Despite heavy taxes imposed by the state government, there is zero development: R. Ashok lashes out
x

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌

ಇ-ಖಾತೆ ಅಲ್ಲ ಇ-ಕ್ಯಾತೆ! ಸರ್ಕಾರದ ಯೋಜನೆಗಳ ವಿರುದ್ಧ ಬಿಜೆಪಿ ನಾಯಕರ ಕಿಡಿ

ಇತ್ತೀಚೆಗೆ ಜಯನಗರ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಪ್ರತಿ ಬಾರಿ ಬಂದಾಗ ಬಳಕೆದಾರರು ಹಣ ಕಟ್ಟಬೇಕು ಎಂಬುದು ಅನ್ಯಾಯ. ಹೊರ ಮತ್ತು ಒಳ ರೋಗಿಗಳ ಶುಲ್ಕವನ್ನು ದುಪ್ಪಟ್ಟು ಮಾಡಲಾಗಿದೆ. ಇದು ರೋಗಗ್ರಸ್ತ ಸರ್ಕಾರ ಎಂದು ಆರ್‌. ಅಶೋಕ್‌ ವ್ಯಂಗ್ಯವಾಡಿದರು.


ರಾಜ್ಯ ಸರ್ಕಾರದ ಅವೈಜ್ಞಾನಿಕ ತೆರಿಗೆ ನೀತಿಯ ವಿರುದ್ಧ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ವಿಧಾನಸಭೆಯಲ್ಲಿ ವಾಗ್ದಾಳಿ ನಡೆಸಿದರು.

ಸರ್ಕಾರಿ ಆಸ್ಪತ್ರೆ, ಮೃಗಾಲಯ ಹಾಗೂ ಇತರ ಸೇವೆಗಳ ಮೇಲಿನ ತೆರಿಗೆ ಹೆಚ್ಚಳ ಉಲ್ಲೇಖಿಸಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಬರೆ ಹಾಕುತ್ತಿರುವ ಸರ್ಕಾರ ಎಂದು ಟೀಕಿಸಿದರು.

ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವ ಜನರು ಶೇ 100 ತೆರಿಗೆ ಕಟ್ಟಬೇಕಿದೆ. ಇತ್ತೀಚೆಗೆ ಜಯನಗರ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಪ್ರತಿ ಬಾರಿ ಬಂದಾಗ ಬಳಕೆದಾರರು ಹಣ ಕಟ್ಟಬೇಕು. ಇದು ಅನ್ಯಾಯ. ಹೊರ ಮತ್ತು ಒಳ ರೋಗಿಗಳ ಶುಲ್ಕ ದುಪ್ಪಟ್ಟು ಮಾಡಲಾಗಿದೆ. ಇದು ರೋಗಗ್ರಸ್ತ ಸರ್ಕಾರ ಎಂದು ಕಿಡಿಕಾರಿದರು.

ಮೈಸೂರು ಮೃಗಾಲಯದ ಪ್ರವೇಶ ಶುಲ್ಕವನ್ನು ಶೇ. 20 ರಷ್ಟು ಹೆಚ್ಚಿಸಲಾಗಿದೆ. ಅದೇ ಹುಲಿ, ಜಿರಾಫೆ ಇವೆ. ಅವುಗಳಿಗೆ ಸುಣ್ಣ ಬಣ್ಣ ಬಳಿದು ವಿದೇಶಿ ಬಟ್ಟೆ ಹಾಕಿದ್ದರೆ ಪರವಾಗಿಲ್ಲ. ಆದರೆ, ಏನೂ ಇಲ್ಲದೇ ಶುಲ್ಕ ಹೆಚ್ಚಳ ಮಾಡಿದರೆ ಹೇಗೆ? ಅಲ್ಲಿಯೂ ವಸೂಲಿ ಮಾಡಬೇಕಾ?, ಮಕ್ಕಳು ಹೋಗುವ ಜಾಗದಲ್ಲಿ ಪ್ರಾಣಿಗಳನ್ನು ಉಚಿತವಾಗಿ ತೋರಿಸಬೇಕು" ಎಂದು ಆಗ್ರಹಿಸಿದರು.

ಬೆಂಗಳೂರು ಅಭಿವೃದ್ಧಿ ಕುಸಿತ

ಬೆಂಗಳೂರು ನಗರದ ದುಸ್ಥಿತಿಗೆ ಸರ್ಕಾರವನ್ನು ಹೊಣೆ, "ಬೆಂಗಳೂರಿಗೆ ಬಸ್ಸುಗಳ ಬದಲು ಹಡಗುಗಳನ್ನು ಖರೀದಿಸಿ. ಕರಾವಳಿ ಬೇಡ, ಬೆಂಗಳೂರಿನಲ್ಲಿಯೇ ಬೀಚ್‌ಗಳು ಸೃಷ್ಟಿಯಾಗಿವೆ. ಮುಳುಗಿರುವ ಬೆಂಗಳೂರಿಗೆ ಬಸ್ಸು ಬೇಡ, ಹಡಗುಗಳನ್ನೇ ಓಡಿಸಬೇಕು" ಎಂದು ವ್ಯಂಗ್ಯವಾಡಿದರು.

ಕಸ ವಿಲೇವಾರಿ, ಮರಗಳ ಜೀವಹಾನಿ, ಮತ್ತು ನಗರಾಭಿವೃದ್ಧಿ ಕುಂಠಿತವಾಗಿದೆ."ಡಿಕೆಶಿ 'ಡೋಂಟ್ ವರೀ' ಅಂದ್ರು, ಆದರೆ ಈಗ ಜನರು 'ವರೀ' ಮಾಡಿಕೊಳ್ಳುತ್ತಿದ್ದಾರೆ. ಕಸ ಎತ್ತುವ ಕಾರ್ಮಿಕರಿಗೆ ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ. ಸರ್ಕಾರದ ಹನಿಮೂನ್ ಅವಧಿ ಮುಗಿದಿದೆ, ಅಭಿವೃದ್ಧಿ ಮಾತ್ರ ನಡೆದಿಲ್ಲ" ಎಂದು ಟೀಕಿಸಿದರು.

ಇ-ಖಾತೆ ಅಲ್ಲ ಇ-ಕ್ಯಾತೆ!

ಮನೆ ಒಳಗೆ ಕಾರ್ ನಿಲ್ಲಿಸಿದರೆ ಅದಕ್ಕೆ ತೆರಿಗೆ ಹಾಕಲಾಗಿದೆ. ಇ- ಖಾತೆಗೆ ತೆರಿಗೆ ವಿಧಿಸಲಾಗುತ್ತಿದೆ. ಜನ ಅದಕ್ಕೆ ಇದು ಇ- ಖಾತೆ ಅಲ್ಲ ಕ್ಯಾತೆ ಅನ್ನುತ್ತಿದ್ದಾರೆ. ಮರಣ ಪತ್ರ ಪಡೆಯಲು ಐದು ರೂ. ಇದ್ದಿದ್ದನ್ನು 50 ರೂ. ಮಾಡಿದ್ದೀರಿ ಬದಲಾಗಿ ಇದನ್ನು ಉಚಿತವಾಗಿ ಕೊಡಬೇಕು. ಹುಟ್ಟಿದರೂ ಟ್ಯಾಕ್ಸ್, ಸತ್ತರೂ ಟ್ಯಾಕ್ಸ್ ಮಾಡಿದ್ದೀರಿ. ರೈತರು ಸಾಲ ತೆಗೆದುಕೊಂಡರು ಅದಕ್ಕೂ ಟ್ಯಾಕ್ಸ್‌ ಹಾಕಲಾಗುತ್ತಿದೆ ಎಂದರು.

ಯಾವುದಕ್ಕೆಲ್ಲಾ ತೆರಿಗೆ?

ಕಸದ ತೆರಿಗೆ 750 ಕೋಟಿ ರೂ, ಹಾಲಿನ ತೆರಿಗೆ 1,300 ಕೋಟಿ ರೂ, ಪೆಟ್ರೋಲ್ ಹಾಗೂ ಡೀಸೆಲ್ ತೆರಿಗೆ 6,500 ಕೋಟಿ ರೂ, ಬಸ್ ಪ್ರಯಾಣದ ತೆರಿಗೆ 1,000 ಕೋಟಿ ರೂ, ವಾಹನಗಳ ನೋಂದಣಿ ಹೆಚ್ಚುವರಿ ಶುಲ್ಕ 3,000 ಕೋಟಿ ರೂ, ಕಾವೇರಿ ಕುಡಿಯ ನೀರಿನಿಂದ 6,00 ಕೋಟಿ ರೂ, ಮದ್ಯದ ಮೇಲಿನ ತೆರಿಗೆ 3,000 ಕೋಟಿ ರೂ, ಮದ್ಯದ ಲೈಸೆನ್ಸ್ ಗೆ 3,50 ಕೋಟಿ ರೂ, ವಿದ್ಯುತ್ ದರ ಏರಿಕೆ 12,000 ಕೋಟಿ ರೂ, ಸ್ಟಾಂಪ್‌ ಡ್ಯೂಟಿ 2,000 ಕೋಟಿ ರೂ, ಒಟ್ಟಾರೆಯಾಗಿ ಸುಮಾರು 56,420 ಕೋಟಿ ರೂ. ಟ್ಯಾಕ್ಸ್ ಹಾಕಿದ್ದೀರಾ. ಆಗಾದರೆ ಏಕೆ ಅಭಿವೃದ್ಧಿಯಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಪ್ರತಿಪಕ್ಷ ನಾಯಕನಿಗೂ ಅಭಿವೃದ್ಧಿಗೆ ಹಣವಿಲ್ಲ

