ಧರ್ಮಸ್ಥಳದ ʼಬುರುಡೆʼ ಚಿನ್ನಯ್ಯನಿಗೆ ಕೊನೆಗೂ ಬಿಡುಗಡೆ; ಸಿಕ್ಕಿತು ಶ್ಯೂರಿಟಿ ಬಾಂಡ್‌
x

ಚಿನ್ನಯ್ಯ 

ಧರ್ಮಸ್ಥಳದ ʼಬುರುಡೆʼ ಚಿನ್ನಯ್ಯನಿಗೆ ಕೊನೆಗೂ ಬಿಡುಗಡೆ; ಸಿಕ್ಕಿತು ಶ್ಯೂರಿಟಿ ಬಾಂಡ್‌

ಕಳೆದ 22 ದಿನಗಳಿಂದ ಬಿಡುಗಡೆ ಮಾಡಿಸುವವರಿಗಾಗಿ ಕಾಯುತ್ತಿದ್ದ ಈತ ಇದೀಗ ಪತ್ನಿಯ ಪರಿಶ್ರಮದಿಂದ ಕೊನೆಗೂ ಬಿಡುಗಡೆಯಾಗಿ ಮಂಡ್ಯದಲ್ಲಿರುವ ತನ್ನ ಮನೆ ಸೇರಲಿದ್ದಾನೆ.


ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಬುರುಡೆಯೊಂದನ್ನು ತಂದು ಸಾಕ್ಷಿದಾರನಾಗಿ ನಂತರ ಜೈಲು ಸೇರಿದ್ದ ಸಿ.ಎನ್. ಚಿನ್ನಯ್ಯ ಕೊನೆಗೂ ಬಿಡುಗಡೆಯಾಗುತ್ತಿದ್ದಾನೆ!

ನ್ಯಾಯಾಲಯದಿಂದ ಜಾಮೀನು ಪಡೆದಿದ್ದರೂ, ಬಿಡುಗಡೆ ಭಾಗ್ಯವಿಲ್ಲದೇ ಶಿವಮೊಗ್ಗ ಜೈಲಿನಲ್ಲಿಯೇ ವಾಸವಿದ್ದು, ಕಳೆದ 22 ದಿನಗಳಿಂದ ಬಿಡುಗಡೆ ಮಾಡಿಸುವವರಿಗಾಗಿ ಕಾಯುತ್ತಿದ್ದ ಈತ ಇದೀಗ ಪತ್ನಿಯ ಪರಿಶ್ರಮದಿಂದ ಕೊನೆಗೂ ಬಿಡುಗಡೆಯಾಗಿ ಮಂಡ್ಯದಲ್ಲಿರುವ ತನ್ನ ಮನೆ ಸೇರಲಿದ್ದಾನೆ.

ಡಿ.17ರಂದು ಇಬ್ಬರು ಜಾಮೀನುದಾರರು ಮತ್ತು ಒಂದು ಲಕ್ಷ ರೂಪಾಯಿ ಬಾಂಡ್ ಜೊತೆಗೆ ಬೆಳ್ತಂಗಡಿ ಪ್ರಧಾನ ಹಿರಿಯ ನ್ಯಾಯಾಲಯಕ್ಕೆ ಬಂದಿದ್ದ ಚಿನ್ನಯ್ಯನ ಪತ್ನಿ ಮಲ್ಲಿಕಾ, ವಕೀಲರೋರ್ವರ ಸಹಾಯದಿಂದ ಕಾನೂನು ಪ್ರಕ್ರಿಯೆ ಪೂರೈಸಿದ್ದಾಳೆ. ಈ ಪ್ರಕ್ರಿಯೆ ಮಧ್ಯಾಹ್ನದ ಊಟದ ವಿರಾಮದ ವರೆಗೂ ಮುಂದುವರೆದಿತ್ತು.

