
ಸಾಂದರ್ಭಿಕ ಚಿತ್ರ
ಧರ್ಮಸ್ಥಳ ಪ್ರಕರಣ |11ನೇ ಸಮಾಧಿ ಸ್ಥಳದ ಬದಲು ಬೇರೆ ಜಾಗ ತೋರಿಸಿದ ಸಾಕ್ಷಿದಾರ
ಗುಡ್ಡದ ಕೆಳಗಿನಿಂದ ಮೇಲಕ್ಕೆ ಕರೆದೊಯ್ದು, ಸ್ಥಳವನ್ನು ಗುರುತಿಸುವ ಬದಲು, ಗುಡ್ಡದ ಮೇಲಿರುವ ಒಂದು ನಿರ್ದಿಷ್ಟ ಪ್ರದೇಶವನ್ನು ತೋರಿಸಿದ್ದಾನೆ. ಆದರೆ ಅಗೆಯುವಿಕೆಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದಿರುವುದು ಅಧಿಕಾರಿಗಳಿಗೆ ಹಲವು ಅನುಮಾನ ಮೂಡಿಸಿದೆ.
ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಕಳೇಬರಗಳ ಶೋಧ ಕಾರ್ಯ ತೀವ್ರಗೊಳಿಸಿದ್ದಾರ. ಪ್ರಕರಣದ ಸಾಕ್ಷಿ ದೂರುದಾರ ಗುರುತು ಹಾಕಿದ್ದ 11ನೇ ಸ್ಥಳದ ಬದಲು ಬೇರೆ ಜಾಗ ತೋರಿಸಿರುವುದು ಅಧಿಕಾರಿಗಳಲ್ಲಿ ಗೊಂದಲ ಮೂಡಿಸಿದೆ.
ಸಾಕ್ಷಿದಾರ ಗುರುತಿಸಿದ್ದ 11ನೇ ಸಮಾಧಿ ಸ್ಥಳ ಬಿಟ್ಟು ಇನ್ನೂ ಸ್ವಲ್ಪ ಮೇಲ್ಭಾಗಕ್ಕೆ ಅಧಿಕಾರಿಗಳನ್ನು ಕರೆದೊಯ್ದರು. ಗುಡ್ಡದ ಮೇಲಿರುವ ಒಂದು ನಿರ್ದಿಷ್ಟ ಪ್ರದೇಶವನ್ನು ತೋರಿಸಿ, ಇಲ್ಲಿ ಶೋಧ ನಡೆಸುವಂತೆ ಕೋರಿದ್ದಾನೆ. 11ನೇ ಜಾಗದಲ್ಲಿ ಅಗೆಯಬೇಕಾ, ಅಥವಾ ಹೊಸ ಜಾಗದಲ್ಲಿ ಅಗೆಯಬೇಕಾ ಎಂಬ ಗೊಂದಲ ಅಧಿಕಾರಿಗಳಲ್ಲಿ ಉಂಟಾಗಿದೆ. ಅಲ್ಲದೇ ಅನುಮಾನಗಳಿಗೂ ಕಾರಣವಾಗಿದೆ.
ಎಸ್‌ಐಟಿಯು ಉತ್ಖನನ ಮುಂದುವರಿಸಲು ತಯಾರಿ ನಡೆಸಿದೆ. ಆದರೆ, ದೂರದಾರನ ಬದಲಾದ ವರಸೆ, ಕಾರ್ಯಾಚರಣೆಯ ವಿಶ್ವಾಸಾರ್ಹತೆ ಕುರಿತಂತೆ ಅನುಮಾನ ಮೂಡಿಸಿದೆ. ಈಗಾಗಲೇ 13 ಸ್ಥಳಗಳ ಪೈಕಿ ಒಂದರಲ್ಲಿ ಮಾತ್ರ ಮೂಳೆಗಳ ಕುರುಹು ಸಿಕ್ಕಿರುವುದು, ಸಾಕ್ಷಿದಾರನ ಆರೋಪಗಳ ಸತ್ಯಾಸತ್ಯತೆ ಪರೀಕ್ಷಿಸುವಂತೆ ಮಾಡಿದೆ.
ಎಸ್‌ಐಟಿ ಅಧಿಕಾರಿಗಳ ತಂಡವು ಶಸ್ತ್ರಸಜ್ಜಿತ ಸಿಬ್ಬಂದಿಯೊಂದಿಗೆ ಭದ್ರತೆ ಒದಗಿಸಿ, ವಿಡಿಯೋ ರೆಕಾರ್ಡಿಂಗ್ ಮೂಲಕ ತನಿಖೆ ನಡೆಸುತ್ತಿದೆ.
ಹೊಸ ಸಾಕ್ಷಿದಾರರಿಂದ ಹೇಳಿಕೆ
ಅಪ್ರಾಪ್ತ ಬಾಲಕಿಯೊಬ್ಬಳ ಮೃತದೇಹ ಹೂತು ಹಾಕಿರುವ ಸ್ಥಳ ತನಗೆ ಗೊತ್ತಿರುವುದಾಗಿ ವ್ಯಕ್ತಿಯೊಬ್ಬರು ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಬಂದು ದೂರು ನೀಡಿದ ಬೆನ್ನಲ್ಲೇ ಇಂದು ಜಯಂತ್ ಎಂಬುವರಿಗೆ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಈ ಮಧ್ಯೆ, ಧರ್ಮಸ್ಥಳದ ಸ್ಥಳೀಯ ಆಟೋ ಚಾಲಕರೊಬ್ಬರು ಸಹ ಸಾಕ್ಷ್ಯ ನೀಡಲು ಸಜ್ಜಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಧರ್ಮಸ್ಥಳದಲ್ಲಿ ಅಪ್ರಾಪ್ತೆ ಬಾಲಕಿಯ ಮೃತದೇಹವನ್ನು ಹೂತಿರುವುದಕ್ಕೆ ತಾನು ಪ್ರತ್ಯಕ್ಷದರ್ಶಿ ಎಂದು ಜಯಂತ್ ಹೇಳಿದ್ದರು. “15 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯೊಬ್ಬಳ ಮೃತದೇಹವನ್ನು ಹೂತು ಹಾಕಿರುವುದನ್ನು ತಾನು ನೋಡಿದ್ದೇನೆ, ಅಕ್ರಮವಾಗಿ ದಫನ ಮಾಡಲಾಗಿದೆ. ಎಸ್‌ಐಟಿ ತಂಡದ ಮೇಲಿನ ವಿಶ್ವಾಸದ ಮೇರೆಗೆ ಈಗ ಅದರ ಬಗ್ಗೆ ಬಹಿರಂಗವಾಗಿ ಮಾತನಾಡಲು ಧೈರ್ಯ ಬಂದಿದೆ, ತನಿಖಾ ತಂಡಕ್ಕೆ ಆ ಸ್ಥಳವನ್ನು ನಾನು ತೋರಿಸಿಕೊಡುತ್ತೇನೆ” ಎಂದು ಅವರು ಹೇಳಿದ್ದರು.