ಧರ್ಮಸ್ಥಳ ಪ್ರಕರಣ: ನಾಳೆ ಜೆಡಿಎಸ್‌ನಿಂದ ಧರ್ಮಸ್ಥಳ ಸತ್ಯಯಾತ್ರೆ, ಹಾಸನದಲ್ಲಿ ಉಪಾಹಾರ
x

ನಿಖಿಲ್‌ ಕುಮಾರಸ್ವಾಮಿ 

ಧರ್ಮಸ್ಥಳ ಪ್ರಕರಣ: ನಾಳೆ ಜೆಡಿಎಸ್‌ನಿಂದ 'ಧರ್ಮಸ್ಥಳ ಸತ್ಯಯಾತ್ರೆ', ಹಾಸನದಲ್ಲಿ ಉಪಾಹಾರ

ಧರ್ಮ ರಕ್ಷಣೆ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಅವರ ಕುಟುಂಬಕ್ಕೆ ನೈತಿಕ ಬೆಂಬಲ ಸೂಚಿಸಲು ಈ ಯಾತ್ರೆ ಆಯೋಜಿಸಲಾಗಿದೆ ಎಂದು ನಿಖಿಲ್ ಸ್ಪಷ್ಟಪಡಿಸಿದರು.


"ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಪಿತೂರಿ ಮತ್ತು ಅಪಪ್ರಚಾರದ ಹಿಂದೆ ವಿದೇಶಿ ಫಂಡಿಂಗ್‌ನ ಶಂಕೆಯಿದೆ ಎಂದು ಆರೋಪಿಸಿರುವ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.

ಮಂಡ್ಯದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳದ ಘನತೆಗೆ ಧಕ್ಕೆ ತರುವ ಷಡ್ಯಂತ್ರವನ್ನು ವಿರೋಧಿಸಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಸೂಚನೆಯಂತೆ ಆಗಸ್ಟ್ 31ರಂದು (ಭಾನುವಾರ) ಜೆಡಿಎಸ್ ವತಿಯಿಂದ 'ಧರ್ಮಸ್ಥಳ ಸತ್ಯಯಾತ್ರೆ' ಹಮ್ಮಿಕೊಳ್ಳಲಾಗಿದೆ ಎಂದು ಹೇಳಿ ವಿವರಣೆ ನೀಡಿದರು. ಈ ವೇಳೆ ಅವರು ರಾಜ್ಯ ಸರ್ಕಾರದ ಎಸ್‌ಐಟಿ ತನಿಖೆಯ ಮೇಲೆ ಜನರಿಗೆ ನಂಬಿಕೆಯಿಲ್ಲ, ಆದ್ದರಿಂದ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕು ಎಂದು ಆಗ್ರಹಿಸಿದರು.

ಎಸ್‌ಐಟಿ ಬದಲು ಎನ್‌ಐಎ ತನಿಖೆಯಾಗಲಿ

"ಎಸ್‌ಐಟಿ ಸಮರ್ಥವಾಗಿ ತನಿಖೆ ನಡೆಸಿದ್ದರೆ ನಾವು ಸ್ವಾಗತಿಸುತ್ತಿದ್ದೆವು, ಆದರೆ ರಾಜ್ಯದ ಜನರಿಗೆ ಎಸ್‌ಐಟಿ ತನಿಖೆಯ ಮೇಲೆ ಯಾವುದೇ ನಿರೀಕ್ಷೆಗಳಿಲ್ಲ. ಈ ಷಡ್ಯಂತ್ರದ ಸತ್ಯಾಸತ್ಯತೆ ಹೊರಬರಲು ಎನ್‌ಐಎ ತನಿಖೆಯೊಂದೇ ಮಾರ್ಗ" ಎಂದು ನಿಖಿಲ್ ಕುಮಾರಸ್ವಾಮಿ ಪ್ರತಿಪಾದಿಸಿದರು.

"800 ವರ್ಷಗಳ ಇತಿಹಾಸವಿರುವ ಪವಿತ್ರ ಕ್ಷೇತ್ರದ ವಿರುದ್ಧ ಪಿತೂರಿ ನಡೆಸಲಾಗಿದೆ. ಚಿನ್ನಯ್ಯ ಎಂಬ ವ್ಯಕ್ತಿ ಒಂದು ಬುರುಡೆ ತಂದು ಧರ್ಮಸ್ಥಳದಲ್ಲಿ ಸಾಮೂಹಿಕ ಹತ್ಯೆ ನಡೆದಿದೆ ಎಂದು ಬಿಂಬಿಸಿದ ತಕ್ಷಣ, ಸರ್ಕಾರ ಯಾವ ಆಧಾರದಲ್ಲಿ ಎಸ್‌ಐಟಿ ರಚನೆ ಮಾಡಿತು? ಮೊದಲು ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿ ಪಡೆದು ವಿಷಯದ ಗಂಭೀರತೆಯನ್ನು ಅರಿಯಬೇಕಿತ್ತು. ಈ ಪ್ರಶ್ನೆ ಇಂದು ಲಕ್ಷಾಂತರ ಭಕ್ತರಲ್ಲಿ ಮೂಡಿದೆ" ಎಂದು ಅವರು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದರು.

ಧರ್ಮಸ್ಥಳ ಸತ್ಯ ಯಾತ್ರೆಯ ಉದ್ದೇಶ ಮತ್ತು ವಿವರ

ಈ ಯಾತ್ರೆಯು ಯಾವುದೇ ರಾಜಕೀಯ ಉದ್ದೇಶದಿಂದ ಕೂಡಿಲ್ಲ, ಬದಲಾಗಿ ಧರ್ಮ ರಕ್ಷಣೆ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಅವರ ಕುಟುಂಬಕ್ಕೆ ನೈತಿಕ ಬೆಂಬಲ ಸೂಚಿಸಲು ಆಯೋಜಿಸಲಾಗಿದೆ ಎಂದು ನಿಖಿಲ್ ಸ್ಪಷ್ಟಪಡಿಸಿದರು.

ಹಾಸನದಲ್ಲಿ ಉಪಾಹಾರ

ಯಾತ್ರೆಗೆ ಹಾಸನವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಭಕ್ತರು ಹಾಸನದಲ್ಲಿ ಸೇರಿ, ಉಪಾಹಾರದ ನಂತರ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಬಳಿಕ ನೇತ್ರಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಅಲ್ಲಿಂದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ನಡೆಯಲಿದೆ.

ಜೆಡಿಎಸ್ ಲೋಕಸಭಾ ಸದಸ್ಯರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಯಕರ್ತರು ಹಾಗೂ ಭಕ್ತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಡಿ.ಸಿ. ತಮ್ಮಣ್ಣ, ಮಾಜಿ ಶಾಸಕ ಅನ್ನದಾನಿ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಮನ್ ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್ ಸೇರಿದಂತೆ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Read More
Next Story