ದೇವನೂರ ಮಹಾದೇವ ಜೊತೆ ಮಾತುಕತೆ: ಒಂದು ಸಾಮಾಜಿಕ-ಸಾಂಸ್ಕೃತಿಕ ಪಠ್ಯ
x

ದೇವನೂರ ಮಹಾದೇವ ಜೊತೆ ಮಾತುಕತೆ: ಒಂದು ಸಾಮಾಜಿಕ-ಸಾಂಸ್ಕೃತಿಕ ಪಠ್ಯ

“ಪುಟ ತುಂಬಿಸುವ ಹೆಬ್ಬಯಕೆ ಇಲ್ಲದ ಮಾದೇವನಿಗೆ ಬರಹ ಒಂದು ತರಹದ ಏಕಾಂತ ಧ್ಯಾನ. ಬರೆಯುವುದೇ ಒಂದು ಬಗೆಯ ತಲ್ಲಣ. ಬದುಕನ್ನು ಬಿಚ್ಚಿಡಬೇಕೆಂಬ, ಮಾನವ ಪ್ರೀತಿಯಿಂದ, ಅದನ್ನು ಅಕ್ಷರಕ್ಕಿಳಿಸಬೇಕೆಂಬ ತೀವ್ರ ತುಡಿತ ಕಾಡುವುದರಿಂದಲೇ ಬರಹದಲ್ಲಿ ವಿವರಣೆ ಇರುವುದಿಲ್ಲ. ಮೌಲಿಕ ಚಿಂತನೆಯ ಗಟ್ಟಿ ಬೀಜವೊಂದು ಹುದುಗಿರುತ್ತದೆ” ಎನ್ನುತ್ತಾರೆ ಲೇಖಕಿ ಪ್ರೊ. ಆರ್.‌ ನಿರ್ಮಲಾ.


ಹಲವು ವರ್ಷಗಳ ಹಿಂದೆ ಕನ್ನಡದ ಖ್ಯಾತ ಲೇಖಕರಾದ ಡಾ. ಹಾ. ಮಾ. ನಾಯಕರು ತಮ್ಮ ಅಂಕಣ ಬರಹವೊಂದರಲ್ಲಿ, ದೇವನೂರ ಮಹಾದೇವ ಅವರು ಬರೆದಿರುವುದು ಬಹಳವೇನಲ್ಲ. ಇವರಷ್ಟು ಸ್ವಲ್ಪವೇ ಬರೆದು ಇಷ್ಟೊಂದು ಪ್ರಸಿದ್ಧಿ ಪಡೆದವರನ್ನು ನಾನು ಕಾಣೆ. ಹಾಗೆಯೇ ಕನ್ನಡದ ಖ್ಯಾತ ವಿಮರ್ಶಕ-ಟಿ.ಪಿ. ಅಶೋಕ ಅಭಿನವ ಮಾಲಿಕೆ ಪ್ರಕಟಿಸಿದ “ಯಾರ ಜಪ್ತಿಗೂ ಸಿಗದ ನವಿಲುಗಳು ಕೃತಿಯಲ್ಲಿನ “ಅಮೂರ್ತದಲ್ಲಿ ಮೂರ್ತತೆಯನ್ನು ʻಕಂಡುಕೊಳ್ಳುವʼ ಮಹಾದೇವ” ಬರಹದಲ್ಲಿ ಕೂಡ; “ಮಹಾದೇವ ಇದುವರೆಗೆ ಬರೆದಿರುವುದು ಗಾತ್ರದ ದೃಷ್ಟಿಯಿಂದ ತುಂಬಾ ಕಡಿಮೆ, ಸುಮಾರು ಮುನ್ನೂರು ಪುಟಗಳಷ್ಟೂ ಆಗುವುದಿಲ್ಲ. ಮಹಾದೇವ ಸಂಕ್ಷಿಪ್ತವಾಗಿ ಆದರೆ ಸಾಂದ್ರವಾಗಿ ಧ್ವನಿಪೂರ್ಣವಾಗಿ ಬರೆಯುತ್ತಾರೆ. ಮಹಾದೇವರ ಗದ್ಯವನ್ನು ಕಾವ್ಯದಂತೆಯೇ ಓದಿಕೊಳ್ಳಬೇಕು…ಎಂದು ಬರೆದಿದ್ದಾರೆ.

