Dharmasthala case | Money sent from abroad to those who spread false propaganda: C.T. Ravi alleges
x

ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ

ಧರ್ಮಸ್ಥಳ ಪ್ರಕರಣ| ಅಪಪ್ರಚಾರ ಮಾಡಿದವರಿಗೆ ವಿದೇಶದಿಂದ ಹಣ ರವಾನೆ: ಸಿ.ಟಿ. ರವಿ ಆರೋಪ

ನಟಿ ರಮ್ಯಾ ಅವರ ಮೇಲೆ ಅವಾಚ್ಯ ಶಬ್ದ ಬಳಸಿದ್ದಕ್ಕೆ 12 ಜನರನ್ನು ಬಂಧಿಸಲಾಯಿತು. ಆದರೆ, ಧರ್ಮಸ್ಥಳ ಧರ್ಮಾಧಿಕಾರಿಗಳ ಮೇಲೆ ಆರೋಪ ಮಾಡಿದಾಗ ಎಷ್ಟು ಜನರನ್ನು ಬಂಧಿಸಿದ್ದೀರಿ? ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು.


ಧರ್ಮಸ್ಥಳ ಧರ್ಮಾಧಿಕಾರಿಗಳು 21ನೇ ತಲೆಮಾರಿನ ಧಾರ್ಮಿಕ ನಾಯಕರು. ಅನೇಕರ ಬದುಕಿನಲ್ಲಿ ಆರ್ಥಿಕ ಬದಲಾವಣೆಗೆ ಕಾರಣರಾದವರು. ಮೊದಲು ಆರೋಪ ಮಾಡಿದವರ ಹಿನ್ನೆಲೆ ವಿಚಾರ ಮಾಡಬೇಕಿತ್ತು. ಮುಸುಕುಧಾರಿಯನ್ನು ಸೂಪರ್‌ಮ್ಯಾನ್‌ನಂತೆ ಬಿಂಬಿಸಲಾಗಿದೆ. ಅಪಪ್ರಚಾರ ಮಾಡಿದವರಿಗೆ ಚೆನ್ನೈ ಮತ್ತು ವಿದೇಶಗಳಿಂದಲೂ ಹಣ ಬಂದಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಗಂಭೀರ ಆರೋಪ ಮಾಡಿದರು.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರ ಮೇಲೆ ಆರೋಪ ಮಾಡಿದರೂ ಎಸ್ಐಟಿ ರಚನೆ ಮಾಡುತ್ತೀರಾ?, ಸಿಎಂ ಸಿದ್ದರಾಮಯ್ಯ ಮೇಲೂ ಆರೋಪ ಮಾಡಿದ್ದಾರೆ. ಅದಕ್ಕೂ ಎಸ್ಐಟಿ ರಚನೆ ಮಾಡುತ್ತೀರಾ?, ನಿಮ್ಮ ಪಕ್ಷ ರಾಜಕಾರಣ ಮಾಡಬಾರದು ಅಂತಲೇ ನಾವು ಎನ್‌ಐಎ ತನಿಖೆಗೆ ಕೇಳುತ್ತಿದ್ದೇವೆ ಎಂದು ಹೇಳಿದರು.

ನಟಿ ರಮ್ಯಾ ಅವರ ಮೇಲೆ ಅವಾಚ್ಯ ಶಬ್ದ ಬಳಸಿದ್ದಕ್ಕೆ 12 ಜನರನ್ನು ಬಂಧಿಸಲಾಯಿತು. ಆದರೆ, ಧರ್ಮಸ್ಥಳ ಧರ್ಮಾಧಿಕಾರಿಗಳ ಮೇಲೆ ಆರೋಪ ಮಾಡಿದಾಗ ಎಷ್ಟು ಜನರನ್ನು ಬಂಧಿಸಿದ್ದೀರಿ?, ಕಾಂಗ್ರೆಸ್‌ ಮಾಡಿದ ರಾಜಕಾರಣದ ವಿರುದ್ಧ ನಾವು ತಿರುಗಿಬಿದ್ದಿದ್ದೇವೆ ಎಂದರು.