ಕಾಗವಾಡದ ಶಾಸಕ ರಾಜು ಕಾಗೆ ತೆಂಗಿನಕಾಯಿ ಓಡೆದ್ರೂ ಇನ್ನೂ ಅಭಿವೃದ್ಧಿ ಆಗಿಲ್ಲ ಎಂದು ಹೇಳಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಶಾಸಕರಿಗೂ ಅನುದಾನ ಕೊಟ್ಟಿದ್ದೇವೆ. ನಾನು ವಿರೋಧ ಪಕ್ಷದ ನಾಯಕನಾಗಿದ್ದರು, ನನ್ನ ಕ್ಷೇತ್ರಕ್ಕೂ 20 ಕೋಟಿ ರೂ. ಹಣವನ್ನು ಕೊಟ್ಟಿಲ್ಲ. ಈ ಸರ್ಕಾರ ಬಂದ ಮೇಲ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ಅಭಿವೃದ್ಧಿ ಹೆಸರಲ್ಲಿ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಾದರೂ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದರು.

ಟನಲ್‌ ಯೋಜನೆಗೆ ವಿಪಕ್ಷಗಳ ವಿರೋಧ

ಬೆಂಗಳೂರಿನ ಟ್ರಾಫಿಕ್‌ ನಿಯಂತ್ರಿಸಲು ಸರ್ಕಾರ ಟನಲ್‌ ನಿರ್ಮಿಸಲು ಮುಂದಾಗಿದೆ. ಈ ಕುರಿತಾದ ಚರ್ಚೆ ವೇಳೆ ಟನಲ್ ಬೋರಿಂಗ್ ಯಂತ್ರಗಳ ಬಗ್ಗೆ ಯಾರಿಗೆ ಟೆಂಡರ್ ಕೊಡಲಾಗಿದೆ ಎಂದು ಶಾಸಕ ಅಶ್ವಥ್‌ ನಾರಾಯಣ್‌ ಸರ್ಕಾರವನ್ನು ಪ್ರಶ್ನಿಸಿದರು. ಒಂದು ಯಂತ್ರಕ್ಕೆ ಇಂದು ಆರ್ಡರ್ ಮಾಡಿದರೆ ಅದು ಬೆಂಗಳೂರಿಗೆ ಬರಲು 18 ತಿಂಗಳು ಸಮಯವಾಗುತ್ತದೆ. ಡಿಪಿಆರ್ ಮಾಡಲು ಎರಡು ವರ್ಷ ಬೇಕು. ಭೂಸ್ವರೂಪ, ಸಾಧಕ ಬಾಧಕ ಅಧ್ಯಯನ‌ ಮಾಡಲು ಎರಡು ವರ್ಷ ಬೇಕು. ಆದರೆ ಸರ್ಕಾರ ಯಾವುದನ್ನೂ ನೋಡದೇ ತರಾತುರಿಯಲ್ಲಿ ಯೋಜನೆ ಮಾಡಲು ಮುಂದಾಗಿದೆ ಇದಕ್ಕೆ ನಮ್ಮ ವಿರೋಧ ಎಂದರು.

ಮೇಯೋ ಹಾಲ್, ಪಾಲಿಕೆ ಶಾಲೆಗಳನ್ನು ಅಡಮಾನ ಇಟ್ಟು ಹುಡ್ಕೋದಿಂದ ಸರ್ಕಾರ 18,000 ಕೋಟಿ ಸಾಲ ಪಡೆಯುತ್ತಿದೆ. ಅಧಿಕಾರವಿದೆ, ಬಹುಮತ ಇದೆ ಎಂದು ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ ಎಂದು ಟೀಕಿಸಿದರು.


Read More
Next Story