ಆದರೆ, ದೇವನೂರು ಮಹಾದೇವ ಅವರು ಬರೆದಿರುವುದು ತೀರಾ ಕಡಿಮೆಯಾದರೂ, ಅವರ ಬರವಣಿಗೆ ಬಗ್ಗೆ ಬಂದಿರುವುದು ಅವರು ಬರೆದಿರುವುದರ ʼಬಹಳʼ ಪಟ್ಟು ಎಂದು ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಒಪ್ಪಿಕೊಳ್ಳುವಂಥ ಸಂಗತಿ. “ಮೊದಲಿನಿಂದಲೂ, ಬರೆವಣಿಗೆ ಇರಲಿ, ಮಾತಾಗಿರಲಿ ಮಹಾದೇವರಿಗೆ ಅದು ತುಂಬಾ ಸಲೀಸಾದ ಸಂಗತಿಯಲ್ಲ. ಅದೊಂದು ಧ್ಯಾನ ಮತ್ತು ಎಚ್ಚರದ ಸ್ಥಿತಿ. (ದೇವನೂರರು ʻಕುಸುಮಬಾಲೆʼಯನ್ನು ಏಳು ಬಾರಿ ತಿದ್ದಿ ಬರೆದ ಸಂಗತಿ ಬಹುಜನರಿಗೆ ತಿಳಿದಿರಲಿಕ್ಕಿಲ್ಲ) ತಾವು ಬಳಸುವ ಪ್ರತಿಯೊಂದು ಅಕ್ಷರ, ಪದ, ಅವುಗಳಿಂದ ಹೊರಡಬಹುದಾದ ಅರ್ಥ, ಧ್ವನಿ ಕೊನೆಗೆ ಪಂಕ್ಜುಯೇಷನ್‌ ಕಡೆಗೆ ಕೂಡ ಎಚ್ಚರ ವಹಿಸುತ್ತಾರೆ” ಎನ್ನುವ, ಅಭಿನವ ಸಂಚಿಕೆಯ ಲೇಖಕಿ ಪಿ. ಚಂದ್ರಿಕ ಹೇಳಿರುವ ಮಾತುಗಳು ಬಹು ಧ್ವನಿ ಮತ್ತು ಅರ್ಥಪೂರ್ಣ.

“ಪುಟ ತುಂಬಿಸುವ ಹೆಬ್ಬಯಕೆ ಇಲ್ಲದ ಮಾದೇವನಿಗೆ ಬರಹ ಒಂದು ತರಹದ ಏಕಾಂತ ಧ್ಯಾನ. ಬರೆಯುವುದೇ ಒಂದು ಬಗೆಯ ತಲ್ಲಣ. ಬದುಕನ್ನು ಬಿಚ್ಚಿಡಬೇಕೆಂಬ, ಮಾನವ ಪ್ರೀತಿಯಿಂದ, ಅದನ್ನು ಅಕ್ಷರಕ್ಕಿಳಿಸಬೇಕೆಂಬ ತೀವ್ರ ತುಡಿತ ಕಾಡುವುದರಿಂದಲೇ ಬರಹದಲ್ಲಿ ವಿವರಣೆ ಇರುವುದಿಲ್ಲ. ಮೌಲಿಕ ಚಿಂತನೆಯ ಗಟ್ಟಿ ಬೀಜವೊಂದು ಹುದುಗಿರುತ್ತದೆ” ಎನ್ನುತ್ತಾರೆ ಲೇಖಕಿ ಪ್ರೊ. ಆರ್. ‌ ನಿರ್ಮಲಾ.

ದೇವನೂರ ಮಹಾದೇವ ಅವರ ಸಾಹಿತ್ಯ ಸೃಷ್ಟಿ ಕ್ರಿಯೆ ಕುರಿತು ಅವರ ನಚ್ಚು ಸಹಜ ಸ್ವಭಾವವನ್ನು ಕುರಿತು ತುಸು ದೀರ್ಘವೆನ್ನುವಂಥ ಈ ಪ್ರಸ್ತಾವನೆಗೆ ಕಾರಣ, ಅವರ ʼಮಾತುʼಗಳನ್ನು ಕುರಿತು ಪ್ರಕಟವಾಗಿರುವ “ದೇವನೂರ ಮಹಾದೇವ ಅವರ ಜೊತೆ ಮಾತುಕತೆ” (ಆಯ್ದ ಸಂದರ್ಶನಗಳ ಸಂಕಲನ). ಬನವಾಸಿಗರು ಸಂಪಾದಿಸಿ, ಮೈಸೂರಿನ ಅಭಿರುಚಿ ಪ್ರಕಾಶನ ಪ್ರಕಟಿಸಿರುವ 232 ಪುಟಗಳ ಈ ಪುಸ್ತಕ ವರ್ತಮಾನದ ಸಂದರ್ಭಕ್ಕೆ ದೇವನೂರ ಮಹಾದೇವ ಅವರ ಸಂವೇದನೆಯ ನೆಲೆಯನ್ನು ಗುರುತಿಸುವ ಒಂದು ಗುರುತರ ಪ್ರಯತ್ನ.

