ಕೆರೆ ಬಫರ್‌ ಝೋನ್‌ ನಿಗದಿ | ರಾಜಭವನ v/s ರಾಜ್ಯ ಸರ್ಕಾರ; ರಾಜ್ಯಪಾಲರಿಗೆ ಮತ್ತೆ ಸ್ಪಷ್ಟನೆ ರವಾನೆ
x

ಕೆರೆ ಬಫರ್‌ ಝೋನ್‌ ನಿಗದಿ | ರಾಜಭವನ v/s ರಾಜ್ಯ ಸರ್ಕಾರ; ರಾಜ್ಯಪಾಲರಿಗೆ ಮತ್ತೆ ಸ್ಪಷ್ಟನೆ ರವಾನೆ

ಪ್ರಸ್ತುತ, ಎಲ್ಲಾ ಕೆರೆಗಳ ಸುತ್ತಲೂ 30 ಮೀಟರ್ ಬಫರ್ ಜೋನ್ ಕಡ್ಡಾಯ. ಆದರೆ, ಸರ್ಕಾರವು ಈ ನಿಯಮವನ್ನು ಬದಲಾಯಿಸಲು ಮುಂದಾಗಿದೆ. ಕೆರೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ಜೋನ್ ನಿಗದಿಪಡಿಸಲು ತಿದ್ದುಪಡಿ ಕಾಯ್ದೆಯಲ್ಲಿ ಉಲ್ಲೇಖಿಸಿದೆ.


ಕೆರೆಗಳ ಸುತ್ತಲಿನ ಬಫರ್ ಜೋನ್ ನಿಯಮ ಸಡಿಲಗೊಳಿಸಲು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ-2025ಕ್ಕೆ ಅಂಗೀಕಾರ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಸಂಘರ್ಷ ಮುಂದುವರಿದಿದೆ.

ಸೆಪ್ಟೆಂಬರ್ 16 ರಂದು ರಾಜ್ಯಪಾಲರು ಕರ್ನಾಟಕ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರ(ತಿದ್ದುಪಡಿ) ವಿಧೇಯಕಕ್ಕೆ ಸ್ಪಷ್ಟನೆ ಕೋರಿದ್ದರು. ಈಗ ಬಫರ್ ಝೋನ್ ನಿಗದಿಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಮತ್ತೆ ಸ್ಪಷ್ಟೀಕರಣ ನೀಡಲು ಸರ್ಕಾರ ತಯಾರಿ ನಡೆಸಿದೆ.

ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು, ಕೆರೆಗಳಲ್ಲಿ ಬಫರ್ ಝೋನ್ ನಿಗದಿ ಕುರಿತ ವಿಧೇಯಕ ಮಂಡನೆಯನ್ನು ಎಲ್ಲರೂ ಸ್ವಾಗತಿಸಿದ್ದರು. ರಾಜ್ಯಪಾಲರ ಅಂಗೀಕಾರಕ್ಕೆ ಕಳುಹಿಸಿದಾಗ ಒಂದಷ್ಟು ಪ್ರಶ್ನೆಗಳನ್ನು ಕೇಳಿ ವಿಧೇಯಕ ವಾಪಸ್ ಕಳುಹಿಸಿದ್ದರು. ಈಗ ಅವರ ಆಕ್ಷೇಪಗಳಿಗೆ ಸ್ಪಷ್ಟನೆ ನೀಡಲಾಗುವುದು ಎಂದು ಹೇಳಿದ್ದಾರೆ.

ಪ್ರಸ್ತುತ, ಎಲ್ಲಾ ಕೆರೆಗಳ ಸುತ್ತಲೂ 30 ಮೀಟರ್ ಬಫರ್ ಜೋನ್ ಕಡ್ಡಾಯ. ಈ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶವಿಲ್ಲ. ಆದರೆ, ಸರ್ಕಾರವು ಈ ನಿಯಮವನ್ನು ಬದಲಾಯಿಸಲು ಮುಂದಾಗಿದೆ. ಕೆರೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ಜೋನ್ ನಿಗದಿಪಡಿಸಲು ತಿದ್ದುಪಡಿ ಕಾಯ್ದೆಯಲ್ಲಿ ಉಲ್ಲೇಖಿಸಿದೆ, ಇದಕ್ಕೆ ಪರಿಸರವಾದಿಗಳು ಹಾಗೂ ನೀರಾವರಿ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಿದ್ದುಪಡಿ ಪ್ರಸ್ತಾವ ಏನು?

