Caste census | ಮೀಸಲಾತಿ ಹೆಚ್ಚಳದ ಲಾಭ ಸಿಕ್ಕರೂ ಜಾತಿ ಗಣತಿಗೆ ಒಕ್ಕಲಿಗರು, ಲಿಂಗಾಯತರ ವಿರೋಧವೇಕೆ?
x

Caste census | ಮೀಸಲಾತಿ ಹೆಚ್ಚಳದ ಲಾಭ ಸಿಕ್ಕರೂ ಜಾತಿ ಗಣತಿಗೆ ಒಕ್ಕಲಿಗರು, ಲಿಂಗಾಯತರ ವಿರೋಧವೇಕೆ?

ಪ್ರಬಲ ಜಾತಿಗಳಾದ ಲಿಂಗಾಯತರು ಹಾಗೂ ಒಕ್ಕಲಿಗರಿಗೆ ಮೀಸಲಾತಿ ಪ್ರಮಾಣವನ್ನು ತಲಾ ಶೇ 3ರಷ್ಟು ಹೆಚ್ಚಿಸಿದರೂ ಜಾತಿಗಣತಿ ವರದಿ ತಿರಸ್ಕರಿಸುವ ಮಾತಿಗಳನ್ನಾಡುತ್ತಿವೆ. ಅಲ್ಲದೇ ಜಾತಿಗಣತಿ ವರದಿ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೂ ಸಜ್ಜಾಗಿವೆ.


ಜಾತಿಗಣತಿ ವರದಿಯಲ್ಲಿ ಒಕ್ಕಲಿಗರು ಹಾಗೂ ವೀರಶೈವ ಲಿಂಗಾಯತರಿಗೂ ಮೀಸಲಾತಿ ಪ್ರಮಾಣ ಹೆಚ್ಚಿಸಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತನ್ನ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರೆ, ಇದೇ ಪ್ರಬಲ ಜಾತಿಗಳು ಜಾತಿಗಣತಿ ವರದಿ ತಿರಸ್ಕರಿಸುವ ಮಾತಿಗಳನ್ನಾಡುತ್ತಿವೆ. ಅಲ್ಲದೇ ಜಾತಿಗಣತಿ ವರದಿ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೂ ಸಜ್ಜಾಗಿವೆ.

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಒಕ್ಕಲಿಗರು ಹಾಗೂ ಅದರ 48 ಉಪಜಾತಿಗಳು ಸೇರಿ 61,58,352 ಜನಸಂಖ್ಯೆ ಹೊಂದಿವೆ. 3ಎ ನ ಒಟ್ಟು ಜನಸಂಖ್ಯೆ 72.99 ಲಕ್ಷ ಹೊಂದಿದೆ.

ಪ್ರವರ್ಗ 3ಎ ನಲ್ಲಿರುವ ಒಕ್ಕಲಿಗರಿಗೆ ಶೇ 4 ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಈಗ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಶೇ 7ಕ್ಕೆ ಹೆಚ್ಚಿಸಲು ಆಯೋಗ ಶಿಫಾರಸು ಮಾಡಿದೆ.

ಒಕ್ಕಲಿಗ ಸಮುದಾಯ 40,04,830, ಗೌಡ ಒಕ್ಕಲಿಗ 1,84,479, ವಕ್ಕಲ್ / ವಕ್ಕಲಿಗ 1,88,508, ಕುಂಚಿಟಿಗ ವಕ್ಕಲಿಗ 41,188, ಗಂಗಡ್ ಕಾರ್ ಒಕ್ಕಲಿಗ 82,589, ರೆಡ್ಡಿ 4,15,382, ಕುಂಚಿಟಿಗ 1,95,499, ಗೌಡ 4,60,555, ಕಮ್ಮ 1,11,739, ರಡ್ಡಿ 2,87,372 ಇದೆ.