“ದೇವನೂರ ಮಹದೇವ ಅವರ ಜೊತೆ ಮಾತುಕತೆ”ಯ ಅಗತ್ಯ

ದೇವನೂರರ ಮನಸ್ಸಿನ ʼಒಡಲಾಳʼವನ್ನು ಅನಾವರಣಗೊಳಿಸುವಂಥ, “ಯಾರ ಜಪ್ತಿಗೂ ಸಿಗದ ನವಿಲುಗಳು” ಹಾಗೂ “ಎದೆಗೆ ಬಿದ್ದ ಅಕ್ಷರ” ದ ನಂತರ “ದೇವನೂರ ಮಹಾದೇವ ಅವರ ಜೊತೆ ಮಾತುಕತೆ”ಯ ಅಗತ್ಯವಾದದ್ದನ್ನು ಕುರಿತು. “ಬನವಾಸಿಗರು” ಹೇಳುವುದಿಷ್ಟು. “ ಹೌದು. ಇವೆಲ್ಲವೂ ಅನಿರೀಕ್ಷಿತವೇ! ಹೀಗೆ…ಇದನ್ನೇ… ಇಷ್ಟೇ…ಮಾಡಬೇಕೆಂದು ಯಾವ ಅಂದಾಜನ್ನೂ, ಸಿದ್ಧತೆಯನ್ನೂ ಮಾಡಿಕೊಳ್ಳದೇ, ಉದ್ದೇಶವನ್ನೂ ಇಟ್ಟುಕೊಳ್ಳದೇ ಇಷ್ಟು ದೂರ ನಡೆದು ಬಂದಿದ್ದೇವೆ. ಅದು ದೇವನೂರು ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಸಂಕಲನ ಪ್ರಕಟಗೊಳ್ಳುವುದಕ್ಕೂ ಮೊದಲಿನ ಕಾಲ. ಪ್ರಕಟಿತ ಬರಹಗಳನ್ನು ಕಾಲಕಾಲಕ್ಕೆ ಸಂಗ್ರಹಿಸಿಡುವ ಶಿಸ್ತು ದೇಮರಲ್ಲಿ ಇರಲಿಲ್ಲ. ಕೆಲವು ಲೇಖನಗಳೇನೋ ಕುಟುಂಬದವರ, ಆಪ್ತರ ಸಂಗ್ರಹದಲ್ಲಿ ಸಿಕ್ಕಿತ್ತು. ಮಿಕ್ಕವು ಎಲ್ಲೆಲ್ಲೋ ಚದುರಿ ಹೋಗಿದ್ದವು. ಹಲವು ಆಯಾಮಗಳಲ್ಲಿ ಅವುಗಳನ್ನು ಹುಡುಕುವ ಕೆಲಸ ಪ್ರಾರಂಭಿಸಿದ್ದೆವು. ಆಗ….ಲೇಖನದ ಜೊತೆಜೊತೆಗೇ ದೇಮರ ಸಂದರ್ಶನಗಳು, ಹೇಳಿಕೆಗಳು, ವರದಿಗಳು, ಭಾಷಣಗಳ ಅಕ್ಷರ ರೂಪ, ಇವರ ಸಾಹಿತ್ಯ ವಿಮರ್ಶೆ, ಅಭಿಪ್ರಾಯಗಳು, ಪತ್ರಗಳು… ಹೀಗೆ ನಾವು ಊಹಿಸಿರದಿದ್ದ ತುಣಕುಗಳೆಲ್ಲ ಯಾರುಯಾರಿಂದಲೋ, ಎಲ್ಲೆಲ್ಲಿಂದಲೋ ಬಂದು ನಾವು ಒಡ್ಡಿದ ಜೋಳಿಗೆಗೆ ಬೀಳುತ್ತಾ ಹೋಯ್ತು. ಅದರಲ್ಲಿನ ಆಯ್ದ ಲೇಖನಗಳನ್ನು ದೇಮ ಮತ್ತೆ ಮತ್ತೆ ತಿದ್ದಿ ಬರೆದು 2012ರಲ್ಲಿ “ಎದೆಗೆ ಬಿದ್ದ ಅಕ್ಷರ” ಸಂಗ್ರಹವಾಗಿ ಹೊರತಂದರು” ಇದು ಆ ಹಂತ.