5 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೆರೆಗಳಿಗೆ ಯಾವುದೇ ಬಫರ್ ಝೋನ್ ಇರುವುದಿಲ್ಲ. 5 ಗುಂಟೆಯಿಂದ 1 ಎಕರೆ ವಿಸ್ತೀರ್ಣದ ಕೆರೆಗೆ 3 ಮೀಟರ್, 1 ರಿಂದ 10 ಎಕರೆ ವಿಸ್ತೀರ್ಣದ ಕೆರೆಗೆ ಆರು ಮೀಟರ್, 10ರಿಂದ 25 ಎಕರೆ ವಿಸ್ತೀರ್ಣದ ಕೆರೆಗೆ 12 ಮೀಟರ್, 25 ರಿಂದ 100 ಎಕರೆ ವಿಸ್ತೀರ್ಣದ ಕೆರೆಗೆ 24 ಮೀಟರ್ ಹಾಗೂ 100 ಎಕರೆಗಿಂತ ಹೆಚ್ಚುವಿಸ್ತೀರ್ಣದ ಕೆರೆಗಳಿಗೆ 30 ಮೀಟರ್ ಬಫರ್ ಝೋನ್ ನಿಗದಿಗೆ ಉದ್ದೇಶಿಸಲಾಗಿದೆ.

ಹೀಗೆ ಮರುನಿಗದಿಪಡಿಸಿದ ಬಫರ್ ವಲಯದಲ್ಲಿ ರಸ್ತೆ, ಸೇತುವೆಗಳಂತಹ ಮೂಲಸೌಕರ್ಯ ಕಾಮಗಾರಿಗಳಿಗೂ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಆದರೆ, ಸರ್ಕಾರದ ತಿದ್ದುಪಡಿ ವಿಧೇಯಕಕ್ಕೆ ಬೆಂಗಳೂರು ಟೌನ್ಹಾಲ್ ಅಸೋಸಿಯೇಷನ್ ಎಂಬ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯಪಾಲರಿಗೆ ದೂರು ಸಲ್ಲಿಸಿತ್ತು.

ʼನೀರಿದ್ದರೆ ನಾಳೆʼ ಯೋಜನೆಗೆ ಚಾಲನೆ

ನೈಸರ್ಗಿಕ ಹಾಗೂ ಪೂರ್ವಜರು ನಿರ್ಮಿಸಿರುವ ಜಲಮೂಲಗಳ ಸಂರಕ್ಷಣೆ ಹಾಗೂ ಅಂತರ್ಜಲ ಮಟ್ಟ ವೃದ್ಧಿಸುವ ಸಲುವಾಗಿ "ನೀರಿದ್ದರೆ ನಾಳೆ” ಎನ್ನುವ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ.

ಗ್ರಾಮೀಣ ಭಾಗದಲ್ಲಿ ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ಅಭಿವೃದ್ಧಿಪಡಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. “ನೀರಿದ್ದರೆ ನಾಳೆ” ಎನ್ನುವ ವಿಶೇಷ ಪರಿಕಲ್ಪನೆಯ ಕಾರ್ಯಕ್ರಮದ ಮೂಲಕ ನೀರಿನ ಮಹತ್ವ ತಿಳಿಸುವುದು, ರಾಜ್ಯದ ಜಲ ಮೂಲಗಳ ಸಂರಕ್ಷಣೆಗೆ ಯೋಜನೆ ರೂಪಿಸುವುದು, ನಾಗರಿಕರನ್ನು ನೀರಿನ ಸಂರಕ್ಷಣೆಯ ಅಭಿಯಾನದಲ್ಲಿ ಪಾಲುದಾರರನ್ನಾಗಿ ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ತಿಳಿಸಿದ್ದಾರೆ.

ಯೋಜನೆ ಏನು, ಎತ್ತ?

ಮೊದಲ ಹಂತದಲ್ಲಿ ರಾಜ್ಯದ 16 ಜಿಲ್ಲೆಗಳ 27 ತಾಲ್ಲೂಕುಗಳ 525 ಅಂತರ್ಜಲ ಅತಿಬಳಕೆ ಗ್ರಾಮ ಪಂಚಾಯತಿಗಳಲ್ಲಿ ʼನೀರಿದ್ದರೆ ನಾಳೆʼ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

ಕಲ್ಯಾಣ ಕರ್ನಾಟಕ ಭಾಗದ 100ಕ್ಕೂ ಹೆಚ್ಚು ಅಂತರ್ಜಲ ಅತಿಬಳಕೆ ಗ್ರಾಮ ಪಂಚಾಯತಿಗಳಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ವತಿಯಿಂದ 2025-26ನೇ ಆರ್ಥಿಕ ಸಾಲಿನಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಅಂತರ್ಜಲ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ.

