್ರೆಗೆ ಜಯನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಸಿ.ಕೆ. ರಾಮಮೂರ್ತಿ, ರವಿಸುಬ್ರಹ್ಮಣ್ಯ, ಬಿಜೆಪಿ ಮುಖಂಡರಾದ ಉಮೇಶ್ ಶೆಟ್ಟಿ, ಶ್ರೀಧರ್ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Read More
Next Story