ನಮ್ಮ ಬನವಾಸಿ ಸಂಗ್ರಹದ ಕೊಡುಗೆ

“ಆದರೆ, ಆ ಸಂಗ್ರಹದಲ್ಲಿ ಸೇರದ ಹಲವು ವಿಭಿನ್ನ ರೂಪದ ಕೆಲ ಬರಹಗಳು, ಫೋಟೋ, ವಿಡಿಯೋ, ಆಡಿಯೋ…ಇತ್ಯಾದಿಗಳು ನಮ್ಮಲ್ಲಿಯೇ ಉಳಿದು ಹೋಯಿತು. ಆಗ ಅದರಲ್ಲಿನ ಮುಖ್ಯವಾದದ್ದನ್ನು ಆರಿಸಿ, ಸೇರಿಸಿ ದಾಖಲೀಕರಣ ಮಾಡುವ ಆಲೋಚನೆ ಮೂರ್ತರೂಪವಾಗಿ ಹುಟ್ಟಿಕೊಂಡದ್ದು-“ನಮ್ಮ ಬನವಾಸಿ” ಅಂತರ್ಜಾಲ ತಾಣ (nammabanavasi.com). 2014ರಲ್ಲಿ ಹುಟ್ಟಿದ ಈ ತಾಣದ ಹಿಂದಿನ ಶಕ್ತಿ ಮತ್ತು ಪ್ರೇರಣೆಯಾಗಿ, ಕಳೆದ ವರ್ಷದವರೆಗೆ ನಮ್ಮ ಜೊತೆಗಿದ್ದವರು-ಅಂತಃಕರಣದ ಸೆಲೆ ಪ್ರೀತಿಯ ರಾಮು ಕಾಕಾ (ಮೈಸೂರಿನ ಕವಿ, ದಿವಂಗತ ಟಿ.ಎಸ್.‌ ರಾಮಸ್ವಾಮಿ ಉರುಫ್‌, ಹಾಡುಪಾಡು ರಾಮು). ಹೆಚ್ಚಿನವರಿಗೆಲ್ಲ ಉಪಯೋಗವಾಗಬಲ್ಲ ಈ ತಾಣ ರೂಪಿಸಬೇಕೆಂದು ನಿರ್ಧರಿಸಿದ ನಂತರ ನಮ್ಮ ಬಳಗದ ಹುಡುಕಾಟದಿಂದಾಗಿ ಇನ್ನಷ್ಟು ಮಾಹಿತಿಗಳು ಸಿಕ್ಕುತ್ತಾ ಹೋಯ್ತು. ಅವನ್ನು ನೀಡಿದ್ದು ದೇಮ ಕುಟುಂಬದವರು, ಸ್ನೇಹ ಬಳಗ, ಪತ್ರಿಕಾ ಬಳಗ, ಫೋಟೋಗ್ರಾಫರ್‌ಗಳು. ಈ ಹುಡುಕಾಟದಲ್ಲಿ ಸಿಕ್ಕ ಕೆಲ ಸಂದರ್ಶನಗಳನ್ನು ನಮ್ಮ ಬನವಾಸಿ ತಾಣದಲ್ಲಿ ದಾಖಲಿಸಿದ್ದೆವು. ಇನ್ನೂ ಅನೇಕ ಸಂದರ್ಶನಗಳು ಅಲ್ಲಲ್ಲಿ ಚದುರಿ ಹೋಗಿರುವುದು ತಿಳಿದಿತ್ತು. ಅವನ್ನು ಹುಡುಕುತ್ತಾ, ಸಿಕ್ಕವನ್ನು ಸಂಗ್ರಹಿಸುತ್ತಾ, ಈಗ ದಶಕವೇ ಕಳೆದುಹೋಗಿದೆ! ಸಂಬಂಧಿಸಿದವರಲ್ಲಿ ಕೇಳಿದರೂ ದೊರೆಯದಿರುವುವೂ, ನಮಗೆ ಸಿಕ್ಕದಿರುವ ಸಂದರ್ಶನಗಳೂ ಸಂಕಲನದೊಳಗೆ ಸೇರದೇ ಉಳಿದು ಹೋಗಿವೆ. ಸಂಗ್ರಹವಾದ ಆಯ್ದ ಮಾತುಕತೆ, ಸಂದರ್ಶನಗಳದ್ದೊಂದು ಸಂಕಲನವನ್ನು ಹೊರತರಬೇಕೆಂದು ಮತ್ತೆ ಮತ್ತೆ ಕೇಳಿ, ದೇಮ ಅವರನ್ನು ಒಪ್ಪಿಸುವಷ್ಟರಲ್ಲಿ ಮತ್ತಷ್ಟು ಕಾಲ ಸರಿದಿದೆ. ಅವರು ಒಪ್ಪಿಗೆ ಕೊಟ್ಟು, ಕೊನೆಗೊಮ್ಮೆ ಎಲ್ಲವನ್ನೂ ಕೂಲಂಕಷವಾಗಿ ಓದಿ ನೋಡಿ, ಅವಶ್ಯಕತೆ ಇರುವೆಡೆ ತಿದ್ದಿ ನವೀಕರಿಸಿಕೊಟ್ಟಿದ್ದಾರೆ..”

