
ಧರ್ಮಸ್ಥಳ ಪ್ರಕರಣ |1ನೇ ಸಮಾಧಿ ಸ್ಥಳದಲ್ಲಿ ದೊರೆತ ಎಟಿಎಂ, ಪಾನ್ ಕಾರ್ಡ್ ವಾರಸುದಾರರು ದಾಬಸ್‌ಪೇಟೆಯಲ್ಲಿ ಪತ್ತೆ
ಎರಡು ವರ್ಷಗಳ ಹಿಂದೆ ಸುರೇಶ್ ಮನೆ ಬಿಟ್ಟು ಧರ್ಮಸ್ಥಳಕ್ಕೆ ತೆರಳಿದ್ದ ಎನ್ನಲಾಗಿದೆ. ಮಾರ್ಚ್ ತಿಂಗಳಲ್ಲಿ ಜಾಂಡಿಸ್ ವಿಪರೀತವಾಗಿ ಸ್ವಂತ ಗ್ರಾಮದಲ್ಲೇ ಸುರೇಶ್ ಮೃತಪಟ್ಟಿದ್ದರು.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ನಡೆದ ಉತ್ಖನನದ ವೇಳೆ ಮೊದಲನೇ ಸಮಾಧಿ ಸ್ಥಳದಲ್ಲಿ ದೊರೆತ ಎಟಿಎಂ ಡೆಬಿಟ್ ಕಾರ್ಡ್, ಪ್ಯಾನ್ ಕಾರ್ಡ್ ವಾರಸುದಾರರ ವಿಳಾಸವನ್ನು ಎಸ್ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಪಟ್ಟಣದ ನಿವಾಸಿ ಸುರೇಶ್ ಎಂಬುವರಿಗೆ ಸೇರಿದ್ದ ದಾಖಲೆಗಳು ಇವಾಗಿವೆ ಎಂದು ತಿಳಿದು ಬಂದಿದೆ.
ಗಂಗಮರಿಯಪ್ಪ ಹಾಗೂ ಸಿದ್ದಲಕ್ಷ್ಮಮ್ಮ ಎಂಬುವರ ಪುತ್ರ ಸುರೇಶ್ ಅವರ ಪರ್ಸ್‌ನಲ್ಲಿ ಎರಡು ಪ್ಯಾನ್ ಕಾರ್ಡ್‌ಗಳು ಪತ್ತೆಯಾಗಿತ್ತು. ಒಂದು ಸುರೇಶ್, ಮತ್ತೊಂದು ಅವರ ತಾಯಿ ಸಿದ್ದಲಕ್ಷ್ಮಮ್ಮ ಅವರ ಪ್ಯಾನ್ ಕಾರ್ಡ್ ಎಂಬುದು ಬಹಿರಂಗವಾಗಿದೆ.
ಮೃತ ಸುರೇಶ್ ಅವರ ದಾಬಸ್‌ಪೇಟೆ ಮನೆ
ಪಾನ್ ಕಾರ್ಡ್ ಧರ್ಮಸ್ಥಳದಲ್ಲಿ ಸಿಕ್ಕಿದ್ದು ಹೇಗೆ?
ಎರಡು ವರ್ಷಗಳ ಹಿಂದೆ ಸುರೇಶ್ ಮನೆ ಬಿಟ್ಟು ಧರ್ಮಸ್ಥಳಕ್ಕೆ ತೆರಳಿದ್ದ ಎನ್ನಲಾಗಿದೆ. ಮಾರ್ಚ್ ತಿಂಗಳಲ್ಲಿ ಜಾಂಡಿಸ್ ವಿಪರೀತವಾಗಿ ಸ್ವಂತ ಗ್ರಾಮದಲ್ಲೇ ಸುರೇಶ್ ಮೃತಪಟ್ಟಿದ್ದರು.
ಸುರೇಶ್ ಕುಡಿತದ ಚಟಕ್ಕೆ ಬಿದ್ದು, ಜಾಂಡೀಸ್ ಗೆ ತುತ್ತಾಗಿದ್ದ. ಎರಡು ವರ್ಷ ಕುಟುಂಬದಿಂದ ದೂರವಿದ್ದ ಕಾರಣ ಮತ್ತಷ್ಟು ಕುಡಿತಕ್ಕೆ ದಾಸನಾಗಿದ್ದ. ಹೀಗಾಗಿ ರೋಗ ಅಂತಿಮ ಹಂತಕ್ಕೆ ತಲುಪಿದ್ದ ಕಾರಣ ಮನೆಯವರು ಮತ್ತೆ ವಾಪಸ್ ಮನೆಗೆ ಕರೆಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ , ಚಿಕಿತ್ಸೆ ಫಲಿಸದೇ ಮಾರ್ಚ್ ನಲ್ಲಿ ಸಾವನಪ್ಪಿದ್ದರು.