ಮಂಪರು ಪರೀಕ್ಷೆ ನಡೆಯಲಿ

"ದೂರುದಾರರ ಬಗ್ಗೆ ವಿಚಾರಣೆ ಮಾಡಿ ಏನೋ ಷಡ್ಯಂತ್ರ ಇದೆ ಎಂದು ಎರಡು ತಿಂಗಳ ಮುಂಚೆಯೇ ನಾನು ಹೇಳಿದ್ದೆ. ನಾವು ಹಿಂದುತ್ವದ ರಾಜಕಾರಣ ಮಾಡಲು ಬಂದವರು. ನನ್ನ ದೃಷ್ಟಿಯಲ್ಲಿ ಧರ್ಮಾಧಿಕಾರಿಗಳನ್ನು ಅವಮಾನಿಸಿದರೆ ಹೆತ್ತ ತಾಯಿಯನ್ನು ಅವಮಾನಿಸಿದಂತೆ. ದೂರುದಾರನ ಹಿನ್ನೆಲೆ ಪರಿಶೀಲಿಸಿ ಮಂಪರು ಪರೀಕ್ಷೆ ಮಾಡಬೇಕಿತ್ತು. ಎಲ್ಲವನ್ನೂ ಆತ ಬಾಯಿಬಿಡುವ ಆತಂಕ ನಿಮಗಿದೆಯೇ?" ಎಂದರು.

ಸೌಜನ್ಯ ಹತ್ಯೆ, ದ್ವಂದ್ವವಿಲ್ಲ

ಸೌಜನ್ಯ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ನಾವು ಬೆಂಬಲಿಸಿಲ್ಲ. ನಾವು ಬಹಳ ಸ್ಪಷ್ಟವಾಗಿದ್ದೇವೆ, ನಮ್ಮಲ್ಲಿ ಯಾವುದೇ ದ್ವಂದ್ವವಿಲ್ಲ. ಮುಂದೆಯೂ ಜನಾಭಿಪ್ರಾಯ ಮೂಡಿಸುತ್ತೇವೆ. ಅಧಿಕಾರ ಶಾಶ್ವತವಲ್ಲ, ಜನರು ಯಾವಾಗ ಬೇಕಾದರೂ ಕಿತ್ತೊಗೆಯಬಹುದು ಎಂದು ತಿಳಿಸಿದರು.

ಕೆ.ಎನ್‌. ರಾಜಣ್ಣ ಸಂಪರ್ಕದಲ್ಲಿದ್ದಾರೆ

" ಮಾಜಿ ಸಚಿವ ಕೆ.ಎನ್‌. ರಾಜಣ್ಣ, ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಸೇರಿದಂತೆ ಹಲವರು ಸೈದ್ಧಾಂತಿಕ ವಿಚಾರದಿಂದ ವಿಭಿನ್ನರಾಗಿದ್ದೇವೆ. ಆದರೆ ನಾವೆಲ್ಲರೂ ಒಂದೇ. ಎದುರಿಗೆ ಸಿಕ್ಕಾಗ ಮಾತನಾಡುವ ಸಂಬಂಧ ಇದೆ. ಎಚ್‌.ಸಿ. ಬಾಲಕೃಷ್ಣ ಮೂಲ ಬಿಜೆಪಿಗರು. ಕೆ.ಎನ್‌. ರಾಜಣ್ಣ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಒಬ್ಬರಿಗೊಬ್ಬರಿಗೆ ನಮ್ಮಲ್ಲಿ ಒಳ್ಳೆಯ ಸಂಬಂಧವಿದೆ. ಅವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ" ಎಂದು ತಿಳಿಸಿದರು.

Read More
Next Story