ಈ ಪುಸ್ತಕಕ್ಕೆ ದೇವನೂರು ಮಹಾದೇವ “ನನ್ನದೂ ಒಂದೆರಡು ಮಾತು” ಎಂದು ಸೇರಿಸಿದ್ದಾರೆ. “ಈ ಎಲ್ಲ ಸಂದರ್ಶನಗಳನ್ನು ನಾನು ಜೋಪಾನವಾಗಿ ಇಟ್ಟುಕೊಂಡಿರಲಿಲ್ಲ. ನನಗೆ ಅವುಗಳ ನೆನಪೂ ಇರಲಿಲ್ಲ. ಹೀಗಿರುವಾಗ-ಬಲೆ ಹಾಕಿ ಬೇಟೆಯಾಡಿದಂತೆ ಈ ನನ್ನ ಸಂದರ್ಶನ , ಮಾತುಕತೆಗಳನ್ನು ಹೇಗೇಗೋ, ಎಲ್ಲೆಲ್ಲಿಂದಲೋ ಹಿಡಿದು ಹಿಡಿದು ಒಟ್ಟು ಮಾಡಿ ನನ್ನ ಮುಂದಿಟ್ಟಿದ್ದಾರೆ. ನನ್ನ ಹಳೆಯ ಮಾತುಗಳನ್ನು ಈಗ ಕೇಳಿಸಿಕೊಂಡಾಗ ಅರೆ ಇದೇನಿದು, ಈಗಲೂ ಸಲ್ಲುವಂತೆ ಇವೆಯಲ್ಲಾ ಅನ್ನಿಸಿದ್ದೂ ಇದೆ. ಹಾಗೆ ಇನ್ನೊಂದು ಮಾತು. ಕೆಲವು ಸಂದರ್ಶನಗಳ ಮೂಲ ಪ್ರತಿಗಳು ಜರ್ಝರಿತವಾದ ಗತಕಾಲದವುಗಳೇನೋ ಎಂಬಂತಿದ್ದವು. ಸಂಭಾಳಿಸಲು ಆಗದ ಕಡೆ, ಆದಷ್ಟೂ ಓದುಗರಿಗೆ ಹೊರೆಯಾಗಬಾರದೆಂದು ಒಂದಿಷ್ಟು ಸಾಲುಗಳನ್ನು ಕೈಬಿಡಲಾಗಿದೆ. ಕೆಲವು ಕಡೆ ಆ ಕಾಲಕ್ಕೆ ಹೋಗಿ ನೆನಪಿನಿಂದ ತಿದ್ದುಪಡಿ ಮಾಡಲಾಗಿದೆ. ಹೊಸದಾಗಿ ಸೇರಿಸಿದ ಸಾಲುಗಳು ಇಟಾಲಿಕ್‌ ಅಕ್ಷರ ವಿನ್ಯಾಸದಲ್ಲಿವೆ. ಹೀಗೆಯೇ ಪುನರುಕ್ತಿ ಬಗ್ಗೆ: ಆರ್‌ ಎಸ್‌ ಎಸ್‌ ಪುಸ್ತಕಕ್ಕೆ ಸಂಬಂಧಿಸಿದಂತೆ, ನಾಕಾರು ಸಂದರ್ಶಕರು ಬರೆಯಲು ಉಂಟಾದ ಪ್ರೇರಣೆ ಬಗ್ಗೆಯೇ ಕೇಳುತ್ತಿದ್ದುದರಿಂದ ಅದರಲ್ಲಿ ಒಂದನ್ನು ಮಾತ್ರ ಉಳಿಸಿಕೊಂಡು ಪುನರುಕ್ತಿ ಇಲ್ಲದಂತೆ ಮಾಡಿರುವೆ” ಎಂದು ಪುಸ್ತಕದ ಸಂದರ್ಶನಗಳನ್ನು ಕುರಿತು ತಮ್ಮ ಷರಾ ಕೂಡ ಬರೆದುಬಿಟ್ಟಿದ್ದಾರೆ.

