ಧರ್ಮಸ್ಥಳ ಪ್ರಕರಣ| ಎಸ್ಐಟಿ ತನಿಖೆ ಚುರುಕು ; ಸಾಕ್ಷಿದಾರನ ಹೇಳಿಕೆ ದಾಖಲಿಸಿಕೊಂಡ ಅಧಿಕಾರಿಗಳು
x

ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿದ ಎಸ್ಐಟಿ ಅಧಿಕಾರಿಗಳು ಅಗತ್ಯ ದಾಖಲೆ ಸಂಗ್ರಹಿಸಿದರು

ಧರ್ಮಸ್ಥಳ ಪ್ರಕರಣ| ಎಸ್ಐಟಿ ತನಿಖೆ ಚುರುಕು ; ಸಾಕ್ಷಿದಾರನ ಹೇಳಿಕೆ ದಾಖಲಿಸಿಕೊಂಡ ಅಧಿಕಾರಿಗಳು

ಧರ್ಮಸ್ಥಳದ ಮಲ್ಲಿಕಟ್ಟೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿರುವ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾದ ಸಾಕ್ಷಿದಾರ ತನ್ನ ಹೇಳಿಕೆ ದಾಖಲಿಸಿದ್ದಾರೆ.


ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ತೀವ್ರಗೊಳಿಸಿರುವ ವಿಶೇಷ ತನಿಖಾ ದಳದ (ಎಸ್ಐಟಿ) ಅಧಿಕಾರಿಗಳು ಪ್ರಮುಖ ಸಾಕ್ಷಿದಾರನ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಧರ್ಮಸ್ಥಳದ ಮಲ್ಲಿಕಟ್ಟೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿರುವ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾದ ಸಾಕ್ಷಿದಾರ ತನ್ನ ಹೇಳಿಕೆ ದಾಖಲಿಸಿದ್ದಾರೆ. ಸುಮಾರು ಏಳು ಗಂಟೆಗಳ ಕಾಲ ಸಾಕ್ಷಿದಾರ ವ್ಯಕ್ತಿಯನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.

ಎಸ್ಐಟಿಯಲ್ಲಿರುವ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್, ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ‌ ನೇತೃತ್ವದ ತಂಡವು ಹೇಳಿಕೆ ದಾಖಲಿಸಿಕೊಂಡಿತು.

ಶನಿವಾರ ರಾತ್ರಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿದ ಎಸ್ಐಟಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪಡೆದುಕೊಂಡರು. ಪೊಲೀಸ್ ಠಾಣೆ ಪಿಎಸ್ಐ ಸಮರ್ಥ್ ಅವರಿಂದ ದಾಖಲೆಗಳನ್ನು ಪಡೆದುಕೊಂಡರು.

ಎಸ್ಐಟಿ ಮುಖ್ಯಸ್ಥರಾಗಿರುವ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣಬ್ ಮೊಹಾಂತಿ ಅವರು ಭಾನುವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ತನಿಖಾ‌ ಸಂಬಂಧ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ.

ಶವಗಳನ್ನು ಹೂತಿಟ್ಟಿರುವ ಕುರಿತು ದೂರುದಾರ‌ ನೀಡಿದ ಹೇಳಿಕೆ ಪಡೆದುಕೊಂಡಿದ್ದು, ಎಸ್‌ಐಟಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ಪ್ರಕರಣದ ತನಿಖೆಯಲ್ಲಿ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಧರ್ಮಸ್ಥಳದಲ್ಲಿ ನಡೆದ ಸರಣಿ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆಯಲ್ಲಿನ ಲೋಪಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಲಾಗಿತ್ತು.