
ಧರ್ಮಸ್ಥಳ ಪ್ರಕರಣ | ಇಂದು ಬಂಗ್ಲಗುಡ್ಡದಲ್ಲಿ ಎಸ್‌ಐಟಿ ಮಹಜರು ಸಾಧ್ಯತೆ
ತಲೆಬುರುಡೆ ವಿಚಾರಣೆ ವೇಳೆ ದೊರೆತ ಪ್ರಮುಖ ಮಾಹಿತಿಗಳ ಆಧಾರದ ಮೇಲೆ, ಎಸ್ಐಟಿ ಅಧಿಕಾರಿಗಳು ವಿಠಲ್ ಗೌಡ ಅವರನ್ನು ಭಾನುವಾರ ಸ್ಥಳಕ್ಕೆ ಕರೆದೋಯ್ದು ಮಹಜರು ನಡೆಸಿದ್ದರು. ಇಂದು ಮತ್ತೊಮ್ಮೆ ಮಹಜರು ನಡೆಯಲಿದೆ ಎನ್ನಲಾಗಿದೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಸೋಮವಾರ ಬಂಗ್ಲಗುಡ್ಡದಲ್ಲಿ ಮತ್ತೊಮ್ಮೆ ಮಹಜರು ನಡೆಸುವ ಸಾಧ್ಯತೆ ಇದೆ.
ಈಗಾಗಲೇ ತಲೆಬುರುಡೆ ವಿಚಾರಣೆ ವೇಳೆ ದೊರೆತ ಪ್ರಮುಖ ಮಾಹಿತಿಗಳ ಆಧಾರದ ಮೇಲೆ ಭಾನುವಾರ ಎಸ್ಐಟಿ ಅಧಿಕಾರಿಗಳು ವಿಠಲ್ ಗೌಡ ಅವರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ನಡೆಸಿದ್ದರು ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ವಿವಿಧ ದೂರುಗಳ ಬಗ್ಗೆ ಇಂದು ಎಸ್ಐಟಿ ಅಧಿಕಾರಿಗಳು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ, ಸ್ನೇಹಮಯಿ ಕೃಷ್ಣಾ ಸೇರಿದಂತೆ ಹಲವು ದೂರುಗಳು ಎಸ್ಐಟಿಗೆ ಸಲ್ಲಿಕೆಯಾಗಿವೆ. ಈ ದೂರುಗಳಲ್ಲಿ ಯಾವ ದೂರುಗಳನ್ನು ಪರಿಗಣಿಸಬೇಕು ಎಂಬುದರ ಬಗ್ಗೆ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಭಾನುವಾರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ವಿಚಾರಣೆ ವೇಳೆ ದೊರೆತ ಮಾಹಿತಿಗಳನ್ನು ಆಧರಿಸಿ ಸೋಮವಾರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣದ ತನಿಖೆಯನ್ನು ಎಸ್ಐಟಿ ಕೈಗೆತ್ತಿಕೊಂಡಿದೆ. ಈ ಸಂಬಂಧ ಹಲವರನ್ನು ವಿಚಾರಣೆ ನಡೆಸಲಾಗಿದ್ದು, ಕೆಲ ಕಡೆಗಳಲ್ಲಿ ಮನುಷ್ಯನ ಅಸ್ಥಿಪಂಜರಗಳ ಭಾಗಗಳು ಪತ್ತೆಯಾಗಿವೆ. ಪ್ರಕರಣದ ಮುಖ್ಯ ದೂರುದಾರನಾಗಿದ್ದ ಮುಸುಕುಧಾರಿಯು ಸುಳ್ಳು ಸಾಕ್ಷಿ ಹೇಳಿದ ಆರೋಪದ ಮೇಲೆ ಈಗಾಗಲೇ ಆತನನ್ನು ಬಂಧಿಸಲಾಗಿತ್ತು. ಅಲ್ಲದೇ, ಆತನಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿಯೂ ಎಸ್ಐಟಿ ಮಹಜರು ನಡೆಸಿ ತಲವಾರುಗಳನ್ನು ವಶಪಡಿಸಿಕೊಂಡಿತ್ತು.
ಸೌಜನ್ಯ ಮಾವ ವಿಠಲ್ ಗೌಡ ಅವರನ್ನು ಭಾನುವಾರವೂ ಸೇರಿದಂತೆ ಒಟ್ಟು ಮೂರು ಬಾರಿ ಬಂಗ್ಲಗುಡ್ಡಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಾಗಿತ್ತು. ಈ ಮಧ್ಯೆ, ವಿಡಿಯೋ ಬಿಡುಗಡೆ ಮಾಡಿದ್ದ ವಿಠಲ್ ಗೌಡ ತಾನು ಬಂಗ್ಲಗುಡ್ಡದಲ್ಲಿ ಸ್ಥಳ ಮಹಜರಿಗೆ ಹೋದ ಸಂದರ್ಭದಲ್ಲಿ ಹಲವು ಅಸ್ಥಿಪಂಜರಗಳ ರಾಶಿಗಳನ್ನು ನೋಡಿದ್ದೆ ಎಂಬ ಸ್ಫೋಟಕ ಮಾಹಿತಿ ನೀಡಿದ್ದ.