ಮಹಾದೇವರ ಧ್ಯಾನ ಚಿಂತನೆ

ಮೊದಲೇ ಹೇಳಿದಂತೆ ದೇವನೂರು ಮಹಾದೇವ ಬರೆದಿರುವುದು ʼಗಾತ್ರʼದಲ್ಲಿ ತೀರಾ ಕಡಿಮೆ. ಅವರು ಹೆಚ್ಚಾಗಿ ಬರೆಯಲು ಇಷ್ಟಪಡುವುದೂ ಇಲ್ಲ. ಆದರೆ, ಮಹಾದೇವ ಏನನ್ನು ಕುರಿತು ಧ್ಯಾನಿಸುತ್ತಾರೆ ಎನ್ನುವುದು ಸಮಾಜಕ್ಕೆ ಇಂದಿನ ತುರ್ತು ಅಗತ್ಯದಂತೆ ಕಾಣುತ್ತದೆ. ಉದಾಹರಣೆಗೆ; ತೀರಾ ಇತ್ತೀಚೆಗೆ ಮಂದಿರ ರಾಜಕಾರಣ ಕುರಿತು ಅವರು ಮೈಸೂರಿನಲ್ಲಿ ಆಡಿರುವ ಮಾತುಗಳು. ಅಲ್ಲಿ ಅವರು; “ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ರಾಮಮಂದಿರವೂ ರಾಜಕೀಯ ಜೂಜಾಟದ ಕೇಂದ್ರ” ಎಂದ ಮಹಾದೇವರು , ಅಪೂರ್ಣ ರಾಮಮಂದಿರ ಉದ್ಘಾಟನೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಮಹಾದೇವರು “ರಾಮ ನ್ಯಾಯದ ಘಂಟೆ ಕಟ್ಟಿಸಿದ್ದ. ಮನುಷ್ಯರು ಮಾತ್ರವೇ ಅಲ್ಲ, ಪ್ರಾಣಿಗಳೂ ಗಂಟೆಯ ದಾರವೆಳೆದು ಶಬ್ಧಿಸಿ ನ್ಯಾಯ ಕೇಳಬಹುದಿತ್ತು. ಉದ್ಘಾಟನೆಯಾಗಲಿರುವ ದೇಗುಲದ ನಾಲ್ಕು ದಿಕ್ಕಿಗೂ ನಾಲ್ಕು ಗಂಟೆ ಕಟ್ಟಿಸಬೇಕು. ಹಿಂದೂ ಅನ್ನುವುದು ಸಹಜ. ಹಿಂದುತ್ವ ಅನ್ನುವುದು ನಾನತ್ವ. ಸನಾತನಕ್ಕೆ ಮೌಲ್ಯ ಇರುವಂತೆಯೇ ಚಾತುರ್ವರ್ಣ, ಜಾತಿಭೇದ, ಮೇಲುಕೀಳು, ಅಸಹನೆಯಂಥ ಅಪಮೌಲ್ಯಗಳೂ ಇವೆ. ಆ ಧರ್ಮದಲ್ಲಿ ಇತ್ತೀಚಿನ ದಿನಗಳಲ್ಲಿ ಮೌಲ್ಯ ಮತ್ತು ಅಪಮೌಲ್ಯದ ನಡುವೆ ಘರ್ಷಣೆ ನಡೆಯುತ್ತಿದೆ. ಜನರು ಸತ್ಯವನ್ನು ಅರಿತು ಅದೇ ಮಾರ್ಗದಲ್ಲಿ ನಡೆದರೆ, ದೇಶದಲ್ಲಿ ನಡೆಯುತ್ತಿರುವ ಘಟನೆಗಳ ನೈಜತೆಯನ್ನು ತಿಳಿಯಬಹುದು” ಮಹಾದೇವರ ಇಂಥ ಧ್ಯಾನದಂಥ ತಿಳುವಳಿಕೆ ಜನರನ್ನು ಮುಟ್ಟುವುದು, ಅದು ಒಟ್ಟಾಗಿ ದೊರೆತಾಗ ಎಂಬ ನಂಬಿಕೆಯೇ ಈ ಪುಸ್ತಕದ ಸತ್ವ ಎಂದು ಹೇಳಬಹುದು.

