
ಧರ್ಮಸ್ಥಳ ಪ್ರಕರಣದ ತನಿಖೆ ನಡುವೆಯೇ ಎಸ್‌ಐಟಿ ಅಧಿಕಾರಿ ಅಮೆರಿಕಕ್ಕೆ: ಚರ್ಚೆಗೆ ಗ್ರಾಸವಾದ ಅನುಚೇತ್ ಪ್ರವಾಸ
ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಯಾಗಿರುವ ಅನುಚೇತ್ ಅವರು, ಅಮೆರಿಕದಲ್ಲಿ ಆಯೋಜಿಸಲಾಗಿರುವ 'ಇಂಟೆಲಿಜೆಂಟ್-2025' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾರೆ. ಇದಕ್ಕಾಗಿ ಅವರು ಜುಲೈ 16ರಂದೇ ವೇತನ ಸಹಿತ ರಜೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಯುತ್ತಿರುವಾಗಲೇ, ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದ (SIT) ಪ್ರಮುಖ ಸದಸ್ಯರಾದ ಡಿಐಜಿ ಎಂ.ಎನ್. ಅನುಚೇತ್ ಅವರು ಅಮೆರಿಕ ಪ್ರವಾಸಕ್ಕೆ ತೆರಳಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಯಾಗಿರುವ ಅನುಚೇತ್ ಅವರು, ಅಮೆರಿಕದಲ್ಲಿ ಆಯೋಜಿಸಲಾಗಿರುವ 'ಇಂಟೆಲಿಜೆಂಟ್-2025' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾರೆ. ಇದಕ್ಕಾಗಿ ಅವರು ಜುಲೈ 16ರಂದೇ ವೇತನ ಸಹಿತ ರಜೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ನಿರ್ದೇಶನದಂತೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (DPAR) ರಜೆ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಮೂಲಗಳ ಪ್ರಕಾರ, ಅನುಚೇತ್ ಅವರು ಆಗಸ್ಟ್ 18ರಂದೇ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದು, ಸೆಪ್ಟೆಂಬರ್ 3 ಅಥವಾ 4ರಂದು ವಾಪಸಾಗುವ ಸಾಧ್ಯತೆಯಿದೆ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣಗಳ ತನಿಖೆಯು ಮಹತ್ವದ ಹಂತದಲ್ಲಿರುವಾಗ, ತನಿಖಾ ತಂಡದ ಪ್ರಮುಖ ಅಧಿಕಾರಿಯ ಅನುಪಸ್ಥಿತಿಯು ತನಿಖೆಯ ವೇಗದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.