ಲಿಂಗಾಯತರಲ್ಲಿ ವೀರಶೈವರು ಪ್ರಬಲರು

ಪ್ರವರ್ಗ 3 ಬಿ ಪಟ್ಟಿಯಲ್ಲಿನ ಲಿಂಗಾಯತರು ಹಾಗೂ ಅದರ ಉಪಜಾತಿಗಳು ಸೇರಿ 66. 35 ಲಕ್ಷ ಇದೆ. ಹಾಗಾಗಿ, ಜನಸಂಖ್ಯೆಗೆ ಅನುಗುಣವಾಗಿ ಈ ವರ್ಗದ ಮೀಸಲನ್ನು ಸದ್ಯದ ಶೇ 5 ರಿಂದ ಶೇ 8ಕ್ಕೆ ಹೆಚ್ಚಳ ಮಾಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ವೀರಶೈವ ಲಿಂಗಾಯತರು 10,49, 706 ಜನರಿದ್ದಾರೆ. ಉಪ ಗುಂಪುಗಳಲ್ಲಿ ಬೇಡುವ ಜಂಗಮ 89,868, ಲಿಂಗಾಯತ ವೀರಶೈವ 2,22,395, ವೀರಶೈವ ಪಂಚಮಸಾಲಿ 4,37,796, ಪಂಚಮಸಾಲಿ ಲಿಂಗಾಯತ 6,33,506, ಆದಿ ಬಣಜಿಗ 1,31,693, ಕುಡು ಒಕ್ಕಲಿಗ 81,999, ಲಿಂಗವಂತ 3,88, 327, ಲಿಂಗಾಯತ್ 26,02,777, ಸಾದರ ಲಿಂಗಾಯತರು 67,903, ವೀರಶೈವ 1,01,019, ನೊಳಂಬ ಲಿಂಗಾಯತ್ 1,48,894 ಜನಸಂಖ್ಯೆ ಹೊಂದಿದ್ದು, ಒಟ್ಟು 95 ಉಪಜಾತಿಗಳನ್ನು ಒಳಗೊಂಡಿದೆ.

3ಬಿ ಗೆ ಹೊಸ ಜಾತಿ ಸೇರ್ಪಡೆ

ಮಲ್ಲವ/ಮಲೆಗೌಡ ಜಾತಿಯು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 ರಲ್ಲಿ ನಡೆಸುವ ಸಂದರ್ಭದಲ್ಲಿ ಸಂಕೇತ ಸಂಖ್ಯೆ ನೀಡದೇ ಇದ್ದು, ತದನಂತರ ಸದರಿ ಆಯೋಗಕ್ಕೆ ಮನವಿ ಸಲ್ಲಿಸಿ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂಬ ಬೇಡಿಕೆ ಪರಿಗಣಿಸಿ, ಆಯೋಗವು ಬಹಿರಂಗ ವಿಚಾರಣೆ ನಡೆಸಿ ಪ್ರವರ್ಗ-3B ಗೆ ಸೇರಿಸಬೇಕೆಂದು ಸಲಹೆ ನೀಡಿದೆ. ಪ್ರಸ್ತುತ ವರದಿಯಲ್ಲಿ ಲಿಂಗಾಯತ ಜಾತಿಯ ಉಪಜಾತಿಯಾಗಿ ಮಲ್ಲವ/ಮಲೆಗೌಡ ಜಾತಿಯನ್ನು ಸೇರ್ಪಡೆಗೊಳಿಸಲಾಗಿದೆ.

ಕೆನೆಪದ ರ ನೀತಿ ಅಳವಡಿಕೆ

ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ಹಿಂದುಳಿದ ಸಮುದಾಯಗಳಿಗೆ ಈಗಾಗಲೇ ಕೆನೆಪದರ ನೀತಿ ಅಳವಡಿಸಲಾಗಿದೆ. ಈಗ ಹೊಸದಾಗಿ ಸೃಜಸಿರುವ 1ಎ ಗೂ ಉದ್ಯೋಗ ಮೀಸಲಾತಿಯಲ್ಲಿ ಕೆನೆ ಪದರ ನೀತಿ ಜಾರಿಗೊಳಿಸಬೇಕು ಎಂದು ಶಿಫಾರಸು ಮಾಡಿದೆ.

ಪ್ರವರ್ಗ-1ರಲ್ಲಿನ ಕೆಲ ಜಾತಿಗಳ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದು, ಇದರಿಂದ ಶೈಕ್ಷಣಿಕವಾಗಿಯೂ ಉತ್ತಮ ಸ್ಥಾನಮಾನ ಪಡೆದಿದ್ದಾರೆ. ಕೆನೆಪದರ ನೀತಿ ಅಳವಡಿಸುವುದರಿಂದ ತೆರಿಗೆ ಮಿತಿಗೆ ಒಳ ಪಡದವರು ಸಾಮಾನ್ಯ ವರ್ಗಕ್ಕೆ ಬದಲಾಗಲಿದ್ದಾರೆ.

ವಿರೋಧವೇಕೆ?

ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಡಾ.ಜಿ.ಎನ್. ಶ್ರೀಕಂಠಯ್ಯ ಮಾತನಾಡಿ, 2014-2015 ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 90 ರಷ್ಟು ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದ್ದು. ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ಕೈಗೊಂಡಿಲ್ಲ. ಹಿಂದಿನ 10 ವರ್ಷಗಳಲ್ಲಿ ರಾಜ್ಯದಲ್ಲಿ ಜನಸಂಖ್ಯೆ ಗಣನೀಯ ಏರಿಕೆ ಕಂಡಿದೆ ಹಾಗೂ ಇತರೆ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಈ ಅಂಶಗಳನ್ನು ಸಮೀಕ್ಷೆ ಒಳಗೊಂಡಿಲ್ಲ ಎಂದು ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ 10 ವರ್ಷಗಳ ಹಿಂದಿನ ವರದಿ ಸ್ವೀಕರಿಸಿ ಮಾಡುವ ತೀರ್ಮಾನಗಳು ವಾಸ್ತವತೆಗೆ ದೂರವಿದ್ದು ಅಪ್ರಸ್ತುತವಾಗಿವೆ. ನಿಖರತೆ ಕಾಪಾಡಲು ಸಮೀಕ್ಷೆ ವೇಳೆ ಆಧಾರ್ ಲಿಂಕ್ ಮಾಡಿಲ್ಲ. ಸಚಿವ ಸಂಪುಟದಲ್ಲಿ ಇತರೆ ಹಿಂದುಳಿದ ವರ್ಗಗಳ ಸಾಮಾಜಿಕ ಮತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿ-2024 ರ ಮುಚ್ಚಿದ ಲಕೋಟೆಯನ್ನು ತೆರದಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಸಮೀಕ್ಷೆಯಲ್ಲಿ ಶೇಕಡ 15% ರಿಂದ 16% ರಷ್ಟು ಇರುವ ಒಕ್ಕಲಿಗ ಜನಸಂಖ್ಯೆಯನ್ನು ಅವೈಜ್ಞಾನಿಕ ಸಮೀಕ್ಷೆಯಿಂದಾಗಿ ಶೇಕಡ 10.3% ಎಂದು ನಮೂದಿಸಲಾಗಿದೆ. ವರದಿಗೆ ಪ್ರತಿಯೊಬ್ಬರ ಸಹಿಯನ್ನು ಪಡೆದಿದ್ದರೆ ಈ ರೀತಿ ತಪ್ಪುಗಳು ಆಗುತ್ತಿರಲಿಲ್ಲ. ಅವೈಜ್ಞಾನಿಕವಾಗಿ ಜಾತಿ ಜನಗಣತಿ ಮಾಡಿರುವುದರಿಂದ ಒಕ್ಕಲಿಗ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಅಸಮಾಧಾನ ಅವರದು.

ಉದಾಹರಣೆ ಗಂಗಾಡ್ಕರ್ ಒಕ್ಕಲಿಗ ಜನಸಂಖ್ಯೆಯನ್ನು ಕೇವಲ 82,589 ಎಂದು, ಮರಸು ಒಕ್ಕಲಿಗರ ಜನಸಂಖ್ಯೆಯನ್ನು 3,859 ಎಂದು ನಮೂದಿಸಲಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಕೈಗೊಳ್ಳುವ ವೇಳೆಯಲ್ಲಿ ವ್ಯವಸ್ಥಿತವಾಗಿ ಅಧ್ಯಕ್ಷರು ಮತ್ತು ಸದಸ್ಯರಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಜನಾಂಗದವರನ್ನು ಉದ್ದೇಶಪೂರ್ವಕವಾಗಿ ಸೇರಿಸಿಲ್ಲವಾದ್ದರಿಂದ ಜೊತೆಗೆ ಒಕ್ಕಲಿಗ ಮತ್ತು ಲಿಂಗಾಯುತ ಜನಾಂಗಗಳ ಸಂಖ್ಯೆಯಲ್ಲಿ ಕಡಿಮೆಯಾಗಿರುವುದರಿಂದ ಸಮೀಕ್ಷೆಯಲ್ಲಿ ಜನಾಂಗದವರಿಗೆ ಅನುಮಾನ ಮೂಡಿಸಿದೆ ಎಂಬುದು ಒಕ್ಕಲಿಗರ ವಿರೋಧ.

ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡೋಕೆ ಆಗುತ್ತದೆಯೇ? ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಲಿಂಗಾಯತರು, ಎರಡನೇ ಸ್ಥಾನದಲ್ಲಿ ಒಕ್ಕಲಿಗರು ಇದ್ದಾರೆ. ಸರ್ಕಾರ ಲಿಂಗಾಯತರು, ಒಕ್ಕಲಿಗರನ್ನು ಎದುರಾಕಿಕೊಂಡು ರಾಜ್ಯಭಾರ ಮಾಡೋಕೆ ಆಗುತ್ತದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

Read More
Next Story