ದೇವೇಗೌಡರಿಗೆ 92 | ಹುಟ್ಟುಹಬ್ಬದ ಆಚರಣೆ ಬೇಡ ಎಂದ ಮಾಜಿ ಪ್ರಧಾನಿ
x

ದೇವೇಗೌಡರಿಗೆ 92 | ಹುಟ್ಟುಹಬ್ಬದ ಆಚರಣೆ ಬೇಡ ಎಂದ ಮಾಜಿ ಪ್ರಧಾನಿ

"ಈ ತಿಂಗಳ 18 ರಂದು ನಾನು 91 ವರ್ಷಗಳನ್ನು ಪೂರ್ಣಗೊಳಿಸುತ್ತೇನೆ ಮತ್ತು 92 ನೇ ವರ್ಷಕ್ಕೆ ಕಾಲಿಡುತ್ತೇನೆ. ಆದರೆ ಕೆಲವು ಕಾರಣಗಳಿಂದ ನಾನು ನನ್ನ ಜನ್ಮದಿನವನ್ನು ಆಚರಿಸುತ್ತಿಲ್ಲ. ಆದ್ದರಿಂದ ನೀವು ಎಲ್ಲಿದ್ದರೂ ನನಗೆ ಶುಭ ಹಾರೈಸುವಂತೆ ನಾನು ವಿನಂತಿಸುತ್ತೇನೆ" ಎಂದು ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳಿಗೆ ಗೌಡರು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ


ತೊಂಬತ್ತೊಂದು ವರ್ಷ ಪೂರೈಸಿ ತೊಂಬತ್ತೆರಡಕ್ಕೆ ಕಾಲಿಡುತ್ತಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಮೇ 18 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದಾರೆ.

ತಮ್ಮ ಮೊಮ್ಮಗ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮೊದಲ ಪುತ್ರ ಮಾಜಿ ಮಂತ್ರಿ ಎಚ್‌.ಡಿ. ರೇವಣ್ಣ ಭಾರೀ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್‌ ಪಕ್ಷದ ಅಧಿನಾಯಕರಾದ ದೇವೇಗೌಡರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಕರ್ನಾಟಕದಿಂದ ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿದ್ದ ದೇವೇಗೌಡರು ರಾಷ್ಟ್ರದ ಹಿರಿಯ ಮುತ್ಸದ್ದಿಯಾಗಿದ್ದು, ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಆದರೆ, ಈ ಬಾರಿ ತಮ್ಮ ಮಗ ಮತ್ತು ಮೊಮ್ಮಗ ಭಾರೀ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಹಿರಿಯ ಮುತ್ಸದ್ಧಿ ದೇವೇಗೌಡರು ಭಾರೀ ಮುಜಗರಕ್ಕೆ ಈಡಾಗಿದ್ದಾರೆ. ಆ ಹಿನ್ನೆಲೆಯಲ್ಲಿ ತೀವ್ರ ನೊಂದುಕೊಂಡಿರುವ ಅವರು ತಮ್ಮ ಜನ್ಮದಿನದ ಸಂಭ್ರಮಾಚರಣೆಯನ್ನು ನಡೆಸದೇ ಇರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಜನ್ಮ ದಿನಾಚರಣೆ ನಡೆಸದಂತೆ ಪಕ್ಷದ ಕಾರ್ಯಕರ್ತರಿಗೆ ಪತ್ರ ಬರೆದಿರುವ ಅವರು, ಕರ್ನಾಟಕ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ (ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ತಲಾ ಮೂರು) ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ-ಜೆಡಿ (ಎಸ್) ಅಭ್ಯರ್ಥಿಗಳ ಸಂಘಟನೆ ಮತ್ತು ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದ್ದಾರೆ.

"ಈ ತಿಂಗಳ 18 ರಂದು ನಾನು 91 ವರ್ಷಗಳನ್ನು ಪೂರ್ಣಗೊಳಿಸುತ್ತೇನೆ ಮತ್ತು 92 ನೇ ವರ್ಷಕ್ಕೆ ಕಾಲಿಡುತ್ತೇನೆ. ಆದರೆ ಕೆಲವು ಕಾರಣಗಳಿಂದ ನಾನು ನನ್ನ ಜನ್ಮದಿನವನ್ನು ಆಚರಿಸುತ್ತಿಲ್ಲ. ಆದ್ದರಿಂದ ನೀವು ಎಲ್ಲಿದ್ದರೂ ನನಗೆ ಶುಭ ಹಾರೈಸುವಂತೆ ನಾನು ವಿನಂತಿಸುತ್ತೇನೆ" ಎಂದು ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳಿಗೆ ಗೌಡರು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

"ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿ(ಎಸ್) ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕಿದ್ದು, ಪಕ್ಷವನ್ನು ಸಂಘಟಿಸಲು ಎಲ್ಲರೂ ಬದ್ಧತೆಯಿಂದ ಕೆಲಸ ಮಾಡುವಂತೆ ವಿನಂತಿಸುತ್ತೇನೆ" ಎಂದೂ ಅವರು ಪತ್ರದಲ್ಲಿ ಕೋರಿದ್ದಾರೆ.

ದೇವೇಗೌಡರ ಪುತ್ರ, ಶಾಸಕ ಹಾಗೂ ಮಾಜಿ ಸಚಿವ ಎಚ್‌ ಡಿ ರೇವಣ್ಣ ವಿರುದ್ಧವೂ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಜೆಡಿಎಸ್ ಮೂಲಗಳ ಪ್ರಕಾರ, 33 ವರ್ಷದ ಸಂಸದ ಮತ್ತು ಅವರ ತಂದೆ ರೇವಣ್ಣ ವಿರುದ್ಧದ ಆರೋಪದ ಹಿನ್ನೆಲೆಯಲ್ಲಿ ನೊಂದಿರುವ ದೇವೇಗೌಡರು, ಹುಟ್ಟುಹಬ್ಬದಾಚರಣೆ ನಡೆಸದಿರಲು ನಿರ್ಧರಿಸಿದ್ದಾರೆ.

Read More
Next Story