
ಧರ್ಮಸ್ಥಳ ಪ್ರಕರಣ | ತನಿಖೆ ಮುಗಿದಿಲ್ಲ, ಈಗಷ್ಟೇ ಆರಂಭ; ಕುತೂಹಲ ಮೂಡಿಸಿದ ಎಸ್ಐಟಿ ಅಧಿಕಾರಿಗಳ ಹೇಳಿಕೆ
ಧರ್ಮಸ್ಥಳದ ಪ್ರಕರಣದ ತನಿಖೆ ಇನ್ನೂ ಮುಗಿದಿಲ್ಲ. ಈಗ ಕೇವಲ ಶೇ 25 ರಷ್ಟು ಮುಗಿದಿದೆ ಅಷ್ಟೇ. ಇನ್ನೂ ಸಾಕಷ್ಟು ತನಿಖೆ ಬಾಕಿ ಇದೆ. ಅವಸರ ಮಾಡಬೇಡಿ. ನಮ್ಮೊಂದಿಗೆ ಸಹಕರಿಸಿ " ಎಂಬ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಕುರಿತು ಸಾಕ್ಷಿ ದೂರುದಾರ ಚಿನ್ನಯ್ಯ ಬಂಧನದ ಬಳಿಕ ಎಲ್ಲವೂ ಮುಗಿಯಿತು ಎಂದುಕೊಂಡಿದ್ದ ಹಲವರಿಗೆ ಎಸ್ಐಟಿ ಅಧಿಕಾರಿಗಳ ಹೇಳಿಕೆ ತೀವ್ರ ಕುತೂಹಲ ಕೆರಳಿಸಿದೆ.
ಧರ್ಮಸ್ಥಳದ ಪ್ರಕರಣದ ತನಿಖೆ ಇನ್ನೂ ಮುಗಿದಿಲ್ಲ. ಈಗ ಕೇವಲ ಶೇ 25 ರಷ್ಟು ಮುಗಿದಿದೆ ಅಷ್ಟೇ. ಇನ್ನೂ ಸಾಕಷ್ಟು ತನಿಖೆ ಬಾಕಿ ಇದೆ. ಅವಸರ ಮಾಡಬೇಡಿ. ನಮ್ಮೊಂದಿಗೆ ಸಹಕರಿಸಿ " ಎಂಬ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸಂದೇಶದೊಂದಿಗೆ ಎಸ್ಐಟಿ ವಿಚಾರಣೆ ಇನ್ನಷ್ಟು ದಿನ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.
ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರ ಮತ್ತು ಎಸ್ಐಟಿ ತನಿಖೆ ಬಹುತೇಕ ತದ್ವಿರುದ್ಧವಾಗಿ ಬಿಂಬಿತವಾಗಿದೆ. ಆದರೆ, ಎಸ್ಐಟಿ ಅಧಿಕಾರಿಗಳು ಈ ಅಪಪ್ರಚಾರ ಮತ್ತು ಶವ ಹೂತಿಟ್ಟ ಆರೋಪದ ಸತ್ಯಾಸತ್ಯತೆ ತಿಳಿಯಲು ಪ್ರಯತ್ನ ಮುಂದುವರೆಸಿದೆ ಎನ್ನಲಾಗಿದೆ.
ಯೂಟ್ಯೂಬರ್ ಸಮೀರ್ ವಿಚಾರಣೆ ಜೊತೆಗೆ ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣವರ್ ಮೊದಲಾದವರ ವಿರುದ್ಧ ತನಿಖೆ ನಡೆಯಲಿದೆ ಎಂಬ ವಿವರ ಲಭ್ಯವಾಗಿದೆ. ಇನ್ನು ಸಾಕ್ಷಿ ದೂರುದಾರ ʼವಿʼ ಹೆಸರಿನ ವ್ಯಕ್ತಿ ತನ್ನ ತಪ್ಪೊಪ್ಪಿಗೆಯಲ್ಲಿ ಹಲವು ಮಂದಿಯ ಹೆಸರು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಪೊಲೀಸರಿಗೆ ನಿರಾಸೆ
ಎಸ್ಐಟಿ ತಂಡದೊಂದಿಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರು ಇನ್ನಷ್ಟು ದಿನ ಧರ್ಮಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಹೆಚ್ಚಲಿದೆ.
ಸಾಕ್ಷಿ ದೂರುದಾರ ʼವಿʼ ಹೆಸರಿನ ವ್ಯಕ್ತಿಯ ಬಂಧನದಿಂದ ಪ್ರಕರಣ ತಾರ್ತಿಕ ಅಂತ್ಯ ಕಂಡಿತು. ಇನ್ನೇನು ಠಾಣೆಗಳಿಗೆ ತೆರಳಿ ಕಾರ್ಯ ನಿರ್ವಹಿಸಬಹುದು ಎಂದುಕೊಂಡಿದ್ದ ಪೊಲೀಸರಿಗೆ ನಿರಾಸೆ ಉಂಟಾಗಿದೆ.