ನವೆಂಬರ್ 26ರಂದು ಬೆಳ್ತಂಗಡಿ ನ್ಯಾಯಾಲಯದಿಂದ 12 ಷರತ್ತುಗಳೊಂದಿಗೆ ಜಾಮೀನು ಪಡೆದಿದ್ದ ʼಬುರುಡೆ ʼ ಖ್ಯಾತಿಯ ಮುಸುಕುಧಾರಿ ಚಿನ್ನಯ್ಯನಿಗೆ ಜಾಮೀನುದಾರರು ಮತ್ತು ಒಂದು ಲಕ್ಷ ರೂಪಾಯಿ ಶ್ಯೂರಿಟಿ ಬಾಂಡ್ ಹೊಂದಿಸುವುದು ಕಷ್ಟವಾಗಿತ್ತು. ಇದಕ್ಕಾಗಿ ಆತನ ಸಹೋದರಿ, ಪತ್ನಿ ಮತ್ತು ಸಂಬಂಧಿಕರು ಶಿವಮೊಗ್ಗ ಜೈಲಿಗೆ ಬಂದು ಚಿನ್ನಯ್ಯನನ್ನು ಭೇಟಿಯಾಗಿ ಹೋಗುತ್ತಿದ್ದರು. ಇದೀಗ ಪತ್ನಿ ತನ್ನ ಸಂಬಂಧಿಕರ ಮೂಲಕ ಬಾಂಡ್ ಹಣ ಹೊಂದಿಸಿದ್ದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ನ್ಯಾಯಾಲಯಕ್ಕೆ ಇಬ್ಬರು ಜಾಮೀನುದಾರರು ಸೇರಿದಂತೆ ಐದು ಮಂದಿ ಬಂದಿದ್ದರು. ಕಾನೂನು ಪ್ರಕ್ರಿಯೆ ಬಳಿಕ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದಾರೆ. ಬಹುತೇಕ ಗುರುವಾರ ಆತ ಜೈಲಿನಿಂದ ಬಿಡುಗಡೆಯಾಗಲಿದ್ದಾನೆ ಎನ್ನಲಾಗಿದೆ.

ಬುಧವಾರ ಸಂಜೆಯ ವೇಳೆಗೆ ನ್ಯಾಯಾಲಯದಿಂದ ಬಿಡುಗಡೆ ಆದೇಶ ಈ-ಮೇಲ್ ಮೂಲಕ ಶಿವಮೊಗ್ಗ ಜೈಲಿಗೆ ತಲುಪಲಿದೆ ಎಂದು ಮೂಲಗಳು ತಿಳಿಸಿವೆ. ಬಿಡುಗಡೆಯ ಬಳಿಕ ಚಿನ್ನಯ್ಯ ಮಂಡ್ಯದಲ್ಲಿ ವಾಸವಿರಲಿದ್ದಾನೆ ಎಂದು ವಕೀಲರು ತಿಳಿಸಿದ್ದಾರೆ.

ಧರ್ಮಸ್ಥಳ ಪ್ರಕರಣ

"ಧರ್ಮಸ್ಥಳ ಪ್ರಕರಣ"ದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದ, "ಮುಸುಕುಧಾರಿ" ಎಂದೇ ಪ್ರಖ್ಯಾತನಾಗಿದ್ದ ಸಿ.ಎನ್. ಚಿನ್ನಯ್ಯನ ಸ್ಥಿತಿ ಅತಂತ್ರವಾಗಿತ್ತು. ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದ್ದರೂ, ಬಿಡುಗಡೆಯ ಭಾಗ್ಯವಿಲ್ಲದೆ ಜೈಲಿನಲ್ಲಿಯೇ ಉಳಿಯುವಂತಾಗಿತ್ತು.

ಬಿಡುಗಡೆಗೆ ತಡೆ ಬಂದ ಬಳಿಕ ಜೈಲಿನಲ್ಲಿ ಮಂಕಾಗಿದ್ದ ಚಿನ್ನಯ್ಯ, ಸಹ ಕೈದಿಗಳೊಂದಿಗೆ ಹೆಚ್ಚು ಮಾತನಾಡದೆ ಮೌನಕ್ಕೆ ಶರಣಾಗಿದ್ದ ಎನ್ನಲಾಗಿದೆ. 'ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾನೆ' ಎಂದು ನೊಂದಿರುವ ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಅವರ ತಂಡವು, ಆತನಿಂದಾಗಿ ತಾವೂ ಆಪಾದನೆ ಎದುರಿಸಬೇಕಾಯಿತು ಎಂಬ ಕಾರಣಕ್ಕೆ ಆತನ ಬಿಡುಗಡೆಗೆ ಸಹಕರಿಸಿರಲಿಲ್ಲ. ಜಾಮೀನಿಗೆ ಬೇಕಾದ ನಗದು ಮತ್ತು ದಾಖಲೆ ಒದಗಿಸಲು ಆತನ ಕುಟುಂಬದ ಪ್ರಯತ್ನವೂ ವಿಳಂಬವಾಗಿದ್ದರಿಂದ ಚಿನ್ನಯ್ಯ ಶಿವಮೊಗ್ಗ ಜೈಲಿನ ʼಕಾವೇರಿ" ಬ್ಯಾರಕ್‌ನಲ್ಲಿ ತನ್ನ ʼವನವಾಸʼ ಮುಂದುವರಿಸುವಂತಾಗಿತ್ತು.