ಸುರೇಶ್ ಮೋಜು ಮಸ್ತಿ ಹೆಚ್ಚು
ಸುರೇಶ್ ಮನೆಯಿಂದ ದೂರವಿದ್ದ ಹಿನ್ನಲೆಯಲ್ಲಿ ಅತಿ ಹೆಚ್ಚು ಸ್ನೇಹಿತರ ಜೊತೆಯಲ್ಲಿ ಕಾಲ ಕಳೆಯುತ್ತಿದ್ದ. ಆಗಾಗ ಸ್ನೇಹಿತರ ಜೊತೆಯಲ್ಲಿ ಟ್ರಿಪ್ ಎಂದು ದೂರದ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದ. ಇದೇ ರೀತಿ ಧರ್ಮಸ್ಥಳಕ್ಕೂ ಕೂಡ ಹೋಗಿದ್ದ ಎಂಬುದು ಕುಟುಂಬದವರ ಮಾತು.
ನನ್ನ ಡೆಬಿಟ್ ಕಾರ್ಡ್ ಅನ್ನು ಮಗನೇ ಬಳಕೆ ಮಾಡುತ್ತಿದ್ದ. ನನಗೆ ಎಟಿಎಂ ಬಳಸಲು ಬರುತ್ತಿರಲಿಲ್ಲ. ಅವನೇ ಹಣ ತೆಗೆದುಕೊಳ್ಳುತ್ತಿದ್ದ. ಮನೆಯಲ್ಲಿ ಒಂದು ವರ್ಷದ ಹಿಂದೆ ಕಾರ್ಡ್ ಬಗ್ಗೆ ಕೇಳಿದಾಗ ಕಾರ್ಡ್ ಕಳೆದು ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದ. ಆಗ ಬ್ಯಾಂಕ್ ಗೆ ದೂರು ನೀಡಿ ಹಳೆಯ ಕಾರ್ಡ್ ಅನ್ನು ಬ್ಲಾಕ್ ಮಾಡಿಸಿ ಹೊಸ ಕಾರ್ಡ್ ತೆಗೆದುಕೊಂಡೆವು. ಹಾಗಾಗಿ ಪೋಲೀಸರಿಗೆ ಯಾವುದೇ ರೀತಿಯ ದೂರು ಕೂಡ ನೀಡಿರಲಿಲ್ಲ ಎಂದು ಸುರೇಶ್ ಅವರ ತಾಯಿ ಸಿದ್ದಲಕ್ಷ್ಮಮ್ಮ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ಮೃತ ಸುರೇಶ್ ಸಮಾಧಿ
ತಾಯಿಯ ತವರೂರಿನಲ್ಲಿ ಅಂತ್ಯ ಸಂಸ್ಕಾರ
ಸುರೇಶ್ ಮೃತಪಟ್ಟ ಹಿನ್ನಲೆ ಕುಟುಂಬಸ್ಥರ ತೀರ್ಮಾನದಂತೆ ತಾಯಿ ಸಿದ್ದಲಕ್ಷ್ಮಮ್ಮ ಅವರ ತವರು ಮನೆ ಲಕ್ಕೂರು ಬಳಿಯ ಹೊಲದಲ್ಲೇ ಸುರೇಶ್ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಮೃತ ಸುರೇಶ್ ಅವರ ಸೋದರಿ ರೂಪಾ 'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡಿ, ಸಾಕಷ್ಟು ಬಾರಿ ಧರ್ಮಸ್ಥಳಕ್ಕೆ ಸುರೇಶ್ ಹೋಗುತ್ತಿದ್ದ. ಎರಡು ವರ್ಷದ ಹಿಂದೆ ಧರ್ಮಸ್ಥಳದಲ್ಲಿ ಕಾರ್ಡ್ ಗಳು ಕಳೆದುಕೊಂಡಿರಬೇಕು. ನಮ್ಮ ತಾಯಿಯ ಎಟಿಎಂ ಕಾರ್ಡ್ ಕಳೆದುಹೋಗಿದೆ ಎಂದು ಹೇಳಿದ್ದ. ಆಗ ನಮ್ಮ ತಾಯಿ ಹೊಸ ಎಟಿಎಂ ಕಾರ್ಡ್ ತೆಗೆದುಕೊಂಡಿದ್ದರು, ಸುರೇಶ್ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ, 5 ತಿಂಗಳ ಹಿಂದೆ ಊರಿನಲ್ಲೇ ಮೃತಪಟ್ಟಿದ್ದ. ಧರ್ಮಸ್ಥಳ ವಿಚಾರಕ್ಕೂ , ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.
ಪೊಲೀಸರಿಂದ ಮಾಹಿತಿ ಸಂಗ್ರಹ
ಧರ್ಮಸ್ಥಳ ಸಮಾಧಿ ಉತ್ಖನನದಲ್ಲಿ ಎಟಿಎಂ ಹಾಗೂ ಪಾನ್ ಕಾರ್ಡ್ ದೊರೆತ ಬೆನ್ನಲ್ಲೇ ಎಸ್ಐಟಿ ವಿಚಾರವಾಗಿ ಡಾಬಸ್ ಪೇಟೆ ಪೋಲೀಸರು ಮನೆಗೆ ಭೇಟಿ ನೀಡಿ ವಿಚಾರಣೆ ಮಾಡಿದರು. ಎಲ್ಲಾ ಮಾಹಿತಿಯನ್ನು ಪೋಲೀಸರಿಗೆ ನೀಡಿದ್ದೇವೆ. ಈಗ ಆ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಕುಟುಂಬಸ್ಥರು ಹೇಳಿದರು.