OOD ಆಧಾರದ ಮೇಲೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು SIT ಎರವಲು ಪಡೆದಿತ್ತು. ಹಲವು ಮಂದಿ ಲಾಡ್ಜ್ ಮತ್ತು ಸರ್ಕಾರಿ ವಸತಿ ಗೃಹಗಳಲ್ಲಿ ಉಳಿದುಕೊಂಡಿದ್ದರೆ, ಇನ್ನು ಕೆಲವರು ದಿನನಿತ್ಯ ಮನೆಯಿಂದಲೇ ಪ್ರಯಾಣಿಸುತ್ತಿದ್ದರು.
ʼವಿʼ ಹೆಸರಿನ ವ್ಯಕ್ತಿಯ ಬಂಧನದ ನಂತರ ತಮಗೆ ಬಿಡುಗಡೆ ಸಿಗಬಹುದು ಎಂದುಕೊಂಡಿದ್ದವರಿಗೆ ಸ್ವತಃ ಎಸ್ಐಟಿ ಅಧಿಕಾರಿಗಳೇ ನೀಡಿದ ಉತ್ತರ ನಿರಾಸೆ ತಂದೊಡ್ಡಿದೆ.
ಇಂದೂ ಕೂಡ ಯೂಟ್ಯೂಬರ್ ಸಮೀರ್ ವಿಚಾರಣೆ
ನಿರೀಕ್ಷಣಾ ಜಾಮೀನಿನ ಮೂಲಕ ಬಂಧನ ಭೀತಿಯಿಂದ ತಪ್ಪಿಸಿಕೊಂಡಿದ್ದರೂ ಇಂದು ಬೆಳ್ತಂಗಡಿ ಠಾಣೆಗೆ ಹಾಜರಾಗಬೇಕಾಗಿರುವ ಯೂಟ್ಯೂಬರ್ ಸಮೀರ್ ಎಂ.ಡಿ.ಯ ಮೊಬೈಲ್ ಫೋನ್, ಕಂಪ್ಯೂಟರ್ ಸೇರಿದಂತೆ ವಿವಿಧ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಬೆಳ್ತಂಗಡಿ ಠಾಣೆಯಲ್ಲಿ ಭಾನುವಾರ ವಿಚಾರಣೆ ಎದುರಿಸಿರುವ ಸಮೀರ್, ಪೊಲೀಸ್ ನೀಡಿರುವ ಸೂಚನೆಯಂತೆ ಮತ್ತೆ ವಿಚಾರಣೆಗೆ ಹಾಜರಾಗಬೇಕಿದೆ. ಬೆಳ್ತಂಗಡಿ ಪೊಲೀಸರೊಂದಿಗೆ SIT ಕೂ ಸಂಪರ್ಕದಲ್ಲಿದ್ದು,ಯಾವ ತಂಡದಿಂದ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ದೂತ ಚಾನೆಲ್ ಮೂಲಕ ಸೌಜನ್ಯ ಕೊಲೆ ಮತ್ತು ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಪ್ರಕರಣಗಳನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ವೈಭವೀಕರಿಸಿ ಪ್ರಸಾರ ಮಾಡಿರುವ ಆರೋಪ ಹೊತ್ತಿರುವ ಸಮೀರ್ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಆತನಿಗೆ ಬೇರೆ ವ್ಯಕ್ತಿಗಳು ಹಣಕಾಸು ನೆರವು ನೀಡಿರುವ ಕುರಿತಂತೆಯೂ ವಿಚಾರಣೆ ನಡೆಯಲಿದೆ.
ಬೆಳ್ತಂಗಡಿ ಇನ್ ಸ್ಪೆಕ್ಟರ್ ನಾಗೇಶ್ ಕದ್ರಿ ಅವರು 'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡಿ ವಿಚಾರಣೆ ನಡೆಯುತ್ತಿದೆ ಎಂದಷ್ಟೇ ತಿಳಿಸಿದ್ದಾರೆ. ಬಂಧನ ಸಾಧ್ಯತೆಯ ಬಗ್ಗೆ ಕೇಳಿದಾಗ ಸದ್ಯ ಏನೂ ಹೇಳಲು ಬರುವುದಿಲ್ಲ, ಆರೋಪಿ ನಿರೀಕ್ಷಣಾ ಜಾಮೀನು ಪಡೆದಿದ್ದಾನೆ ಎಂದು ತಿಳಿಸಿದ್ದಾರೆ.