ಧರ್ಮಸ್ಥಳ ಪ್ರಕರಣ: ಗುರುತಿಸಿದ ಸ್ಥಳಗಳಲ್ಲಿ ಭೂಮಿ ಅಗೆಯಲು ಮನವಿ, ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
x

ಧರ್ಮಸ್ಥಳ ಪ್ರಕರಣ: ಗುರುತಿಸಿದ ಸ್ಥಳಗಳಲ್ಲಿ ಭೂಮಿ ಅಗೆಯಲು ಮನವಿ, ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಧರ್ಮಸ್ಥಳ ಗ್ರಾಮದ ನಿವಾಸಿಗಳಾದ ಪಾಂಡುರಂಗ ಗೌಡ ಮತ್ತು ತುಕಾರಾಂ ಗೌಡ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.


ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಮೃತದೇಹ ದಪನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರ್ಜಿದಾರರು ಗುರುತಿಸಿರುವ ಸ್ಥಳಗಳಲ್ಲಿ ತಕ್ಷಣವೇ ಭೂಮಿ ಅಗೆದು ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ (SIT) ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ಕರ್ನಾಟಕ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿದೆ. ಈ ಸಂಬಂಧ ಮಾಹಿತಿ ಒದಗಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ ಎಂಬುದಾಗಿ ಬಾರ್​ ಆ್ಯಂಡ್​ ಬೆಂಚ್​ ವೆಬ್​ಸೈಟ್​ ವರದಿ ಮಾಡಿದೆ.

ಧರ್ಮಸ್ಥಳ ಗ್ರಾಮದ ನಿವಾಸಿಗಳಾದ ಪಾಂಡುರಂಗ ಗೌಡ ಮತ್ತು ತುಕಾರಾಂ ಗೌಡ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ದೀಪಕ್ ಖೋಸ್ಲಾ, "ಆಗಸ್ಟ್ 29 ರಂದು ಅರ್ಜಿದಾರರು ಎಸ್‌ಐಟಿಗೆ ಮನವಿ ಸಲ್ಲಿಸಿ, ಧರ್ಮಸ್ಥಳದಲ್ಲಿ ನೂರಾರು ಅನಾಮಧೇಯ ಶವಗಳನ್ನು ಅಕ್ರಮವಾಗಿ ಹೂಳಲಾಗಿರುವ ಸ್ಥಳಗಳನ್ನು ಗುರುತಿಸಿದ್ದಾರೆ. ಈ ಸ್ಥಳಗಳಲ್ಲಿ ತಕ್ಷಣವೇ ಭೂಮಿ ಅಗೆತವನ್ನು ಪ್ರಾರಂಭಿಸಲು ಎಸ್‌ಐಟಿಗೆ ನಿರ್ದೇಶನ ನೀಡಬೇಕು" ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ಅರ್ಜಿದಾರರ ಪರ ವಕಾಲತ್ತನ್ನೇ ಸಲ್ಲಿಸಿಲ್ಲ ಎಂದು ಪೀಠದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರಿಗೆ ಕಚೇರಿಯ ಆಕ್ಷೇಪಣೆಗಳನ್ನು ಸರಿಪಡಿಸಿ, ಪ್ರಾಸಿಕ್ಯೂಷನ್‌ಗೆ ಅರ್ಜಿಯ ಪ್ರತಿಯನ್ನು ನೀಡುವಂತೆ ಆದೇಶಿಸಿತು. ಅಲ್ಲದೆ, ಅರ್ಜಿದಾರರ ಮನವಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಒದಗಿಸುವಂತೆ ಸರ್ಕಾರಿ ಅಭಿಯೋಜಕರಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್ 18ಕ್ಕೆ ಮುಂದೂಡಿತು.

ಅರ್ಜಿದಾರರು ತಮ್ಮ ಮನವಿಯಲ್ಲಿ, "ಎಸ್‌ಐಟಿಗೆ ನೀಡಿದ ಮನವಿಯನ್ನು ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು. ನಾವು ತೋರಿಸುವ ಸ್ಥಳಗಳಲ್ಲಿ ಭೂಮಿ ಅಗೆಯಲು ಅನುಕೂಲವಾಗುವಂತೆ ನ್ಯಾಯಾಂಗ ರಿಜಿಸ್ಟ್ರಾರ್ ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಕೋರ್ಟ್ ಕಮಿಷನರ್ ನೇಮಿಸಬೇಕು ಮತ್ತು ವಾಸ್ತವಿಕ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಬೇಕು" ಎಂದು ಕೋರಿದ್ದಾರೆ.

Read More
Next Story