ನಟರಾದ ವಶಿಷ್ಟ ಸಿಂಹ ಅವರನ್ನು ʼನೀರಿದ್ದರೆ ನಾಳೆʼ ಜಾಗೃತಿ ಅಭಿಯಾನದ ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ನೀರಿನ ಭದ್ರತೆಯ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು. ರಾಜ್ಯದ ಅಂತರ್ಜಲ ಸಾಕ್ಷರತೆಗೆ ಒತ್ತು ನೀಡಲಾಗುವುದು. ಇದರಲ್ಲಿ ರಾಜ್ಯದ ಪ್ರಸ್ತುತ ಪರಿಸ್ಥಿತಿ, ಅಂಕಿ ಅಂಶದ ಲಭ್ಯತೆ ಬಗ್ಗೆ ಶಾಲಾ ಮಟ್ಟಗಳಲ್ಲೇ ಜಾಗೃತಿ ಮೂಡಿಸಲಾಗುವುದು ಎಂದು ಸಚಿವ ಬೋಸರಾಜು ಹೇಳಿದ್ದಾರೆ.

ನೀರಿನ ಸಂರಕ್ಷಣೆಗೆ ಹಲವು ಕ್ರಮ

ಕೆರೆ ಬಳಕೆದಾರರ ಸಂಘಗಳ ಮೂಲಕ ಕೆರೆಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಒತ್ತು ನೀಡಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಕೆರೆ ಹಬ್ಬಗಳು, ಅಂತರ್ಜಲ ನಮ್ಮ ಜೀವ ಜಲ ಎನ್ನುವ ಅಭಿಯಾನದ ಮೂಲಕ ನೀರಿನ ವಾಯುವರ್ಧಕ ಬಳಕೆ ಹಾಗೂ ಮಳೆ ನೀರು ಕೊಯ್ಲು ಪದ್ದತಿಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ.

ಪ್ರತಿ ವರ್ಷ ಗ್ರಾಮ ಪಂಚಾಯತಿ ಮಟ್ಟದಲ್ಲಿ ನೀರಿನ ಭದ್ರತಾ ಕ್ರಿಯಾ ಯೋಜನೆ ಸಿದ್ಧಪಡಿಸುವ ಸಂಬಂಧ ವಿಶ್ವ ಜಲ ದಿನದಂದು ವಿಶೇಷ "ನೀರಿದ್ದರೆ ನಾಳೆ ಗ್ರಾಮ ಸಭೆ" ಆಯೋಜಿಸಲಾಗುವುದು. ಗ್ರಾಮ ಸಭೆಯಲ್ಲಿ ಜಲಮೂಲಗಳ ಸಂರಕ್ಷಣೆ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಂತರ್ಜಲ ಹೊರತೆಗೆಯುವಿಕೆ ಪ್ರಮಾಣ, ಜಲ ಸಂರಕ್ಷಣಾ ರಚನೆಗಳ ನಿರ್ಮಾಣ, ಮಳೆ ನೀರು ಕೊಯ್ಲು ಯೋಜನೆಗೆ ಪ್ರೋತ್ಸಾಹ ಹಾಗೂ ಇತರೆ ಅಂತರ್ಜಲ ವೃದ್ಧಿ ಸಂಬಂಧಿಸಿದ ವಿಚಾರಗಳ ಬಗ್ಗೆ ಸಲಹೆ ಸೂಚನೆ ಸ್ವೀಕರಿಸಲು ತೀರ್ಮಾನಿಸಲಾಗಿದೆ.

ಜಲಮೂಲಗ ಸಮಗ್ರ ನಿರ್ವಹಣೆಗೆ ತಂತ್ರಜ್ಞಾನ ಆಧಾರಿತ ಡಿಜಿಟಲ್ ವಾಟರ್ ಸ್ಟಾಕ್ ಅಳವಡಿಕೆಗೆ ಚಿಂತನೆ ನಡೆದಿದೆ. ಈ ಕಾರ್ಯಕ್ರಮದ ಅನುಷ್ಠಾನದ ಮೂಲಕ ಕರ್ನಾಟಕ ರಾಜ್ಯವನ್ನು ಜಲ ಸಮೃದ್ದಗೊಳಿಸುವ ಗುರಿ ಹೊಂದಿದ್ದೇವೆ ಎಂದು ಸಚಿವರು ಹೇಳಿದ್ದಾರೆ.

Read More
Next Story