ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಹೇಳಿಕೆ ನೀಡಿದ ವ್ಯಕ್ತಿ ಬಂಧನ
x

ಮಾಸ್ಕ್‌ ಮ್ಯಾನ್‌ 

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಹೇಳಿಕೆ ನೀಡಿದ ವ್ಯಕ್ತಿ ಬಂಧನ

ವಿಚಾರಣೆ ವೇಳೆ ಸಾಕ್ಷಿ ದೂರುದಾರ ಸುಳ್ಳು ಮಾಹಿತಿ ನೀಡಿದ ಕಾರಣ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.


ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೆ ಎಂದು ಹೇಳಿಕೆ ನೀಡಿ ತೀವ್ರ ಸಂಚಲನ ಸೃಷ್ಟಿಸಿದ್ದ ಅನಾಮಧೇಯ ವ್ಯಕ್ತಿಯನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ದಳ (SIT) ಈತನ ಹೇಳಿಕೆಗಳು ಸುಳ್ಳು ಎಂದು ದೃಢಪಡಿಸಿದೆ ಎನ್ನಲಾಗಿದೆ.

ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಮುಸುಕು ಧರಿಸಿ ಎಸ್‌ಐಟಿ ಕಚೇರಿಗೆ ಬಂದಿದ್ದ ಈ ವ್ಯಕ್ತಿಯನ್ನು, ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಶನಿವಾರ ಬೆಳಗ್ಗೆ 5 ಗಂಟೆಯವರೆಗೆ ವಿಚಾರಣೆ ನಡೆಸಿದ್ದಾರೆ. ಈ ಸುದೀರ್ಘ ವಿಚಾರಣೆಯ ನಂತರ ಬಂಧಿಸಿದೆ ಎನ್ನಲಾಗಿದೆ.

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಈ ವ್ಯಕ್ತಿ ಅನಾಮಧೇಯ ದೂರು ನೀಡಿದ್ದ. ಪ್ರಕರಣದ ಗಂಭೀರತೆ ಪರಿಗಣಿಸಿದ ರಾಜ್ಯ ಸರ್ಕಾರ, ತನಿಖೆಗಾಗಿ ಎಸ್‌ಐಟಿ ರಚನೆ ಮಾಡಿತ್ತು. ತನಿಖೆ ಆರಂಭವಾದಾಗ, ಈ ವ್ಯಕ್ತಿಯು ಶವಗಳನ್ನು ಹೂತು ಹಾಕಿರುವ 17 ಸ್ಥಳಗಳನ್ನು ತೋರಿಸಿದ್ದ. ಆದರೆ, ತನಿಖಾ ತಂಡ ಎರಡು ಸ್ಥಳಗಳಲ್ಲಿ ಮಾತ್ರ ಅಸ್ಥಿಪಂಜರ ಮತ್ತು ಮೂಳೆಗಳನ್ನು ಕಂಡುಕೊಂಡಿದ್ದು, ಉಳಿದ ಯಾವ ಸ್ಥಳದಲ್ಲೂ ಯಾವುದೇ ಕುರುಹು ಸಿಕ್ಕಿರಲಿಲ್ಲ ಎಂದು ಹೇಳಲಾಗಿದೆ.

ಕುರುಹುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ಸಮಾಧಿ ಶೋಧವನ್ನು ಸ್ಥಗಿತಗೊಳಿಸಿ, ಈ ವ್ಯಕ್ತಿಯ ಹೇಳಿಕೆಗಳ ಕುರಿತು ತನಿಖೆ ನಡೆಸಿತ್ತು. ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಮತ್ತು ಸುಮಾರು 25 ಪೊಲೀಸರ ತಂಡ ಎಸ್‌ಐಟಿ ಠಾಣೆಯಲ್ಲಿ ಈತನನ್ನು ತೀವ್ರವಾಗಿ ವಿಚಾರಣೆ ನಡೆಸಿತ್ತು. ವಿವಿಧ ಆಯಾಮಗಳಲ್ಲಿ ಪ್ರಶ್ನೆಗಳನ್ನು ಕೇಳಿ, ಈತನ ಹೇಳಿಕೆಗಳನ್ನು ಪರಿಶೀಲಿಸಲಾಗಿತ್ತು.

ಮುಸುಕುಧಾರಿಯನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದ ಮತ್ತಷ್ಟು ವಿವರಗಳು ಪೊಲೀಸ್ ಕಸ್ಟಡಿ ವಿಚಾರಣೆಯ ನಂತರ ಹೊರಬೀಳುವ ನಿರೀಕ್ಷೆಯಿದೆ ಎನ್ನಲಾಗಿದೆ.

ಕಾನೂನು ರಕ್ಷಣೆ ಪಡೆದಿದ್ದ ಸಾಕ್ಷಿದಾರ

ವಿಟ್ನೆಸ್‌ ಪ್ರೊಟೆಕ್ಷನ್‌ ಆಕ್ಟ್‌ ಅಡಿಯಲ್ಲಿ ಸಾಕ್ಷಿ ದೂರುದಾರ ರಕ್ಷಣೆ ಪಡೆದಿದ್ದರು. ಎಸ್‌ಐಟಿ ತನಿಖೆ ನಡೆಯುವ ವೇಳೆ ವಕೀಲರೊಂದಿಗೆ ಬಂದು, ಇಡೀ ದಿನ ಎಸ್‌ಐಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಮತ್ತೆ ವಕೀಲರೊಂದಿಗೆ ಅಜ್ಞಾತ ಸ್ಥಳಕ್ಕೆ ತೆರಳುತ್ತಿದ್ದ.

ಸಾಕ್ಷಿ ದೂರುದಾರನನ್ನು ಬಂಧಿಸಿ, ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂಬ ಬೇಡಿಕೆ ಬಂದಿತ್ತು. ಇದೀಗ ದೂರುದಾರನಿಗೆ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ನೀಡಿದ್ದ ರಕ್ಷಣೆಯನ್ನು ಸಕ್ಷಮ ಪ್ರಾಧಿಕಾರ ರದ್ದುಪಡಿಸಿದ ಹಿನ್ನೆಲೆಯಲ್ಲಿ ಎಸ್‌ಐಟಿ ಆತನನ್ನು ಬಂಧಿಸಿದೆ ಎನ್ನಲಾಗಿದೆ.

ಬಂಧನ ಖಚಿತಪಡಿಸಿದ ಗೃಹ ಸಚಿವ

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, 'ಸಾಕ್ಷಿ ದೂರುದಾರನ ಬಂಧನ ಆಗಿರುವುದು ನಿಜ. ಉಳಿದ ಮಾಹಿತಿಯನ್ನು ಎಸ್‌ಐಟಿ ನೀಡಲಿದೆ' ಎಂದು ಹೇಳಿದ್ದಾರೆ.

ಎಸ್‌ಐಟಿ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಸುಜಾತಾ ಭಟ್ ಪ್ರಕರಣ ಹಾಗೂ ಸಾಕ್ಷಿ ದೂರುದಾರನ ಹಿಂದೆ ಜಾಲ ಇದೆ ಎಂಬ ಆರೋಪದ ಬಗ್ಗೆ ನಾನೇನೂ ಹೇಳುವುದಿಲ್ಲ. ಎಲ್ಲವನ್ನೂ ಎಸ್‌ಐಟಿ ತನಿಖೆ ಮಾಡುತ್ತಿದೆ. ಎಸ್‌ಐಟಿಯ ಅಂತಿಮ ವರದಿ ಬರುವವರೆಗೆ ನಾನು ಹೇಳಿಕೆ ನೀಡಲ್ಲ ಎಂದು ಪರಮೇಶ್ವರ್‌ ಹೇಳಿದರು.

Read More
Next Story