
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದ ದಕ್ಷಿಣ ಕನ್ನಡ ಎಸ್‌ಪಿ ಎಸ್.ಕೆ. ಅರುಣ್
ಧರ್ಮಸ್ಥಳ ಪ್ರಕರಣ: ಗೃಹ ಸಚಿವರ ಭೇಟಿಯಾದ ದಕ್ಷಿಣ ಕನ್ನಡ ಎಸ್‌ಪಿ; ಮಹತ್ವದ ಚರ್ಚೆ
ವಿಧಾನಸೌಧಕ್ಕೆ ಆಗಮಿಸಿದ ಎಸ್‌ಪಿ ಎಸ್.ಕೆ ಅರುಣ್, ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ವಿವರಣೆ ನೀಡಿದ್ದಾರೆ.
ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಧರ್ಮಸ್ಥಳದ ಪ್ರಕರಣದ ಕುರಿತು ಸೋಮವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸದನಕ್ಕೆ ಮಾಹಿತಿ ನೀಡಿದ ಬಳಿಕ, ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಕೆ. ಅರುಣ್ ಇಂದು ಗೃಹ ಸಚಿವರನ್ನು ಭೇಟಿ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಮಂಗಳವಾರ ಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿದ ಎಸ್‌ಪಿ ಎಸ್.ಕೆ ಅರುಣ್, ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ವಿವರಣೆ ನೀಡಿದ್ದಾರೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಚರ್ಚಿಸಲಾಗಿದೆ ಎನ್ನಲಾಗಿದೆ. ಈ ವೇಳೆ ಗೃಹ ಸಚಿವರೂ ಸಹ ಅಗತ್ಯ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಧರ್ಮಸ್ಥಳದ ವಿರುದ್ಧ ಯೂಟ್ಯೂಬರ್‌ಗಳು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಸೋಮವಾರ ಸದನದಲ್ಲಿ ಪ್ರತಿಪಕ್ಷಗಳು ಆರೋಪಿಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ಗೃಹ ಸಚಿವರು ಅಪಪ್ರಚಾರ ನಡೆಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸದನದಲ್ಲಿ ಭರವಸೆ ನೀಡಿದ್ದರು. ಇದೇ ವೇಳೆ ದಕ್ಷಿಣ ಕನ್ನಡ ಎಸ್‌ಪಿ ಗೃಹ ಸಚಿವರನ್ನು ಭೇಟಿ ಮಾಡಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ರಾಜಕೀಯ ತಿರುವು ಪಡೆದ ಧರ್ಮಸ್ಥಳ ಯಾತ್ರೆ
ಇತ್ತೀಚೆಗಷ್ಟೆ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರು 400 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಕ್ಷೇತ್ರದ ಪರವಾಗಿ ನಾವಿದ್ದೇವೆ ಎಂದು ತಿಳಿಸಿದ್ದರು. ಅಧಿವೇಶನ ಮುಗಿದ ಬಳಿಕ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬೆಂಗಳೂರು ಶಾಸಕರು 1,000 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಲಿದ್ದೇವೆ ಎಂದು ಬಿಜೆಪಿ ನಾಯಕರು ತಿಳಿಸಿದ್ದರು. ಬಿಜೆಪಿ ಯಾತ್ರೆಗೆ ಸೆಡ್ಡು ಹೊಡೆಯಲು 250 ಕಾರುಗಳಲ್ಲಿ ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಪಡೆದು ಬರುತ್ತೇವೆ ಎಂದು ನೆಲಮಂಗಲ ವಿಧಾನಸಭಾ ಕಾಂಗ್ರೆಸ್‌ನ ಶಾಸಕ ಎನ್. ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.