
ಕರ್ನಾಟಕ ಹೈಕೋರ್ಟ್
ಧರ್ಮಸ್ಥಳ ಪ್ರಕರಣ|ಹೈಕೋರ್ಟ್ ಮಧ್ಯಪ್ರವೇಶಕ್ಕೆ ವಕೀಲರಿಂದ ಪತ್ರ
ತನಿಖೆಯು ಪೂರ್ವಾಗ್ರಹವಾಗದಂತೆ ನೋಡಿಕೊಳ್ಳಲು ಪಾರದರ್ಶಕ ತನಿಖೆ ಆಗಬೇಕಾಗಿದೆ. ಇದು ಸಾಧ್ಯವಾಗಬೇಕಾದರೆ ಹೈಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಧರ್ಮಸ್ಥಳದಲ್ಲಿ ಹಲವು ಮಹಿಳೆಯರು, ಹೆಣ್ಣು ಮಕ್ಕಳ ಮೃತದೇಹಗಳನ್ನು ಹೂತಿಟ್ಟಿರುವ ಕುರಿತು ವ್ಯಕ್ತಿಯೊಬ್ಬ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯು ದಿಕ್ಕು ತಪ್ಪುತ್ತಿದೆ. ಹಾಗಾಗಿ ಹೈಕೋರ್ಟ್ ಮಧ್ಯ ಪ್ರವೇಶಿಸಿ ಪ್ರಕರಣದ ಮೇಲ್ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿ ವಕೀಲರಾದ ಶ್ರೀರಾಮ್ ಟಿ.ನಾಯ್ಕ್, ಪೊನ್ನಣ್ಣ ಟಿ.ಎ ಅವರು ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದಾರೆ.
ಪ್ರಕರಣದಲ್ಲಿ ಪ್ರಭಾವಿಗಳು ಭಾಗಿಯಾಗಿರುವ ಶಂಕೆಯಿದೆ. ಆ ಪ್ರಭಾವಿಗಳು ರಾಜ್ಯಾದ್ಯಂತ ಸಾಕಷ್ಟು ಮಂದಿ ಬೆಂಬಲಿಗರನ್ನು ಹೊಂದಿದ್ದಾರೆ. ತನಿಖೆಯು ಪೂರ್ವಾಗ್ರಹವಾಗದಂತೆ ನೋಡಿಕೊಳ್ಳಲು ಪಾರದರ್ಶಕ ತನಿಖೆ ಆಗಬೇಕಾಗಿದೆ. ಇದು ಸಾಧ್ಯವಾಗಬೇಕಾದರೆ ಹೈಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಪ್ರಕರಣಕ್ಕೆ ಸಂಬಂಧ ದೂರುದಾರ ನೀಡಿರುವ ಹೇಳಿಕೆಗಳನ್ನು ತನಿಖಾಧಿಕಾರಿಗಳು ಕೆಲವು ವ್ಯಕ್ತಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಘಟನಾವಳಿಗಳು ತನಿಖಾ ಸಂಸ್ಥೆಯ ಮೇಲೆ ಅನುಮಾನ ಮೂಡುವಂತೆ ಮಾಡಿವೆ. ಆರೋಪಿ ಯಾರು ಎಂಬುದನ್ನು ಈವರೆಗೂ ತನಿಖೆಯಿಂದ ಬಹಿರಂಗಪಡಿಸಿಲ್ಲ. ಆದರೂ, ರಾಜ್ಯದ ಎಲ್ಲ ರಾಜಕೀಯ ವ್ಯಕ್ತಿಗಳು ಕೆಲವು ಪ್ರಭಾವಿಗಳ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ದೂರು ದಾಖಲಾದ ತಕ್ಷಣ ಪ್ರಭಾವಿಗಳ ಪರ ವ್ಯಕ್ತಿಯೊಬ್ಬರು ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಆರೋಗ್ಯ, ವೈದ್ಯಕೀಯ ಶಿಕ್ಷಣ ಖಾತೆ ತಮ್ಮಲ್ಲಿ ಇಲ್ಲದಿದ್ದರೂ ವೈದ್ಯಕೀಯ ಕಾಲೇಜಿನ ವಿಚಾರಕ್ಕಾಗಿ ಭೇಟಿ ಮಾಡಲಾಗಿತ್ತು ಎಂಬುದಾಗಿ ಗೃಹ ಸಚಿವರು ಹೇಳಿದ್ದಾರೆ. ಈ ಅಂಶವೇ ತನಿಖೆಯ ಮೇಲೆ ಸಂಶಯಪಡಲು ಕಾರಣವಾಗಿದೆ. ತನಿಖೆಯನ್ನು ದಾರಿ ತಪ್ಪಿಸುವ ಸಾಧ್ಯತೆಯಿದ್ದು, ಅತ್ಯಾಚಾರ ಮತ್ತು ಕೊಲೆಯಂತಹ ಅಮಾನವೀಯ ಕೃತ್ಯಗಳಿಗೊಳಗಾದವರಿಗೆ ಅನ್ಯಾಯವಾದಂತಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅಪ್ರಾಪ್ತ ಮಕ್ಕಳ ವಿರುದ್ಧದ ಘೋರ ಕೃತ್ಯವಾಗಿದೆ. ತನಿಖಾ ಸಂಸ್ಥೆಗಳು ಎಚ್ಚರಿಕೆಯಿಂದ ಮುಂದುವರಿಯಬೇಕು. ಮೃತ ಶವಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಡಿಎನ್‌ಎ ಪರೀಕ್ಷೆಗೆ ಕಳುಹಿಸಬೇಕಾಗುತ್ತದೆ. ಈ ಹಿಂದೆ ದಾಖಲಾದ ನಾಪತ್ತೆ ಪ್ರಕರಣಗಳನ್ನು ಪರಿಶೀಲನೆ ಮಾಡಬೇಕು. ದೂರುದಾರರು ನ್ಯಾಯಾಲಯದ ಎದುರು ಹೇಳಿಕೆ ದಾಖಲಿಸಿ 17 ದಿನ ಕಳೆದರೂ ಈವರೆಗೂ ಯಾವುದೇ ಶವ ಹೊರತೆಗೆದು, ಆರೋಪಿಗಳನ್ನು ಬಂಧಿಸುವ ಪ್ರಯತ್ನ ಮಾಡಿಲ್ಲ. ಅಧಿಕಾರಿಗಳ ಈ ವಿಳಂಬ ನೀತಿಯಿಂದ ಅನುಮಾನ ಹೆಚ್ಚಾಗಿದೆ. ಆರೋಪಿಗಳು ಶವಗಳನ್ನು ಹೊರತೆಗೆದು ಸಾಕ್ಷ್ಯಗಳನ್ನು ನಾಶಪಡಿಸಲು ಅವಕಾಶ ನೀಡಿದಂತಾಗಿದೆ ಎಂದು ವಕೀಲರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಕರಣ ದಾಖಲಾದ ಬಳಿಕ ಬಿಜೆಪಿ ಮುಖಂಡ ಸಿ.ಟಿ.ರವಿ ಅವರು ಧರ್ಮಸ್ಥಳದ ಪ್ರತಿಷ್ಠೆಯನ್ನು ಹಾಳು ಮಾಡಲಾಗುತ್ತಿದೆ ಎಂಬುದಾಗಿ ಹೇಳಿಕೆ ನೀಡುವ ಮೂಲಕ ಅಪರಿಚಿತ ಆರೋಪಿಗೆ ಬೆಂಬಲ ಸೂಚಿಸಿದ್ದಾರೆ. ಧರ್ಮಸ್ಥಳದಲ್ಲಿ ಬಾಲಕಿಯರು, ಅಪ್ರಾಪ್ತರು, ಭಿಕ್ಷುಕರು ಸೇರಿದಂತೆ ಹಲವು ಮಂದಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ. ದೂರು ನೀಡಿರುವವರ ಸಹಾಯದಿಂದ ಆ ಶವಗಳನ್ನು ಮಣ್ಣು ಮಾಡಲಾಗಿದೆ. ಇದೇ ಕಾರಣದಿಂದ ದೂರುದಾರರು 1995ರಿಂದ 2014ರ ವರೆಗೂ ಜೀವ ಭಯದಿಂದ ತನ್ನ ಕುಟುಂಬಸ್ಥರೊಂದಿಗೆ ಬೇರೊಂದು ರಾಜ್ಯದಲ್ಲಿ ನೆಲೆಸುವಂತಾಗಿತ್ತು. ಆದ್ದರಿಂದ ತನಿಖಾ ಪ್ರಕ್ರಿಯೆಯಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.