ಮೂಲಗಳ ಪ್ರಕಾರ, ಚಿನ್ನಯ್ಯನ ಸಹೋದರಿ ಮಂಡ್ಯದಲ್ಲಿರುವ ತಮ್ಮ ಜಮೀನಿನ ಮೇಲೆ ಸಾಲ ಮಾಡಿ ಅಥವಾ ಆಪ್ತರ ಮೂಲಕ ಹಣ ಹೊಂದಿಸಲು ಪ್ರಯತ್ನಿಸಿದ್ದರು. ಆದರೆ, ಚಿನ್ನಯ್ಯನ ಜಮೀನು ವಿವಾದದಲ್ಲಿದ್ದು, ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಹೀಗಾಗಿ ಜಾಮೀನಿನ ಮೇಲೆ ಹೊರಬರಲು ಆತ ಪರದಾಡುವಂತಾಗಿತ್ತು.

ಎಸ್‌ಐಟಿ ತನಿಖೆ ಆರಂಭವಾದ ಬಳಿಕ ಕ್ರಮೇಣ ಹೇಳಿಕೆ ಬದಲಾಯಿಸಿದ ಚಿನ್ನಯ್ಯ, ತನಗೆ ಆಪ್ತರೆನಿಸಿಕೊಂಡಿದ್ದ ಮಹೇಶ್ ಶೆಟ್ಟ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್‌ ಟಿ. ಮತ್ತಿತರರ ವಿಶ್ವಾಸವನ್ನು ಕಳೆದುಕೊಂಡಿದ್ದ.

ಆತನಿಗೆ ಆರಂಭದಲ್ಲಿ ಸಹಕರಿಸಿದ ವಕೀಲರು ಕೂಡಾ ದೂರವಾಗಿದ್ದರು. ಹೀಗಾಗಿ ಜಾಮೀನು ದೊರೆತರೂ ಜಾಮೀನುದಾರರು ಮತ್ತು ಶ್ಯೂರಿಟಿ ಬಾಂಡ್ ನೀಡುವ ಪ್ರಯತ್ನ ಸಫಲವಾಗಿರಲಿಲ್ಲ. ನ್ಯಾಯಾಲಯದಲ್ಲಿ ಮೊದಲು ಒಂದು ಹೇಳಿಕೆ ನೀಡಿ ಧರ್ಮಸ್ಥಳದಲ್ಲಿ ʼಶವಗಳ ಸಾಮೂಹಿಕ ಸಮಾಧಿʼ ವಿವಾದಕ್ಕೆ ಕಾರಣನಾಗಿದ್ದ ಚಿನ್ನಯ್ಯ, ತಿಮರೋಡಿ ಅವರ ಆಶ್ರಯ ಪಡೆದು ವಿಡಿಯೋ ಹೇಳಿಕೆಗಳನ್ನೂ ನೀಡಿದ್ದ. ನ್ಯಾಯಾಲಯದಲ್ಲಿ ಆತ ನೀಡಿದ ಹೇಳಿಕೆ ಅಧಾರದಲ್ಲಿ ಸರ್ಕಾರವೂ ಎಸ್‌ಐಟಿ ತನಿಖೆಗೆ ಆದೇಶಿಸಿತ್ತು. ಆದರೆ, ತನಿಖೆ ವೇಳೆ ಆತ ವ್ಯತಿರಿಕ್ತ ಹೇಳಿಕೆ ನೀಡಿ, ಸಾಮೂಹಿಕ ಸಮಾಧಿ ಸಂಬಂಧ ಸುಳ್ಳು ಸಾಕ್ಷ್ಯ ನೀಡಿದ್ದಾಗಿ ಒಪ್ಪಿಕೊಂಡಿದ್ದ. ಹೇಳಿಕೆಗಳನ್ನು ಬದಲಿಸಿದ ಚಿನ್ನಯ್ಯನನ್ನು ಎಸ್‌ಐಟಿ ಪೊಲೀಸರು ಬಂಧಿಸಿದ ಬಳಿಕ ತನಿಖೆ ಬೇರೆಯದೇ ಜಾಡು ಹಿಡಿದಿತ್ತು.