ಆರ್‌ ಎಸ್‌ ಎಸ್‌ ಆಳ-ಅಗಲ

ಈ ಅಗತ್ಯವನ್ನು ಪೂರೈಸಲಿಕ್ಕಾಗಿಯೇ ಮಹಾದೇವರ ಇಂಥ ಮಾತುಗಳನ್ನು ಒಟ್ಟಾಗಿಸಲಾಗಿ “ದೇವನೂರು ಮಹಾದೇವ ಜೊತೆ ಮಾತುಕತೆ” ರೂಪಿಸಲಾಗಿದೆ. ಎನ್ ಎಸ್‌ ಪುಷ್ಪಾ ಅವರ ಸಂದರ್ಶನದೊಂದಿಗೆ ಮಹಾದೇವರ ಮಾತನ್ನು ದಾಖಲಿಸಲು ಆರಂಭಿಸುವ ಈ ಪುಸ್ತಕ ಅಬ್ದುಲ್‌ ರಶೀದ್‌ ಅವರ ಒಂದು ಕಾಲ್ಪನಿಕ ಸಂದರ್ಶನದಿಂದ ಆರಂಭವಾಗಿ, ರಶೀದ್‌ ಅವರ ಕೊನೆಯದಾಗಿ ಒಂದು ಪ್ರಶ್ನೋತ್ತರದೊಂದಿಗೆ ಅಂತ್ಯವಾಗುತ್ತದೆ. “ಆರ್‌ ಎಸ್‌ ಎಸ್‌ ಆಳ ಮತ್ತು ಅಗಲ” ಪುಸ್ತಕಕ್ಕೆ ಸಂಬಂಧಿಸಿದ ಪ್ರಶ್ನೋತ್ತರ ಅಧ್ಯಾಯದಲ್ಲಿ ತಳ ಸಮುದಾಯದಿಂದಲೇ ಸಂಘಟಿತ ಆಂದೋಲನ ರೂಪುಗೊಳ್ಳಬೇಕು –ರಾಜೇಂದ್ರ ಚೆನ್ನಿ, “ಬಿಜೆಪಿ ಮೂಲತಃ ಸಂವಿಧಾನೇತರ ಆರ್‌ ಎಸ್‌ ಎಸ್‌ ನಿಯಂತ್ರಣದ ರಾಜಕೀಯ ಪಕ್ಷ-ಇಮ್ರಾನ್‌ ಖುರೇಷಿ, “ಹಿಂದುತ್ವ ಅತಿಗೆ ಹೋಗಿ ಈಗ ಇಳಿಯುತ್ತಿದೆ”-ಆದಿತ್ಯ ಭಾರದ್ವಾಜ್‌ ಅವರ ಸಂದರ್ಶನಗಳು ಒಳನೋಟಗಳಿಂದ ದಟ್ಟ ಅನುಭವವನ್ನು ಕಟ್ಟಿಕೊಡುತ್ತದೆ.

ಇದೇ ರೀತಿಯಲ್ಲಿ, ಚಳವಳಿಗಳ ಕುರಿತು, ಡಿ.ಎಸ್.‌ ನಾಗಭೂಷಣ, ರಹಮತ್‌ ತರೀಕೆರೆ, ಓ.ಎಲ್.‌ ನಾಗಭೂಷಣಸ್ವಾಮಿ, ದು. ಸರಸ್ವತಿ, ಚಂದ್ರಶೇಖರ ಐಜೂರು, ಮಾವಳ್ಳಿ ಶಂಕರ್‌, ಮುಂತಾದ ವಿಚಾರವಂತರು ಮಹದೇವರೊಂದಿಗೆ ನಡೆಸಿದ ಮಾತುಕತೆಯ ಫಲಿತಗಳಿವೆ. ಅಭಿನವ ರವಿಕುಮಾರ್‌ ರಹಮತ್‌ ತರೀಕೆರೆ, ರಾಘವೇಂದ್ರ ಪಾಟೀಲ ಮತ್ತು ಡಿ ಎಸ್‌ ನಾಗಭೂಷಣ ಕಿಕ್ಕೇರಿ ನಾರಾಯಣ, ಓ.ಎಲ್‌ ನಾಗಭೂಷಣಸ್ವಾಮಿ ಅವರುಗಳು ಕನ್ನಡ, ಸಾಹಿತ್ಯ, ಸಂವಾದ ಕುರಿತ ಸಂದರ್ಶನಗಳು ಸಮಾಜದ ಕಣ್ಣುತೆರೆಸಲು ಅಗತ್ಯವಾದ ಮಹಾದೇವರ ಮಾತುಗಳಿಗೆ ಧ್ವನಿಯಾಗಿವೆ. ಈ ಸಂದರ್ಶನಗಳನ್ನು ಓದಿದಾಗ ಅನ್ನಿಸುವುದು; ಮಹಾದೇವ ಸಮಕಾಲೀನ ಸಾಮಾಜಿಕ, ಆರ್ಥಿಕ, ರಾಜಕೀಯದ ಒಳಸುಳಿಗಳ ಆತ್ಮಕ್ಕೆ ಎಚ್ಚರ ಮತ್ತು ಜವಾಬ್ದಾರಿಯಿಂದ ಕೈಚಾಚುವ ಪರಿ ಮನವರಿಕೆಯಾಗುತದೆ.