ಪ್ರಕರಣವೇನು?

1994 ರಿಂದ 2014ರ ವರೆಗೂ ಧರ್ಮಸ್ಥಳ ಕ್ಷೇತ್ರದಲ್ಲಿ ತಾನೊಬ್ಬ ಸ್ವಚ್ಛತಾ ಕಾರ್ಮಿಕನಾಗಿದ್ದೆ ಎಂದು ಹೇಳಿಕೊಂಡಿದ್ದ ಸಿ.ಎನ್. ಚಿನ್ನಯ್ಯ, ಈ ವರ್ಷ ಜುಲೈ 3ರಂದು ವಕೀಲರೊಂದಿಗೆ ಬೆಳ್ತಂಗಡಿ ಠಾಣೆಗೆ ತೆರಳಿದ್ದ. ಅಲ್ಲಿ ಮಾನವ ತಲೆಬುರುಡೆ ಪ್ರದರ್ಶಿಸಿ, "ಇಂತಹ ತಲೆಬುರುಡೆಗಳು ಧರ್ಮಸ್ಥಳದ ಸುತ್ತಮುತ್ತ ಸಾಕಷ್ಟು ದೊರೆಯುತ್ತವೆ. ನಾನೇ ಶವಗಳನ್ನು ಹೂತಿದ್ದೇನೆ," ಎಂದು ಹೇಳಿಕೊಂಡಿದ್ದ. ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿತ್ತು. ಆಗಸ್ಟ್ ತಿಂಗಳಲ್ಲಿ SIT ಚಿನ್ನಯ್ಯ ಸೂಚಿಸಿದ್ದ ಸುಮಾರು 13 ಸ್ಥಳಗಳಲ್ಲಿ ಉತ್ಖನನ ನಡೆಸಿ 7 ತಲೆಬುರುಡೆ ಮತ್ತು ನೂರಾರು ತುಂಡು ಮೂಳೆಗಳನ್ನು ಸಂಗ್ರಹಿಸಿತ್ತು.

ಅಪೂರ್ಣ ಎಸ್‌ಐಟಿ ವರದಿ

ಎಸ್‌ಐಟಿ ನ್ಯಾಯಾಲಯಕ್ಕೆ ನೀಡಿರುವ ವರದಿಯ ಆಧಾರದಲ್ಲಿ ವಿಚಾರಣೆ ಆರಂಭಿಸಿದ ನ್ಯಾಯಾಲಯ, ವರದಿ ಅಪೂರ್ಣವಾಗಿದ್ದು, ಇದೇ ಆಧಾರದಲ್ಲಿ ತೀರ್ಪು ನೀಡುವುದು ಸುಲಭವಲ್ಲ ಎಂದು ಡಿ.26ಕ್ಕೆ ವಿಚಾರಣೆ ಮುಂದೂಡಿದೆ. ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ತನಿಖೆ ಮುಂದುವರೆಯಲಿದೆ ಎಂದು ತಿಳಿಸಿದ್ದು, ನ್ಯಾಯಾಲಯಕ್ಕೆ ನೀಡಿರುವ ವರದಿಯು ಚಿನ್ನಯ್ಯನ ಹೇಳಿಕೆ ಮತ್ತು ಸಾಕ್ಷಿಗಳ ತನಿಖೆಯ ಪ್ರಗತಿಯನ್ನಷ್ಟೇ ಒಳಗೊಂಡಿದೆ ಎಂದು ಹೇಳಿದ್ದಾರೆ.

ನವೆಂಬರ್ 24ರಂದು ಬೆಳ್ತಂಗಡಿ ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶರು ಚಿನ್ನಯ್ಯನಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದರು. ವೈಯಕ್ತಿಕ ಬಾಂಡ್, ಶ್ಯೂರಿಟಿ ಬಾಂಡ್, ಇಬ್ಬರು ಜಾಮೀನುದಾರರು, ಪ್ರತಿ ತಿಂಗಳು ನ್ಯಾಯಾಲಯಕ್ಕೆ ಹಾಜರಾತಿ, ಧರ್ಮಸ್ಥಳ ಪ್ರದೇಶಕ್ಕೆ ಪ್ರವೇಶ ನಿಷೇಧ, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಕದಿರುವುದು ಸೇರಿದಂತೆ ಒಟ್ಟು 12 ನಿಬಂಧನೆಗಳನ್ನು ವಿಧಿಸಲಾಗಿತ್ತು.

Read More
Next Story