ರಾಜಕೀಯದ ಸುಳಿ ಜೊತೆಗೆ ಗಾಂಧಿ ಹಾಗೂ ಹೊಸತೊಂದು ಹುಟ್ಟಿಕೊಳ್ಳುವ ತವಕ ಅಧ್ಯಾಯದಲ್ಲಿ ಎನ್‌ ಎಸ್‌ ಶಂಕರ್‌ ಅವರ ಮಹಾದೇವ ಕಂಡಂತೆ ಗಾಂಧಿ, ಅಮೃತ ದತ್ತ ಅವರ ಗಾಂಧಿಗೆ ೧೫೦: ದೇವನೂರರ ಕಣ್ಣೋಟ; ಹೊಸತೊಂದು ಹುಟ್ಟಿಕೊಳ್ಳುವ ಮುನ್ನಿನ ಸಂಕಟದ ಸಂಕ್ರಮಣ ಸ್ಥಿತಿ ಇದು ಎಂಬ ಡಾ. ಜಿ. ರಾಮಕೃಷ್ಣ, ಡಾ. ಎನ್‌. ಗಾಯಿತ್ರಿ, ಡಾ. ಸಿದ್ದನಗೌಡ ಪಾಟೀಲ ಅವರು ನಡೆಸಿದ ಸಂದರ್ಶನದ ಅರ್ಥಪೂರ್ಣತೆಯ ಅರಿವಾಗುವುದು, ಆ ಸಂದರ್ಶನದ ಸೊಗಡನ್ನು ಓದಿ ಅರಗಿಸಿಕೊಂಡಾಗಲೇ.

ಒಟ್ಟು 41 ಬರಹಗಳಿರುವ ದೇವನೂರು ಮಹಾದೇವ ಜೊತೆ ಮಾತುಕತೆ, ಒಟ್ಟಾರೆಯಾಗಿ ವರ್ತಮಾನದ ಸಂದರ್ಭಕ್ಕೆ ಮಹಾದೇವ ಅವರ ಸಂವೇದನೆಗಳನ್ನು ಗುರುತಿಸುವ ಪ್ರಾಮಾಣಿಕ ಯತ್ನ ಮಾಡುತ್ತದೆ. ಇಲ್ಲಿನ ಮಹಾದೇವರ ಮಾತುಗಳನ್ನೂ ʼಗಟ್ಟಿಯಾಗಿʼ ಓದಿ ಕೇಳಿಸಿಕೊಂಡಾಗ, ಅವರ ತಾತ್ವಿಕ ಭಿತ್ತಿಯ ಸ್ವರೂಪವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದೊಂದು ರೀತಿಯಲ್ಲಿ ಸಮಾಜವಾದಿ ಚಿಂತನೆಯ ಹೊಸ ಕಾಲದ ಹೊಸ ಮಾದರಿಯಂತೆ ಕಾಣುತ್ತದೆ. ಕಾಲಕಾಲದ ಸಮಸ್ಯೆಗಳನ್ನು ವಿಶ್ಲೇಷಿಸುತ್ತಲೇ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಕೂಡ ದೇವನೂರ ಮಹಾದೇವರ ಮಾತುಗಳಲ್ಲಿ ಕಂಡುಬರುತ್ತದೆ.

ಒಟ್ಟಾರೆಯಾಗಿ ಹೇಳಬಹುದಾದರೆ, “ಯಾರ ಜಪ್ತಿಗೂ ಸಿಗದ ನವಿಲುಗಳು”, “ಎದೆಗೆ ಬಿದ್ದ ಅಕ್ಷರ” ಸಾಲಿಗೆ ಸೇರುವ ಈ ಪುಸ್ತಕ, ಮಹಾದೇವರ ಅರಿವಿನ ಜಗತ್ತಿಗೆ ಹಿಡಿದ ಮತ್ತೊಂದು ಕನ್ನಡಿ.

Read More
Next Story